ಬೆಂಗಳೂರಿನಲ್ಲಿ ಮೊಳಗಿದ ನಮ್ಮೂರು ನಮ್ಮ ಹೆಮ್ಮೆ ಧ್ವನಿ : ಸುದ್ದಿ ಆಂದೋಲನಕ್ಕೆ ರಾಜಧಾನಿಯಲ್ಲಿರುವ ಕರಾವಳಿಗರ ಸಾಥ್

0

ಬೆಂಗಳೂರು: ರಾಷ್ಟ್ರರಾಜಧಾನಿ ನವದೆಹಲಿಯ ನಂತರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸುದ್ದಿಯ ಜನಾಂದೋಲನಕ್ಕೆ ಕರಾವಳಿಗರ ಸಾಥ್ ಸಿಕ್ಕಿದೆ. ನಮ್ಮೂರು ನಮ್ಮ ಹೆಮ್ಮೆ ಎಂಬ ಧ್ಯೇಯ ವಾಕ್ಯದಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪಕ್ಕದಲ್ಲಿರುವ ಪ್ರೆಸ್‌ಕ್ಲಬ್‌ನಲ್ಲಿ ಕೆಲ ಪ್ರಮುಖರ ಸಭೆ ನಡೆಸಲಾಯಿತು. ರಾಜಧಾನಿಯಲ್ಲಿರುವ ಕರಾವಳಿಯವರನ್ನು ಒಟ್ಟುಗೂಡಿಸಿ ತಮ್ಮ ಊರಿನ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಸುದ್ದಿಯ ಜನಾಂದೋಲನ, ಜೊತೆ ಲಂಚ ಭ್ರಷ್ಟಾಚಾರ ವಿರುದ್ಧದ ಹೋರಾಟ ಹೇಗೆ ಊರಿನ ಅಭಿವೃದ್ಧಿಗೆ ನೆರವಾಗುತ್ತದೆ ಎಂಬುದರ ಬಗ್ಗೆ ಚರ್ಚಿಸಲಾಯಿತು.

ನಮ್ಮೂರು ನಮ್ಮ ಹೆಮ್ಮೆ ಆಗಬೇಕಾದರೆ ಲಂಚ ನಿಲ್ಲಲೇಬೇಕು: ಲಂಚ ಭ್ರಷ್ಟಾಚಾರ ವಿರೋಽ ಸುದ್ದಿ ಜನಾಂದೋಲನ ಹೇಗಾಗುತ್ತಿದೆ. ಲಂಚ ಸ್ವೀಕರಿಸದ ಅಧಿಕಾರಿಗಳ -ಟೋ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಿಸುವುದರಿಂದ ಅಧಿಕಾರಿಗಳಿಗೆ ನೈತಿಕ ಬೆಂಬಲ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಅಲ್ಲದೇ, ದ.ಕ, ಉಡುಪಿ ಜಿಲ್ಲೆಗಳಲ್ಲಿ ಲಂಚ ರಹಿತವಾಗಿ ಅಭಿವೃದ್ದಿ ಕೆಲಸಗಳಾಗಬೇಕು. ಊರಿನ ಬಗ್ಗೆ ಪ್ರೀತಿಯುಳ್ಳ ಪರವೂರಿನ ಸಾಧಕರು, ಉದ್ಯಮಿಗಳು ತಮ್ಮೂರಿನ ವಿವಿಧ ಕಾಮಗಾರಿಗಳಿಗೆ ಆರ್ಥಿಕ ಸಹಾಯ ಮಾಡಲು ಮುಂದಡಿಯಿಡುತ್ತಾರೆ. ಆದರೆ ಅಂತಹವರಿಗೆ ಲಂಚ, ಕಮಿಷನ್ ಬಗ್ಗೆ ಆತಂಕವಿರುತ್ತದೆ. ಆದರೆ ಊರಿನಲ್ಲಿ ಪಾರದರ್ಶಕವಾಗಿ ಅಭಿವೃದ್ಧಿ ಕಾರ್ಯದ ಮೇಲ್ವಿಚಾರಣೆ ಮಾಡುವವರಿದ್ದರೆ ಕೊಡುಗೆಯ ರೂಪದಲ್ಲಿ ಸಹಾಯ ಮಾಡುವುದಕ್ಕೆ ಪರವೂರಿನಲ್ಲಿರುವ ಊರಿನವರು ಹಿಂದೇಟು ಹಾಕುವುದಿಲ್ಲ ಎಂಬುದು ಸಭೆಯಲ್ಲಿರುವ ಪ್ರಮುಖರ ಅಭಿಪ್ರಾಯವಾಗಿತ್ತು. ಈ ನಿಟ್ಟಿನಲ್ಲಿ ಸುದ್ದಿ ಮಾಹಿತಿ ಟ್ರಸ್ಟ್ ಮೇಲೆ ನಂಬಿಕೆಯಿದ್ದು, ಲಂಚ ಭ್ರಷ್ಟಾಚಾರದ ವಿರುದ್ಧ ಹೋರಾಟ ಪರೋಕ್ಷವಾಗಿ ಊರಿನ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಕೂಡ ತಿಳಿಸಲಾಯಿತು.

ದ.ಕ. ಜಿಲ್ಲೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿಯ ಆಂದೋಲನ ಮುಂದುವರಿಸುವುದಕ್ಕಾಗಿ ಹಾಗೂ ದ.ಕ. ಜಿಲ್ಲೆಯ ಅಭಿವೃದ್ದಿಗಾಗಿ ಮಂಗಳೂರು ಮತ್ತು ಬಂಟ್ವಾಳದಲ್ಲಿ ಕಛೇರಿ ಹಾಗೂ ಸುದ್ದಿ ಚಾನೆಲ್‌ನ್ನು ಪ್ರಾರಂಭಿಸುವುದಾಗಿ ಹಾಗೂ ಬೆಂಗಳೂರಿನಲ್ಲಿ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಚಾನೆಲ್‌ನ ಕಛೇರಿ ಪ್ರಾರಂಭಿಸುವುದಾಗಿ, ಅದಕ್ಕೆ ಬೆಂಬಲ ನೀಡುವಂತೆ ಡಾ.ಶಿವಾನಂದರು ಸಭೆಗೆ ತಿಳಿಸಿದರು.

ಸಂಗಮ ಪುನರುಜ್ಜೀವನಕ್ಕೆ ಸಭೆಯಲ್ಲಿ ನಿರ್ಧಾರ: ಬೆಂಗಳೂರಿನಲ್ಲಿ ಸಂಗಮ ಎಂಬ ಹೆಸರಿನ ಸಂಸ್ಥೆ ಸಮಾಜಮುಖಿ ಕೆಲಸಕಾರ್ಯಗಳಲ್ಲಿ ಭಾಗಿಯಾಗುತ್ತಿತ್ತು. ಆದರೆ ಕಾರಣಾಂತರಗಳಿಂದ ಸದ್ಯ ಸಂಗಮದ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಸುದ್ದಿ ಸಂಪಾದಕರಾದ ಡಾ.ಯು.ಪಿ ಶಿವಾನಂದ್ ಅವರ ಗೌರವಾಧ್ಯಕ್ಷತೆಯಲ್ಲಿ ಸಂಗಮ ಸಂಸ್ಥೆಯ ಕಾರ್ಯ ಮತ್ತೆ ಆರಂಭವಾಗಬೇಕು ಎಂದು ಎಂ ಬಿ ಜಯರಾಮ್ ಅಭಿಪ್ರಾಯಪಟ್ಟರು. ಈ ವೇಳೆ ಸಭೆಯಲ್ಲಿದ್ದ ಉಳಿದವರು ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಮುಂದಿನ ತಿಂಗಳಲ್ಲಿ ಮತ್ತೊಂದು ಸಭೆ ನಡೆಸಲು ತೀರ್ಮಾನ: ಸುದ್ದಿಯ ಜನಾಂದೋಲನಕ್ಕೆ ದೆಹಲಿಯಲ್ಲಿ ಸಿಕ್ಕ ಬೆಂಬಲದಂತೆ ರಾಜ್ಯ ರಾಜಧಾನಿಯಲ್ಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ಕರಾವಳಿಯವರನ್ನು ಸೇರಿಸಿ ಸಭೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಎಲ್ಲಾ ಕರಾವಳಿ ಸಂಘಟನೆಗಳ ಪ್ರಮುಖರು, ಕರಾವಳಿಯ ಸಾಧಕರನ್ನು ಸೇರಿಸಿ ಸಭೆ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ -ಲಕ ವಿತರಣೆ ಮತ್ತು ಘೋಷಣೆ: ಪ್ರೆಸ್ ಕ್ಲಬ್‌ನಲ್ಲಿ ನಡೆದ ಸಭೆಯಲ್ಲಿ ಲಂಚ ಭ್ರಷ್ಟಾಚಾರ ವಿರೋಧಿ ಫಲಕವನ್ನು ಸುದ್ದಿ ಸಂಪಾದಕರು ಎಂ ಬಿ ಜಯರಾಮ್ ಮತ್ತು ಕೆ ಎನ್‌ಅಡಿಗರಿಗೆ ಹಸ್ತಾಂತರಿಸಿದ್ದು, ಘೋಷಣೆ ಕೂಗಲಾಯಿತು. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಭೆಯಲ್ಲಿದ್ದವರು ಹೇಳಿದರು.

ದೆಹಲಿಯಂತೆ ಬೆಂಗಳೂರಿನಲ್ಲೂ ದೊಡ್ಡ ಸಭೆ ಮಾಡೋಣ

ಸುದ್ದಿ ಸಂಪಾದಕರಾದ ಡಾ.ಯು. ಪಿ ಶಿವಾನಂದ್ ಅವರು ಆರಂಭಿಸಿರುವ ಲಂಚದ ವಿರುದ್ಧದ ಹೋರಾಟ ನಮ್ಮೂರು ನಮ್ಮ ಹೆಮ್ಮೆ ಅನ್ನುವ ಧ್ಯೇಯ ವಾಕ್ಯಕ್ಕೆ ಪ್ರೇರಣೆಯಾಯಿತು. ಇದನ್ನು ಮಾತನಾಡಿ ಮರೆಯುವುದು ಬೇಡ, ಅದಕ್ಕಾಗಿ ನಾವು ಕೆಲವು ಸಂಘಗಳ ಅಧ್ಯಕ್ಷರು,ನಾಯಕರುಗಳನ್ನು ಭೇಟಿಯಾಗಿ ಮುಂದಿನ ದಿನಗಳಲ್ಲಿ ದೊಡ್ಡ ಕಾರ್ಯಕ್ರಮ ಮಾಡೋಣ. ಇದು ಒಂದು ಆರಂಭ, ಮುಂದಿನ ದಿನಗಳಲ್ಲಿ ವೇಗವಾಗಿ ಸಾಗುವಂತೆ ಮಾಡೋಣ. ಇನ್ನೊಂದು ಎರಡು ಸಭೆ ನಡೆಸಿದ ನಂತರ ಮತ್ತಷ್ಟು ವೇಗ ಪಡೆದುಕೊಳ್ಳುತ್ತದೆ. ನಮ್ಮೂರು ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ನಾವು ಸಂಪೂರ್ಣ ಬೆಂಬಲ ನೀಡಲು ಸದಾ ಸಿದ್ಧವಿರುತ್ತೇವೆ.

ಎಂ.ಬಿ. ಜಯರಾಮ್, ಚೆಯರ್‌ಮೆನ್ ಎಮಿರಿಟಸ್ ಆಂಡ್

ಚೀಫ್ ಮೆಂಟರ್ ಪಿ.ಆರ್.ಸಿ.ಐ. ಇಂಡಿಯಾ

 

ಕರಾವಳಿಯಿಂದ ಸಹಾಯ ಕೇಳಿದಾಗ‌  ಕೈ ಜೋಡಿಸುವುದು ನಮ್ಮ ಕರ್ತವ್ಯ

ದೆಹಲಿಯಲ್ಲಿ ಈಗಾಗಲೇ ನಮ್ಮೂರು ನಮ್ಮ ಹೆಮ್ಮೆ ಕಾರ್ಯಕ್ರಮ ಆಗಿದೆ.ಈಗ ರಾಜ್ಯದ ರಾಜಧಾನಿಯಲ್ಲಿ ಮಾಡುವ ಉದ್ದೇಶ ನಿಜಕ್ಕೂ ವಿಶೇಷ. ಹಳ್ಳಿಯಲ್ಲಿ ಭ್ರಷ್ಟಾಚಾರ ಮುಕ್ತ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಯಾಕಂದ್ರೆ ನಮ್ಮ ಕರಾವಳಿಯವರ ಮನಸ್ಸು ಅಷ್ಟು ಸ್ವಚ್ಛವಾಗಿರುತ್ತದೆ.ನೀವು ಕೊಟ್ಟ ಫಲಕ ಬಹಳಷ್ಟು ದೊಡ್ಡ ಮಟ್ಟದಲ್ಲಿ ಲಂಚದ ವಿರುದ್ಧದ ಹೋರಾಟಕ್ಕೆ ನೆರವಾಗುತ್ತದೆ. ಫಲಕವನ್ನು ನೋಡಿದ ಭಯವೂ ಬರುತ್ತದೆ, ಜೊತೆಗೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಇಂತಹ ಕಾರ್ಯವನ್ನು ನಾವೆಲ್ಲರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಬೇಕು. ಕರಾವಳಿಯಿಂದ ಸಹಾಯ ಕೇಳಿದಾಗ ನಾವು ಕೈ ಜೋಡಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡುತ್ತಾ ಸಾಗುತ್ತೇವೆ. ಕರಾವಳಿಯ ಜನರು ಸತ್ಯನಿಷ್ಠರು ಆಗಿರುವುದರಿಂದ ನಮ್ಮ ಆಂದೋಲನ ಸ್ವಾಗತಾರ್ಹವಾಗಿರುತ್ತೆ.

ಡಾ| ಕೆ.ಎನ್. ಅಡಿಗ, ಸಾಂಸ್ಕೃತಿಕ ಸಂಘಟಕ ಬೆಂಗಳೂರು

ದುಡ್ಡಿಲ್ಲದೇ ಜೀವನವಿಲ್ಲ, ದುಡ್ಡೇ ಜೀವನವಲ್ಲ -ಹಾಡಿನ ಮೂಲಕ ಲಂಚದ ವಿರುದ್ಧ ಸಮರ

ನನಗೆ ಇಲ್ಲಿರುವ ಬಂಧುಗಳನ್ನು ನೋಡಿ ಹೃದಯ ತುಂಬಿ ಬಂದಿದೆ. ನನ್ನ ತಂದೆಯವರು ಡಾ.ಯು ಪಿ ಶಿವಾನಂದ್ ಮತ್ತು ಜಯರಾಮ್ ರವರಿಗೆ ಆತ್ಮೀಯರು. ಶಿವಾನಂದ್ ರವರ ಹೋರಾಟಕ್ಕೆ ನಾವಿವತ್ತು ಬೆಂಬಲ ಸೂಚಿಸುವುದನ್ನು ದಿವಂಗತರಾದ ನಮ್ಮ ತಂದೆಯವರ ಆತ್ಮವೂ ಖುಷಿಪಡುವಂತಾಗುತ್ತದೆ ಅನ್ನುವುದು ನನ್ನ ಭಾವನೆ. ನಾನು ಬೆಂಗಳೂರಿಗೆ ಬಂದು 29 ವರ್ಷವಾಯಿತು. ಸುದ್ದಿಯ ಜನಾಂದೋಲನದಿಂದ ಬೆಂಗಳೂರು-ಮಂಗಳೂರು ಬಾಂಧವ್ಯ ಮತ್ತಷ್ಟು ಗಟ್ಟಿಯಾಯ್ತು. ಈ ಜನಾಂದೋಲನಕ್ಕೆ ನಮ್ಮಅಳಿಲ ಸೇವೆ ಹೇಗೆ ಮಾಡಬೇಕು ಅಂತ ಹೇಳಿದ್ರೆ ಸಾಕು, ನಾವು ಮಾಡುತ್ತೇವೆ. ಇದರಿಂದ ಭಾರತಕ್ಕೆ ಕರ್ನಾಟಕಕ್ಕೆ ಒಳಿತಾಗಲಿ. ವಿಶ್ವಶಾಂತಿ ನೆಲೆಯಾಗಲಿ ಅಂತ ಹಾರೈಸುತ್ತಾ,ನಾವೆಲ್ಲ ಜೊತೆ ಸೇರಿ ಈ ಕೈಂಕರ್ಯದಲ್ಲಿ ಭಾಗಿಯಾಗೋಣ. ಲಂಚಾತಾರವೂ ದೂರವಾಗಲಿ ಪ್ರಪಂಚದಲ್ಲಿ ನೆಮ್ಮದಿ ಸ್ಥಿರವಾಗಲಿ ಎಂಬ ಎರಡು ಸಾಲು ಹಾಡುತ್ತಿದ್ದೇನೆ.

ಶಶಿಧರ್ ಕೋಟೆ, ಗಾಯಕ

 

ಸುದ್ದಿಯೊಂದಿಗೆ ನಮ್ಮ ಸಾಥ್ ಸದಾ ಇರುತ್ತೆ

ಲಂಚ ಭ್ರಷ್ಟಾಚಾರದ ಕುರಿತು ಸುದ್ದಿ ಸಂಪಾದಕರ ಬರವಣಿಗೆ ಓದುತ್ತಾ ಇರುವಾಗ ನಾನು ಊರಿನಲ್ಲಿದ್ದರೆ ಇವರೊಂದಿಗೆ ಕೈ ಜೋಡಿಸಬಹುದು ಅನ್ಕೊಂಡಿದ್ದೆ. ಆದರೆ ಈಗ ಅವರೇ ಬೆಂಗಳೂರಿಗೆ ಬಂದಿರುವುದರಿಂದ ಜೊತೆಯಾಗಲು ಸಹಕಾರಿಯಾಯ್ತು. ಈಗ ಯುವ ಸಮುದಾಯದಲ್ಲಿ ಲಂಚ ಭ್ರಷ್ಟಾಚಾರದ ವಿರುದ್ಧದ ಚಿಂತನೆಯನ್ನು ಹೆಚ್ಚಿಸಬೇಕು. ಸುದ್ದಿಯ ಸಂಪಾದಕರದ್ದು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮ ಸಾಥ್ ಸುದ್ದಿಯೊಂದಿಗೆ ಸದಾ ಇರುತ್ತೆ.

ನಿತ್ಯಾನಂದ ಅಸ್ಪಾರೆ,

ನಾನು ಇಲ್ಲಿಯವರೆಗೆ ಲಂಚ ಕೊಟ್ಟಿಲ್ಲ, ಕೊಡುವುದೂ ಇಲ್ಲ

ನಾನು ಕರ್ನಾಟಕ ಸಾಂಸ್ಕೃತಿಕ ಕಲಾಪ್ರತಿಷ್ಠಾನ ಅನ್ನುವ ಸಂಸ್ಥೆ ಕಟ್ಟಿ ಕೆಲವು ವರುಷಗಳ ಕಾಲ ಅಖಿಲ ಭಾರತ ಯಕ್ಷಗಾನ ಬಯಲಾಟವನ್ನು ನಡೆಸುತ್ತಿದ್ದೆ. ಈ ವೇಳೆ ನಾನು ಸರ್ಕಾರದಿಂದ ಯಾವುದೇ ಸಹಾಯವನ್ನೂ ಕೇಳಿರಲಿಲ್ಲ. ಕ್ರಮೇಣ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆಯಿಂದ 2012ರಲ್ಲಿ 3 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಇವತ್ತಿನವರೆಗೂ ಕೂಡ ಆ ಅನುದಾನ ನಮಗೆ ಬಂದಿಲ್ಲ. ಅದಕ್ಕಾಗಿ 50 ಸಾವಿರ ರೂಪಾಯಿ ಕೇಳುತ್ತಾ ಹೋದರು ನಾನು ಕೊಡಲಿಲ್ಲ. ನಿಮ್ಮ ಅನುದಾನ ನನ್ನ ಮನೆಗೆ ಅಕ್ಕಿ ತೆಗೆದುಕೊಂಡು ಹೋಗಲು ಕೇಳಿದ್ದಲ್ಲ, ಸಾರ್ವಜನಿಕ ಕಾರ್ಯಕ್ರಮಕ್ಕೆ ಕೇಳಿದ್ದು ಅಂತ ಹೇಳಿದ್ದೇನೆ. ಈಗಲೂ ನಾನು ಹೇಳುತ್ತೇನೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ, ಪ್ರತಿಯೊಬ್ಬರ ಮನಸ್ಸಿನಲ್ಲಿ ಅದನ್ನು ಬೇರೂರುವಂತೆ ಮಾಡಬೇಕು.

ಎಸ್ ಎನ್ ಪಂಜಾಜೆ, ಬೆಂಗಳೂರಿನಲ್ಲಿರುವ ಕರಾವಳಿಯ ಸಾಧಕ

ಆಗುವುದಿಲ್ಲ ಅಂತ ಆಂದೋಲನ ನಿಲ್ಲಿಸಲೇಬೇಡಿ

ಈ ಕಾನ್ಸೆಪ್ಟ್ ತುಂಬಾನೇ ವಿಭಿನ್ನವಾಗಿದೆ.ನಾವು ಸರ್ಕಾರದ ಯಾವುದಾದರೂ ಕೆಲಸಕ್ಕೆ ಹೋದಾಗ ಆ ಕೆಲಸ ಆಗದಿದ್ದರೆ ಹಣ ಕೊಟ್ಟಾದರೂ ಮಾಡಿಸೋಣ ಅನ್ನುವ ಧೋರಣೆ ಹೊಂದುತ್ತೇವೆ. ನಾನು ಈವರೆಗೂ ಯಾರಿಗೂ ಹಣ ಕೊಟ್ಟು ಯಾವುದೇ ಕೆಲಸ ಮಾಡಿಕೊಂಡಿಲ್ಲ. ಆದರೆ ಇದರಿಂದ ತೊಂದರೆ ಅನುಭವಿಸಿದ್ದೇನೆ. ನನ್ನ ಮಗಳಿಗೆ ಇಂಜೆಕ್ಷನ್ ಹಾಕಿಸುವಾಗ ದಾದಿ ನನ್ನಿಂದ ಹಣ ನಿರೀಕ್ಷಿಸಿದ್ದಳು, ನಾನು ಕೊಟ್ಟಿಲ್ಲ, ನನ್ನನ್ನು ತುಂಬಾ ಹೊತ್ತು ಕಾಯಿಸಿದ್ದಳು. ನಂತರ ವೈದ್ಯಾಧಿಕಾರಿಗೆ ಹೇಳಿದರೂ ಕೂಡ ಪ್ರಯೋಜನವಾಗಲಿಲ್ಲ.ಯಾಕಂದ್ರೆ ಲಂಚ ಪಡೆಯುವವರು ಅಷ್ಟು ಪ್ರಭಾವಿಗಳಾಗಿರುತ್ತಾರೆ. ಸುದ್ದಿ ಈಗ ಹೊಸ ಒಂದು ಸಾಹಸಕ್ಕೆ ಕೈ ಹಾಕಿದೆ ಈ ವಿನೂತನವಾದ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತೆ. ಈಗ ನೀವು ಮಾಡುತ್ತಿರುವ ಕೆಲಸವನ್ನು ಆಗುವುದಿಲ್ಲ ಅಂತ ನಿಲ್ಲಿಸಲೇಬೇಡಿ, ಒಂದು ಸಣ್ಣ ಕಿಡಿ ಮುಂದೆ ಬೆಂಕಿಯಾಗುತ್ತದೆ.

ಜೆಫ್ರಿ ಅಯ್ಯಪ್ಪ, ಪತ್ರಕರ್ತ

 

ನಮ್ಮೂರು ನಮ್ಮ ಹೆಮ್ಮೆ ಅರ್ಥವತ್ತಾದ ಕಾರ್ಯಕ್ರಮ

ಸುದ್ದಿಯ ಸಾಮಾಜಿಕ ಕಾಳಜಿ ಹಾಗೂ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹೊರಲೋಕಕ್ಕೆ ಪರಿಚಯಿಸುತ್ತಿರುವ ರೀತಿ ನನಗೆ ಅಚ್ಚುಮೆಚ್ಚು. ಸುದ್ದಿ ನನ್ನ ಕವನಗಳಿಗೆ, ಬರಹಗಳಿಗೆ ಎಳವೆಯಿಂದಲೇ ಬೆಂಬಲ ನೀಡಿತ್ತು.ಈಗ ಸಂಪಾದಕರು ಲಂಚ ಭ್ರಷ್ಟಾಚಾರ ಹೋರಾಟದ ಜೊತೆ ನಮ್ಮೂರು ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮ ಅರ್ಥವತ್ತಾದ ಚಿಂತನೆ. ನಾನು ಸುದ್ದಿಯ ಜೊತೆ ಸದಾ ನಿಲ್ಲುತ್ತೇನೆ ಅಂತ ಹೇಳುತ್ತೇನೆ. ಗ್ರಾಮೀಣ ಭಾಗದಿಂದ ಇಂತಹ ಯೋಚನೆ ಮಾಡಿದಾಗ ಆಗ ತಾಲೂಕು, ರಾಜ್ಯ, ದೇಶ ಉದ್ಧಾರವಾಗುತ್ತದೆ ಎನ್ನುವ ನಂಬಿಕೆ ನನ್ನದು.

ಉಮ್ಮರ್ ಬೀಜದಕಟ್ಟೆ, ಉಪಾಧ್ಯಕ್ಷರು, ಫಾರ್ಮೆಡ್ ಕಂಪೆನಿ, ಬೆಂಗಳೂರು

LEAVE A REPLY

Please enter your comment!
Please enter your name here