ಕೇಂದ್ರ ಸರಕಾರದ ವಿರುದ್ಧ ಕಡಬ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

0

  • ರಸ್ತೆ ತಡೆಗೆ ಯತ್ನ-ಪೋಲಿಸರಿಂದ ತಡೆ

 

ಕಡಬ: ಕೇಂದ್ರದ ಬಿಜೆಪಿ ಸರಕಾರ ಇ.ಡಿ. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಡಬ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಡಬ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ, ರಸ್ತೆ ತಡೆ ಯತ್ನ ನಡೆಯಿತು. ಈ ಸಂದರ್ಭದಲ್ಲಿ ರಸ್ತೆ ತಡೆ ಮಾಡಲು ಯತ್ನಿಸಿದ ಕಾಂಗ್ರೆಸ್ ಮುಖಂಡರನ್ನು ತಡೆದ ಘಟನೆ ಜೂ.20ರಂದು ನಡೆಯಿತು.

 


ಪ್ರತಿಭಟನೆಯನ್ನು ಉದ್ದೇಶಿಸಿ ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ನಂದಕುಮಾರ್ ಮಾತನಾಡಿ, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಇ.ಡಿ. ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯ ಗಾಂಧಿಯವರ ಮೇಲೆ ದಾಳಿ ನಡೆಸುತ್ತಿದೆ. ವಿಚಾರಣೆ ನೆಪದಲ್ಲಿ ಅವರ ಘನತೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ ಎಂದರು.

ಸುಳ್ಯ ಬ್ಲಾಕ್ ಉಸ್ತುವಾರಿ ಕೃಷ್ಣಪ್ಪ ಜಿ. ಅವರು ಮಾತನಾಡಿ, ಈಗಾಗಲೇ ಕೃಷಿ ವಿರೋಧಿ ನೀತಿ, ನೋಟ್ ಬ್ಯಾನ್, ಅಗ್ನಿಪಥ್ ಯೋಜನೆಗಳನ್ನು ಜನರು ತಿರಸ್ಕರಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ ಆದರೂ ಬಿಜೆಪಿಗೆ ಬುದ್ಧಿ ಬಂದಿಲ್ಲ, ಇನ್ನು ಮುಂದೆ ಜನರೇ ಬುದ್ಧಿ ಕಲಿಸುತ್ತಾರೆ, ಹಿಂದೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ಪಡೆದುಕೊಂಡಂತೆ ಇಂದು ಬಿಜೆಪಿಯ ವಿರುದ್ಧ  ಹೋರಾಟ ಮಾಡಿ ಸ್ವಾತಂತ್ರ್ಯ ಪಡೆಯಬೇಕಾಗಿದೆ, ಈ ದೇಶವನ್ನು ಅಧಃಪತನಕ್ಕೆ ತಳ್ಳಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನತೆಗೆ ದ್ರೋಹ ಮಾಡುತ್ತಿದೆ ಎಂದರು.

ಕೆ.ಪಿ.ಸಿ.ಸಿ. ಸದಸ್ಯ ಡಾ. ರಘು ಬೆಳ್ಳಿಪ್ಪಾಡಿ ಅವರು ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಕಾಂಗ್ರೆಸ್ ಪ್ರಾರಂಭಿಸಿತ್ತು, ಬಳಿಕ ಅದು ನಷ್ಟ ಅನುಭವಿಸಿದಾಗ ಅದಕ್ಕೆ ಕಾಂಗ್ರೆಸ್ ಕಾರ್‍ಯಕರ್ತರಿಂದ ದೇಣಿಗೆ ಸಂಗ್ರಹಿಸಿ ನೀಡಲಾಗಿತ್ತು, ಆದರೇ ಅದನ್ನು ಕಾಂಗ್ರೆಸ್ ನೇತೃತ್ವದ ಸರಕಾರ ನೀಡಿದೆ ಎಂದು ಅಪಪ್ರಚಾರ ಮಾಡಿ ಇದೀಗ ಇ.ಡಿ. ಮೂಲಕ ತನಿಖೆ ನಡೆಸಲಾಗುತ್ತಿದೆ. ಇಂತಹ ಬಿಜೆಪಿಯ ಕುತಂತ್ರ ನೀತಿಗಳಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿ, ಬಿಜೆಪಿ ಅಧಿಕಾರ ಪಡೆದುಕೊಂಡಾಗ ದೇಶದ ಜನರಿಗೆ ಒಂದು ಉತ್ತಮ ಭರವಸೆ ಇತ್ತು, ಆದರೆ ಬರಬರುತ್ತಾ ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗಿದೆ, ವಿವಿಧ ಯೋಜನೆಗಳನ್ನು ಹಾಕಿ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಇಡಿಯನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡರನ್ನು ಜೈಲಿಗೆ ಕಲಿಸುವ ಹುನ್ನಾರ ನಡೆಸುತ್ತಿದೆ, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅನ್ಯಾಯ ಮಾಡಿಲ್ಲ, ನಮಗೆ ಸ್ವಾತಂತ್ರ್ಯ ತಂದುಕೊಟ್ಟಂತಹ ಪಕ್ಷಕಾಂಗ್ರೆಸ್. ಈ ಪಕ್ಷದ ಮುಖಂಡರಿಗೆ ಕಿರುಕುಳ ಕೊಡುತ್ತಿದೆ ಇದು ಖಂಡನೀಯ ಎಂದು ಹೇಳಿದರು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, ಇಡಿಯನ್ನು ಬಳಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಈ ದೇಶದಲ್ಲಿ ಯಾವುದೆಲ್ಲ ಸಮಸ್ಯೆಗಳು ನಡೆಯುತ್ತಿದೆ ಎಂದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದನ್ನು ಕಡಬ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ, ರೈತರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ತೊಂದರೆಯಾಗಿದೆ, ನಮ್ಮ ದೇಶವನ್ನು ರಕ್ಷಣೆ ಮಾಡಬೇಕಾದರೆ ನರೇಂದ್ರ ಮೋದಿಯವರ ಕೈಯಿಂದ ಸ್ವಾತಂತ್ರ್ಯ ಪಡೆದುಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಯಾರಿಗೂ ತೊಂದರೆ ಕೊಟ್ಟಿಲ್ಲ, ಅಧಿಕಾರ ದುರುಪಯೋಗ ಮಾಡಿಲ್ಲ. ನೀತಿಗೆಟ್ಟ ಬಿಜೆಪಿಗೆ ನಾವು ರಸ್ತೆಗಿಳಿದು ಬುದ್ದಿ ಕಳಿಸಬೇಕಾಗಿದೆ ಎಂದರು. ನೆಲ್ಯಾಡಿ ಜಿ.ಪಂ. ಸರ್ವೋತ್ತೊಮ ಗೌಡ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ಶೀನಪ್ಪ ಗೌಡ ಬೈತಡ್ಕ, ಬಾಲಕೃಷ್ಣ ಬಳ್ಳೇರಿ, ಗಣೇಶ್ ಕೈಕುರೆ, ಮಾಜಿ ತಾ.ಪಂ. ಸದಸ್ಯರಾದ ಉಷಾ ಅಂಚನ್, ಅಶೋಕ್ ನೆಕ್ರಾಜೆ, ಫಝಲ್ ಕೋಡಿಂಬಾಳ, ಡಿ.ಸಿ.ಸಿ.ಯ ಸೈಮನ್ ಸಿ.ಜೆ. ಎಚ್.ಕೆ. ಇಲ್ಯಾಸ್ ವಿವಿಧ ಘಟಕದ ಅಧ್ಯಕ್ಷರಾದ ಮ್ಯಾಥ್ಯೂ ಟಿ.ಎಂ. ಶೆರೀಫ್ ಎ.ಎಸ್. ಭವಾನಿಶಂಕರ್, ಪ್ರಮುಖರಾದ ರಾಯ್ ಅಬ್ರಹಾಂ, ಸತೀಶ್ ನಾಕ್ ಮೇಲಿನ ಮನೆ, ಶಾರಾದ ದಿನೇಶ್, ವಿನುತಾ ಶಿರಾಡಿ, ಡೇನಿಶ್ ಫೆರ್ನಾಂಡಿಸ್, ಜಗನ್ನಾಥ ಶೆಟ್ಟಿ, ಇಸ್ಮಾಯಿಲ್ ಕೋಲ್ಪೆ, ಶಿವರಾಮ ರೈ ಸುಬ್ರಹ್ಮಣ್ಯ, ಶೋಭಿತ್ ಸುಬ್ರಹ್ಮಣ್ಯ, ಹನೀಫ್ ಕೆ.ಎಂ. ಮೊದಲಾದವರು ಪಾಲ್ಗೋಂಡಿದ್ದರು. ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಕೊನೆಗೆ ಕಡಬ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.

ರಸ್ತೆತಡೆಗೆ ಯತ್ನ-ಪೋಲಿಸರಿಂದ ತಡೆ
ಕಡಬದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಿರತ ಪ್ರಮುಖರು ಮಾತನಾಡಿದ ಬಳಿಕ ರಸ್ತೆ ತಡೆಗೆ ಮುಂದಾದರು ಈ ಸಂದರ್ಭದಲ್ಲಿ ರಸ್ತೆತಡೆಗೆ ಪೊಲೀಸರು ಅವಕಾಶ ಕೊಡಲಿಲ್ಲ, ಬಳಿಕ ಪೊಲೀಸರ ಜತೆ ಮಾತುಕತೆ ನಡೆದು ರಸ್ತೆ ತಡೆ ಮಾಡದಂತೆ ಎಸ್.ಐ. ಮನವಿ ಮಾಡಿದರು. ಬಳಿಕ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.

LEAVE A REPLY

Please enter your comment!
Please enter your name here