ಉಪ್ಪಿನಂಗಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

0

  • ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಮೂಲಕ ಯುವಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ-ಉಮಾನಾಥ ಶೆಟ್ಟಿ
  • ಬಿ.ಜೆ.ಪಿ. ಸರ್ಕಾರ ಇ.ಡಿ. ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಂಡು ಅಮಾನವೀಯವಾಗಿ ವರ್ತಿಸುತ್ತಿದೆ-ಎಂ.ಎಸ್. ಮಹಮ್ಮದ್
  • ದುರಾಡಳಿತ ನಡೆಸುವ ಕೇಂದ್ರ, ರಾಜ್ಯ ಸರ್ಕಾರವನ್ನು ಕೊನೆಗಾಣಿಸಬೇಕಾಗಿದೆ-ಡಾ. ರಾಜಾರಾಮ್

ಉಪ್ಪಿನಂಗಡಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ  ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಜೂನ್ 21ರಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ಉಮಾನಾಥ ಶೆಟ್ಟಿ ಮಾತನಾಡಿ ಬಿ,ಜೆ.ಪಿ. ಸರ್ಕಾರ ದೇಶದ ಬಲಿಷ್ಠ ರಕ್ಷಣಾ ಇಲಾಖೆಯನ್ನೇ ಇನ್ನಿಲ್ಲದಂತೆ ಮಾಡ ಹೊರಟಿದೆ, ಅಗ್ನಿಪಥ್ ಯೋಜನೆ ಮೂಲಕ ಹತ್ತನೇ ತರಗತಿ ಕಲಿತವರಿಗೆ ಸೇನೆಯಲ್ಲಿ ೪ ವರ್ಷ ಕೆಲಸ ಕೊಟ್ಟು ಮತ್ತೆ ಅವರನ್ನು ಬೀದಿ ಪಾಲು ಮಾಡಲು ಹೊರಟಿದೆ, ಆ ಮೂಲಕ ಯುವಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಉದ್ಯೋಗ ಸೃಷ್ಠಿ ಎಂದು ಹೇಳುತ್ತಲೇ ನಿರುದ್ಯೋಗ ಸೃಷ್ಠಿ ಮಾಡುತ್ತಿದೆ, ಇನ್ನೊಂದೆಡೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ, ಜನತೆ ಇದನ್ನು ಅರ್ಥೈಸಿಕೊಂಡು ಮುಂದಿನ ದಿನಗಳಲ್ಲಿ ಬಿ.ಜೆ.ಪಿ.ಗೆ ಮತದಾರರೇ ಬುದ್ದಿ ಕಲಿಸಲಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಇ.ಡಿ. ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯ ಗಾಂಧಿಯವರ ಮೇಲೆ ದಾಳಿ ನಡೆಸುತ್ತಿದೆ. ಅದರಲ್ಲೂ ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದಲ್ಲಿಗೆ ತೆರಳಿ  ನೋಟಿಸು    ನೀಡುವ ಮೂಲಕ ಅಮಾನವೀಯವಾಗಿ ವರ್ತಿಸುತ್ತಿದೆ. ವಿಚಾರಣೆ ನೆಪದಲ್ಲಿ ಅವರ ಘನತೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ, ಇದು ಖಂಡನೀಯವಾಗಿದೆ ಎಂದರು.

ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಯೋಜನೆಗಳು ಇಲ್ಲ, ಇದನ್ನು ಮರೆಮಾಚಲು ಧರ್ಮ, ದ್ವೇಷ, ಸೇಡಿನ ರಾಜಕಾರಣ ಮಾಡುತ್ತಿದೆ, ಈ ದೇಶವನ್ನು ಅಧಃಪತನಕ್ಕೆ ತಳ್ಳಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಗೆ ದ್ರೋಹ ಮಾಡುತ್ತಿದ್ದು, ದುರಾಡಳಿತ ನಡೆಸುವ ಕೇಂದ್ರ, ರಾಜ್ಯ ಸರ್ಕಾರವನ್ನು ಜನತೆ, ಮತದಾರರು ಕೊನೆಗಾಣಿಸಬೇಕಾಗಿದೆ ಎಂದರು.

ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿಗಳಾದ ಪ್ರವೀಣ್‌ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ನಝೀರ್ ಮಠ, ಸೇಸಪ್ಪ ನೆಕ್ಕಿಲು, ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್‍ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಶ್ರಫ್ ಬಸ್ತಿಕ್ಕಾರ್, ಕೃಷ್ಣ ರಾವ್ ಅರ್ತಿಲ, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಯು.ಟಿ. ತೌಸೀಫ್, ಯು.ಕೆ. ಇಬ್ರಾಹಿಂ, ವಿಜಯವಿಕ್ರಂ, ಫಾರೂಕ್ ಪೆರ್ನೆ, ತನಿಯಪ್ಪ ಪೂಜಾರಿ ಪೆರ್ನೆ, ಶಬೀರ್ ಕೆಂಪಿ, ಇಬ್ರಾಹಿಂ ಆಚಿ, ಫಾರೂಕ್ ಝಿಂದಗಿ, ಮಹಮ್ಮದ್ ಕೆಂಪಿ, ಅಬ್ದುಲ್ಲ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು. ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ಸ್ವಾಗತಿಸಿ, ಗ್ರಾಮ ಪಂಚಾಯಿತಿ ಸದಸ್ಯ ಕೆ. ಅಬ್ದುಲ್ ರಹಿಮಾನ್ ವಂದಿಸಿದರು.

LEAVE A REPLY

Please enter your comment!
Please enter your name here