ಜೂ.21: ಯೋಗಕೇಂದ್ರ ಪುತ್ತೂರು-ಸುದ್ದಿ ಸಮೂಹ ಸಂಸ್ಥೆಗಳ ಆಯೋಜನೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಪುತ್ತೂರು: ಪ್ರತಿಯೊಂದು ಜೀವಿಯೂ ಸುಖೀ ಜೀವನವನ್ನು ಬಯಸುತ್ತಿರುತ್ತದೆ. ಆದರೆ ಅದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಮನಸ್ಸಿನ ಚಂಚಲತೆ. ಚಂಚಲತೆಯನ್ನು ಕಡಿಮೆ ಮಾಡಿದಾಗ ಮನಸ್ಸು ರಿಲ್ಯಾಕ್ಸ್ ಆಗುತ್ತದೆ.

ಇದರಿಂದ ಎಲ್ಲಾ ರೋಗಗಳು ಶಮನವಾಗುತ್ತವೆ ಎನ್ನುವುದು ಪತಂಜಲಿ ಮಹರ್ಷಿಯ ಸಿದ್ಧಾಂತ. ಈ ನೆಲೆಯಲ್ಲಿ ನೆರವಾಗಲೆಂದೇ ಇರುವುದು ‘ಯೋಗ’. ಯೋಗ ಎಂದರೆ ಮನಸ್ಸನ್ನು ಶಾಂತ ಮಾಡುವ ಉಪಾಯ. ಚಂಚಲತೆಯನ್ನು ಕಡಿಮೆ ಮಾಡಿದಾಗ ಎಲ್ಲಾ ರೋಗಗಳು ಶಮನವಾಗುತ್ತವೆ ಎನ್ನುವುದನ್ನು ಪತಂಜಲಿ ಮಹರ್ಷಿಗಳು ಲೋಕಕ್ಕೆ ಅರ್ಪಿಸಿರುತ್ತಾರೆ. ಯೋಗ ವಾಸಿಷ್ಠದಲ್ಲಿ ವಸಿಷ್ಠರು ಮನಃ ಪ್ರಶಮನ ಉಪಾಯ ಯೋಗ ಇತ್ಯಭಿದೀಯತೆ ಎಂದು ಹೇಳಿದ್ದಾರೆ. ಆಗ ಮನಸ್ಸು ತನ್ನ ನಿಜ ಸ್ವರೂಪದತ್ತ ಹೋಗುತ್ತದೆ. ಆನಂದದಲ್ಲಿ ನೆಲೆಯಾಗುತ್ತದೆ. ಯೋಗ ಎಂದರೆ ಯೋಗಾಸನ, ಪ್ರಾಣಾಯಾಮ ಮಾತ್ರವಲ್ಲ. ಯೋಗ ಎಂದರೆ ಓವರಾಲ್ ಡೆವಲಪ್‌ಮೆಂಟ್. ಇಂತಹ ಯೋಗದ ಮಹತ್ವವನ್ನು ನಿರಂತರವಾಗಿ ಸಾರುತ್ತಾ, ಸಾವಿರಾರು ಮಂದಿಗೆ ಯೋಗ ತರಬೇತಿಯನ್ನು ನೀಡುತ್ತಾ ಬರುತ್ತಿರುವ ಸಂಸ್ಥೆ ‘ಯೋಗ ಕೇಂದ್ರ ಪುತ್ತೂರು’.

1979-80ರಿಂದ ಕಾರ್ಯಾಚರಿಸುತ್ತಿರುವ ‘ಯೋಗ ಕೇಂದ್ರ ಪುತ್ತೂರು’ ಮೂಲಕ ‘ವಿಶ್ವ ಯೋಗ ದಿನ’ ಆಚರಣೆಯನ್ನು 2015ರಿಂದ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ವಿಶ್ವ ಯೋಗ ದಿನದ ಆಚರಣೆಯು ಎಂದಿನಂತೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ, ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಯೋಗ ಕೇಂದ್ರ ಪುತ್ತೂರು ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ ನಡೆಯಲಿದೆ. ಜೂನ್ 21ರಂದು ಬೆಳಗ್ಗೆ 5.30ರಿಂದ 8ರತನಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಯೋಗಾಭ್ಯಾಸದಲ್ಲಿ ಮುಂದುವರಿದಾಗ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಮನಃ ಪರಿವರ್ತನೆಯಾಗುತ್ತದೆ. ನಮ್ಮ ದಿವ್ಯತೆಯನ್ನು ವ್ಯಕ್ತಪಡಿಸುವುದೇ ಜೀವನದ ಗುರಿ ಎಂದಿದ್ದಾರೆ. ಅದನ್ನು ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಅಥವಾ ರಾಜಯೋಗ ಹೀಗೆ ಯಾವುದಾದರೂ ಒಂದರಿಂದ ಸಾಽಸಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿರುವಂತೆ ಯೋಗಕೇಂದ್ರ ಪುತ್ತೂರು ಕಾರ್ಯಾಚರಿಸುತ್ತಾ ಬಂದಿದೆ. ಖ್ಯಾತ ಯೋಗಗುರು ಪ್ರಸಾದ ಪಾಣಾಜೆಯವರು ಇದರ ಸ್ಥಾಪಕರು. 1979ರಲ್ಲಿ ಕನ್ಯಾಕುಮಾರಿ ವಿವೇಕಾನಂದ ಕೇಂದ್ರದಲ್ಲಿ ಮೊದಲು ಇಂತಹ ತರಬೇತಿಯನ್ನು ಪಡೆದು, ಪುತ್ತೂರಿನಲ್ಲಿ 1980ರಲ್ಲಿ ಪ್ರಸಾದ ಪಾಣಾಜೆಯವರು ‘ಯೋಗ ಕೇಂದ್ರ ಪುತ್ತೂರು’ ಸಂಸ್ಥೆಯನ್ನು ಸ್ಥಾಪಿಸಿದರು. ಹೆಚ್ಚಿನ ವ್ಯಾಸಂಗವನ್ನು SVYASA ಯೋಗ ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಅಂದಿನಿಂದ ಇಂದಿನವರೆಗೆ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ. ಪುತ್ತೂರನ್ನು ಕೇಂದ್ರವಾಗಿಟ್ಟುಕೊಂಡು ತರಬೇತಿ ನೀಡುವ ಜೊತೆಗೆ ಮಂಗಳೂರು, ಉಡುಪಿ, ಕುಂದಾಪುರ, ಕಾಪು, ಉಪ್ಪಿನಂಗಡಿ, ವಿಟ್ಲ, ವಾಸ್ಕೋಡಿಗಾಮದಲ್ಲಿ ಇಂಡಿಯನ್ ನೇವಿಗೆ ತರಬೇತಿ ನೀಡಲಾಗಿದೆ. ಹರಿಹರದಲ್ಲಿ ಬಿರ್ಲಾ, ರ‍್ಯಾಮ್ಕೋ ಸಿಬ್ಬಂದಿಗೆ ತರಬೇತಿ ನೀಡಿದ್ದು, 2017ರಲ್ಲಿ ಅಮೆರಿಕಾದ ಕೊಲಂಬಸ್‌ನಲ್ಲಿ ಯೋಗ ತರಬೇತಿಯನ್ನು ಸತ್ಯಸಾಯಿ ಸೆಂಟರ್‌ನಲ್ಲಿ ನೀಡಲಾಗಿದೆ. ಯೋಗ ತರಬೇತಿಯ ಜೊತೆಗೆ ಯೋಗ ಚಿಕಿತ್ಸೆಯನ್ನು ಕೂಡ ಕಳೆದ 30 ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದೆ. ಬೇರೆ ಬೇರೆ ರೀತಿಯ ಮಾನಸಿಕ, ಶಾರೀರಿಕ ಅಸಮಾನತೆಗಳಿಗೆ ಅಂದರೆ ಬೆನ್ನುನೋವು, ಡಯಾಬಿಟಿಸ್, ಅಸ್ತಮಾಗಳಿಗೆ ವಿಶೇಷವಾದ ಯೋಗ ಚಿಕಿತ್ಸಾ ಪದ್ದತಿಯ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಹಲವು ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ ಚಿಂತನ ಚಿಲುಮೆ ಎನ್ನುವ ಮಕ್ಕಳ ಶಿಬಿರ, ಸುಮಾರು 10 ವರ್ಷಗಳ ಹಿಂದೆ ಪುತ್ತೂರು ದೇವದಳ ರಥಬೀದಿಯಲ್ಲಿ ನಡೆಸಿದ ಯೋಗ ತರಬೇತಿಯ ಸಂದರ್ಭದಲ್ಲಿ ಇಡೀ ರಥಬೀದಿಯೇ ಯೋಗಭ್ಯಾಸಿಗಳಿಂದ ತುಂಬಿದ್ದು ಸ್ಮರಣೀಯ.

ಯೋಗಕೇಂದ್ರದ ಮೂಲಕ ಐತಿಹಾಸಿಕವಾದ ‘ಆಧ್ಯಾತ್ಮ ಸೌರಭ’ ಎನ್ನುವ ಕಾರ್ಯಕ್ರಮವನ್ನು ಕೂಡ ಎರಡು ಬಾರಿ ಆಯೋಜನೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಯೋಗಗುರು, ಪ್ರಧಾನಿ ನರೇಂದ್ರ ಮೋದಿಯವರ ಯೋಗ ಸಲಹೆಗಾರರಾದ ಡಾ. ಎಚ್.ಆರ್. ನಾಗೇಂದ್ರ, ಅವರ ಸಹೋದರಿ ಡಾ|| ಎಚ್.ಆರ್. ನಾಗರತ್ನ ಮುಂತಾದವರನ್ನೆಲ್ಲ ಪುತ್ತೂರಿಗೆ ಕರೆಸಿ ಕಾರ್ಯಕ್ರಮ ಮಾಡಲಾಗಿತ್ತು. ಜೊತೆಗೆ ಅನೇಕ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪರಿಸರ ಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇವಳದ ಜಾತ್ರಾಗದ್ದೆಯ ಸುತ್ತಲೂ ಹಲವು ಜಾತಿಯ ಗಿಡಮರಗಳನ್ನು ನೆಡುವುದು, ಅದನ್ನು ಉಳಿಸಿ ಬೆಳೆಸಿ ಪೋಷಿಸುವುದನ್ನು ಅರಣ್ಯ ಇಲಾಖೆಯ ಸಹಕಾರದಿಂದ ಮಾಡಲಾಗಿದೆ. ಹಲವಾರು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳನ್ನು, ಪ್ರಕೃತಿ, ಯೋಗಕ್ಕೆ ಕೊಡುಗೆ ನೀಡಿದವರನ್ನು ಗುರುತಿಸುವ ಕಾರ್ಯಕ್ರಮವನ್ನು ಮಾಡಲಾಗಿದೆ. ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ, ಉರಗತಜ್ಞರಾಗಿ, ಪರಿಸರ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರವೀಂದ್ರನಾಥ ಐತಾಳ, ಡಾ| ಕೆ.ಜಿ. ಭಟ್ ಉಪ್ಪಿನಂಗಡಿ, ಡಾ| ಸುಪ್ರೀತ್ ಲೋಬೋ, ಡಾ. ಶ್ರೀಪ್ರಕಾಶ್ ಬಂಗಾರಡ್ಕ ಮುಂತಾದ ತಜ್ಞರನ್ನು ಗೌರವ ಸಲಹೆಗಾರರನ್ನಾಗಿ ಇಟ್ಟುಕೊಂಡು ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ.

ಜೂ.21ರಂದು ಬೆಳಗ್ಗೆ 5.30ರಿಂದ 8ರವರೆಗೆ ವಿಶ್ವ ಯೋಗ ದಿನ ಆಚರಣೆ ನಡೆಯಲಿದೆ. ಬೆಳಗ್ಗೆ 5.30ರಿಂದ 6.30ರವರೆಗೆ ಸರಳ ಯೋಗಾಭ್ಯಾಸ ನಡೆಯಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಅವರು ಉದ್ಘಾಟಿಸಲಿದ್ದಾರೆ. 6.45ರಿಂದ ೭ರವರೆಗೆ ಉಪಾಹಾರದ ವ್ಯವಸ್ಥೆಯಿದ್ದು, ಬೆಳಗ್ಗೆ 7ರಿಂದ 8ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ದೀಪಪ್ರಜ್ವಲನೆಗೈಯಲಿದ್ದಾರೆ. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಸರಗೋಡು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ರಾಮಚಂದ್ರ ಭಟ್ ಎನ್., ಸುದ್ದಿ ಬಿಡುಗಡೆಯ ಸಂಪಾದಕರಾದ ಡಾ.ಯು.ಪಿ. ಶಿವಾನಂದ ಮತ್ತು ನಿವೃತ್ತ ಉಪ ಅರಣ್ಯ ಸಂರಕ್ಷಣಾಽಕಾರಿ ಬಿ.ಎನ್. ಹರೀಶ್ ಭಾಗವಹಿಸಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ 22 ಮಂದಿ ಯೋಗಾಸಕ್ತರನ್ನು ವಿಶೇಷವಾಗಿ ತರಬೇತುಗೊಳಿಸಿ, ಅವರು ಬೆಂಗಳೂರಿನ ನಮ್ಮ ಮಾತೃಸಂಸ್ಥೆ SVYASA ಯೋಗ ಯುನಿವರ್ಸಿಟಿಯಿಂದ YIC ಪದವಿಯನ್ನು ಪಡಕೊಂಡಿರುತ್ತಾರೆ. ವಿವಿಧೆಡೆಗಳಲ್ಲಿ ತರಬೇತಿ ನೀಡುತ್ತಾ, ಯೋಗ ಸೇವೆಯನ್ನು ಮಾಡುತ್ತಿದ್ದಾರೆ. 2015ರಲ್ಲಿ ಪ್ರಥಮ ಬಾರಿ ವಿಶ್ವ ಯೋಗ ದಿನಾಚರಣೆಯನ್ನು ಪುತ್ತೂರಿನಲ್ಲಿ ಏರ್ಪಡಿಸಿದ್ದಾಗ, ಪ್ರಸ್ತುತ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರಾಜೇಂದ್ರ ಕೆ.ವಿ. ಅವರು ಸಹಾಯಕ ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತ್ತು. ಆ ಸಂಧರ್ಭದಲ್ಲಿ ನೆಟ್ಟ ಗಿಡಗಳು ಇಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಬೆಳೆದು ನಿಂತಿರುವುದನ್ನು ನೋಡಬಹುದು. ಈ ಬಾರಿ ಅವುಗಳ ನಿರ್ವಹಣೆಯನ್ನು ಕೂಡಾ ವಿಶ್ವ ಯೋಗ ದಿನಾಚರಣೆಯಂದೇ ಮಾಡಲಾಗುತ್ತದೆ.

-ಶ್ರೀಗಿರೀಶ ಮಳಿ, ಅಧ್ಯಕ್ಷರು, ಯೋಗ ಕೇಂದ್ರ ಪುತ್ತೂರು

 

ಮನದಿಂದ ಮನೆಯಾಗುತ್ತದೆ ಎನ್ನುವ ಮಾತೊಂದಿದೆ. ಯೋಗದಿಂದ ಮನ ಪರಿವರ್ತನೆಯಾಗುತ್ತದೆ. ಇದರಿಂದ ಇಡೀ ಮನೆಯೇ ಸುಂದರವಾಗುತ್ತದೆ. ಯೋಗವೆಂದರೆ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳುವುದು. ಇದರಿಂದ ಜೀವನ ಸುಂದರವಾಗುತ್ತದೆ. ಜೀವನ ಸುಂದರವಾದಾಗ ಸಮಾಜ ಸುಂದರವಾಗುತ್ತದೆ. ಇದರಿಂದ ಇಡೀ ದೇಶ, ಜಗತ್ತು ಸುಂದರವಾಗುತ್ತದೆ. ಇದು ನಮ್ಮ ಮುಖ್ಯ ಉದ್ದೇಶ. ವಿಶ್ವಪ್ರೇಮವನ್ನು ಬಿತ್ತುವುದು ಮತ್ತು ಸಮರಸದ ಜೀವನವನ್ನು ನಡೆಸುವ ಉದ್ದೇಶದಿಂದ ಯೋಗಕೇಂದ್ರ ಕಾರ್ಯಾಚರಿಸುತ್ತಿದೆ.

– ಪ್ರಸಾದ ಪಾಣಾಜೆ, ಕಾರ್ಯದರ್ಶಿ, ಯೋಗ ಕೇಂದ್ರ ಪುತ್ತೂರು

 

 

 

LEAVE A REPLY

Please enter your comment!
Please enter your name here