ಕೊಳ್ತಿಗೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮವಾಸ್ತವ್ಯ, ಸಾರ್ವಜನಿಕ ಅರ್ಜಿಗಳ ವಿಚಾರಣೆ

0

  • ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು : ರಮೇಶ್ ಬಾಬು

 

ಪುತ್ತೂರು: ಕೊಳ್ತಿಗೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಒಳ್ಳೆಯ ರೀತಿಯಲ್ಲಿ ಭಾಗವಹಿಸಿದ್ದಾರೆ. ಅರಣ್ಯ, ಕಂದಾಯ, ಅಂಚೆ, ಪಂಚಾಯತ್, ಕೃಷಿ, ಪಿಡ್ಲ್ಯೂಡಿ ಸೇರಿದಂತೆ ಹಲವು ಇಲಾಖೆಗೆ ಸಂಬಂಧಿಸಿ ಅರ್ಜಿಗಳು ಬಂದಿದೆ. ಕಂದಾಯ ಇಲಾಖೆಯ ಅರ್ಜಿಗಳನ್ನು ಪ್ರಾಮಾಣಿಕವಾಗಿ ಇತ್ಯರ್ಥ ಮಾಡುತ್ತೇವೆ ಉಳಿದಂತೆ ಇತರ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಆಯಾ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ ಮತ್ತು ಸಮಸ್ಯೆಯ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಪುತ್ತೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬುರವರು ಹೇಳಿದರು.

ಅವರು ಪುತ್ತೂರು ತಾಲೂಕು ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪುತ್ತೂರು ತಾಲೂಕು ತಹಶೀಲ್ದಾರ್‌ರವರ ನೇತೃತ್ವದಲ್ಲಿ ಜೂ.18 ರಂದು ಕೊಳ್ತಿಗೆ ಗ್ರಾಪಂ ವ್ಯಾಪ್ತಿಯ ಪೆರ್ಲಂಪಾಡಿ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮವಾಸ್ತವ್ಯ ಒಂದು ಒಳ್ಳೆಯ ಕಾರ್ಯಕ್ರಮ : ಶ್ಯಾಮ್‌ಸುಂದರ್ ರೈ
ಅತಿಥಿಗಳಾಗಿದ್ದ ಕೊಳ್ತಿಗೆ ಗ್ರಾಪಂ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕರೆಮೂಲೆ ಮಾತನಾಡಿ, ಅಧಿಕಾರಿಗಳು ಜನಸ್ನೇಹಿಗಳಾಗಬೇಕು ಹಾಗೂ ಜನಪರ ಸೇವೆ ಆದಾಗ ಮಾತ್ರ ರಾಮರಾಜ್ಯದ ಕನಸು ನನಸಾಗಲು ಸಾಧ್ಯ ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದರು.ಸಾರ್ವಜನಿಕರು ತಮ್ಮ ಅರ್ಜಿ, ಸಮಸ್ಯೆಗಳನ್ನು ಇಟ್ಟುಕೊಂಡು ತಾಲೂಕು ಕೇಂದ್ರಕ್ಕೆ ಅಲೆದಾಡುವುದು ಇಂತಹ ಕಾರ್ಯಕ್ರಮದಿಂದ ತಪ್ಪುತ್ತದೆ ಎಂದ ಅವರು, ತಮ್ಮ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೂಡ ಸಿಗುತ್ತದೆ ಆದ್ದರಿಂದ ಗ್ರಾಮವಾಸ್ತವ್ಯ ಕಾರ್ಯಕ್ರಮ ಸರಕಾರದ ಒಂದು ಒಳ್ಳೆಯ ಜನಪರ ಕಾರ್ಯಕ್ರಮ ಆಗಿದೆ ಎಂದರು.


ಗ್ರಾಮಸ್ಥರು ಗ್ರಾಮವಾಸ್ತವ್ಯದ ಸದುಪಯೋಗ ಪಡೆದುಕೊಳ್ಳಬೇಕು : ಶೈಲಜಾ ಭಟ್
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾತನಾಡಿ, ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮವಾಸ್ತವ್ಯ ಕಾರ್ಯಕ್ರಮ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತದೆ.ಜನರ ಬಳಿಗೆ ಅಧಿಕಾರಿಗಳು ಬಂದು ಜನರ ಸಮಸ್ಯೆಗಳನ್ನು ಆಲಿಸುತ್ತಾರೆ ಮತ್ತು ಅರ್ಜಿಗಳನ್ನು ಪಡೆದುಕೊಂಡು ಅದಕ್ಕೆ ಸ್ಥಳದಲ್ಲೇ ಉತ್ತರ ಮತ್ತು ಪರಿಹಾರವನ್ನು ನೀಡುವ ಕೆಲಸ ಇದರಿಂದ ಆಗುತ್ತಿದೆ ಆದ್ದರಿಂದ ಗ್ರಾಮ ವಾಸ್ತವ್ಯ ಒಂದು ಒಳ್ಳೆಯ ಕಾರ್ಯಕ್ರಮ ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಕೆಡಿಪಿ ನಾಮನಿರ್ದೇಶಿತ ಸದಸ್ಯ ಭಾಸ್ಕರ ರೈ ಕಂಟ್ರಮಜಲು, ಕೊಳ್ತಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುನಿಲ್ ಎಚ್.ಟಿ ಉಪಸ್ಥಿತರಿದ್ದರು. ಕೊಳ್ತಿಗೆ ಗ್ರಾಮ ಕರಣಿಕ ಮಂಜುನಾಥ್ ಗ್ರಾಮ ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೀರ್ತಿ ಗೋಪಾಲ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪಿಂಚಣಿ ಪತ್ರ ವಿತರಣೆ
ಗ್ರಾಮದ ಒಟ್ಟು 13 ಮಂದಿಗೆ ತಹಶೀಲ್ದಾರ್ ರಮೇಶ್ ಬಾಬುರವರು ಈ ಸಂದರ್ಭದಲ್ಲಿ ಪಿಂಚಣಿ ಪತ್ರ ವಿತರಣೆ ಮಾಡಲಾಯಿತು.

40 ಕ್ಕೂ ಅಧಿಕ ಅರ್ಜಿಗಳುತಾಲೂಕಿನ 43 ಇಲಾಖೆಗಳ ಅಧಿಕಾರಿಗಳು ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಬೇಕು ಎಂದು ನಿಯಮವಿದ್ದು ಬಹುತೇಕ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಕಂದಾಯ ಇಲಾಖೆ, ಗ್ರಾಮ ಪಂಚಾಯತ್, ಅಂಚೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಮತ್ತು ಪಿಡ್ಲ್ಯೂಡಿ ಇಲಾಖೆ ಸೇರಿದಂತೆ ೪೦ ಕ್ಕೂ ಅಧಿಕ ಅರ್ಜಿಗಳು ಗ್ರಾಮ ವಾಸ್ತವ್ಯದಲ್ಲಿ ಸಲ್ಲಿಕೆಯಾಗಿವೆ.

ರ್ಜಿದಾರರನ್ನು ಕರೆದು ಸಮಸ್ಯೆ ಆಲಿಸಿದ ತಹಶೀಲ್ದಾರ್
ಮೊದಲಿಗೆ ಸಾರ್ವಜನಿಕರು ತಮ್ಮ ಸಮಸ್ಯೆಯ ಬಗ್ಗೆ ಅರ್ಜಿಯನ್ನು ಬರೆದು ಆಯಾ ಇಲಾಖೆಯ ಅಧಿಕಾರಿಗಳ ಬಳಿ ನೀಡಬೇಕಾಗುತ್ತದೆ. ಬಳಿಕ ಒಂದೊಂದೆ ಇಲಾಖೆಗೆ ಸಲ್ಲಿಕೆಯಾದ ಅರ್ಜಿಗಳನ್ನು ತಹಶೀಲ್ದಾರ್‌ರವರು ಓದುತ್ತಾರೆ. ಅರ್ಜಿದಾರರನ್ನು ವೇದಿಕೆಗೆ ಕರೆದು ಅರ್ಜಿಯ ಬಗ್ಗೆ ವಿಚಾರಣೆ ನಡೆಸುತ್ತಾರೆ ಮತ್ತು ಅರ್ಜಿಗೆ ಸಂಬಂಧಪಟ್ಟಂತೆ ಅರ್ಜಿದಾರರಿಗೆ ಸೂಕ್ತವಾದ ಮಾಹಿತಿ ಅಥವಾ ಪರಿಹಾರವನ್ನು ನೀಡುತ್ತಾರೆ.

ಸಭೆಯಿಂದ ಕೇಳಿಬಂದ ಸಮಸ್ಯೆಗಳು
ಗ್ರಾಮಸ್ಥ ಸತ್ಯನಾರಾಯಣ ಭಟ್ ಎಂಬವರು ಮಾತನಾಡಿ, ಜಾಗವನ್ನು ಖರೀದಿಸಿ, ಎನ್‌ಒಸಿ ನೀಡಿ ರಿಜಿಸ್ಟ್ರಾ ಆದ ಮೇಲೆಯೂ ಆರ್‌ಟಿಸಿಯಲ್ಲಿ ೧೫ ವರ್ಷಗಳವರೇಗೆ ಜಾಗವನ್ನು ಪರಭಾರೆ ಮಾಡಬಾರದು ಎಂದು ಬರುತ್ತದೆ ಇದು ಯಾಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ನೀವು ಎನ್‌ಒಸಿ ಇಟ್ಟು ಪರಭಾರೆ ತೆಗೆದುಹಾಕಿ ಎಂದು ತಹಶೀಲ್ದಾರ್‌ಗೆ ಅರ್ಜಿ ಕೊಡಿ ಸರಿ ಮಾಡಿ ಕೊಡುತ್ತೇವೆ ಎಂದು ತಿಳಿಸಿದರು.ಕೊಳ್ತಿಗೆ ಅಮಲ-ಪಾಂಬಾರು ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ ಆಗಿ ತಿಂಗಳು ಮೂರು ಕಳೆದರು ಇನ್ನೂ ಕಾಂಕ್ರಿಟೀಕರಣ ಆಗಿಲ್ಲ ಎಂದು ಯತೀಂದ್ರ ಕೊಚ್ಚಿ, ತೀರ್ಥಾನಂದ ದುಗ್ಗಳ ಹೇಳಿದರು. ಇದಕ್ಕೆ ಉತ್ತರಿಸಿ ಪಿಡ್ಲ್ಯೂಡಿ ಅಧಿಕಾರಿ ವರ್ಕ್ ಆರ್ಡರ್ ಸಿಕ್ಕಿಲ್ಲ ಸಿಕ್ಕಿದ ತಕ್ಷಣವೇ ಕೆಲಸ ಆರಂಭವಾಗುತ್ತದೆ ಎಂದರು. ಸಿದ್ದಮೂಲೆ ಮಾಡಾವು ರಸ್ತೆ ಅಗಲೀಕರಣಕ್ಕೆ ಅನುದಾನ ನೀಡುವಂತೆ ಯತೀಂದ್ರ ಕೊಚ್ಚಿ ಕೇಳಿಕೊಂಡರು. ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ ಹಾಗೂ ಕೊಳ್ತಿಗೆ ಗ್ರಾಪಂ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೆರೆಮೂಲೆರವರು ಒಂದಷ್ಟು ಬೇಡಿಕೆಯ ಪಟ್ಟಿಗಳನ್ನು ಸಭೆಯ ಮುಂದಿಟ್ಟರು ಅವುಗಳಲ್ಲಿ ಮುಖ್ಯವಾಗಿ ಗ್ರಾಮದಲ್ಲಿ ಡಿಸಿ ಮನ್ನಾ ಭೂಮಿ ಇದ್ದರೆ ಈ ಬಗ್ಗೆ ಕಂದಾಯ ಇಲಾಖೆ ತಿಳಿಸಿಕೊಡಬೇಕು, ಗೋಮಾಳ ಜಾಗಕ್ಕೆ ಗಡಿಗುರುತು ಮಾಡಿಕೊಡಬೇಕು, ಗ್ರಾಮದ ಚಿಮುಲಗುಂಡಿ ಎಂಬಲ್ಲಿ 19 ಮಂದಿಗೆ ಮನೆ ಸೈಟ್ ಕೊಟ್ಟು ಹಕ್ಕುಪತ್ರ ಕೊಟ್ಟಿದ್ದರೂ ಅರಣ್ಯ ಇಲಾಖೆ ಇದಕ್ಕೆ ಅಡ್ಡಿಪಡಿಸಿದೆ ಈ ಬಗ್ಗೆ ಪರಿಶೀಲನೆಯಾಗಬೇಕು, 9/11 ಅನ್ನು ಗ್ರಾಮ ಪಂಚಾಯತ್‌ನಲ್ಲೇ ನೀಡುವಂತೆ ಆದೇಶ ಮಾಡಬೇಕು, ಗ್ರಾಮದಲ್ಲಿರುವ ಸರಕಾರಿ ಭೂಮಿಯನ್ನು ಗುರುತಿಸಿ ಅರಣ್ಯ ಇಲಾಖೆ ಮತ್ತು ಕಂದಾಯ ಜಂಟಿ ಸರ್ವೆ ಮಾಡಿ ಗಡಿಗುರುತು ಮಾಡಿಕೊಡಬೇಕು,ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗವನ್ನು ಸರ್ವೆ ಮಾಡಿಕೊಡಬೇಕು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು ತಹಶೀಲ್ದಾರ್‌ರವರ ಗಮನಕ್ಕೆ ತರಲಾಯಿತು. ಕಣಿಯಾರುಮಲೆಯಲ್ಲಿರುವ ಕೆಎಫ್‌ಡಿ ಅರಣ್ಯ ಪ್ರದೇಶಕ್ಕೆ ದನ,ಕರುಗಳನ್ನು ತಂದು ಬಿಡಲಾಗುತ್ತದೆ ಈಗಾಗಲೇ ಗುಡ್ಡದಲ್ಲಿ ೫೦ ಕ್ಕೂ ಅಧಿಕ ದನಗಳು ಇದ್ದು ಇದು ಸ್ಥಳೀಯರ ಕೃಷಿ ತೋಟಗಳಿಗೆ ಹಾನಿ ಮಾಡುತ್ತಿವೆ ಈ ಬಗ್ಗೆ ಅರಣ್ಯ ಇಲಾಖೆಯವರು ಗಮನಹರಿಸಿ, ದನ,ಕರುಗಳಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಅರ್ಜಿ ಸಲ್ಲಿಸಿದ್ದಾರೆ.

ಸಮಸ್ಯೆಗಳಿದ್ದರೆ ಕರೆ ಮಾಡಿ
ತಾಲೂಕಿನ ಜನರಿಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದರೆ ಅಥವ ಇನ್ನಿತರ ಯಾವುದೇ ಸಮಸ್ಯೆ, ಮಾಹಿತಿಗಳು ಬೇಕಾದ್ದಲ್ಲಿ ನೇರವಾಗಿ ಮೊಬೈಲ್ ಸಂಖ್ಯೆ 9480168864ಗೆ ಕರೆ ಮಾಡಿ ವಿಷಯ ತಿಳಿಸಬಹುದು ಎಂದು ತಹಶೀಲ್ದಾರ್ ರಮೇಶ್ ಬಾಬು ಹೇಳಿದರು.

LEAVE A REPLY

Please enter your comment!
Please enter your name here