ಪ್ರಿಯದರ್ಶಿನಿ ಶಾಲಾ ನೂತನ ಕೊಠಡಿಗಳ ಉದ್ಘಾಟನೆ – ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅಭಿನಂದನೆ

0

ಬೆಟ್ಟಂಪಾಡಿ: ವಿವೇಕಾನಂದ‌ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಗಳಲ್ಲೊಂದಾದ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ಕೊಠಡಿಗಳ,‌ ಕೇಶವ ದರ್ಶಿನಿ ಸಭಾಂಗಣ ಹಾಗೂ ಸುಮೇಧ ಗಣಕಯಂತ್ರ ಕೊಠಡಿಯ ಉದ್ಘಾಟನೆ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜೂ. 18 ರಂದು ನಡೆಯಿತು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿಯವರು ದೀಪ ಬೆಳಗಿಸಿ ಸುಮೇಧ ಗಣಕಯಂತ್ರ ಕೊಠಡಿ ಮತ್ತು ಕೇಶವದರ್ಶಿನಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿ ‘ಪ್ರಿಯದರ್ಶಿನಿ ಶಾಲೆ ಎಲ್ಲಾ ರೀತಿಯಲ್ಲಿ ಉನ್ನತೀಕರಣಗೊಂಡಿದೆ. ಸವಾಲಿನ ಮಧ್ಯೆ ಹುಟ್ಟಿ ಬೆಳೆದ ಸಂಸ್ಥೆ ಇಂದು ನಾವೆಲ್ಲಾ ಹೆಮ್ಮೆಪಡುವ ರೀತಿಯಲ್ಲಿ ಬೆಳೆದಿದೆ. ಗ್ರಾಮೀಣ ಭಾಗದಲ್ಲಿ ಅಸಾಧಾರಣ ಪ್ರತಿಭೆಗಳಿವೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ. ಇಲ್ಲಿ ರಾಜೇಶ್ ಮತ್ತು ತಂಡದವರ ಪರಿಶ್ರಮ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100  ಸಾಧನೆ ಮಾಡಿರುವುದು ಸಾಮಾನ್ಯ ವಿಷಯವಲ್ಲ. ಶಿಕ್ಷಕರ ಹಗಲು ಇರುಳಿನ ಪರಿಶ್ರಮವನ್ನು ಉಲ್ಲೇಖಿಸಿ ಸಮಾಜ ಮತ್ತು ಶಾಲೆಗಳ ಮಧ್ಯೆ ಸಂಬಂಧ ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ರವರಿಗೆ ಇದೇ ವೇಳೆ ಶಾಲಾ ವತಿಯಿಂದ ಸನ್ಮಾನ ನಡೆಯಿತು. ಬಳಿಕ ಮಾತನಾಡಿದ ಅವರು ‘ಸತತ ಶೇ. 100 ಫಲಿತಾಂಶ ಮತ್ತು 96% ಗುಣಾತ್ಮಕ ಫಲಿತಾಂಶ ಬಂದಿರುವ ಈ ಶಾಲೆಗೆ ಬರಲು ಖುಷಿಯಾಗಿದೆ. ನನಗೆ ಮಾಡಿರುವ‌ ಸನ್ಮಾನವನ್ನು ಇಲ್ಲಿನ ಶಿಕ್ಷಕರಿಗೆ ಸಮರ್ಪಿಸಿದ್ದೇನೆ. ಇಲ್ಲಿನ ಉತ್ತಮ ಫಲಿತಾಂಶ ನಮ್ಮ ಇಲಾಖಾ ಮಟ್ಟದಲ್ಲಿ ತಾಲೂಕಿನ ಘನತೆ ಗೌರವವನ್ನು ಹೆಚ್ಚಿಸಿದೆ. ಶಿಕ್ಷಣದ ಮೂಲ‌ ಉದ್ದೇಶವಾಗಿರುವ ಮಕ್ಕಳಲ್ಲಿ ಸಂಸ್ಕಾರ, ರಾಷ್ಟ್ರ ಭಕ್ತಿ ಬೆಳೆಸುತ್ತಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಎಲ್ಲಾ ಶಿಕ್ಷಣ ಸಂಸ್ಥೆಗಳ‌ ಮೇಲೆ ನಮ್ಮ ಇಲಾಖೆಗೆ ಅಪಾರ ಗೌರವವಿದೆ’ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಕೃಷ್ಣ ಭಟ್ ರವರು ಮಾತನಾಡಿ ‘ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಗ್ರಾಮೀಣ ಭಾಗದ ಶಾಲೆಗಳಲ್ಲಿ ಎಲ್ಲಾ ವಿಷಯಗಳಲ್ಲೂ ಪ್ರಿಯದರ್ಶಿನಿ ಮುಂದಿದೆ. ಜಗತ್ತಿನಲ್ಲಿ ಅದ್ವಿತೀಯವಾಗಿ ಬೆಳೆದು ಬಂದ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ರವರ ಹೆಸರನ್ನೇ ಸಭಾಂಗಣಕ್ಕೆ ಇಟ್ಟಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಆರ್‌ಎಸ್‌ಎಸ್ ಸ್ಥಾಪಕನಾದರೂ ನಾನು ಎಂಬ ಅಹಂಇಲ್ಲದೇ ಸಮಾಜಕ್ಕಾಗಿ ಬಲಿದಾನ, ಸಂಘಟನೆಗೆ ಒತ್ತು ನೀಡಿ ಸಂಘವನ್ನು ಬೆಳೆಸಿದವರು ಅವರು. ಅವರ ಆದರ್ಶ ಮಕ್ಕಳಲ್ಲಿ ಬರಬೇಕೆಂಬ ನಿಟ್ಟಿನಲ್ಲಿ ಇಲ್ಲಿ ಸ್ಮರಿಸಲಾಗಿದೆ.  ಮಕ್ಕಳ ಸಾಧನೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.
ಸಭಾಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸತೀಶ್ ರಾವ್ ರವರು ಮಾತನಾಡಿ ‘ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಈ ವರ್ಷ ಸಂಭ್ರಮದ ವರ್ಷವಾಗಿದೆ. 75 ಸಂಸ್ಥೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರು, ಪೋಷಕರು, ಆಡಳಿತ ಮಂಡಳಿಯವರಲ್ಲಿ ಮಿಂಚಿನ ಸಂಚಲನವಾಗಿದೆ. ಪ್ರಿಯದರ್ಶಿನಿ ಶಾಲೆಯೂ ಗ್ರಾಮೀಣ ಭಾಗದಲ್ಲಿ ಅತ್ಯಂತ ಶ್ರೇಷ್ಠ ಸಾಧನೆ ತೋರಿ ಸಂಘದ ಹೆಸರನ್ನು ಮತ್ತಷ್ಟು ಪಸರಿಸಿದೆ. ಹಿರಿಯರ ಶೈಕ್ಷಣಿಕ ಆಶಯ  ಮೆದುಳಿಗೆ ಶಿಕ್ಷಣ, ಶರೀರಕ್ಕೆ ಪೋಷಣ ಮತ್ತು ಹೃದಯಕ್ಕೆ ಸಂಸ್ಕಾರ‌ ಕೊಡುವ ಸಂಸ್ಥೆಗಳಾಗಿ ಬೆಳೆಯುತ್ತಿದೆ’ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶಿವಪ್ರಸಾದ್ ಇ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶುಭಕರ ರೈ ಬೈಲಾಡಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ, ಸಂಚಾಲಕ ಡಾ. ಸತೀಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೋಟರಿ‌ ನ್ಯಾಯವಾದಿ‌ ಚಿದಾನಂದ ಬೈಲಾಡಿ, ತಾ.ಪಂ.‌ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಡಬ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ವೆಂಕಟ್ರಮಣ ಮಂಕುಡೆ, ಪುತ್ತೂರಿನ ವಿವೇಕಾನಂದ ಆಂಗ್ಲ‌ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಕುಮಾರ್ ರೈ, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ಮುಖ್ಯಗುರು ಪುಷ್ಪಾವತಿ ಎಸ್., ಜಗನ್ನಾಥ ರೈ ಕೊಮ್ಮಂಡ, ಆಡಳಿತ ಮಂಡಳಿ‌ ಕೋಶಾಧಿಕಾರಿ ಕರುಣಾಕರ ಶೆಟ್ಟಿ‌ ಕೊಮ್ಮಂಡ, ಸದಸ್ಯ ಪ್ರಕಾಶ್ ರೈ ಬೈಲಾಡಿ, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಪಾಲ್ಗೊಂಡರು.
ಪ್ರಸ್ತಾವಿಕದೊಂದಿಗೆ ಸ್ವಾಗತಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್. ರಂಗನಾಥ ರೈ ಗುತ್ತು ರವರು ಮಾತನಾಡಿ ‘ಬೈಲಾಡಿ ಬಾಬು ಗೌಡರು ಸ್ಥಾಪಿಸಿದ ಈ ಸಂಸ್ಥೆ ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ವಿಲೀನವಾಗಿದೆ. ಗ್ರಾಮೀಣ ಭಾಗದಲ್ಲಿ ಸಂಸ್ಕಾರಯುತ ಶಿಕ್ಷಣದ ಆದ್ಯತೆಯ ಜೊತೆಗೆ ಸಂಸ್ಥೆ ನಿರಂತರ 100 ಶೇ. ಮತ್ತು ಗುಣಾತ್ಮಕ ಫಲಿತಾಂಶದೊಂದಿಗೆ ಮುಂದುವರಿಯುತ್ತಿದೆ. ಊರವರ, ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಹಂತ ಹಂತವಾಗಿ ಕೊಠಡಿಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿ ಶಾಲೆಯ ಅಭಿವೃದ್ಧಿಯಲ್ಲಿ ಹಗಲಿರುಳು ಶ್ರಮಿಸಿ ಇಹಲೋಕ ತ್ಯಜಿಸಿರುವ ಶಶಿಕುಮಾರ್ ಬೈಲಾಡಿಯವರನ್ನು ಸ್ಮರಿಸಿದರು. 
ಎಸ್.ಎಸ್.ಎಲ್.‌ಸಿ. ಸಾಧಕ‌ ವಿದ್ಯಾರ್ಥಿಗಳಿಗೆ ಅಭಿನಂದನೆ
ಶಾಲೆಗೆ  ಕಳೆದ 6 ವರ್ಷಗಳಿಂದ ಸತತ 100 ಶೇ. ಫಲಿತಾಂಶ ಮತ್ತು ಶೇ. 96 ಗುಣಾತ್ಮಕ ಫಲಿತಾಂಶ ದಾಖಲಾಗುತ್ತಿದ್ದು, ಈ ಬಾರಿಯೂ ವಿಶೇಷವಾಗಿ ಶ್ರಮವಹಿಸಿ ಸಾಧನೆಗೈದ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಗಣ್ಯರು ಗೌರವಿಸಿ ಅಭಿನಂದಿಸಿದರು.  ಅತಿಥಿ ಗಣ್ಯರು ಆರಂಭದಲ್ಲಿ ಸರಸ್ವತಿ, ಓಂ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ, ನಿತ್ಯಪಂಚಾಂಗ, ಸುಭಾಷಿತ, ದಿನದ ಮಾತು ಹಾಗೂ ಕವಿವಾಣಿ ವಾಚನ ನಡೆಯಿತು.  ಮುಖ್ಯಗುರು ರಾಜೇಶ್ ಎನ್. ರವರು ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಪವಿತ್ರ ಹಾಗೂ  ಭವ್ಯ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳು ಸಹಕರಿಸಿದರು.‌ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here