ಅಗ್ರಾಳ-ಕೊಪ್ಪಳ ರಸ್ತೆ ವಿವಾದ ನ್ಯಾಯಾಲಯದಲ್ಲಿದೆ- ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ; ಪುಣಚ ಗ್ರಾಮಸಭೆ

0

ಪುತ್ತೂರು: ಗ್ರಾಮದ ಅಗ್ರಾಳದಿಂದ ಪದವು ಆಗಿ ಕೊಪ್ಪಳ ಸಂಪರ್ಕಿಸುವ ರಸ್ತೆ ವಿವಾದ ಈಗಾಗಲೇ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪುಣಚ ಗ್ರಾಮಸಭೆಯಲ್ಲಿ ಗ್ರಾಪಂ ಅಧ್ಯಕ್ಷರು ಸ್ಪಷ್ಟಪಡಿಸಿದರು.

ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲುರವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಯೋಜನಾಧಿಕಾರಿ ಉಷಾರವರು ನೊಡೆಲ್ ಅಧಿಕಾರಿಯಾಗಿದ್ದರು. ಬೈಲುಕೊಪ್ಪಳದ ಸಂತೋಷ್ ರೈ ಎಂಬವರು ವಿಷಯ ಪ್ರಸ್ತಾಪಿಸಿ ಅಗ್ರಾಳ-ಪದವು ಪಂಚಾಯತ್ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿದ್ದಾರೆ. ಇದರಿಂದ ಈ ರಸ್ತೆಯನ್ನು ಸಂಪರ್ಕ ರಸ್ತೆಯನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ, ಇದರಿಂದ ಈ ಭಾಗದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಗ್ರಾಮ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಇದಕ್ಕೆ ವೀಣಾ ರೈಯವರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲುರವರು ಸದ್ರಿ ಜಮೀನಿನ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಇದೆ, ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಪಂಚಾಯತ್‌ಗೆ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.ಮುಂದಿನ ದಿನಗಳಲ್ಲಿ ಕೋರ್ಟ್ ಯಾವ ರೀತಿಯ ತೀರ್ಪು ನೀಡುತ್ತದೆ ಅದರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ಮಶಾನಕ್ಕೆ ಕಾದಿರಿಸಿದ್ದ ಜಾಗ ಅತಿಕ್ರಮಣ ಆಗಿದೆ

ಪುಣಚ ಗ್ರಾಮಕ್ಕೆ ಸ್ಮಶಾನಕ್ಕೆ ಕಾದಿರಿಸಿದ್ದ 1 ಎಕರೆ ಜಾಗದಲ್ಲಿ ಅತಿಕ್ರಮಣ ಆಗಿದೆ, ಹಲವು ವರ್ಷಗಳ ಹಿಂದೆಯೇ ಜಿಲ್ಲಾಧಿಕಾರಿಯವರು ಮಂಜೂರು ಮಾಡಿದ್ದ ಜಾಗ ಇದಾಗಿರುವುದರಿಂದ ತಹಶೀಲ್ದಾರರು, ಗ್ರಾಮಕರಣಿಕರು ಹೇಗೆ ಜಾಗವನ್ನು ಬೇರೆಯವರಿಗೆ ಮಂಜೂರು ಮಾಡಿರುತ್ತಾರೆ. ಈ ಬಗ್ಗೆ ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ವೆಂಕಟ್ರಮಣ ಆಜೇರುರವರು ಈ ಬಗ್ಗೆ ತಹಶೀಲ್ದಾರ್ ಮತ್ತು ಗ್ರಾಮಕರಣಿಕರ ಮೇಲೆ ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರಾಮಕೃಷ್ಣ ಬಿ.ರವರು ಸ್ಮಶಾನಕ್ಕೆ ಕಾದಿರಿಸಿದ್ದ ಜಾಗವನ್ನು ಈಗಾಗಲೇ ಸರ್ವೆ ಮಾಡಲಾಗಿದೆ, ಇದರಲ್ಲಿ ಪ್ರಸ್ತುತ ೦.೮೨ ಸೆಂಟ್ಸ್ ಜಾಗ ಇದ್ದು ಉಳಿದ ೧೮ ಸೆಂಟ್ಸ್ ಎಲ್ಲಿ ಸೇರಿದ ಎಂಬ ಬಗ್ಗೆ ನೋಡಬೇಕಾಗಿದೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಅತಿಕ್ರಮಣ ಆದ ಜಾಗವನ್ನು ಮನವೊಲಿಸಿ ಪಡೆಯುವ ಬಗ್ಗೆ ಪ್ರಯತ್ನ ಮಾಡಲಾಗಿದೆ ಮತ್ತು ಯಶಸ್ಸು ಸಿಕ್ಕಿದೆ ಎಂದು ತಿಳಿಸಿದರು.

9/11 ಗ್ರಾಮ ಪಂಚಾಯತ್‌ನಲ್ಲೇ ಆಗಲಿ

ಈ ಹಿಂದೆ ಪಂಚಾಯತ್‌ನಲ್ಲೇ ಸಿಗುತ್ತಿದ್ದ 9/11 ಈಗ ನಗರ ಪ್ರಾಧಿಕಾರದಿಂದ ಪಡೆದುಕೊಳ್ಳಬೇಕಾಗುತ್ತದೆ ಇದರಿಂದ ಬಡ ಜನರಿಗೆ ಬಹಳಷ್ಟು ಕಷ್ಟವಾಗಿದೆ. ಮಂಗಳೂರಿಗೆ ಅಲೆಯುವುದು ಅಲ್ಲದೆ ಬಹಳಷ್ಟು ದುಂದುವೆಚ್ಚ ಕೂಡ ಆಗುತ್ತಿದೆ ಆದ್ದರಿಂದ ಈ ಹಿಂದಿನಂತೆ 9/11 ಪಂಚಾಯತ್‌ನಲ್ಲೇ ಸಿಗುವಂತಾಗಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಅದರಂತೆ ನಿರ್ಣಯಿಸಲಾಯಿತು.

ಪರಿಯಾಲ್ತಡ್ಕದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು

ಅಕ್ರಮ ಮರಳು ಸಾಗಾಣಿಕೆ ಸೇರಿದಂತೆ ಇತ್ತೀಚೆಗೆ ಪೇಟೆಯಲ್ಲಿ ಕೊಲೆಯತ್ನ ಕೂಡ ನಡೆದಿರುವುದರಿಂದ ಪರಿಯಾಲ್ತಡ್ಕ ಪೇಟೆಗೆ ಸಿಸಿ ಕ್ಯಾಮರದ ಅವಶ್ಯಕತೆ ಇದೆ ಎಂದು ಶ್ರೀಧರ ಶೆಟ್ಟಿ ಬೈಲುಗುತ್ತು ತಿಳಿಸಿದರು. ಗರಡಿ-ಕೃಷ್ಣಗಿರಿ ಮಾರ್ಗದಲ್ಲಿ ಶಾಲಾ ಮಕ್ಕಳು ಓಡಾಡುವ ಸಮಯದಲ್ಲಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಟಿಪ್ಪರ್ ಓಡಾಟ ನಡೆಸುತ್ತಿದ್ದು ಇದರಿಂದ ಪುಟಾಣಿ ಮಕ್ಕಳಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಈ ಸಮಯದಲ್ಲಿ ಟಿಪ್ಪರ್‌ಗಳ ಓಡಾಟವನ್ನು ನಿಲ್ಲಿಸಬೇಕು ಎಂದು ಜಯಪ್ರಕಾಶ್ ಕೋಡಂದೂರು ಪೊಲೀಸ್ ಇಲಾಖಾಧಿಕಾರಿಯವರಲ್ಲಿ ಮನವಿ ಮಾಡಿಕೊಂಡರು.

ಪಂಚಾಯತ್‌ಗೆ ಖಾಯಂ ಕಾರ್ಯದರ್ಶಿ, ಲೆಕ್ಕಸಹಾಯಕರು ಬೇಕು

ಪುಣಚ ಗ್ರಾಮ ಪಂಚಾಯತ್‌ನಲ್ಲೇ ತಾಲೂಕಿನಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವುದರಿಂದ ಈ ಪಂಚಾಯತ್‌ಗೆ ಖಾಯಂ ಕಾರ್ಯದರ್ಶಿ ಮತ್ತು ಲೆಕ್ಕಸಹಾಯಕರು ಬೇಕು, ಪ್ರಸ್ತುತ ಪಂಚಾಯತ್‌ನಲ್ಲೇ ಪ್ರಭಾರ ಲೆಕ್ಕಸಹಾಯಕರು ಮತ್ತು ಕಾರ್ಯದರ್ಶಿ ಇದ್ದು ತಕ್ಷಣವೇ ಸರಕಾರ ಪೂರ್ಣಕಾಲಿಕ ಲೆಕ್ಕಸಹಾಯಕ ಮತ್ತು ಕಾರ್ಯದರ್ಶಿಯವರನ್ನು ನೇಮಕ ಮಾಡುವಂತೆ ಮನವಿ ಮಾಡಿಕೊಳ್ಳುವ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಅದರಂತೆ ನಿರ್ಣಯ ಮಾಡಲಾಯಿತು. ಪುಣಚ ಗ್ರಾಮ ಕರಣಿಕರು ವಾರದಲ್ಲಿ ೬ ದಿನವೂ ಕಛೇರಿಯಲ್ಲಿ ಹಾಜರಿರಬೇಕು, ಇಲ್ಲದಿದ್ದರೆ ದೂರದಿಂದ ಬರುವ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತದೆ ಈ ಬಗ್ಗೆ ಪಂಚಾಯತ್ ಗಮನ ಹರಿಸಬೇಕು ಎಂದು ವೆಂಕಟ್ರಮಣ ಆಜೇರು ತಿಳಿಸಿದರು.

ಪೂರ್ಣಕಾಲಿಕ ಪಶುವೈದ್ಯಾಧಿಕಾರಿ ಬೇಕು

ಪುಣಚ ಗ್ರಾಮಕ್ಕೆ ಪೂರ್ಣಕಾಲಿಕ ಪಶುವೈದ್ಯಾಧಿಕಾರಿ ಬೇಕು, ಪ್ರಸ್ತುತ ವಿಟ್ಲದ ಪಶುವೈದ್ಯಾಧಿಕಾರಿಯವರು ವಾರದಲ್ಲಿ 3 ದಿನ ಪುಣಚದಲ್ಲಿ ಇರುತ್ತಾರೆ, ಇದು ಸಾಕಾಗದೇ ಇರುವುದರಿಂದ ಪೂರ್ಣಕಾಲಿಕ ಪಶುವೈದ್ಯಾಧಿಕಾರಿಯವರನ್ನು ನೇಮಕ ಮಾಡುವಂತೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು ಅದರಂತೆ ನಿರ್ಣಯಿಸಲಾಯಿತು.
ಉದ್ಯೋಗ ಖಾತರಿ ಯೋಜನೆಯಲ್ಲಿ ಭತ್ತದ ಬೆಳೆಗೂ ಅವಕಾಶ ನೀಡಬೇಕು ಎಂಬಿತ್ಯಾದಿ ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.ಕೊರಗ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಆಗಬೇಕು, ಅಂಬೇಡ್ಕರ್ ನಿಗಮದ ಅಧಿಕಾರಿಗಳೂ ಗ್ರಾಮಸಭೆಗೆ ಬರಬೇಕು, ಪುಣಚದಲ್ಲಿ ಜಿಲ್ಲಾಧಿಕಾರಿಯವರ ಗ್ರಾಮವಾಸ್ತವ್ಯ ಆಗಬೇಕು, ಜನಜೀವನಕ್ಕೆ ಮಾರಕವಾಗಿರುವ ೪೦೦ ಕೆ.ವಿ ವಿದ್ಯುತ್ ಪ್ರಸರಣ ಮಾರ್ಗ ಗ್ರಾಮ ವ್ಯಾಪ್ತಿಗೆ ಪ್ರವೇಶಿಸದಂತೆ ಸರಕಾರಕ್ಕೆ ಲಿಖಿತ ಮನವಿ ಸಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳು ಗ್ರಾಮಸ್ಥರಿಂದ ಕೇಳಿಬಂತು.

ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಪ್ರತಿಭಾ ಜಗನ್ನಾಥ ಗೌಡ, ಸದಸ್ಯರಾದ ಲಲಿತಾ, ಗಿರಿಜ, ಬೇಬಿ, ಗಂಗಮ್ಮ, ರವಿ, ಮಹೇಶ್ ಶೆಟ್ಟಿ, ಹರೀಶ್ ಪೂಜಾರಿ, ಸರೋಜಿನಿ, ಸುಜಾತ, ಉದಯ ದಂಬೆ, ರೇಖಾ, ರೇಷ್ಮಾ, ತೀರ್ಥರಾಮ,ಅಶೋಕ್ ಕುಮಾರ್, ಆನಂದ ನಾಯ್ಕ, ವಾಣಿಶ್ರೀ, ರಾಜೇಶ್ ನಾಯ್ಕ, ಶಾರದಾ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ. ಸ್ವಾಗತಿಸಿ ಪಂಚಾಯತ್ ಮಾಹಿತಿ ನೀಡಿದರು. ಪ್ರಭಾರ ಕಾರ್ಯದರ್ಶಿ ರಾಮ ನಾಯ್ಕ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ರಾಮ ನಾಯ್ಕ, ಮಮತಾ ಕಜೆಮಾರ್, ಸತ್ಯಪ್ರಕಾಶ್, ಉಸ್ಮಾನ್, ಗ್ರಂಥಪಾಲಕಿ ಜಯಲಕ್ಷ್ಮೀ ದೊಡ್ಡಡ್ಕ, ಅಭಿಷೇಕ್ ಸಹಕರಿಸಿದ್ದರು.

‘ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮಸ್ಥರು ಉತ್ತಮ ರೀತಿಯಲ್ಲಿ ಆರೋಗ್ಯಕರ ಚರ್ಚೆ ನಡೆಸಿದ್ದಾರೆ. ಗ್ರಾಮಸಭೆಯಲ್ಲಿ ನಿರ್ಣಯಿಸಲಾದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಗ್ರಾಮದ ಅಭಿವೃದ್ಧಿಗೆ ಪಂಚಾಯತ್‌ನೊಂದಿಗೆ ಗ್ರಾಮಸ್ಥರ ಸಹಕಾರ ಅತೀ ಮುಖ್ಯ. ಅಭಿವೃದ್ಧಿಯ ದೃಷ್ಟಿಯಲ್ಲಿ ಮುಂದೆಯೂ ಗ್ರಾಮಸ್ಥರು ಪಂಚಾಯತ್‌ನೊಂದಿಗೆ ಕೈಜೋಡಿಸಬೇಕಾಗಿದೆ.’

ರಾಮಕೃಷ್ಣ ಮೂಡಂಬೈಲು, ಅಧ್ಯಕ್ಷರು ಪುಣಚ ಗ್ರಾಪಂ

LEAVE A REPLY

Please enter your comment!
Please enter your name here