ವಿಟ್ಲ: ಬಾಡಿಗೆ ಮನೆಯಲ್ಲಿದ್ದ ಭಿನ್ನ ಕೋಮಿನ ಜೋಡಿ ಪೊಲೀಸ್ ವಶಕ್ಕೆ

0

ವಿಟ್ಲ: ಕಳೆದ ಒಂದು ವಾರದಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಭಿನ್ನ ಕೋಮಿನ ಜೋಡಿಯೊಂದನ್ನು ವಿಟ್ಲ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡ ಘಟನೆ ಜೂ.20ರಂದು ವಿಟ್ಲದ ಪಳಿಕೆ ಎಂಬಲ್ಲಿ ನಡೆದಿದೆ. ತೀರ್ಥಹಳ್ಳಿ ಮೂಲದ ಕೀರ್ತಿ ಹಾಗೂ ಮಂಗಳೂರಿನ ಕಾವೂರು ನಿವಾಸಿ ಹುಸೈನ್ ಸಾಹೇಬ್ ಪೊಲೀಸರ ವಶವಾದವರಾಗಿದ್ದಾರೆ.

ಕೀರ್ತಿಯವರು ಉಡುಪಿಯ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸಮಾಡಿಕೊಂಡಿದ್ದ ವೇಳೆ ಲಾರಿ ಕ್ಲೀನರ್ ಆಗಿದ್ದ ಹುಸೈನ್ ಸಾಹೇಬ್‌ರವರ ಪರಿಚಯವಾಗಿತ್ತು. ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ ಅವರಿಬ್ಬರೂ ಜೊತೆಯಾಗಿ ವಿಟ್ಲಕ್ಕೆ ಬಂದು ಪಳಿಕೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಈ ಮಧ್ಯೆ ಹುಸೈನ್ ಸಾಹೇಬ್ ತನ್ನ ಹೆಸರನ್ನು ವಿಜಯ್ ಎಂಬುದಾಗಿ ಬದಲಿಸಿಕೊಂಡು ವಿಟ್ಲದ ಪೆಟ್ರೋಲ್ ಬಂಕ್ ಒಂದರಲ್ಲಿ ಟ್ಯಾಂಕರ್ ಲಾರಿ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರೆಂದು ವರದಿಯಾಗಿದೆ.

ಈತನ ಚಲನವಲನದಿಂದ ಸಂಶಯಗೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಜೋಡಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ತೆರಳಿ ಜೋಡಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಯುವತಿಯನ್ನು ಮಂಗಳೂರಿನಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಯುವಕನನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here