ಮಹಾಲಿಂಗೇಶ್ವರ ದೇವಸ್ಥಾನದ ಎರಡೂವರೆ ಎಕ್ರೆ ಭೂಮಿಯಲ್ಲಿ ಗದ್ದೆ ಹುಡಿ ಬಿತ್ತನೆಗೆ ಸಿದ್ಧತೆ:ಭಕ್ತಾದಿಗಳಿಂದ ಸಾವಯವ ಗೊಬ್ಬರ ನಿರೀಕ್ಷೆ

0

ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ ಕಳೆದ ವರ್ಷ ಯಶಸ್ವಿಯಾಗಿ ನಡೆದಿರುವ `ಭತ್ತ ಬೆಳೆಯೋಣ ಬಾ ಗದ್ದೆಗಿಳಿಯೋಣ’ ಆಂದೋಲನದ ಬಳಿಕ ಇದಕ್ಕೆ ಭಿನ್ನವೆಂಬಂತೆ ದೇವಳದ ದೇವರಮಾರು ಗದ್ದೆಯಲ್ಲಿ `ಅಂಗಳದಲ್ಲಿ ಅಕ್ಕಿ’ ಯೋಜನೆ ಮೂಲಕ ವಿನೂತನ ಶೈಲಿಯಲ್ಲಿ ಭತ್ತ ಬೆಳೆದು ಅದರಲ್ಲೂ ಯಶಸ್ವಿಯಾಗಿತ್ತು.ಈ ವರ್ಷ ದೇವಳದ ಎರಡೂವರೆ ಎಕ್ರೆ ಭೂಮಿಯಲ್ಲಿ ಹುಡಿ ಬಿತ್ತನೆ(ಪುಂಡಿ ಬಿತ್ತ್) ಯೋಜನೆಗೆ ಸಿದ್ದತೆ ನಡೆಯುತ್ತಿದೆ.ದೇವರ ನಿತ್ಯ ನೈವೇದ್ಯಕ್ಕೆ ಬೇಕಾದ ಅಕ್ಕಿ ಉತ್ಪಾದನೆಗಾಗಿ ನಡೆಯಲಿರುವ ಈ ಯೋಜನೆಗೆ ಭಕ್ತಾದಿಗಳಿಂದ ಸಾವಯವ ಗೊಬ್ಬರ ಪೂರೈಕೆಯಾಗುವ ನಿರೀಕ್ಷೆ ದೇವಳದ ಆಡಳಿತ ಮಂಡಳಿಯವರದ್ದು.

ಕಳೆದ ವರ್ಷ ದೇವಳದ ದೇವರಮಾರು ಗದ್ದೆಯಲ್ಲಿ ಸಣ್ಣ ಪ್ರಮಾಣದಲ್ಲಿ ಪುಂಡಿ ಬಿತ್ತ್ ಯೋಜನೆ ಮಾಡಿದಾಗ ಉತ್ತಮ ಫಸಲು ಬಂದಿದ್ದು, ಯೋಜನೆ ಯಶಸ್ಸು ಕಂಡಿತ್ತು.ಈ ವರ್ಷವೂ ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ದೇವಳದ ಆಡಳಿತ ಮಂಡಳಿ ಮುಂದೆ ಬಂದಿದ್ದು, ದೇವಳದ ಎದುರು ಬಾಕಿಮಾರು ಗದ್ದೆಯ ಸುಮಾರು ಎರಡೂವರೆ ಎಕ್ರೆ ಭೂಮಿಯನ್ನು ಹದ ಮಾಡುವ ಕೆಲಸ ಕಾರ್ಯ ನಡೆಯುತ್ತಿದೆ.ಮುಂದೆ ಗದ್ದೆಗೆ ಬೇಕಾಗುವ ಸೊಪ್ಪು, ಅಡಿಕೆ ಸಿಪ್ಪೆ, ತೆಂಗಿನ ನಾರು, ಸುಡುಮಣ್ಣು, ಸೆಗಣಿ ಇತ್ಯಾದಿ ಸಾವಯವ ಗೊಬ್ಬರದ ಅವಶ್ಯತಕೆ ಇದ್ದು ಭಕ್ತರು ತಮಗೆ ಸಾಧ್ಯವಿರುವ ಸಹಕಾರ ನೀಡಿದರೆ ದೇವಸ್ಥಾನದ ವತಿಯಿಂದ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ. ಗೊಬ್ಬರ ಇದ್ದವರು ಸಾಗಾಟ ಮಾಡಲು ಅಸಾಧ್ಯವಾದಲ್ಲಿ ಮೊಬೈಲ್ ಸಂಖ್ಯೆ 9686328337, 9449030872, 9482801611 ಅನ್ನು ಸಂಪರ್ಕಿಬಹುದು ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

LEAVE A REPLY

Please enter your comment!
Please enter your name here