- ಸಾಧನೆ ಜೊತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿ-ವಂ|ಲಾರೆನ್ಸ್ ಮಸ್ಕರೇನ್ಹಸ್
ಪುತ್ತೂರು: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಂಡು, ಯಾವುದೇ ಸಂದರ್ಭದಲ್ಲಿ ಧೃತಿಗೆಡದೆ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು, ಸ್ವಾಭಿಮಾನ, ಛಲ, ತ್ಯಾಗದ ಮನೋಭಾವನ್ನು ಹೊಂದುವಂತಾಗಬೇಕು ಮಾತ್ರವಲ್ಲದೆ ಸಾಧನೆ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಂತಾಗಲಿ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಹೇಳಿದರು.
ಜೂ.18ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಡಿಸ್ಟಿಂಕ್ಷನ್ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಪ್ರತಿಭಾನ್ವಿತರನ್ನು ಅಭಿನಂದಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಾಧನೆಗೆ ಉತ್ತಮ ಪ್ರಯತ್ನ, ಕಠಿಣ ಪರಿಶ್ರಮವೊಂದೇ ದಾರಿಯಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಲಿಕೆಗೆ ಮೀಸಲಾಗಿರಿಸಿ ಭವಿಷ್ಯವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಒಳಿತನ್ನು ತರುವಂತಾಗಲಿ ಎಂದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಎನ್.ಕೆ ಜಗನ್ನೀವಾಸ್ ರಾವ್ರವರು ಮಾತನಾಡಿ, ಕಲಿಯುವಿಕೆಗೆ ಕನ್ನಡ, ಆಂಗ್ಲ ಮಾಧ್ಯಮವೇ ಮುಖ್ಯವಲ್ಲ. ಸಾಧನೆ ಮಾಡುವ ತವಕ ಮುಖ್ಯವಾಗಿರುತ್ತದೆ. ಭವಿಷ್ಯ ಉಜ್ವಲವಾಗಿಸಲು ವಿದ್ಯಾರ್ಥಿಗಳು ಓದಿನ ಕಡೆಗೆ ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಸಮಾಜದಲ್ಲಿ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಾಗದು. ಕಷ್ಟ-ಸುಖವನ್ನು ಸಮತೋಲನದಲ್ಲಿ ಕಾಯ್ದುಕೊಂಡಾಗ ಸಾಧಕರೆನಿಸಲು ಸಾಧ್ಯ ಎಂದರು.
ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕರಾದ ವಂ|ಸ್ಟ್ಯಾನಿ ಪಿಂಟೋರವರು ಮಾತನಾಡಿ, ಜೀವನದಲ್ಲಿ ರ್ಯಾಂಕ್ಗೆ ತಕ್ಕುದಾದ ಉದ್ಯೋಗ ಸಿಗಬೇಕಾಗಿದೆ ಎಂಎ ಪತ್ರಿಕೋದ್ಯಮದಲ್ಲಿ ರ್ಯಾಂಕ್ ಗಳಿಸಿಕೊಂಡ ಓರ್ವಳು ಬಟ್ಟೆಯಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂಬುದು ಉದಾಹರಣೆಯಾಗಿದೆ. ರ್ಯಾಂಕ್ಗೆ ತಕ್ಕುದಾದ ಉದ್ಯೋಗ ಸಿಗದಿದ್ದರೆ ಸಾಧನೆಗೆ ಅರ್ಥವಿಲ್ಲ. ವಿದ್ಯಾರ್ಥಿಗಳು ಸುಭದ್ರ ಜೀವನವನ್ನು ರೂಪಿಸುವ ಕಲೆಗಾರಿಕೆಯನ್ನು ಬೆಳೆಸಿಕೊಳ್ಳಿ ಎಂದರು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್ರವರು ಮಾತನಾಡಿ, ಪ್ರಾಥಮಿಕ ಹಂತ ದಾಟಿ ಪ್ರೌಢಶಿಕ್ಷಣ ಹಂತಕ್ಕೆ ಬಂದಿದ್ದಾರೆ ವಿದ್ಯಾರ್ಥಿಗಳು. ಫಿಲೋಮಿನಾ ವಿದ್ಯಾಸಂಸ್ಥೆಯು ಯಾವುದೇ ಜಾತಿ, ಮತ, ಬೇಧವಿಲ್ಲದೆ ಮೌಲ್ಯಧಾರಿತ ಶಿಕ್ಷಣ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಕಲಿಕೆಯ ಜೊತೆಗೆ ಸಾಮಾಜಿಕ ಕಳಕಳಿ, ಒಳ್ಳೆಯ ಗುಣಗಳನ್ನು ಬೆಳೆಸುವಂತಾಗಲಿ ಎಂದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿರುವ ಅಶ್ವಿನಿ ಕೆ. ಮಾತನಾಡಿ, ದೇವರು ತಲೆ, ಮೆದುಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕರುಣಿಸಿದ್ದಾನೆ. ಆದರೆ ವಿದ್ಯಾರ್ಥಿಗಳು ಅವನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುವುದು. ಸಹನೆ, ಸತತ ಪ್ರಯತ್ನ, ಪಾವಿತ್ರ್ಯತೆಯನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಒಳ್ಳೆಯ ಸಾಧಕರಾಗಿ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಪ್ರೋತ್ಸಾಹಧನ:
ಶಾಲೆಯಲ್ಲಿನ ಶಿಕ್ಷಕರು ತಮ್ಮ ವಿಷಯದಲ್ಲಿ ಗರಿಷ್ಟ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸುವುದು ಫಿಲೋಮಿನಾ ಪ್ರೌಢಶಾಲೆಯ ಹೆಗ್ಗಳಿಕೆ. ಅದರಂತೆ ಶಾಲೆಯ ಶಿಕ್ಷಕರಾದ ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಸ್, ರೋಶನ್ ಸಿಕ್ವೇರಾ, ರೇಶ್ಮಾ ರೆಬೆಲ್ಲೋ, ಕ್ಲೆಮೆಂಟ್ ಪಿಂಟೊ, ಬೆನೆಟ್ ಮೊಂತೇರೋ, ಮೋಲಿ ಫೆರ್ನಾಂಡೀಸ್, ಆಶಾ ರೆಬೆಲ್ಲೊರವರು ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಿದರು. ಶಾಲಾ ನಾಯಕ ನಿಶ್ಚಿತ್ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕಾರ್ಮಿನ್ ಪಾಸ್ ಸ್ವಾಗತಿಸಿ, ಶಿಕ್ಷಕಿ ಆಶಾ ರೆಬೆಲ್ಲೊ ವಂದಿಸಿದರು. ಡಿಸ್ಟಿಂಕ್ಷನ್ ವಿಜೇತರ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೋರವರು ಓದಿದರು. ಶಿಕ್ಷಕ ರೋಶನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.
ಎಸೆಸ್ಸೆಲ್ಸಿ ಡಿಸ್ಟಿಂಕ್ಷನ್ ವಿಜೇತರಿಗೆ ಗೌರವ..
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಾಕೇಶ್ ರೈ(615 ಅಂಕ), ಆದಿತ್ಯ ಎ.ಎಂ(605 ಅಂಕ), ಎ.ಅವನಿ(600 ಅಂಕ), ಭೂಮಿಕಾ ಸಂತೋಷ್(591 ಅಂಕ), ಡೆಲಿಶಾ ಮರಿಯ ಫೆರ್ನಾಂಡೀಸ್(585 ಅಂಕ), ನಿರೋಶ್ ರೈ(582 ಅಂಕ), ಪ್ರತೀಕ್ಷಾ ಆರ್.ರಾವ್(577 ಅಂಕ), ಅಲೀನಾ ವೆಲೆಂಟೀನಾ ರೆಬೆಲ್ಲೋ(576 ಅಂಕ), ಅನೀಶ್ ಆರ್(572 ಅಂಕ), ವಿಂಧ್ಯಾಶ್ರೀ ರೈ(570 ಅಂಕ), ಹೃತಿಕ್ ಜೆ.ಕೆ(565 ಅಂಕ), ಸೃಜನ್(564 ಅಂಕ), ಅನುಷಾ(560 ಅಂಕ)ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿ ರಾಕೇಶ್ ರೈ ವಿದ್ಯಾರ್ಥಿಗಳ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು
ಅಭಿನಂದನೆ..
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಜೂನ್ 16 ರಂದು ಜರಗಿದ 31 ಮತ್ತು 32ನೇ ಘಟಿಕೋತ್ಸವದಲ್ಲಿ ಎಂಎ ಎಜ್ಯುಕೇಶನ್ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕರಾಗಿರುವ ವಂ|ಸ್ಟ್ಯಾನಿ ಪಿಂಟೋರವರನ್ನು ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಅಭಿನಂದಿಸಲಾಯಿತು. ಶಿಕ್ಷಕ ಕ್ಲೆಮೆಂಟ್ ಪಿಂಟೊ ಅಭಿನಂದಿತರನ್ನು ಪರಿಚಯಿಸಿದರು.