ಬಜತ್ತೂರು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿ ಇದರ ಆಡಳಿತಕ್ಕೊಳಪಟ್ಟ ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯಗುರು ಸೂರ್ಯಪ್ರಕಾಶರವರು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಮಾತನಾಡಿದ ಅವರು ಶಾಲಾ ಸಂಸತ್ ಚುನಾವಣೆಯಿಂದ ವಿದ್ಯಾರ್ಥಿಗಳಿಗೆ ಚುನಾವಣೆಯ ಅರಿವು ಮೂಡಿದಂತಾಗುತ್ತದೆ. ಹಾಗೂ ನಾಯಕತ್ವ ಗುಣ ಬೆಳೆಯುತ್ತದೆ ಎಂದು ತಿಳಿಸಿದರು. ಉಪ್ಪಿನಂಗಡಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಮನರವರು ಮಾತನಾಡಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳು ಎದುರಾದಾಗ ಪೋಷಕರಲ್ಲಿ ಅಥವಾ ಶಿಕ್ಷಕರಲ್ಲಿ ಅದನ್ನು ತಿಳಿಸಬೇಕು, ಜೀವನದಲ್ಲಿ ಸಾಧಿಸಬೇಕು ಎನ್ನುವ ಛಲವನ್ನು ಇಟ್ಟುಕೊಳ್ಳಬೇಕು. ತಮ್ಮ ಜೀವನದಲ್ಲಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾಗಿ ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಮಾಡಿದ ಸಾಧನೆಯು ನನ್ನ ಜೀವನಕ್ಕೆ ವರವಾಯಿತು. ಪೋಲಿಸ್ ಇಲಾಖೆಯಲ್ಲಿ ನೌಕರಳಾಗಿ ದುಡಿಯಲು ಅವಕಾಶ ಮಾಡಿಕೊಟ್ಟಿತು. ಎಂದು ಹೇಳಿದರು. ಆಂಗ್ಲಭಾಷಾ ಶಿಕ್ಷಕ ಜ್ಞಾನೇಶ್ರವರು ಮಂತ್ರಿಗಳಿಗೆ ಇರುವ ಜವಾಬ್ದಾರಿಯನ್ನು ತಿಳಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಮುಖ್ಯಮಂತ್ರಿಯಾಗಿದ್ದ ಪದ್ಮಿನಿ ಅನುಭವ ಹಂಚಿಕೊಂಡರು. ಬಜತ್ತೂರು ಗ್ರಾಮದ ಬೀಟ್ ಪೋಲಿಸ್ ಆಗಿರುವ ಶ್ರೀಯುತ ರುದ್ರೇಶ್ ಉಪಸ್ಥಿತರಿದ್ದರು .
ಗಣಿತ ಶಿಕ್ಷಕಿ ಅಕ್ಷತಾ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಕನ್ನಡ ಶಿಕ್ಷಕಿ ಮಂಜುಳಾ ವಂದಿಸಿದರು.