‘ಒಂದಲ್ಲ ಹತ್ತು ಕೇಸು ಹಾಕಿ, ನಾನು ಕುಗ್ಗಲ್ಲ’-ಟಿವಿ ವಿಕ್ರಮ ನಿರೂಪಕಿ ಮುಮ್ತಾಸ್ ಹೇಳಿಕೆಯ ವಿಡಿಯೋ ವೈರಲ್

0

ಪುತ್ತೂರು: ಒಂದಲ್ಲ ಹತ್ತು ಕೇಸು ಹಾಕಿ, ನಾನು ಕುಗ್ಗಲ್ಲ, ನನ್ನ ಧ್ವನಿ ಕುಗ್ಗಲ್ಲ, ನಾನು ಸತ್ಯ ಮಾತನಾಡುವುದನ್ನು ನಿಲ್ಲಿಸಲ್ಲ, ನಾನು ದೇಶ, ಧರ್ಮ ಪ್ರೀತಿಸೋದು ನಿಲ್ಲಿಸಲ್ಲ ಎಂದು ಟಿವಿ ವಿಕ್ರಮ ನಿರೂಪಕಿ ಸುಳ್ಯ ಮೂಲದ ಎಂ.ಎಸ್.ಮುಮ್ತಾಸ್‌ರವರು ತಮ್ಮ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿರುವ ಕೇಸಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ ಚರ್ಚಾಕೂಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ನ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್‌ರವರು ಶ್ರೀರಾಮಚಂದ್ರ, ಸೀತಾಮಾತೆ, ಹನುಮಂತ ದೇವರ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಜೂ.೧೮ರಂದು ಸಂಜೆ ಪುತ್ತೂರು ನಗರ ಠಾಣೆಯಲ್ಲಿ ಪ್ರವೀಣ್‌ಕುಮಾರ್ ಎಂಬವರು ದೂರು ನೀಡಿದ ಬೆನ್ನಲ್ಲೇ ಬಪ್ಪಳಿಗೆಯಲ್ಲಿರುವ ಶೈಲಜಾ ಅಮರನಾಥ್‌ರವರ ಮನೆಗೆ ಯುವಕರ ತಂಡವೊಂದು ದಾಳಿ ನಡೆಸಿ ಮನೆಯ ಗಾಜು ಪುಡಿಗೈದು ಮಡ್ ಆಯಿಲ್ ಎರಚಿ ಪರಾರಿಯಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಶೈಲಜಾ ಅಮರನಾಥ್‌ರವರು ತಮ್ಮ ಮನೆಗೆ ದಾಳಿ ನಡೆಸಿರುವುದಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಅಲ್ಲದೇ ಆಡಿಯೋ ಮತ್ತು ವಿಡಿಯೋ ಎಡಿಟ್ ಮಾಡಿ ನನ್ನ ಪೋನ್ ನಂಬ್ರ ಹಾಗೂ ಭಾವಚಿತ್ರವನ್ನು ಬಳಸಿ ತಪ್ಪು ಸಂದೇಶ ರವಾನೆ ಮಾಡಲಾಗಿದೆ ಎಂದು ಟಿವಿ ವಿಕ್ರಮ ಯು ಟ್ಯೂಬ್ ಚಾನೆಲ್ ಮತ್ತು ಅದರ ನಿರೂಪಕಿ ಎಂ.ಎಸ್.ಮುಮ್ತಾಸ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶೈಲಜಾರವರು ನೀಡಿದ ದೂರಿನ ಮೇರೆಗೆ ಟಿವಿ ವಿಕ್ರಮ ಯು ಟ್ಯೂಬ್ ಚಾನೆಲ್ ಹಾಗೂ ಅದರ ನಿರೂಪಕಿ ಮುಮ್ತಾಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಈ ಕೇಸಿಗೆ ಸಂಬಂಧಿಸಿ ನಿರೂಪಕಿ ಎಂ.ಎಸ್.ಮುಮ್ತಾಸ್ ಅವರು ನೀಡಿರುವ ಹೇಳಿಕೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ‘ಒಂದಲ್ಲ ಹತ್ತು ಕೇಸು ಹಾಕಿ, ನಾನು ಕುಗ್ಗಲ್ಲ, ನನ್ನ ಧ್ವನಿ ಕುಗ್ಗಲ್ಲ, ನಾನು ಸತ್ಯ ಮಾತನಾಡುವುದನ್ನು ನಿಲ್ಲಿಸಲ್ಲ, ನಾನು ದೇಶ, ಧರ್ಮ ಪ್ರೀತಿಸೋದು ನಿಲ್ಲಿಸಲ್ಲ. ಈ ಸನಾತನ ನೆಲದ ಗಟ್ಟಿ ಧ್ವನಿ ಮುಮ್ತಾಸ್, ಯಾರ ಮಾತಿಗೂ ತಲೆಕೆಡಿಸಿಕೊಂಡು ಸೈಲೆಂಟ್ ಆಗೋಕೆ ಸಾಧ್ಯವೇ ಇಲ್ಲದ ಮುಮ್ತಾಸ್, ಇದನ್ನು ಕೇಸು ಅಂತ ನಾನು ಪರಿಗಣಿಸಿಯೇ ಇಲ್ಲ, ಇದು ನನಗೆ ಸಿಕ್ಕಿರುವ ಮೊದಲ ಕಿರೀಟ, ದೇಶದ ಧರ್ಮದ ಪರವಾಗಿ ಮಾತನಾಡಿ ಜೈಲು ಸೇರುವುದೇ ಆದರೆ ದಿನವೂ ಜೈಲಿನಲ್ಲಿಯೇ ಇರುತ್ತೇನೆ ಎಂದು’ ಮುಮ್ತಾಸ್ ನೀಡಿರುವ ಹೇಳಿಕೆ ವೈರಲ್ ಆಗಿದೆ.

LEAVE A REPLY

Please enter your comment!
Please enter your name here