ವೀರಕಂಬ ಗ್ರಾಮದಲ್ಲಿ ಬಂಟ್ವಾಳ ತಹಶೀಲ್ದಾರ್‌ ಗ್ರಾಮ ವಾಸ್ತವ್ಯ

0

  • ಗ್ರಾಮಸ್ಥರ ಸಮಸ್ಯೆ ನೀಗಿಸುವ ಕಾರ್ಯಕ್ರಮ ಇದಾಗಿದೆ:   ಡಾ. ಸ್ಮಿತಾ ರಾಮ್

 

ವಿಟ್ಲ: ಜಿಲ್ಲಾಧಿಕಾರಿಯ ನಡೆ ಹಳ್ಳಿ ಕಡೆ ಪ್ರಾಜೆಕ್ಟ್ ಇದಾಗಿದೆ. ಆವರು ಆರಂಭದಲ್ಲಿ ಒಂದು ತಾಲೂಕಿಗೆ ಬಂದು ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದ್ದಾರೆ. ಉಳಿದ ಕಡೆಗಳಲ್ಲಿ ಆಯಾಯ ತಾಲೂಕಿನ ತಹಶೀಲ್ದಾರ್  ಈ ಕಾರ್ಯಕ್ರಮ ನಡೆಸಿಕೊಂಡು ಹೋಗಬೇಕಾಗಿದೆ. ಗ್ರಾಮದ ಜನರ ಕುಂದು ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಒಂದು ಗ್ರಾಮ ವಾಸ್ತವ್ಯದ ಆಯೋಜನೆ ಮಾಡಲಾಗಿದೆ ಎಂದು ಬಂಟ್ವಾಳ ತಹಸೀಲ್ದಾರ್ ‌ ಡಾ.ಸ್ಮಿತಾ ರಾಮ್ ಹೇಳಿದರು. ಅವರು ವೀರಕಂಬ ಶ್ರೀನಿಕೇತನದಲ್ಲಿ ಬಂಟ್ವಾಳ ತಾಲೂಕು ಆಡಳಿತ, ಬಂಟ್ವಾಳ ತಹಸೀಲ್ದಾರ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮ ವಾಸ್ತವ್ಯದಲ್ಲಿ ಬಂದ ಮನವಿಗಳಲ್ಲಿ ಸ್ಥಳದಲ್ಲೇ ಪರಿಹಾರ ಮಾಡಲು ಸಾಧ್ಯವಿರುವ ಮನವಿಗಳನ್ನು ಸ್ಥಳದಲ್ಲೇ ಪರಿಹರಿಸಿ ಉಳಿದ ಮನವಿಗಳನ್ನು ಆಯಾಯಾ ಇಲಾಖೆಗೆ ಕಳುಹಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಕೆಲವೊಂದು ವಿಚಾರವನ್ನು ಏಕಪಕ್ಷೀಯ ನಿರ್ಧಾರ ತೆಗೆಕೊಳ್ಳಲಾಗುವುದಿಲ್ಲ. ಎಲ್ಲಾ ವಿಚಾರಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಗ್ರಾಮಸ್ಥರು ಇಲಾಖೆಯ ಜತೆಗೆ ಸಹಕಾರ ನೀಡಬೇಕು ಎಂದರು.


ಮುಡಿಮಾರು ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವಂತೆ ಹಲವಾರು ಭಾರಿ ಮನವಿ ಮಾಡಲಾಗಿದೆಯಾದರೂ, ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡುವುದು ಬಿಟ್ಟರೆ ಈವರೆಗೆ ಅಣೆಕಟ್ಟು ನಿರ್ಮಾಣವಾಗಿಲ್ಲ. ಅದೇ ರೀತಿ ಪೆಲತ್ತಡ್ಕ ರಸ್ತೆ ದುರಸ್ಥಿಯಾಗದೆ ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ಕೃಷಿಕರ ಜಮೀನುಗಳಿಗೆ ಯಾವುದೇ ಮಾಹಿತಿ ಇಲ್ಲದೆ ನುಗ್ಗಿದ ಅಧಿಕಾರಿಗಳು ಅನಧಿಕೃತ ಸರ್ವೇಗೆ ಮುಂದಾಗಿದ್ದಾರೆ. ಕೃಷಿಯನ್ನೇ ನಂಬಿ ಬದುಕು ನಡೆಸುವ ಜನರು ಈ ಭಾಗದಲ್ಲಿದ್ದು, 400ಕೆ. ವಿ. ವಿದ್ಯುತ್ ಮಾರ್ಗದಿಂದ ಬದುಕಿಗೆ ಸಮಸ್ಯೆಯಾಗಲಿದೆ. ಈ ಭಾಗದಲ್ಲಿ ವಿದ್ಯುತ್ ಮಾರ್ಗ ಹೋಗುವುದಕ್ಕೆ ವಿರೋಧವಿದೆ ಎಂದು ರೋಹಿತಾಶ್ವ ವೀರಕಂಬ ಅವರು ಮನವಿ ನೀಡಿದರು.

ವಿವಿಧ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಗ್ರಾಮಸ್ಥರು ನೀಡಿದರು. ಈ ಸಂದರ್ಭದಲ್ಲಿ ಪಡಿತರ ಚೀಟಿ, ಪಿಂಚಣಿ ಸೇರಿ ವಿವಿಧ ಸರ್ಕಾರಿ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೀಲಾ ನಿರ್ಮಲ ವೇಗಸ್, ವೀರಕಂಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ವಿಜಯ ವಿಕ್ರಮ ಸ್ವಾಗತಿಸಿದರು. ಗ್ರಾಮಕರಣಿಕ ಅನಿಲ್ ಕುಮಾರ್ ವಂದಿಸಿದರು. ಗ್ರಾಮಕರಣಿಕ ವೈಶಾಲಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here