ನನ್ನ ಕುರಿತು ವೈರಲ್ ಆಗುತ್ತಿರುವ ಆಡಿಯೋ-ವೀಡಿಯೋ ಎಡಿಟೆಡ್ ನಾನು ತಪ್ಪಿತಸ್ಥೆಯಾಗಿದ್ದರೆ ಗಲ್ಲಿಗೇರಿಸಿದರೂ ಸಿದ್ಧ-ಶೈಲಜಾ ಅಮರನಾಥ್ ಸುದ್ದಿಗೋಷ್ಠಿ

0

  • ಶಕುಂತಳಾ ಶೆಟ್ಟಿಯವರಿಗೆ ನಿಜವಾದ ಕಾಂಗ್ರೆಸ್ ನಾಯಕರ ಪರಿಚಯವೇ ಇಲ್ಲ ಕಿಟ್ಟಣ್ಣ ಗೌಡ

ಪುತ್ತೂರು:ಕಳೆದೆರಡು ದಿನಗಳಿಂದ ವೈರಲ್ ಆಗುತ್ತಿರುವ ಎಡಿಟೆಡ್ ಆಡಿಯೋ- ವೀಡಿಯೋದಿಂದಾಗಿ ನನಗೆ ಅನೇಕ ಜನರು ಕರೆ ಮಾಡಿ `ವಿಕ್ರಮ’ ಯೂಟ್ಯೂಬ್ ಚಾನೆಲ್‌ನಲ್ಲಿ ನೀವು ಸೀತಾದೇವಿಯನ್ನು ಅವಮಾನಿಸಿದ ಕುರಿತು ವೀಡಿಯೋ ಪ್ರಸಾರವಾಗುತ್ತಿದೆ ಎಂದು ಹೇಳಿ ಕೆಲವರು ಸಭ್ಯ ಹಾಗೂ ಇನ್ನು ಕೆಲವರು ಅಸಭ್ಯ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ಬೆದರಿಕೆಯನ್ನು ಹಾಕುತ್ತಿದ್ದಾರೆ.ಇದರ ಜೊತೆಗೆ ನನ್ನ ಮನೆಯ ಮೇಲೂ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ.ಇದರ ಕುರಿತು ನಾನು ಠಾಣೆಯಲ್ಲಿ `ವಿಕ್ರಮ’ ಯೂಟ್ಯೂಬ್ ಚಾನೆಲ್ ಹಾಗೂ ಮನೆಗೆ ದಾಳಿ ಮಾಡಿದವರ ಮೇಲೆ ಕೇಸು ದಾಖಲಿಸಿzನೆ.ಆದರೆ ಈವರೆಗೆ ಈ ಕುರಿತು ಯಾವುದೇ ಆಕ್ಷನ್ ತೆಗೆದುಕೊಳ್ಳದೇ ಇರುವುದು ವಿಷಾದನೀಯ.ಹಾಗಂತ ಇದಕ್ಕೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳುವ ಪ್ರಮೇಯ ಇಲ್ಲ,ಇದರ ಸತ್ಯಾಸತ್ಯತೆ ಹೊರಬೀಳುವವರೆಗೆ ನಾನು ಹೋರಾಟ ಮಾಡುತ್ತೇನೆ ಎಂದು ರಾಜ್ಯ ಕಾಂಗ್ರೆಸ್‌ನ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್ ಹೇಳಿದರು.

 


ಬಪ್ಪಳಿಗೆಯ ತಮ್ಮ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಾದದ ಕುರಿತು, ಕಾಂಗ್ರೆಸ್ ನಾಯಕಿ ಎಂದು ಹೇಳಿಕೊಂಡು ಪ್ರಚಾರ ಮಾಡಲಾಗುತ್ತಿದೆ.ನಾನು ಕಾಂಗ್ರೆಸ್ ನಾಯಕಿ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ.2020ರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯಳಾಗಿದ್ದೇನೆ. ಸಮಾನತೆಯ ಕಾರಣಕ್ಕಾಗಿ ನಾನು ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ನಾನು ಕೂಡ ದೈವಭಕ್ತಳೇ, ದೇವರನ್ನು ನಾನು ನಂಬುತ್ತೇನೆ.ಹೀಗಾಗಿ ನಾನು ದೇವರನ್ನು ನಿಂದಿಸುವ ಕೆಲಸ ಮಾಡಿಲ್ಲ ಎಂದರು.`ರಾಜಕೀಯ ತಂತ್ರ ಬಿಜೆಪಿ ಕರ್ನಾಟಕ’ ಎಂಬ ಫೇಸ್ಬುಕ್ ಹಾಗೂ ಟ್ವಿಟರ್ ಪೇಜ್‌ನಲ್ಲಿ ಈ ಆಡಿಯೋವನ್ನು ಹರಿಯಬಿಟ್ಟಿದ್ದಾರೆ.ಇವರು ರಕ್ಷಣೆ ಮಾಡಲು ಸರ್ಕಾರ ನಡೆಸುತ್ತಿದ್ದಾರಾ..?ಅಲ್ಲ ದಬ್ಬಾಳಿಕೆ ನಡೆಸಲು ಸರ್ಕಾರ ನಡೆಸುತ್ತಿದ್ದಾರ?ಎಂದು ಶೈಲಜಾ ಪ್ರಶ್ನಿಸಿದರು.

ಶಾಸಕರು ಕ್ಷಮೆ ಕೇಳಬೇಕು?: ನಾನು ಕ್ಷಮೆ ಕೇಳಬೇಕೆಂದು ಶಾಸಕ ಸಂಜೀವ ಮಠಂದೂರು ಹೇಳಿಕೆ ನೀಡಿದ್ದಾರೆ.ಆದರೆ ಕ್ಷಮೆ ಕೇಳಬೇಕಾಗಿರುವುದು ನಾನಲ್ಲ ಅವರು,ಒಂದು ಹೆಣ್ಣು ಮಗಳ ಮನೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಮಾನವೀಯತೆಗಾದರೂ ವಿಚಾರಿಸದೆ, ದಾಳಿ ಮಾಡಿರುವವರನ್ನು ೨೪ ಗಂಟೆ ಕಳೆದರೂ ಇನ್ನೂ ಬಂಧಿಸಲು ಅಸಮರ್ಥರಾಗಿದ್ದಕ್ಕೆ ಶಾಸಕರೇ ನನ್ನ ಬಳಿ ಕ್ಷಮೆ ಕೇಳಬೇಕು.ಅವರು ಬಿಜೆಪಿಯ ಶಾಸಕರಾಗಿದ್ದರೂ ಕೂಡ ಅವರದೇ ಕ್ಷೇತ್ರದಲ್ಲಿ ಈ ರೀತಿಯ ಘಟನೆ ನಡೆದಾಗ ಸ್ಪಂದಿಸಬೇಕಾದದ್ದು ಅವರ ಕರ್ತವ್ಯ.ಅದರ ಹೊರತಾಗಿ ನನ್ನನ್ನು ಕ್ಷಮೆ ಕೇಳುವಂತೆ ಆಗ್ರಹಿಸುವ ಮೂಲಕ ದಾಳಿ ಮಾಡಿದವರನ್ನು ಬೆಂಬಲಿಸುವ ಕೆಲಸ ಶಾಸಕರು ಮಾಡುತ್ತಿದ್ದಾರೆ.ಹಿಂದುತ್ವ ಎಂದು ಕೂಗಾಡುವ ಬಿಜೆಪಿಯ ಸರ್ಕಾರವೇ ಆಡಳಿತದಲ್ಲಿರುವ ಸಂದರ್ಭದಲ್ಲಿ ಹಿಂದೂ ಹೆಣ್ಣುಮಗಳ ಮೇಲೆ ದಾಳಿ ನಡೆಸಿ ದಬ್ಬಾಳಿಕೆ ಮಾಡಲಾಗುತ್ತಿದೆ ಮತ್ತು ಈ ರೀತಿಯ ದಾಳಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.ಇಷ್ಟೆಲ್ಲಾ ನಡೆಯುವಾಗ ಸರ್ಕಾರ ಕೈ-ಕಟ್ಟಿ ಕುಳಿತಿದೆಯೇ? ಎಂದು ಶೈಲಜಾ ಅಮರನಾಥ್ ಪ್ರಶ್ನಿಸಿದರು.

ಹಿಂದೂ ಸಂಘಟನೆಗಳ ದೂರಿಗೆ ಹೆದರುವ ಹೆಣ್ಣು ಮಗಳು ನಾನಲ್ಲ: ದೇವರನ್ನು ನಿಂದನೆ ಮಾಡಿರುವುದಾಗಿ ಹಿಂದೂ ಸಂಘಟನೆಗಳು ನನ್ನ ಮೇಲೆ ದೂರು ದಾಖಲಿಸಿದ್ದಾರೆ.ಆದರೆ ನಾನು ಎಲ್ಲಿಯೂ ದೇವರ ನಿಂದನೆ ಮಾಡಿಲ್ಲ.ಎಡಿಟೆಡ್ ಆಡಿಯೋ ವೈರಲ್ ಮಾಡಲಾಗುತ್ತಿದೆ.ಈ ಮೂಲಕ ೨೦೨೩-೨೪ರ ಚುನಾವಣೆಯಲ್ಲಿ ಮತ ಪಡೆಯಲು ಆಡಳಿತ ಪಕ್ಷ ಬಿಜೆಪಿಯು ಇದರೊಂದಿಗೆ ಸೇರಿಕೊಂಡಿದೆ.ಈ ರೀತಿಯ ಚುನಾವಣೆಯ ಗೆಲುವು ನಿಮಗೆ ಬೇಕಾ?ಇದೂ ಒಂದು ಆಡಳಿತ ಪಕ್ಷದ ಆಡಳಿತ ನೀತಿಯೇ ಎಂದ ಶೈಲಜಾ, ನಾನು ಹಿಂದೂ ಸಂಘಟನೆಗಳ ಬೆದರಿಕೆಗೆ ಬಗ್ಗುವವಳಲ್ಲ ಮತ್ತು ಹಿಂದೂ ಸಂಘಟನೆಯ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ.ಅವರ ಸರ್ಟಿಫಿಕೇಟ್ ಅವರೇ ಇಟ್ಟುಕೊಳ್ಳಲಿ.ನಾನು ತಪ್ಪು ಮಾಡಿಲ್ಲ.ತಪ್ಪು ಮಾಡದವರಿಗೆ ಬೆಂಬಲದ ಅಗತ್ಯವಿಲ್ಲ.ಮುಂದಿನ ಕೆಲವೇ ದಿನಗಳಲ್ಲಿ ಸತ್ಯಾಂಶ ತನಿಖೆಯ ಮೂಲಕ ಹೊರಬೀಳಲಿದೆ.ಬಿಜೆಪಿಯ ಕೀಳು ಮಟ್ಟದ ರಾಜಕೀಯ ಎಲ್ಲರಿಗೂ ತಿಳಿಯಲಿದೆ ಎಂದರು.

ಬಿಜೆಪಿಯಲ್ಲಿದ್ದವರು ಮಾತ್ರ ಹಿಂದೂಗಳಾ?: ನಾನು ದೈವ ಭಕ್ತೆ, ದೇವರನ್ನು ನಂಬುತ್ತೇನೆ. ದೇವರೇ ನನ್ನ ಹಿಂದಿರುವ ಶಕ್ತಿ.ಮಹಾಲಿಂಗೇಶ್ವರನೇ ನನ್ನನ್ನು ಕಾಪಾಡುತ್ತಾನೆ.ನಾನು ಹಲವು ವೇದಿಕೆಗಳಲ್ಲಿ ದೈವಭಕ್ತೆ ಎಂದು ಹೇಳಿಕೊಂಡಿದ್ದೇನೆ. ನನ್ನಲ್ಲಿ ಅನೇಕ ಬಿಜೆಪಿಗರು, ನೀವು ನಮ್ಮ ಪಕ್ಷಕ್ಕೆ ಬಂದು ಬಿಡಿ ಎಂದಿದ್ದಾರೆ. ಯಾಕೆ ಬಿಜೆಪಿಯಲ್ಲಿದ್ದರೆ ಮಾತ್ರ ಹಿಂದೂಗಳ?`ನನ್ನನ್ನು ನೀವು ಮಾತ್ರ ಇಟ್ಟುಕೊಳ್ಳಿ’ ಎಂದು ದೇವರು ಬಿಜೆಪಿಯವರಿಗೆ ಕಾಗದ ಬರೆದು ಕೊಟ್ಟಿದ್ದಾರಾ? ಹಿಂದೂಗಳು ಎಲ್ಲಿ, ಹೇಗೆ ಬೇಕಾದರೂ ದೇವರನ್ನು ನಂಬಬಹುದು.ಇದು ದೇವರಿಗೆ ಹಾಗೂ ಭಕ್ತರಿಗೆ ಸಂಬಂಧಿಸಿದ ವಿಚಾರವೇ ಹೊರತು ಬಿಜೆಪಿಗರಿಗೆ ಸಂಬಂಧಿಸಿದಲ್ಲ.ನನ್ನನ್ನು ಹಿಂದೂ ಅಲ್ಲ ಎಂಬಿತ್ಯಾದಿಯಾಗಿ ಅಪಪ್ರಚಾರ ಮಾಡಲಾಗುತ್ತಿದೆ.ಅವರನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದು ಶೈಲಜಾ ಅಮರನಾಥ್ ಹೇಳಿದರು.

ಜನರು ತಪ್ಪು ಸಂದೇಶಗಳನ್ನು ನಂಬಬೇಡಿ..ತನಿಖೆಯಾಗಿ ಸತ್ಯ ಹೊರಬರಲಿ: ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜನರಲ್ಲಿ ತಪ್ಪು ಭಾವನೆಯನ್ನು ಮೂಡಿಸುತ್ತಿದ್ದಾರೆ.ನನ್ನ ನಂಬರನ್ನು ಗುಂಪುಗಳಲ್ಲಿ ಹಂಚಲಾಗಿದೆ.ನನಗೆ ರಾತ್ರಿ ಅಶ್ಲೀಲ ಪದಗಳಿಂದ ಮಾತನಾಡುವ ಕರೆಗಳು ಬರುತ್ತಿವೆ,ಬೆದರಿಕೆ ಕರೆಗಳೂ ಬರುತ್ತಿದೆ.ಹೆಣ್ಣು ಮಗಳ ಮೇಲೆ ಒತ್ತಡ ಹೇರುವ ಕೆಲಸವಾಗುತ್ತಿದೆ.ಹೀಗೆ ಮಾಡಿದರೆ ನನಗೆ 11 ವರ್ಷದ ಮಗುವಿದ್ದಾನೆ.ಆತನಿಗೆ ತಾಯಿಯಿಲ್ಲದೆ ಆಗಲು, ಹಿಂದೂ ಹೆಣ್ಣು ಮಗಳು ಇಲ್ಲದೇ ಆಗಲು ಈ ರೀತಿಯ ಕರೆ ಮಾಡುವವರು ಕಾರಣರಾಗುತ್ತೀರಿ.ದಯವಿಟ್ಟು ಜನರು ಈ ರೀತಿ ತಪ್ಪು ಸಂದೇಶಗಳನ್ನು ನಂಬಿ ಕೋಪ ಮಾಡಿಕೊಳ್ಳಬೇಡಿ.ತನಿಖೆ ನಡೆದು ಸತ್ಯಾಸತ್ಯತೆ ಹೊರಬೀಳಲಿ ಆಗ ನಾನು ತಪ್ಪಿತಸ್ಥೆ ಆಗಿದ್ದರೆ ನನ್ನನ್ನು ಗಲ್ಲಿಗೇರಿಸಿದರೂ ನಾನು ಸಿದ್ದ.ಆದರೆ ಇವರು ತನಿಖೆ ನಡೆಸಲು ತಯಾರಿಲ್ಲ ಬದಲಾಗಿ ಬಿಜೆಪಿ ಅಫೀಶಿಯಲ್ ಪೇಜ್‌ಗಳಲ್ಲಿ ಈ ವಿಡಿಯೋ ಹಾಕಿ ಕೋಮುಪ್ರಚೋದನೆ ಮಾಡುತ್ತಿದ್ದಾರೆ.ಒಂದು ಸಣ್ಣ ವಿಚಾರವನ್ನು ಹಿಡಿದು ನನ್ನ ಫೇಸ್ ಬುಕ್‌ನಿಂದ ಪರ್ಸನಲ್ ಫೊಟೋಗಳನ್ನು ಅನುಮತಿಯಿಲ್ಲದೆ ತೆಗೆದು ಕನ್ನಡ ಹಾಗೂ ಇಂಗ್ಲೀಷ್ ಪತ್ರಿಕೆಗಳಲ್ಲಿ ಹಾಕಿಸುವ ಕೆಲಸ ಮಾಡುತ್ತಿದ್ದಾರೆ.ಹೀಗಾದ್ರೆ 2023ಕ್ಕೆ ಶೈಲಜಾ ಅಮರನಾಥ್ ಹಿಂದುವಲ್ಲ ಎಂದು ಹೇಳಿ ಬಿಜೆಪಿ ಚುನಾವಣೆ ಗೆಲ್ಲುವುದಾ..?ಯಾಕೆ ಇವರು ಅಭಿವೃದ್ಧಿ ಕೆಲಸ ಮಾಡಿಲ್ವ ಅಲ್ಲಾ ಮಾಡುವ ಯೋಗ್ಯತೆ ಇಲ್ವ? ಎಂದ ಅವರು ಈ ಕೂಡಲೇ ತನಿಖೆ ನಡೆದು ಯಾರು ವೀಡಿಯೋ ಎಡಿಟ್ ಮಾಡಿದ್ದಾರೆಂದು ಸತ್ಯಾಸತ್ಯತೆ ಹೊರಬೀಳಲಿ.ಇಲ್ಲವಾದಲ್ಲಿ ನಾನು ಪೊಲೀಸ್ ಠಾಣೆ, ಬಿಜೆಪಿ ಕಚೇರಿ,ಶಾಸಕರ ಕಚೇರಿಗಳಲ್ಲಿ ನ್ಯಾಯಕ್ಕಾಗಿ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಶಕುಂತಲಾ ಶೆಟ್ಟಿಗೆ ನಿಜವಾದ ಕಾಂಗ್ರೆಸ್ ನಾಯಕರ ಪರಿಚಯವೇ ಇಲ್ಲ:ಕಿಟ್ಟಣ್ಣ ಗೌಡ: ಬ್ಲಾಕ್ ಕಾಂಗ್ರೆಸ್ ಮಾಜಿ ಕಿಸಾನ್ ಘಟಕದ ಅಧ್ಯಕ್ಷ, ಶೈಲಜಾ ಅಮರನಾಥ್‌ರವರ ಮಾವ ಕಿಟ್ಟಣ್ಣ ಗೌಡ ಮಾತನಾಡಿ, `ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನನ್ನ ಸೊಸೆಯನ್ನು ಕಾಂಗ್ರೆಸ್ ನಾಯಕಿ ಅಲ್ಲ ಎಂದಿದ್ದಾರೆ.ಆದರೆ ಶಕುಂತಲಾ ಶೆಟ್ಟಿಯವರು ಅವರಿಗೆ ಕಾಂಗ್ರೆಸ್‌ನ ಹಿರಿಯ ನಾಯಕರ ಪರಿಚಯವೇ ಇಲ್ಲ ಎಂದು ಟೀಕಿಸಿದರು.

LEAVE A REPLY

Please enter your comment!
Please enter your name here