ಕೊಂಡಾಡಿಕೊಪ್ಪಕ್ಕೆ ಜಿಲ್ಲಾಧಿಕಾರಿ ಭೇಟಿ – ಕುಂಬಾರಿಕೆ ವೃತ್ತಿ ಬಗ್ಗೆ ಮೆಚ್ಚುಗೆ

0

ರಾಮಕುಂಜ: ಆಲಂಕಾರು ಗ್ರಾಮದ ಕೊಂಡಾಡಿಕೊಪ್ಪದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಕುಂಬಾರಿಕೆ ವೃತ್ತಿಯನ್ನು ಜೂ.18ರಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.


ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನ ದಯಾಳು ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕೊಂಡಾಡಿಕೊಪ್ಪದಲ್ಲಿ ಈಗಲೂ ಅಸ್ತಿತ್ವದಲ್ಲಿ ಇರುವ ಕುಂಬಾರರ ಗುಡಿ ಕೈಗಾರಿಕೆಗಾಗಿ ಕೇಪುಳು ಎಂಬಲ್ಲಿರುವ ಜಾಗವನ್ನು ಕಾಯ್ದಿರಿಸುವಂತೆ ಬಂದ ಮನವಿ ಮೇರೆಗೆ ಸ್ಥಳ ಪರಿಶೀಲನೆಗೆ ತೆರಳಿದ ಜಿಲ್ಲಾಧಿಕಾರಿಯವರು ಅಲ್ಲಿನ 5 ಕುಟುಂಬ ಇಂದಿಗೂ ಕುಲ ಕಸುಬು ಮುಂದುವರಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರುಕ್ಮಯ್ಯ ಕುಂಬಾರ ಎಂಬವರ ಕುಟುಂಬದವರು ಜಿಲ್ಲಾಧಿಕಾರಿಯವರ ಮುಂದೆಯೇ ಎರಡು ಮಡಿಕೆಯನ್ನು ತಯಾರಿಸಿ ತೋರಿಸಿದರು. ಇದನೆಲ್ಲ ಕುತೂಹಲದಿಂದ ನೋಡಿ ವಿವರಣೆ ಕೇಳಿ ತಿಳಿದ ಡಿ.ಸಿ. ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕುಟುಂಬದ ಜೊತೆ ಸೆಲ್ಪಿಗೂ ಜೊತೆಯಾದರು. ಇತರ ಅಧಿಕಾರಿಗಳು ಸಾಥ್ ನೀಡಿದರು. ಬಳಿಕ ಕುಂಬಾರ ವೃತ್ತಿ ನಡೆಸುತ್ತಿರುವುದರಿಂದ ಈ ಜಾಗವನ್ನು ಸಂಘಕ್ಕೆ ಕಾಯ್ದಿರಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿಯೂ ಹೇಳಿದರು. ಬಳಿಕ ಎಂಡೋಪಿಡಿತರ ಮನೆಯೊಂದಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಬಳಿಕ ದೂರು ಅರ್ಜಿಗಳ ಸ್ಥಳಗಳಿಗೆ ತೆರಳಿ ಪರಿಶೀಲೀಸಿದರು. ರಾತ್ರಿ ಸಭಾಂಗಣಕ್ಕೆ ಆಗಮಿಸಿ ಯಕ್ಷಗಾನ ತಾಳಮದ್ದಲೆ ವೀಕ್ಷಿಸಿದರು. ರಾತ್ರಿ ಹತ್ತು ಗಂಟೆ ಸುಮಾರಿಗೆ ಕಾರ್ಯಕ್ರಮ ಕೊನೆಗೊಳಿಸಿ ಆಲಂಕಾರಿನಿಂದ ನಿರ್ಗಮಿಸಿದರು.

ವೃದ್ಧಾಪ್ಯ ವೇತನ ನೀಡಲು ಕ್ರಮ;

ಕುಂಬಾರಿಕೆಯನ್ನು ವೀಕ್ಷಿಸಿದ ಬಳಿಕ ಜಿಲ್ಲಾಧಿಕಾರಿಯವರು ಅಲ್ಲೇ ಪಕ್ಕದ ಮನೆಯೊಂದಕ್ಕೆ ಭೇಟಿ ನೀಡಿದರು. ಅಲ್ಲಿ ಅಜ್ಜಿಯೊಬ್ಬರು ಕುಳಿತಿದ್ದು ಅವರೊಂದಿಗೆ ಕುಶಲೋಪರಿ ನಡೆಸಿದರು. ಇದೇ ವೇಳೆ ನೀವು ವೃದ್ದಾಪ್ಯ ವೇತನ ಫಲಾನುಭವಿಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಜ್ಜಿ ಹೌದು, ಆದರೆ ಹಲವು ವರ್ಷಗಳಿಂದ ನನ್ನ ಖಾತೆಗೆ ಹಣ ಜಮಾವಣೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು. ಇದರಿಂದ ಸಿಡಿಮಿಡಿಗೊಂಡ ಡಿಸಿಯವರು ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮುಂದಕ್ಕೆ ವೇತನ ಬರುತ್ತದೆ. ನಾನು ಇಲ್ಲಿಗೆ ಆಗಮಿಸಿದ್ದಕ್ಕೆ ನಿಮಗೆ ನೀಡಿದ ನೆನೆಪಿನ ಕಾಣಿಕೆ ಎಂದು ನಗು ಬೀರುತ್ತ ಡಿ.ಸಿ.ಮುನ್ನಡೆದರು.

LEAVE A REPLY

Please enter your comment!
Please enter your name here