ಅಬಕಾರಿ ಡಿವೈಎಸ್ಪಿಯಾಗಿ ಗಾಯತ್ರಿ ಸಿ.ಎಚ್. ನೇಮಕ

0

ಪುತ್ತೂರು: ಸಮಾಜ ಕಲ್ಯಾಣ ಇಲಾಖೆಯ ಪುತ್ತೂರು ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಗಾಯತ್ರಿ ಸಿ.ಎಚ್.ರವರು ಅಬಕಾರಿ ಇಲಾಖೆಯ ಡಿವೈಎಸ್ಪಿಯಾಗಿ ನೇಮಕಗೊಂಡಿದ್ದಾರೆ.


ಬಂಟ್ವಾಳ ತಾಲೂಕಿನ ಬಾಳೆಕಲ್ಲು ಮನೆತನದ ಹಿರಿಯರಾದ ಕೊರಗಪ್ಪ ಪೂಜಾರಿಯವರ ಸಹೋದರ ರಾಮಣ್ಣ ಪೂಜಾರಿ ಮತ್ತು ರತ್ನಾವತಿ ದಂಪತಿಯ ಪುತ್ರಿಯಾಗಿರುವ ಗಾಯತ್ರಿ ಸಿ.ಎಚ್.ರವರು ಮಂಗಳೂರಿನ ಬೆಸೆಂಟ್ ಕಾಲೇಜಿನಲ್ಲಿ‌ ಬಿ.ಎ. ಪದವಿ ಪಡೆದ ಬಳಿಕ ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಪದವಿ ಪಡೆದಿದ್ದರು. ನಂತರ ಸಕಲೇಶಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಗಾಯತ್ರಿರವರು ಕೆ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಪುತ್ತೂರಿನಲ್ಲಿ‌ ಕಾರ್ಯ ನಿರ್ವಹಿಸಿದ್ದರು.‌ ಕೆಲವು ಸಮಯಗಳ ಹಿಂದೆಯಷ್ಟೇ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಜಿಲ್ಲಾ ಮಟ್ಟದ ಯೋಜನಾ ಸಮನ್ವಯಾಧಿಕಾರಿಯಾಗಿ ಮಂಗಳೂರಿಗೆ ವರ್ಗಾವಣೆಗೊಂಡಿದ್ದ ಇವರು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಬಕಾರಿ ಇಲಾಖೆಯ ಡಿವೈಎಸ್ಪಿಯಾಗಿ‌ ನೇಮಕಗೊಂಡಿದ್ದಾರೆ. ಮೈಸೂರಿನ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ ಬಳಿಕ‌ ಡಿವೈಎಸ್ಪಿಯಾಗಿ ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರ ಪತಿ ಶಿವಕುಮಾರ್ ಮೂಲತಃ ಉಡುಪಿಯವರಾಗಿದ್ದು ಪ್ರಸ್ತುತ ಕೊಪ್ಪಳ ಯಲಬುರ್ಗದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಗಾಯತ್ರಿರವರು ಎರಡೂವರೆ ವರ್ಷದ ಪುತ್ರಿ ವೈಷ್ಣವಿಯವರೊಂದಿಗೆ ಮಂಗಳೂರು ಕದ್ರಿಯಲ್ಲಿ ವಾಸವಿದ್ದಾರೆ.

LEAVE A REPLY

Please enter your comment!
Please enter your name here