ಬೂಡಿಯಾರ್ ಪುರುಷೋತ್ತಮ ರೈಯವರಿಂದ ಇಡ್ಯೊಟ್ಟು ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

0

  • ಸರಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ಬೇಡ-ಪುರುಷೋತ್ತಮ ರೈ

ಪುತ್ತೂರು: ಸರಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಇಡ್ಯೊಟ್ಟು ಶಾಲೆಯ ಮಕ್ಕಳಿಗೆ ನೋಟ್ ಬುಕ್‌ಗಳನ್ನು ನೀಡುವ ಮೂಲಕ ನನ್ನಿಂದಾದ ಸಣ್ಣ ಸಹಾಯವನ್ನು ಮಾಡಿದ್ದೇನೆ. ಸರಕಾರಿ ಶಾಲೆಗಳ ಬಗ್ಗೆ ಪೋಷಕರು ನಿರ್ಲಕ್ಷ್ಯ ಭಾವನೆ ತೋರದೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕಬಾರದು ಎಂದು ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು.

ಜೂ.21ರಂದು ಇಡ್ಯೊಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವತಿಯಿಂದ ನೋಟ್ ಬುಕ್ ವಿತರಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ನೀಡಲಾಗುತ್ತಿದ್ದು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣವೂ ಇದೆ. ಹಾಗಾಗಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದು ಅವರು ಹೇಳಿದರು.

ಆರ್ಯಾಪು ಗ್ರಾ.ಪಂ ಸದಸ್ಯೆ ರಕ್ಷಿತಾ ಮಾತನಾಡಿ ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬಂತೆ ಬೂಡಿಯಾರ್ ಪುರುಷೋತ್ತಮ ರೈ ಅವರು ಮಕ್ಕಳಿಗೆ ನೋಟ್ ಪುಸ್ತಕ ನೀಡಿರುವುದು ಶ್ಲಾಘನೀಯ ಎಂದರು.

ಆರ್ಯಾಪು ಗ್ರಾ.ಪಂ ಸದಸ್ಯೆ ರೇವತಿ ಮಾತನಾಡಿ ಶಾಲೆಯ ಎಲ್ಲ ಆಗುಹೋಗುಗಳಲ್ಲಿ ತೊಡಗಿಸಿಕೊಳ್ಳಲು ನಾನು ಸದಾ ಸಿದ್ದಳಿದ್ದೇನೆ ಎಂದು ಹೇಳಿದರು. ಕುರಿಯ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಬ್ಬಾರ್ ಮಾತನಾಡಿ ದುಡ್ಡು ಇದ್ದ ಎಲ್ಲರಿಗೆ ಕೊಡುವ ಭಾಗ್ಯ ಇರುವುದಿಲ್ಲ, ಕೆಲವರಿಗೆ ಮಾತ್ರ ಆ ಮನಸ್ಸು ಭಾಗ್ಯ ಎಲ್ಲವೂ ಇರುತ್ತದೆ. ಈ ನಿಟ್ಟಿನಲ್ಲಿ ಬೂಡಿಯಾರ್ ಪುರುಷೋತ್ತಮ ರೈ ಅವರು ಇಲ್ಲಿನ ಮಕ್ಕಳ ಬಗ್ಗೆ ತೋರುತ್ತಿರುವ ಕಾಳಜಿ ಎಲ್ಲರಿಗೆ ಮಾದರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಇಡ್ಯೊಟ್ಟು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅದ್ರಾಮ ಮಾತನಾಡಿ ನಮ್ಮ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಿಸಿದ ಬೂಡಿಯಾರ್ ಪುರುಷೋತ್ತಮ ರೈ ಅವರು ಬಡವರ ಬಂಧುವಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಶಾಲೆಗೆ ಸ್ಥಳದಾನ ಮಾಡಿದ ಮಂಜಪ್ಪ ಪೂಜಾರಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಗೀತಾ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ದೇವಪ್ಪರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ಮಂಜುಳಾ ಹಾಗೂ ಲಕ್ಷ್ಮೀ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಸರಕಾರದಿಂದ ಕೊಡುವ ಪಠ್ಯ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

15 ವರ್ಷಗಳಿಂದ ಪುಸ್ತಕ ವಿತರಣೆ:

ಬೂಡಿಯಾರ್ ಪುರುಷೋತ್ತಮ ರೈ ಅವರು ಕಳೆದ 15 ವರ್ಷಗಳಿಂದ ಇಡ್ಯೊಟ್ಟು ಸರಕಾರಿ ಹಿ.ಪ್ರಾ.ಶಾಲೆಗೆ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದು ಶಾಲೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಸರಕಾರಿ ಶಾಲೆಯಲ್ಲಿ ಕಲಿಯುವ ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಪುಸ್ತಕಗಳನ್ನು ನೀಡುತ್ತಿದ್ದೇನೆ ಎಂದು ಬೂಡಿಯಾರ್ ಪುರುಷೋತ್ತಮ ರೈ ಹೇಳಿದ್ದಾರೆ. ಇವರು ಇತ್ತೀಚೆಗೆ ಕುರಿಯ ಶಾಲೆಯ ಮಕ್ಕಳಿಗೂ ಉಚಿತ ನೋಟ್ ಪುಸ್ತಕಗಳನ್ನು ನೀಡಿದ್ದರು. ಇವರ ಮಾನವೀಯ ಕಳಕಳಿಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಊರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here