ನೂತನವಾಗಿ ತೆರೆಯಲಾದ ಬಾರ್ ಆಂಡ್ ರೆಸ್ಟೋರೆಂಟ್ ಮುಚ್ಚುವಂತೆ ಆಗ್ರಹ

0

  • ನೆರೆದ ಮಂದಿಯಿಂದ ವ್ಯಕ್ತವಾದ ಬಾರ್ ಪರ- ವಿರೋಧದ ಘೋಷಣೆ

 


ಪುತ್ತೂರು: ಕಬಕ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಮುರ ಕೆದಿಲ ಸಡಕ್ ರಸ್ತೆಯ ಮುರದಲ್ಲಿ ನೂತನವಾಗಿ ತೆರೆಯಲಾದ ಬಾರ್ ಆಂಡ್ ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಆಗ್ರಹಿಸಿ ಒಂದಷ್ಟು ಮಂದಿ ಬಾರ್ ಎದುರು ಪ್ರತಿಭಟನೆ ಮಾಡಿದ ಮತ್ತು ಇದೇ ಸಂದರ್ಭದಲ್ಲಿ ಕೆಲವರು ಬಾರ್ ಬೇಕೆಂದು ಆಗ್ರಹ ವ್ಯಕ್ತಪಡಿಸಿದ ಘಟನೆ ಜೂ.20ರಂದು ನಡೆದಿದೆ. ಬಾರ್ ವಿಚಾರದ ದೂರಿಗೆ ಸಂಬಂಧಿಸಿ ಸ್ಥಳಕ್ಕೆ ಆಗಮಿಸಿದ ಅಬಕಾರಿ ಇಲಾಖೆಯ ವಾಹನವನ್ನು ಅಲ್ಲಿಂದ ಕದಡಲು ಬಿಡದೆ ಸಾಮಾಜಿಕ ಹೋರಾಟಗಾರ ಸುದರ್ಶನ್ ಅವರು ದಿಗ್ಬಂಧನ ಹಾಕಿದ ಘಟನೆಯೂ ನಡೆಯಿತು.


ಮುರ ಜನವಸತಿ ಪ್ರದೇಶದಲ್ಲಿ ಬಾರ್‌ಗೆ ಅನುಮತಿ ಕೊಟ್ಟದು ತಪ್ಪು, ಆರಂಭದಲ್ಲಿ ಇಲ್ಲಿ ಹೊಟೇಲ್ ಪ್ರೀತಂ ಎಂಬ ನಾಮಕರಣದೊಂದಿಗೆ ಹೊಟೇಲ್ ಆರಂಭಗೊಂಡಿದೆ. ಇದೀಗ ಇಲ್ಲಿ ಬಾರ್ ಆಂಡ್ ರೆಸ್ಟೋರೆಂಟ್‌ಗೆ ಅನುಮತಿ ನೀಡಲಾಗಿದೆ. ಇದಕ್ಕೆ ನಮ್ಮ ಊರವರ ವಿರೋಧವಿದೆ ಎಂದು ಸುದರ್ಶನ್ ಅವರು ಅಬಕಾರಿ ಇನ್‌ಸ್ಪೆಕ್ಟರ್ ಅವರನ್ನು ತರಾಟೆಗೆತ್ತಿಕೊಂಡರು. ಊರವರೂ ಕೂಡಾ ಇವರೊಂದಿಗೆ ಧ್ವನಿಗೂಡಿಸಿದರು. ಮತ್ತೊಂದು ಕಡೆ ಕೆಲವರು ನಮಗೆ ಬಾರ್ ಬೇಕು. ಈ ಹಿಂದೆ ಮುರ ಪೇಟೆಯಲ್ಲಿ ಬಾರ್ ಇತ್ತು. ಅದು ತೆರವಾದ ಬಳಿಕ ಈ ಭಾಗಕ್ಕೆ ಬಾರ್ ಬಂದಿರುವುದು ನಾವು ಪೇಟೆಗೆ ಹೋಗುವುದನ್ನು ತಪ್ಪಿಸಿದೆ ಎಂದು ಆಡಿಕೊಳ್ಳುತ್ತಿದ್ದರು. ಅಬಕಾರಿ ಡಿಸಿ ಅನುಮತಿಯಂತೆ ಬಾರ್ ತೆರೆಯಲಾಗಿದೆ. ನಾವು ಮೇಲಾಧಿಕಾರಿಗಳ ಸೂಚನೆಯಂತೆ ಪರಿಶೀಲನೆಗೆ ಬಂದಿದ್ದೇವೆ. ನಾವು ಏನಿದ್ದರೂ ನಿಮ್ಮ ಅಭಿಪ್ರಾಯ ಮನವಿಯನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಅಬಕಾರಿ ಇನ್‌ಸ್ಪೆಕ್ಟರ್ ಸುಜಾತಾ ಅವರು ತಿಳಿಸಿದರು. ನೆರೆದ ಮಂದಿ ಬಾರ್ ಮುಚ್ಚಬೇಕು. ಇಲ್ಲದಿದ್ದಲ್ಲಿ ನಾವು ಇಲ್ಲಿಂದ ಕದಡುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ಸಂದರ್ಭ ಪುತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ನೆರೆದ ಮಂದಿಯನ್ನು ತೆರವು ಮಾಡಿದರು.

LEAVE A REPLY

Please enter your comment!
Please enter your name here