ಕಲ್ಲುಗುಡ್ಡೆ: ಸ್ಥಳಾಂತರಗೊಂಡ ನೂತನ ಗ್ರಾಮಕರಣಿಕರ ಕಛೇರಿ ಉದ್ಘಾಟನೆ

0

ಉದ್ಘಾಟನೆಗೊಂಡರೂ ಹೊಸ ಕಛೇರಿಯಲ್ಲಿ ಕಾರ‍್ಯನಿರ್ವಹಿಸದ ಗ್ರಾಮಕರಣಿಕರು?

ಕಡಬ: ರೆಂಜಿಲಾಡಿಗೆ ನೂತನ ಗ್ರಾಮ ಕರಣಿಕರ ಕಛೇರಿ ಸಿದ್ಧಪಡಿಸುವಂತೆ ಗ್ರಾ.ಪಂ.ಗೆ ತಿಳಿಸಿದ ಕೂಡಲೇ ಗ್ರಾ.ಪಂ. ನವರು ಉತ್ತಮವಾದ ಕಛೇರಿಯನ್ನು ನಿರ್ಮಿಸಿ ಸಿದ್ಧಪಡಿಸಿ ಕೊಟ್ಟಿದ್ದಾರೆ. ಇದೇ ರೀತಿ ಇಲಾಖೆಗಳಿಗೆ ಗ್ರಾ.ಪಂ.ಗಳ ಸಹಕಾರ ಅಗತ್ಯ ಎಂದು ಕಡಬ ತಹಶೀಲ್ದಾರ್ ಅನಂತಶಂಕರ್ ಹೇಳಿದರು.


ಅವರು ಸೋಮವಾರ ಕಲ್ಲುಗುಡ್ಡೆಯಲ್ಲಿ ಗ್ರಾ.ಪಂ. ಕಟ್ಟಡದಲ್ಲಿ ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮ ಕರಣಿಕರ ಸ್ಥಳಾಂತರಗೊಂಡ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ನೂತನ ಕಛೇರಿ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಇಮಾನ್ಯುವೆಲ್ ಪಿ.ಜೆ. ಮಾತನಾಡಿ, ಕಂದಾಯ ಇಲಾಖೆಯ ಸೇವೆ ಗ್ರಾಮಸ್ಥರಿಗೆ ಅತೀ ಹೆಚ್ಚಿನ ಬೇಡಿಕೆಯದ್ದಾಗಿದೆ. ಇಲ್ಲಿ ವಾರದ ಎಲ್ಲಾ ರೀತಿಯಲ್ಲಿ ಗ್ರಾಮ ಕರಣಿಕರು ಲಭ್ಯವಿರುವಂತೆ ಅವರು ಮನವಿ ಮಾಡಿಕೊಂಡರು.

ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಗ್ರಾಮ ಕರಣಿಕ ಸಂತೋಷ್, ಗ್ರಾಮ ಸಹಾಯಕ ದುಗ್ಗಣ್ಣ, ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ ಗೌಡ ಹಳೆನೂಜಿ, ಶ್ರೀಧರ ಗೌಡ ಗೋಳ್ತಿಮಾರ್, ಜೋಸೆಫ್ ಪಿ.ಜೆ., ವಸಂತ ಕುಬುಲಾಡಿ, ಚಂದ್ರಾವತಿ, ಮೀನಾಕ್ಷಿ, ವಿನಯಕುಮಾರಿ, ಅಂಚೆ ಪಾಲಕ ಜೀನೆಂದ್ರ ಜೈನ್, ಪ್ರಮುಖರಾದ ದುರ್ಗಾಪ್ರಸಾದ್ ಕೆ.ಪಿ., ಅನಿಲ್ ಕೆರ್ನಡ್ಕ, ಮೋನಪ್ಪ ಗೌಡ ಅರಿಮಜಲು, ವಿಜಯ ಕುಮಾರ್, ರಾಮಚಂದ್ರ ಎಸ್., ರವಿಪ್ರಸಾದ್ ಕರಿಂಬಿಲ, ಅಶೋಕ್, ಲಿಂಗಪ್ಪ ಗೌಡ ಕಾನದಬಾಗಿಲು, ಕಿಟ್ಟು ಕಲ್ಲುಗುಡ್ಡೆ, ಹರ್ಷಿತ್ ನಡುವಳಿಕೆ, ಲತೀಶ್ ಕಂಪ, ಗ್ರಾ.ಪಂ. ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಗುರುವ ಎಸ್. ಸ್ವಾಗತಿಸಿದರು. ಉಪ ತಹಶೀಲ್ದಾರ್ ಗೋಪಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಹಳೆ ಕಚೇರಿ ಕಟ್ಟಡದ ಬಾಡಿಗೆ ಬಾಕಿ
ಉದ್ಘಾಟನೆಗೊಂಡರೂ ಹೊಸ ಕಛೇರಿಯಲ್ಲಿ ಕಾರ‍್ಯನಿರ್ವಹಿಸದ ಗ್ರಾಮಕರಣಿಕರು?

ಗ್ರಾಮ ಪಂಚಾಯತ್ ಸಹಕಾರದಲ್ಲಿ ಹೊಸ ಕಟ್ಟಡದಲ್ಲಿ ಗ್ರಾಮಕರಣಿಕರ ಕಚೇರಿ ಉದ್ಘಾಟನೆಗೊಂಡರೂ ಇಂದಿನಿಂದಲೇ ಗ್ರಾಮಕರಣಿಕರು ಅಲ್ಲಿ ಕಾರ‍್ಯನಿರ್ವಹಿಸಲು ವಿಘ್ನವೊಂದು ಎದುರಾಗಿದೆ. ಕಳೆದ ಸುಮಾರು ಮೂರು ವರ್ಷಗಳಿಂದ ಕಲ್ಲುಗುಡ್ಡೆ ಜೆ.ಜೆ. ಪ್ಲಾಜಾ ಖಾಸಗಿಯವರ ಕಟ್ಟಡದ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮಕರಣಿಕರ ಕಚೇರಿಯ ಬಾಡಿಗೆಯ ಹಣವನ್ನು ಪಾವತಿಸದ ಹಿನ್ನಲೆಯಲ್ಲಿ ಅಲ್ಲಿಂದ ತಕ್ಷಣ ತೆರವುಗೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಹಿಂದೆ ಗ್ರಾಮಕರಣಿಕರಾಗಿದ್ದ ಹರೀಶ್ ಎಂಬವರು ನೂಜಿಬಾಳ್ತಿಲ ಗ್ರಾಮಕರಣಿಕರಾಗಿ ಅಧಿಕಾರ ವಹಿಸಿಕೊಂಡಾಗ ಹಿಂದೆ ಕಾರ‍್ಯನಿರ್ವಹಿಸುತ್ತಿದ್ದ ಹಳೆ ಕಟ್ಟಡವನ್ನು ಬಿಟ್ಟು ಖಾಸಗಿಯವರ ಕಟ್ಟಡದಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿದ್ದರು, ಆದರೇ ಸರಿಯಾಗಿ ಬಾಡಿಗೆ ಹಣವನ್ನು ಪಾವತಿಸದೆ ಇದ್ದುದರಿಂದ ಕಟ್ಟಡ ಮಾಲಿಕರು ಕಂದಾಯ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದ್ದರು, ಬಳಿಕದ ಬೆಳವಣಿಗೆಯಲ್ಲಿ ನೂಜಿಬಾಳ್ತಿಲ ಗ್ರಾಮಕರಣಿಕರಾಗಿ ಸಂತೋಷ್ ಎಂಬವರನ್ನು ನಿಯುಕ್ತಿಗೊಳಿಸಲಾಗಿತ್ತು. ಅವರು ಕಳೆದೆರಡು ತಿಂಗಳಿನಿಂದ ಬಾಡಿಗೆ ಪಾವತಿಸುತ್ತಿದ್ದಾರೆ, ಆದರೆ ಹಿಂದಿನ ಬಾಡಿಗೆ ಹಣ ಬಾಕಿ ಇರುವುದರಿಂದ ಕಟ್ಟಡದ ಮಾಲಿಕರು ಗರಂಗೊಂಡಿದ್ದು, ನೀವು ಹೊಸ ಕಟ್ಟಡಕ್ಕೆ ಶಿಪ್ಟ್ ಆಗುವ ಮೊದಲು ನನ್ನ ಬಾಕಿ ಹಣವನ್ನು ನೀಡಿ ಹೋಗಿ ಎಂದು ತಿಳಿಸಿದ್ದಾರೆ, ಈ ಹಿನ್ನಲೆಯಲ್ಲಿ ಗೊಂದಲದಲ್ಲಿರುವ ಅಧಿಕಾರಿಗಳು ಬಾಡಿಗೆ ಹಣವನ್ನು ಪಾವತಿಸಲು ಹರೀಶ್ ಅವರಿಗೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಹೊಸ ಕಚೇರಿ ಉದ್ಘಾಟನೆಗೊಂಡರೂ ಅದರಲ್ಲಿ ಕಾರ‍್ಯನಿರ್ವಹಿಸದೆ ಜೆ.ಜೆ. ಪ್ಲಾಜಾದಲ್ಲಿಯೇ ಕಾರ‍್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ಇಲ್ಲ- ತಹಸೀಲ್ದಾರ್
ಈ ಬಗ್ಗೆ ಕಡಬ ತಹಸೀಲ್ದಾರ್ ಅನಂತ ಶಂಕರ್ ಪ್ರತಿಕ್ರಿಯೆ ನೀಡಿ, ನನಗೆ ಈ ಬಗ್ಗೆ ಮಾಹಿತಿ ಇಲ್ಲ, ಈ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here