ಥಲೆಸ್ಸೀಮಿಯ ಖಾಯಿಲೆಯಿಂದ ಬಳಲುತ್ತಿರುವ ಬಾಲಕನಿಗೆ ಬೇಕಿದೆ ನೆರವಿನ ಹಸ್ತ

0

@ ಸಿಶೇ ಕಜೆಮಾರ್

 

ಪುತ್ತೂರು: ಈತನ ಹೆಸರು ದಿಗಂತ್. ಬಂಟ್ವಾಳ ತಾಲೂಕಿನ ಒಕ್ಕೆತ್ತೂರು ಮಂಜಲಾಡಿ ಮಂಜಪ್ಪ ಗೌಡರ ಪುತ್ರ. ಒಕ್ಕೆತ್ತೂರು ಸರಕಾರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿರುವ ಈತನಿಗೆ 13 ವರ್ಷ ಪ್ರಾಯ. ನೋಡಲು ಲವಲವಿಕೆಯಿಂದ ಇದ್ದರೂ ತಿಂಗಳಾಂತ್ಯಕ್ಕೆ ಈತನಿಗೆ ರಕ್ತ ಕೊಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ಮುಖ ಬಿಳಿಚಿಕೊಳ್ಳುತ್ತದೆ. ಜ್ವರ ಬಂದರೆ ಕಡಿಮೆಯಾಗುವುದೇ ಇಲ್ಲ. ಹೌದು ಬಿಳಿ ರಕ್ತ ಕಣದ ಉತ್ಪತ್ತಿಯಾಗದೇ ಇರುವ ಖಾಯಿಲೆಯಾಗಿರುವ ಥಲೆಸ್ಸೀಮಿಯಾದಿಂದ ಬಳಲುತ್ತಿರುವ ಈ ಬಾಲಕನಿಗೆ ಈಗ ನೆರವಿನ ಹಸ್ತ ಬೇಕಾಗಿದೆ. ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿರುವ ಬಡ ಕುಟುಂಬದಲ್ಲಿ ಜನಿಸಿದ ದಿಗಂತ್‌ನ ಬದುಕನ್ನು ಹಸನು ಮಾಡಲು ಮಾನವೀಯ ಹೃದಯಗಳ ಸಹಾಯವನ್ನು ಯಾಚಿಸುತ್ತಿದೆ ಈ ಕುಟುಂಬ.

ಚಿತ್ರ:ರಮೇಶ್‌ ಕೆಮ್ಮಾಯಿ

 

2.5 ವರ್ಷದಿಂದಲೇ ಅಂಟಿಕೊಂಡ ಖಾಯಿಲೆ
ದಿಗಂತ್ ಹುಟ್ಟಿದ 2.5 ವರ್ಷಕ್ಕೆ ಈ ಖಾಯಿಲೆ ಅಂಟಿಕೊಂಡು ಬಿಟ್ಟಿದೆ. ಮನುಷ್ಯದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇರುವುದು ಬಿಳಿ ರಕ್ತಕಣಗಳಿಗೆ ಮಾತ್ರ ಈ ಬಿಳಿ ರಕ್ತಕಣಗಳು ಉತ್ಪತ್ತಿಯಾಗದೇ ಇದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಮತ್ತು ಯಾವುದಾದರೂ ಖಾಯಿಲೆ ಬಂದರೆ ಅದು ಕಡಿಮೆಯಾಗುವುದಿಲ್ಲ. ದಿಗಂತ್‌ನ ದೇಹದಲ್ಲಿ ಇಂತಹ ಬಿಳಿ ರಕ್ತಕಣಗಳ ಉತ್ಪತ್ತಿ ನಿಂತು ಇಂದಿಗೆ ಹಲವು ವರ್ಷಗಳು ಕಳೆದು ಹೋಗಿವೆ. ಸಾಮಾನ್ಯ ಜ್ವರ ಬಂದರೂ ಕೂಡ ಮೆದುಳಿಗೆ ಹತ್ತಿಕೊಳ್ಳುತ್ತದೆ. ಆರಂಭದಲ್ಲಿ ಪುತ್ತೂರು, ಮಂಗಳೂರಿನ ಹಲವು ವೈದ್ಯರ ಸಲಹೆ, ಔಷಧಿ ತೆಗೆದುಕೊಂಡರೂ ಖಾಯಿಲೆ ವಾಸಿಯಾಗಿಲ್ಲ ಎನ್ನುತ್ತಾರೆ ಮಂಜಪ್ಪ ಗೌಡರು.

ರಕ್ತ ಕೊಡುತ್ತಲೇ ಇರಬೇಕಾಗುತ್ತದೆ

ದೇಹದಲ್ಲಿ ಬಿಳಿರಕ್ತ ಕಣಗಳ ಉತ್ಪತ್ತಿ ಇಲ್ಲದೆ ಇರುವುದರಿಂದ ಹೊರಗಿನಿಂದ ರಕ್ತ (ಬಿಳಿ ರಕ್ತಕಣ) ಕೊಡಬೇಕಾಗುತ್ತದೆ. ಅದೇ ರೀತಿ ದಿಗಂತ್‌ಗೆ ಆರಂಭದಲ್ಲಿ ತಿಂಗಳಿಗೆ ಒಂದು ಬಾರಿ ರಕ್ತ ಕೊಡಲಾಗುತ್ತಿತ್ತು. ಇದೀಗ 15 ರಿಂದ 20 ದಿವಸಕ್ಕೊಮ್ಮೆ ರಕ್ತ ಕೊಡಬೇಕಾಗುತ್ತದೆ ಎನ್ನುತ್ತಾರೆ ಮಂಜಪ್ಪ ಗೌಡರು. ರಕ್ತ ಕೊಡದೇ ಹೋದರೆ ಆತನ ಮುಖ, ಮೈ ಎಲ್ಲಾ ಬಿಳಿಚ ಕೊಳ್ಳುತ್ತದೆ ಎನ್ನುತ್ತಾರೆ.

ಮೂಳೆ ಮಜ್ಜೆಯ ಕಸಿ ಶಸ್ತ್ರ ಚಿಕಿತ್ಸೆ ಆಗಬೇಕಾಗಿದೆ
ದಿಗಂತ್‌ನ ತಾಯಿ ಸುಮತಿ ಹಾಗೂ ತಂದೆ ಮಂಜಪ್ಪ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವವರು. ತಮ್ಮ ಮೂವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುತ್ತಿದ್ದಾರೆ. ಇದೀಗ ಒಬ್ಬನೇ ಮಗನ ಬದುಕು ಬಂಗಾರವಾಗಬೇಕಾದರೆ ಆತನಿಗೆ ಅಂಟಿದ ಖಾಯಿಲೆ ದೂರವಾಗಬೇಕಾದರೆ ಮೂಳೆ ಮಜ್ಜೆಯ ಕಸಿ ಶಸ್ತ್ರ ಚಿಕಿತ್ಸೆ (ಬೋನ್ ಮ್ಯಾರೋ ಟ್ರಾನ್ಸ್‌ಪ್ಲೇಟೇಶನ್)ಯಿಂದ ಸಾಧ್ಯ ಎಂದಿದ್ದಾರೆ ಬೆಂಗಳೂರಿನ ವೈದ್ಯರು ಆದರೆ ಇದಕ್ಕೆ ಸುಮಾರು 9 ಲಕ್ಷ ರೂ.ಗಳಷ್ಟು ಖರ್ಚು ಇದೆ ಎಂದಿದ್ದಾರೆ ಎನ್ನುತ್ತಾರೆ ಮಂಜಪ್ಪ ಗೌಡರು. ಆದರೆ ಇಷ್ಟೊಂದು ಹಣವನ್ನು ಹೊಂದಿಸುವುದು ಇವರಿಗೆ ಕಷ್ಟ ಸಾಧ್ಯವಾಗಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಆದ್ದರಿಂದ ಸಹೃದಯಿ ಬಂಧುಗಳ ತಮ್ಮ ಕೈಯಲ್ಲಾದ ಸಹಾಯ ಮಾಡಿ ತಮ್ಮ ಮಗನಿಗೆ ಅಂಟಿದ ಖಾಯಿಲೆಯನ್ನು ಗುಣ ಮಾಡಲು ನೆರವಾಗಿ ಎಂದು ಕೇಳಿಕೊಂಡಿದ್ದಾರೆ.


ಸಹಾಯ ಮಾಡುವವರು ಯೂನಿಯನ್ ಸುಮತಿ ಮತ್ತು ದಿಗಂತ್ ಹೆಸರಿನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ವಿಟ್ಲ ಶಾಖೆ, ಖಾತೆ ನಂಬರ್ 520101029665775, ಐಎಫ್‌ಸಿ ಕೋಡ್ ಯುಬಿಐಎನ್ 0912000 ಗೆ ಸಹಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮೊ.9632520217 ಅಥವಾ 7259676634 ಗೆ ಕರೆ ಮಾಡಬಹುದಾಗಿದೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ನನ್ನ ದೊಡ್ಡ ಮಗಳ ಬೆನ್ನಿನ ಮೂಳೆ ಮಜ್ಜೆ ( ಬೋನ್ ಮ್ಯಾರೋ ಟ್ರಾನ್ಸ್‌ಪ್ಲೇಟೇಶನ್)ಯನ್ನು ತೆಗೆದು ದಿಗಂತ್‌ಗೆ ಕಸಿ ಮಾಡುವುದರಿಂದ ಇದನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದು ಇದಕ್ಕೆ ಸುಮಾರು 9 ಲಕ್ಷದಷ್ಟು ಹಣ ಖರ್ಚಾಗಬಹುದು ಎಂದಿದ್ದಾರೆ. ಆದರೆ ನಮ್ಮಲ್ಲಿ ಬಿಡಿಕಾಸಿಗೆ ಕಷ್ಟ ಆಗಿದೆ. ಸಹೃದಯಿ ಬಂಧುಗಳು ಸಹಾಯ ಮಾಡುವ ಮೂಲಕ ಮಗನ ಖಾಯಿಲೆಯನ್ನು ದೂರ ಮಾಡಬೇಕು ಎಂಬುದು ನನ್ನ ಪ್ರಾರ್ಥನೆಯಾಗಿದೆ.
                                                                                                                                            – ಮಂಜಪ್ಪ ಗೌಡ, ಮಂಜಲಾಡಿ ಒಕ್ಕೆತ್ತೂರು

LEAVE A REPLY

Please enter your comment!
Please enter your name here