‘ಲಂಚ ಪಡೆಯುವುದು, ಕೊಡುವುದೂ ತಪ್ಪು’-ಆಲಂಕಾರು ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

 

ರಾಮಕುಂಜ: ಲಂಚ ಪಡೆಯುವುದು ತಪ್ಪು, ಕೊಡುವುದೂ ತಪ್ಪು. ಕಡತ ಸರಿಯಾಗಿದ್ದರೂ ಅಧಿಕಾರಿಗಳು ಅನಗತ್ಯವಾಗಿ ವಿಳಂಬ ಧೋರಣೆ ಮಾಡಿದಲ್ಲಿ ಈ ಬಗ್ಗೆ ಗ್ರಾಮಸ್ಥರು ಅವರ ಮೇಲಾಧಿಕಾರಿಗಳಿಗೆ ದೂರು ನೀಡಿ, ಇಲ್ಲವೇ ನನ್ನ ವಾಟ್ಸಪ್ ನಂಬರ್‌ಗೆ ಮೇಸೇಜ್ ಮಾಡುವಂತೆ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಹೇಳಿದರು.

ಅವರು ಜೂ.18ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನ ದಯಾಳು ರೈತ ಸಭಾಭವನದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿದರು. ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಆಂದೋಲನದ ಕುರಿತು ಪರೋಕ್ಷವಾಗಿ ಉಲ್ಲೇಖಿಸಿದ ಜಿಲ್ಲಾಧಿಕಾರಿಯವರು, ಲಂಚ, ಭ್ರಷ್ಟಾಚಾರದ ವಿರುದ್ಧ ಮಾಧ್ಯಮದವರು ಜಾಗೃತಿ ಮೂಡಿಸುತ್ತಿದ್ದಾರೆ ಎಂದರು. ಅಧಿಕಾರಿಗಳು ಜನರಲ್ಲಿ ಭಿಕ್ಷೆ ಬೇಡುವ ಅವಶ್ಯಕತೆಯಿಲ್ಲ. ಅರ್ಜಿದಾರರಿಗೆ ಕಿರುಕುಳ ನೀಡಬಾರದು. ಅರ್ಜಿ ಬಂದ ಬಳಿಕ ಅದರ ಜವಾಬ್ದಾರಿ ಅಧಿಕಾರಿಗಳದ್ದು, ಅದನ್ನು ಬಿಟ್ಟು ಅರ್ಜಿದಾರರನ್ನೇ ಪ್ರತೀ ಹಂತದ ಕೆಲಸಕ್ಕೆ ಕಳುಹಿಸುವುದು ಸರಿಯಲ್ಲ. ಜನರನ್ನು ಸತಾಯಿಸಿ ಲಂಚಕ್ಕೆ ಪೀಡಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಎಚ್ಚರಿಸಿದರು.


ಫೈಲ್ ಮಿಸ್ಸಿಂಗ್: ಸವಣೂರಿನ ಶುಭ ಕಿರಣ ಎಂಬವರ ಪ್ಲಾಟಿಂಗ್‌ಗೆ ಸಂಬಂಧಿಸಿದ ಕಡತ ಮಿಸ್ಸಿಂಗ್ ಆಗಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯ ಕುರಿತು ಕಂದಾಯ ಹಾಗೂ ಭೂಮಾಪನಾ ಇಲಾಖೆಯ ಅಧಿಕಾರಿಗಳನ್ನು ವೇದಿಕೆಗೆ ಕರೆಸಿ ಮಾಹಿತಿ ಕೇಳಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಸಂಜೆಯೊಳಗೆ ಸೂಕ್ತ ಮಾಹಿತಿ ನೀಡುವಂತೆ ತಿಳಿಸಿದರು. ಈ ವಿಚಾರ ಪ್ರಸ್ತಾಪಿಸಿದ ಪ್ರವೀಣ್‌ಕುಮಾರ್ ಕೆಡೆಂಜಿ ಅವರು, ಅರ್ಜಿಯ ಪ್ರತಿ ಹಂತದಲ್ಲೂ ಅರ್ಜಿ ದಾರರಿಗೆ ಫೋನ್ ಮಾಡುತ್ತಾರೆ. ಕಡಬ ಭೂಪನಾ ಇಲಾಖೆಯಲ್ಲಿನ ಮಹಿಳಾ ಸಿಬ್ಬಂದಿಯೋವರ್ವರು ಮುಖ ನೋಡಿ ಮಾತಾಡುವುದೇ ಇಲ್ಲ, ಇವತ್ತು ಬನ್ನಿ, ನಾಳೆ ಬನ್ನಿ ಎಂದು ಸತಾಯಿಸುತ್ತಿರುವುದಾಗಿ ದೂರಿದರು. ಸಿಬ್ಬಂದಿಯನ್ನು ಸಭೆಗೆ ಕರೆಸುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.


ಶಾಶ್ವತ ಪುನರ್ವಸತಿ ಕೇಂದ್ರಕ್ಕೆ ಮನವಿ: ಎಂಡೋ ಸಂತ್ರಸ್ತರಿಗೆ ಆಲಂಕಾರಿನಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಮತ್ತು ಎಂಡೋ ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್‌ಗಾಗಿ ದ.ಕ.ಜಿಲ್ಲಾ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಅವರ ಮನವಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಯವರು, ಆಲಂಕಾರು ಹಾಗೂ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲೂ ಶಾಶ್ವತ ಪುನರ್ವಸತಿ ಕೇಂದ್ರಕ್ಕೆ ಮನವಿ ಬಂದಿದೆ. ಎರಡೂ ಕಡೆಯು ಜಾಗ ಕಾದಿರಿಸಿರುವುದರಿಂದ ಎರಡೂ ಕಡೆಯು ಪುನರ್ವಸತಿ ಕೇಂದ್ರ ತೆರೆಯಲು ಪ್ರಯತ್ನ ಮಾಡುವ ಎಂದರು.


‘ಭೂ ಒಡೆತನ’ ಯೋಜನೆಯಡಿ ಜಾಗ ಖರೀದಿಸಿ: ನಿವೇಶನ ಕೋರಿ ಎಸ್‌ಸಿ ಫಲಾನುಭವಿಗಳು ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು, ಭೂ ಒಡೆತನ ಯೋಜನೆಯಡಿ ಎಸ್‌ಸಿ ಕುಟುಂಬಗಳಿಗೆ ಜಾಗ ಖರೀದಿಗೆ ರೂ.೧೫ ಲಕ್ಷ ಅನುದಾನ ಸಿಗುತ್ತದೆ. ಆದ್ದರಿಂದ ನಿವೇಶನ ರಹಿತ ಎಸ್‌ಸಿ ಕುಟುಂಬಗಳ ಪಟ್ಟಿ ಮಾಡಿ ಅವರಿಗೆ ಭೂ ಒಡೆತನ ಯೋಜನೆಯಡಿ ೧೫ ಲಕ್ಷ ರೂಪಾಯಿಯಲ್ಲಿ ಜಮೀನು ಖರೀದಿಸಿ ಕೊಡಬೇಕು. ಇದರಿಂದ ಅವರಿಗೆ ಶಾಶ್ವತ ಸೌಲಭ್ಯ ಸಿಗಲಿದೆ. ಈ ರೀತಿ ಮಾಡಿದಲ್ಲಿ ಅಧಿಕಾರಿಗಳಿಗೆ ದೊಡ್ಡ ಪುಣ್ಯವೂ ಸಿಗಲಿದೆ ಎಂದು ಹೇಳಿದರು.


ಅರ್ಹರಿಗೆ ಸೌಲಭ್ಯ ಸಿಗಬೇಕು: ೯೪ಸಿಯಲ್ಲಿ ಜಾಗ ಮಂಜೂರಾತಿಗೆ ಸತಾಯಿಸಲಾಗುತ್ತಿದೆ ಎಂದು ಪದ್ಮಾವತಿ ಕುಂಡಡ್ಕ ದೂರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು, ಅರ್ಹರಿಗೆ ೯೪ಸಿಯಲ್ಲಿ ಜಾಗ ಮಂಜೂರಾತಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಬಡವರ ಕೆಲಸಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ಮಾಡಿಕೊಡಬೇಕು, ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು. ಅರ್ಹರಿಗೆ ಸೌಲಭ್ಯ ಸಿಗುವಂತೆ ಆಗಬೇಕೆಂದು ಹೇಳಿದರು.

ಅಡಕೆ ಹಳದಿರೋಗಕ್ಕೆ ಪ್ಯಾಕೇಜ್: ಅಡಕೆಗೆ ಹಳದಿ ರೋಗದ ಬಗ್ಗೆ ಶಿವಣ್ಣ ಗೌಡ ಕಕ್ವೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಇದಕ್ಕೆ ಸರಕಾರ ೨೫ ಕೋಟಿ ರೂ.,ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಅನುದಾನ ಬಿಡುಗಡೆಗೊಂಡಿಲ್ಲ. ಸಚಿವರ ಮೂಲಕ ಸರಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಹೇಳಿದರು.

ಅಂಬೇಡ್ಕರ್ ಭವನಕ್ಕೆ ಜಾಗ ಬೇಕು: ಆಲಂಕಾರಿನಲ್ಲಿ ಅಂಬೇಡ್ಕರ್ ಭವನಕ್ಕೆ ಕಾದಿರಿಸಿರುವ ಜಾಗ ಸೂಕ್ತವಾಗಿಲ್ಲ. ಯುವಕ ಮಂಡಲಕ್ಕೆ ನೀಡಿರುವ ಜಾಗದ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ, ಯುವಕ ಮಂಡಲ ಕೂಡಾ ಸಕ್ರೀಯವಾಗಿಲ್ಲ, ಆದ್ದರಿಂದ ಆ ಜಾಗವನ್ನು ಅಂಬೇಡ್ಕರ್ ಭವನಕ್ಕೆ ನೀಡಬೇಕು ಎಂದು ಗ್ರಾಮಸ್ಥರೊಬ್ಬರು ಮನವಿ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.

ನಿರ್ಮಾಣ ಹಂತದ ಬಸ್ ನಿಲ್ದಾಣಕ್ಕೆ ಹಾನಿ: ಆಲಂಕಾರು ನಡುಗುಡ್ಡೆಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಹಾಕಲಾಗಿದ್ದ ಅಡಿಪಾಯವನ್ನು ಸ್ಥಳೀಯರೊಬ್ಬರು ಹಾನಿಗೊಳಿಸಿದ್ದಾರೆ ಎಂಬ ದೂರು ಸಭೆಯಲ್ಲಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಸಿ.ಯವರು, ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಅಡ್ಡಬಂದಲ್ಲಿ ಪೊಲೀಸ್ ಇಲಾಖೆಯ ನೆರವು ಪಡೆದುಕೊಳ್ಳುವಂತೆ ಸೂಚಿಸಿದರು. ಜಾಗದ ಪರಿಶೀಲನೆ ನಡೆಸುವುದಾಗಿಯೂ ಡಿ.ಸಿ.ಹೇಳಿದರು.

ಗ್ರಾಮ ಕರಣಿಕರ ಕೊರತೆ: ಬಹುತೇಕ ಗ್ರಾಮಗಳಿಂದ ಖಾಯಂ ಗ್ರಾಮಕರಣಿಕರ ನೇಮಕಗೊಳಿಸುವಂತೆ ಮನವಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಜಿಲ್ಲೆಯಲ್ಲಿ ಶೇ.೫೦ರಷ್ಟು ಗ್ರಾಮಕರಣಿಕರ ಕೊರತೆ ಇದೆ. ಈಗ ಇದ್ದವರಲ್ಲಿಯೂ ಕೆಲವರಿಗೆ ಭಡ್ತಿ ನೀಡಬೇಕಾಗಿದೆ. ಹೊಸದಾಗಿ ಗ್ರಾಮಕರಣಿಕರ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮತಿ ದೊರೆತ ತಕ್ಷಣ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು. ಬಲ್ಯ ಗ್ರಾಮಕ್ಕೆ ಗ್ರಾಮ ಸಹಾಯಕರ ನೇಮಕ ಮಾಡಬೇಕೆಂದು ಹೆಚ್. ಮಹಮ್ಮದಾಲಿ ಹೇಳಿದರು. ಇಲ್ಲಿನ ಗ್ರಾಮ ಸಹಾಯಕರು ತಹಶೀಲ್ದಾರ್ ಕಚೇರಿಯಲ್ಲಿ ರೆಕಾರ್ಡ್ ರೂಮ್‌ನಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಯವರು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

75 ಡೆಸಿಬಲ್‌ಗಿಂತ ಹೆಚ್ಚು ಶಬ್ಧ ಬರುವ ಹಾಗಿಲ್ಲ: ಕೊಯಿಲ ಗ್ರಾಮದ ಗಂಡಿಬಾಗಿಲು ಮಸೀದಿಯ ಧ್ವನಿವರ್ಧಕದಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ಪಕ್ಕದಲ್ಲಿಯೇ ಅಂಗನವಾಡಿ, ಸರಕಾರಿ ಶಾಲೆಯಿದ್ದು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಪಂಚಾಯತ್‌ಗೆ ದೂರು ನೀಡಿದ್ದು ಪಂಚಾಯತ್‌ನವರು ನೋಟಿಸ್ ನೀಡಿದರು ಏನೂ ಪ್ರಯೋಜನ ಆಗಿಲ್ಲ ಎಂದು ಆನೆಗುಂಡಿ ನಿವಾಸಿ ಬಾಲಕೃಷ್ಣ ಗೌಡರವರು ನೀಡಿದ ಮನವಿ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಕೋರ್‍ಟ್‌ನ ಆದೇಶದಂತೆ ಧ್ವನಿವರ್ಧಕದಿಂದ ೭೫ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಬರುವ ಆಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಕಡಬ ಎಸ್.ಐ.ಅವರಿಗೆ ಸೂಚಿಸಿದರು.

ಕೆಸಿಡಿಸಿ ಜಾಗ ಯಥಾಸ್ಥಿತಿಗೆ ಸೂಚನೆ: ಆಲಂಕಾರು ಗ್ರಾಮದ ಕಜೆ ಎಂಬಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಸುಮಾರು ೬ ಎಕ್ರೆ ಜಾಗವನ್ನು ೧೨ ಮಂದಿ ನಿವೃತ್ತ ಸೈನಿಕರಿಗೆ ಮಂಜೂರು ಮಾಡಲಾಗಿದೆ. ಈ ಜಾಗವನ್ನು ನಿವೃತ್ತ ಸೈನಿಕರು ಸಮತಟ್ಟುಗೊಳಿಸಿ ಶೆಡ್ ನಿರ್ಮಿಸಿದ್ದಾರೆ. ಈ ಜಾಗ ಮಂಜೂರಾತಿಗೊಳಿಸಿರುವುದಕ್ಕೆ ಕೆಸಿಡಿಸಿಯಿಂದ ಆಕ್ಷೇಪ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಆದೇಶದ ತನಕ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಯಾವುದೇ ಕಟ್ಟಡ ನಿರ್ಮಾಣ ಮಾಡಬಾರದೆಂದು ನಿವೃತ್ತ ಸೈನಿಕರಿಗೆ ಹಾಗೂ ಇಲಾಖೆಗೆ ಸೂಚನೆ ನೀಡಿದ್ದಾರೆ.

ವಿವಿಗೆ ಮಂಜೂರಾದ ಜಾಗದ ಸ್ಥಳ ತನಿಖೆಗೆ ಆದೇಶ: ಮಂಗಳೂರು ವಿವಿಯ ಘಟಕ ಕಾಲೇಜಿಗೆ ನೆಲ್ಯಾಡಿಯ ಮಾದೇರಿಯಲ್ಲಿ ಜಾಗ ಮಂಜೂರು ಆಗಿದ್ದು ಆರ್‌ಟಿಸಿ ಸಹ ಆಗಿದೆ. ಈಗ ಅರಣ್ಯ ಇಲಾಖೆ ತಕರಾರು ಮಾಡುತ್ತಿದೆ. ಇದರಿಂದ ಕಟ್ಟಡ ನಿರ್ಮಾಣಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವಿವಿಯವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಈ ಕುರಿತು ಅರಣ್ಯ ಇಲಾಖೆಯವರಿಂದ ಜಿಲ್ಲಾಧಿಕಾರಿಯವರು ಸ್ಪಷ್ಟನೆ ಕೋರಿದರು. ವಿವಿಗೆ ಮಂಜೂರು ಆಗಿರುವ ಜಾಗದಲ್ಲಿ ಅರಣ್ಯ ಇಲಾಖೆಯ ನೆಡುತೋಪು ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ವಿವಾದ ಇರುವ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಸ್ಥಳ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಯವರು ಆದೇಶಿಸಿದರು.

ಮರಳುಗಾರಿಕೆಗೆ ವಿರೋಧ: ಬುಡೇರಿಯಾದಲ್ಲಿ ರಾತ್ರಿ, ಹಗಲು ಮರಳುಗಾರಿಕೆ ನಡೆಯುತ್ತಿದೆ. ಮರಳು ಸಾಗಾಟದ ಲಾರಿಗಳಿಂದಾಗಿ ಕಾಂಕ್ರಿಟ್ ರಸ್ತೆಯೂ ಹಾನಿಗೊಂಡಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಬೆಳಿಗ್ಗೆ ೬ರಿಂದ ಸಂಜೆ ೬ರ ತನಕ ಮಾತ್ರ ಮರಳು ಸಾಗಾಟಕ್ಕೆ ಅನುಮತಿ ಇದೆ. ಆದ್ದರಿಂದ ಮರಳುಗಾರಿಕೆಗೆ ಪರವಾನಿಗೆ ಪಡೆದುಕೊಂಡವರಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಗೆ ಸೂಚಿಸಿದರು. ಅಲ್ಲದೇ ಮರಳು ಸಾಗಾಟದ ಲಾರಿಯಿಂದಾಗಿ ಕಾಂಕ್ರಿಟ್ ರಸ್ತೆ ಹಾನಿಗೊಂಡಿದಲ್ಲಿ ಅವರಿಂದಲೇ ದುರಸ್ತಿಗೊಳಿಸಬೇಕೆಂದು ಸೂಚಿಸಿದರು. ಈ ಬಗ್ಗೆ ಕಂದಾಯ, ಪೊಲೀಸ್, ಗಣಿ ಇಲಾಖೆಯವರು ಜಂಟಿಯಾಗಿ ಪರಿಶೀಲನೆ ನಡೆಸುವಂತೆಯೂ ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.

ವಿವಿಧ ಬೇಡಿಕೆ ಸಲ್ಲಿಕೆ: ಭೂಪರಿವರ್ತನೆಯಾದ ಜಾಗಕ್ಕ ೯/೧೧ ನೀಡಲು ಪ್ರಾಧಿಕಾರಗಳಿಗೆ ಅವಕಾಶ ನೀಡಿರುವುದನ್ನು ಸರಕಾರ ವಾಪಾಸ್ಸು ಪಡೆದರೂ, ಆ ಆದೇಶ ಸ್ಥಳೀಯಾಡಳಿತಗಳಿಗೆ ಇನ್ನೂ ಬಂದಿಲ್ಲ ಎಂದು ಶಿವಣ್ಣ ಗೌಡ ಹಾಗೂ ಇತರರು ಅಸಮಾಧಾನ ವ್ಯಕ್ತಪಡಿಸಿದರು. ಆಲಂಕಾರು ಹೋಬಳಿ ಕೇಂದ್ರ, ೧೧೦ ಕೆ.ವಿ. ವಿದ್ಯುತ್ ಸಬ್‌ಸ್ಟೇಷನ್ ಶೀಘ್ರ ಅನುಷ್ಠಾನ, ಆಲಂಕಾರಿನಲ್ಲಿ ಪಶು ಚಿಕಿತ್ಸಾಲಯ, ಮುಸ್ಲಿಂ ದಫನ ಭೂಮಿಗೆ ಜಾಗ, ಆಲಂಕಾರು ಪೇಟೆಯಲ್ಲಿ ರಿಕ್ಷಾ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಕೊಣಾಲು ಶಾಲೆಗೆ ಕಟ್ಟಡ ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಯವರ ಮುಂದಿಟ್ಟರು.

120 ಮಂದಿಗೆ ಸವಲತ್ತು ವಿತರಣೆ: ವಿಧವಾ ವೇತನ, ೯೪ ಸಿ ಮಂಜೂರಾತಿ, ಅಕ್ರಮ ಸಕ್ರಮ ಮಂಜೂರಾತಿ, ಪರಿಹಾರ ಧನ ಸೇರಿದಂತೆ ಸುಮಾರು ೧೨೦ ಮಂದಿ ಫಲಾನುಭವಿಗಳಿಗೆ ಸರಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಡಿಡಿಎಲ್‌ಆರ್ ನಿರಂಜನ್, ಕಡಬ ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಧ್ಯಕ್ಷ ಧರ್ಮಪಾಲ ರಾವ್, ಉಪಾಧ್ಯಕ್ಷ ಪ್ರದೀಪ್ ರೈ, ಆಲಂಕಾರು ಗ್ರಾ.ಪಂ. ಅಧ್ಯಕ್ಷ ಸದಾನಂದ ಆಚಾರ್ಯ, ಉಪಾಧ್ಯಕ್ಷೆ ರೂಪಶ್ರೀ ಉಪಸ್ಥಿತರಿದ್ದರು. ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಡಬ ತಹಶಿಲ್ದಾರ್ ಅನಂತ ಶಂಕರ್ ಸ್ವಾಗತಿಸಿದರು. ಉಪತಹಸೀಲ್ದಾರ್‌ಗಳಾದ ಮನೋಹರ ಕೆ.ಟಿ., ಗೋಪಾಲ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತ್‌ಮಲೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಿಆರ್‌ಪಿ ಪ್ರಕಾಶ್ ಬಿ ಕಾರ್ಯಕ್ರಮ ನಿರೂಪಿಸಿದರು.

 

 

 

1 ವಾರದಲ್ಲಿ ಕುಮ್ಕಿ ಹಕ್ಕು ಜಾರಿ: ಸಚಿವ ಅಂಗಾರ

ಕಾನ, ಬಾನೆ ಹಾಗೂ ಕುಮ್ಕಿ ಹಕ್ಕು ಮಂಜೂರುಗೊಳಿಸುವ ಸಂಬಂಧ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದಕ್ಕಾಗಿ ಉಪಸಮಿತಿ ರಚಿಸಲಾಗಿದ್ದು, ಒಂದು ವಾರದಲ್ಲಿ ಉಪಸಮಿತಿ ಸಭೆ ಸೇರಿ ಸರಕಾರದ ಆದೇಶ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಡೀಮ್ಡ್ ಫಾರೆಸ್ಟ್‌ಗೆ ಸಂಬಂಧಿಸಿದ ಸಮಸ್ಯೆಯನ್ನೂ ಬಗೆಹರಿಸಲಾಗುವುದು ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆ ಯೋಜನೆಗಳಿಗೆ ಜನರ ಪರದಾಟ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಗ್ರಾಮದಲ್ಲಿಯೇ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕೆಂದು ಸಚಿವ ಎಸ್.ಅಂಗಾರ ಹೇಳಿದರು.

ಪೂರ್ಣಕುಂಭ ಸ್ವಾಗತ

ಜಿಲ್ಲಾಧಿಕಾರಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ೧೧ ಗಂಟೆ ವೇಳೆಗೆ ಆಲಂಕಾರಿಗೆ ಆಗಮಿಸಿದ ಜಿಲ್ಲಾಧಿಕಾರಿಯವರನ್ನು ಆಲಂಕಾರು ಗ್ರಾಮ ಪಂಚಾಯತ್ ಬಳಿ ಹೆದ್ದಾರಿಯಿಂದ ಚೆಂಡೆ, ವಾದ್ಯ, ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮ ನಡೆಯುವ ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ದೀನ ದಯಾಳು ಸಭಾಂಗಣಕ್ಕೆ ಕರೆತರಲಾಯಿತು. ಸಹಕಾರ ಸಂಘದ ಆವರಣದಲ್ಲಿ ಜಿಲ್ಲಾಧಿಕಾರಿಯವರು ಗಿಡ ನೆಟ್ಟರು. ಮಧ್ಯಾಹ್ನ ಊಟದ ವಿರಾಮದ ಬಳಿಕ ಕೊಯಿಲ ಎಂಡೋಪಾಲನಾ ಕೇಂದ್ರ, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರ, ನಡುಗುಡ್ಡೆ ಬಸ್‌ನಿಲ್ದಾಣದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ೩.೩೦ರ ವೇಳೆಗೆ ಮತ್ತೆ ಅರ್ಜಿಗಳ ಪರಿಶೀಲನೆ ಆರಂಭಿಸಿದರು. ೬ ಗಂಟೆ ವೇಳೆಗೆ ಮತ್ತೆ ಸ್ಥಳ ಭೇಟಿ ನೀಡಿ ತನಿಖೆ ಕೈಗೊಂಡರು.

ತಾಳಮದ್ದಳೆ: ರಾತ್ರಿ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ವೀಕ್ಷಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.