ಅಂಬಿಕಾ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆ 

0

ಯೋಗದಿಂದ ಅತ್ಯುತ್ತಮ ಜೀವನ ನಡೆಸುವುದಕ್ಕೆ ಸಾಧ್ಯ : ಪ್ರಸಾದ್ ಪಾಣಾಜೆ

ಪುತ್ತೂರು: ಶಾರೀರಿಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಅತ್ಯುತ್ತಮ ಜೀವನವನ್ನು ನಡೆಸುವುದಕ್ಕೆ ಯೋಗ ಸಹಕಾರಿ. ಇಂತಹ ಶ್ರೇಷ್ಟ ಯೋಗವನ್ನು ನಿರಂತರವಾಗಿ ಅಳವಡಿಸಿಕೊಂಡಾಗ ಅಂತ್ಯಕಾಲದವರೆಗೆ ಜೀವನದಲ್ಲಿ ಲವಲವಿಕೆಯನ್ನು ಹೊಂದಿರಲು ಸಾಧ್ಯ. ತಾಳ್ಮೆ, ಏಕಾಗ್ರತೆ, ಆಸ್ತಕಿ ಇವೇ ಮುಂತಾದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿ, ಉನ್ನತ ವ್ಯಕ್ತಿತ್ವವನ್ನು ರೂಪಿಸಲು ಯೋಗದಿಂದ ಸಾಧ್ಯ ಎಂದು ಯೋಗ ಗುರು ಪ್ರಸಾದ್ ಪಾಣಾಜೆ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.

ಹಿಂದಿನ ಕಾಲದಲ್ಲಿ ಯೋಗವನ್ನು ಮಾಡಿ ಋಷಿಮುನಿಗಳು ನೆಮ್ಮದಿಯನ್ನು ಕಂಡುಕೊಂಡಿದ್ದರು ಹಾಗೂ ರೋಗರುಜಿನಗಳಿಂದ ಮುಕ್ತಿಯನ್ನು ಪಡೆದಿದ್ದರು. ಉಸಿರಾಟದ ಕ್ರಿಯೆಗಳನ್ನು ನಿಯಂತ್ರಿಸಿ ದೀರ್ಘಾಯುವನ್ನು ಪಡೆದಿದ್ದರು. ಅವರನ್ನು ಆದರ್ಶವಾಗಿಟ್ಟುಕೊಂಡು ನಾವು ಯೋಗದ ಮೂಲಕ ಸಾಧನೆಯನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನವೂ ಆಚರಣೆಯಲ್ಲಿರಬೇಕು. ಯೋಗ ಭಾರತೀಯರ ಧ್ಯೇಯವಾಗಬೇಕು, ಭಾರತೀಯತೆಯ ದ್ಯೋತಕವಾಗಬೇಕು. ಪ್ರಪಂಚಕ್ಕೆ ಯೋಗವನ್ನು ಪಸರಿಸಿ, ಎಲ್ಲರಿಗೂ ಆಚಾರ್ಯ ಸ್ಥಾನದಲ್ಲಿ ನಿಂತಿರುವ ಭಾರತ ಈಗಾಗಲೇ ವಿಶ್ವಗುರು ಸ್ಥಾನಕದಕೇರಿದೆ. ಆದರೆ ಅದನ್ನು ಉಳಿಸಿಕೊಂಡು ಮುನ್ನಡೆಯುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಯುವಜನತೆ ನಮ್ಮತನ, ನಮ್ಮ ಆಚಾರವಿಚಾರಗಳ ಬಗೆಗೆ ಕೀಳರಿಮೆ ಬಿಟ್ಟು ಹೆಮ್ಮೆಯಿಂದ ಭಾರತೀಯ ಸಂಸ್ಕೃತಿಗಳನ್ನ ಅಳವಡಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ನಿರ್ವಹಣಾಧಿಕಾರಿ ಅಭಿಷೇಕ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here