ಕೊಯಿಲ ಗ್ರಾ.ಪಂ.: ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

0

 

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮ ಪಂಚಾಯಿತಿಯ 2022-23ನೇ ಸಾಲಿನ ಪ್ರಥಮ ಹಂತದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 14 ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಜೂ.21ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.


ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆ, 14ನೇ ಮತ್ತು 15ನೇ ಹಣಕಾಸು ಯೋಜನೆಗೆ ಕೇಂದ್ರ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈ ಯೋಜನೆಯಡಿ ಹೆಚ್ಚಿನ ಅನುದಾನವೂ ಸಿಗುತ್ತದೆ. ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಜಾಗದಲ್ಲಿ ಹಾಗೂ ಸಮುದಾಯ ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ. ಗ್ರಾಮಸ್ಥರು ಯೋಜನೆಯ ಕುರಿತಂತೆ ಗ್ರಾಮ ಪಂಚಾಯಿತಿಯಿಂದ ಸಮಗ್ರ ಮಾಹಿತಿ ಪಡೆದುಕೊಂಡು ಅನುಷ್ಠಾನಗೊಳಿಸಬೇಕು. ಈ ಯೋಜನೆಯಿಂದ ತಮ್ಮ ವೈಯಕ್ತಿಕ ಅಭಿವೃದ್ಧಿಯೂ ಆಗಲಿದೆ ಎಂದರು. ಅಡಿಕೆ ಗಿಡ, ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಅಡಿಕೆ ಪುನಶ್ಚೇತಕ್ಕೂ ಅವಕಾಶವಿದೆ. ಎಡೆ ಅಡಿಕೆ ಗಿಡ ನಾಟಿಗೂ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ಸಿಗಲಿದೆ ಎಂದು ಹೇಳಿದ ಅವರು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

ಕಡಬ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡರವರು ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ಪ್ರವೀಣ್‌ರವರು ಯೋಜನೆಯ ಉದ್ದೇಶಗಳ ಕುರಿತು ಮಾಹಿತಿ ನೀಡಿ, ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಗ್ರಾ.ಪಂ.ಅಧ್ಯಕ್ಷ ಹರ್ಷಿತ್‌ಕುಮಾರ್, ಉಪಾಧ್ಯಕ್ಷೆ ಕಮಲಾಕ್ಷಿ, ತಾಂತ್ರಿಕ ಸಹಾಯಕರಾದ ಮನೋಜ್, ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಕಾಮಗಾರಿಯ ವಿವರ ಮಂಡಿಸಿದರು. ಪಿಡಿಒ ನಮಿತಾಕುಮಾರಿ ಸ್ವಾಗತಿಸಿ, ಕಾರ್ಯದರ್ಶಿ ಪಮ್ಮು ವಂದಿಸಿದರು. ಸದಸ್ಯರಾದ ಭಾರತಿ, ಪುಷ್ಪಾಸುಭಾಶ್‌ಕುಮಾರ್, ಜೋಹರಾ, ಸಫಿಯಾ, ಚಂದ್ರಶೇಖರ ಗೌಡ, ನಝೀರ್ ಪೂರಿಂಗ, ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಜಯಮಣಿ ಪಿ., ಸುಪ್ರಿಯಾ, ಪ್ರಣಮ್ಯ ಪಿ., ಸವಿತಾಕುಮಾರಿ, ಯಶ್ವಿತಾ, ವಿನುತ ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.

 

15.82 ಲಕ್ಷ ರೂ.,ಖರ್ಚು:
1-10-2021ರಿಂದ 31-3-2022ರ ಅವಧಿಯ ತನಕ ಕೊಯಿಲ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 76 ಕಾಮಗಾರಿ ಆಗಿದೆ. ಇದಕ್ಕೆ 11,61,490 ರೂ.ಕೂಲಿ, 4,21,214 ರೂ.ಸಾಮಾಗ್ರಿ ಮೊತ್ತ ಸೇರಿ ಒಟ್ಟು 15,82,704 ರೂ.,ಪಾವತಿಯಾಗಿದೆ. 124 ಕುಟುಂಬಗಳ 220 ಮಂದಿ ಕೆಲಸ ಮಾಡಿದ್ದು ಒಟ್ಟು 4010 ಮಾನವ ದಿನ ಸೃಜನೆಯಾಗಿದೆ. 2021-22ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿ 13 ಕಾಮಗಾರಿಗಳ ಅನುಷ್ಠಾನಗೊಂಡಿದ್ದು 10,09,024 ರೂ., ಹಾಗೂ 15ನೇ ಹಣಕಾಸು ಯೋಜನೆಯಡಿ 36 ಕಾಮಗಾರಿಗಳಿಗೆ 40,90,745 ರೂ.,ಖರ್ಚು ಮಾಡಲಾಗಿದೆ.

LEAVE A REPLY

Please enter your comment!
Please enter your name here