ಪರವಾನಿಗೆ ಹೊಟೇಲ್‌ಗೆ-ವ್ಯಾಪಾರ ಬಾರ್ ಆಂಡ್ ರೆಸ್ಟೋರೆಂಟ್

0

  • ಮುರದ ವಿವಾದಿತ ಬಾರ್&ರೆಸ್ಟೋರೆಂಟ್‌ಗೆ ನೊಟೀಸ್ ನೀಡಿ ಪರವಾನಿಗೆ ರದ್ದು
  • ಕಬಕ ಗ್ರಾ.ಪಂ ಸಾಮಾನ್ಯ ಸಭೆ

 

ಪುತ್ತೂರು:ಪಂಚಾಯತ್ ವ್ಯಾಪ್ತಿಯ ಮುರದಲ್ಲಿ ಪ್ರಾರಂಭಗೊಂಡಿರುವ ಬಾರ್&ರೆಸ್ಟೋರೆಂಟ್‌ನವರು ಪಂಚಾಯತ್‌ನಿಂದ ಹೊಟೇಲ್ ಉದ್ಯಮಕ್ಕೆ ಪರವಾನಿಗೆ ಪಡೆದು ಬಾರ್& ರೆಟ್ಟೋರೆಂಟ್ ನಡೆಸುತ್ತಿದ್ದು ವಿವಾದ ಉಂಟಾಗಿದೆ. ಪಂಚಾಯತ್‌ನ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಾರ್&ರೆಸ್ಟೋರೆಂಟ್ ನೋಟೀಸ್ ನೀಡಿ, ಬಳಿಕ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಕಬಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯು ಜೂ.21ರಂದು ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯ ಶಾಬಾ ಮಾತನಾಡಿ, ಮುರದಲ್ಲಿರೆಸ್ಟೋರೆಂಟ್ ಪ್ರಾರಂಭಗೊಂಡು ಉಂಟಾಗಿರುವ ವಿವಾದಕ್ಕೆ ಕಾರಣವೇನು? ಅವರು ಪಂಚಾಯತ್‌ನಿಂದ ಉದ್ಯಮ ಪರವಾನಿಗೆ, ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಪಡೆದು ವ್ಯಾಪಾರ ಪ್ರಾರಂಭಿಸಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ ಎಂದು ಶಾಬಾ ತಿಳಿಸಿದರು. ಪಂಚಾಯತ್‌ನಿಂದ ಹೊಟೇಲ್ ಉದ್ಯಮಕ್ಕೆ ಮಾತ್ರ ಪರವಾನಿಗೆ ನೀಡಲಾಗಿದೆ. ಬಾರ್, ವೈನ್‌ಶಾಪ್ ಅಥವಾ ಇನ್ನಿತರ ಯಾವುದೇ ಮಾದಕ ವಸ್ತುಗಳ ಮಾರಾಟಕ್ಕೆ ಅವಕಾಶವಿಲ್ಲ ಎಂದು ಪರವಾನಿಗೆಯಲ್ಲಿ ಷರತ್ತು ವಿಧಿಸಲಾಗಿದೆ ಎಂದು ಅಧ್ಯಕ್ಷ ವಿನಯ ಕುಮಾರ್ ಹಾಗೂ ಪಿಡಿಓ ಆಶಾ ಸ್ಪಷ್ಟಪಡಿಸಿ, ಪರವಾನಿಗೆಯ ಪ್ರತಿಯನ್ನು ಪ್ರದರ್ಶಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿಲಾಗಿದ್ದು ಬಾರ್ ಪ್ರಾರಂಭಗೊಂಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು ಪಂಚಾಯತ್‌ನಿಂದ ನೀಡಿದ ಉದ್ಯಮ ಪರವಾನಿಗೆಯನ್ನು ರದ್ದು ಪಡಿಸುಲು ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದ್ದು ಪಂಚಾಯತ್ ರಾಜ್ ಕಾಯಿದೆಗೆ ವಿರುದ್ಧವಾಗಿ ವ್ಯವಹರಿಸುತ್ತಿರುವ ಬಾರ್& ರೆಸ್ಟೋರೆಂಟ್ ಮಾಲಕರಿಗೆ ನೊಟೀಸ್ ನೀಡಿ ವ್ಯಾಪಾರ ಪರವಾನಿಗೆಯನ್ನು ರದ್ದು ಪಡಿಸುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ.

ಅಬಕಾರಿ ಇಲಾಖೆ ನಡೆಯ ವಿರುದ್ಧ ಸದಸ್ಯರ ಆಕ್ರೋಷ:
ವಿದ್ಯುತ್ ಸಂಪರ್ಕ, ಕನ್ವರ್ಷನ್ ಸೇರಿದಂತೆ ಪ್ರತಿಯೊಂದಕ್ಕೂ ಪಂಚಾಯತ್‌ನ ನಿರಾಕ್ಷೇಪನಾ ಪತ್ರ ಕಡ್ಡಾಯವಾಗಿದೆ. ಆದರೆ ಬಾರ್ ತೆರೆಯುವಾಗ ಅಬಕಾರಿ ಇಲಾಖೆಗೆ ಪಂಚಾಯತ್‌ನ ನಿರಾಕ್ಷೇಪಪನಾ ಪತ್ರ ಕೇಳಿಲ್ಲ. ಅಲ್ಲದೆ ಇಲಾಖೆಯವರು ಸ್ಥಳ ಮಹಜರು ಮಾಡುವ ಸಂದರ್ಭದಲ್ಲೂ ಪಂಚಾಯತ್‌ನ ಗಮನಕ್ಕೆ ತಂದಿಲ್ಲ. ಈಗ ಜನ ವಸತಿ ಪ್ರದೇಶದಲ್ಲಿ ಬಾರ್ ಪ್ರಾರಂಭಿಸಿ, ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಸದಸ್ಯ ಶಾಬಾ ಆರೋಪಿಸಿದರು. ಬಾರ್ ನಡೆಸಲು ಪಂಚಾಯತ್‌ನಿಂದ ಅವಕಾಶವಿಲ್ಲ ಎಂದು ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ ಎಂದು ಇಲಾಖೆಗೆ ತಿಳಿಸಲಾಗಿದ್ದರೂ ನಮಗೆ ಪಂಚಾಯತ್‌ನ ಆವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಬಾರ್‌ನ ಸಮೀಪದಲ್ಲಿಯೇ ಕಾಲೇಜಿನ ಪಿಜಿಯೊಂದಿದೆ. ಅಷ್ಟೇ ಅಲ್ಲದೆ ಸದರಿ ಜಾಗವು ಜನ ವಸತಿ ಪ್ರದೇಶವಾಗಿದೆ. ದರ ಸಮೀಪ ಪಂಪ್ ಹೌಸ್ ಇರುವುದು ಮಾತ್ರವಲ್ಲದೆ ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ನೂರಾರು ಓಡಾಡುವ ರಸ್ತೆ ಬದಿ ಮಾತ್ರವಲ್ಲದೆ ಅಪಾಯಕಾರಿ ತಿರುವಾಗಿದ್ದರೂ ಅಬಕಾರಿ ಇಲಾಖೆಯವರು ಲೈಸನ್ಸ್ ನೀಡಿದ್ದು ಮುಂದಿನ ದಿನಗಳಲ್ಲಿ ಅನಾಹುತಗಳು ಉಂಟಾಗುವ ಸಂಭವವಿದೆ. ಈ ಕುರಿತು ಶಾಸಕರು, ಸಂಸದರಿಗೆ ಮನವಿ ಮಾಡಲಾಗುವುದು. ಅಲ್ಲದೆ ಲೈಸನ್ಸ್ ನೀಡಿರುವ ಬಗ್ಗೆ ಅಬಕಾರಿ ಡಿಸಿಯವರಿಗೆ ವರದಿ ಕೇಳಲಾಗುವುದು ಎಂದು ಅಧ್ಯಕ್ಷ ವಿನಯ ಕುಮಾರ್ ತಿಳಿಸಿದರು. ಅಧಿಕಾರಿಗಳ ವಸತಿ ಗೃಹವಿರುವಲ್ಲಿ ಬಾರ್‌ಗೆ ಅನುಮತಿ ನೀಡಬಾರದು ಎಂಬ ನಿಯಮವಿದ್ದು ಬಾರ್ ಸಮೀಪ ಪಂಚಾಯತ್‌ನ ನಿವೇಶನದಲ್ಲಿ ಅಧಿಕಾರಿಗಳ ವಸತಿ ಗೃಹ ನಿರ್ಮಾಣಗೊಳ್ಳಲಿದೆ ಎಂದು ಪಿಡಿಓ ತಿಳಿಸಿದರು.

ಸದಸ್ಯರ ಗಮನಕ್ಕೆ ತಾರದೆ ಕಾಮಗಾರಿ-ಅಧ್ಯಕ್ಷರು, ಸದಸ್ಯರೊಳಗೆ ಮಾತಿನ ಚಕಮಕಿ:
ಪಂಚಾಯತ್‌ನ ೧ನೇ ವಾರ್ಡ್‌ನಲ್ಲಿ ವಾರ್ಡ್‌ನ ಸದಸ್ಯರ ಗಮನಕ್ಕೆ ತಾರದೆ ಕಾಮಗಾರಿ ನಡೆಸಲಾಗಿದೆ. ಚರಂಡಿಗೆ ಇಟ್ಟು ಅನುದಾನವನ್ನು ರಸ್ತೆಗೆ ಬಳಕೆ ಮಾಡಲಾಗಿದೆ. ನಿಮಗೆ ಮನ ಬಂದಂತೆ ಮಾಡುವುದಾದರೆ ನಾವು ಅಲ್ಲಿ ಯಾಕಿರುವುದು. ನಮ್ಮ ವಾರ್ಡ್‌ನಲ್ಲಿ ಕಾಮಗಾರಿ ನಡೆಸುವಾಗ ನಮ್ಮ ಗಮನಕ್ಕೆ ತರಬೇಕು. ಇಲ್ಲದಿದ್ದರೆ ನಾವು ಬಿಡುವುದಿಲ್ಲ ಎಂದು ಸದಸ್ಯ ಉಮ್ಮರ್ ಫಾರೂಕ್ ತಿಳಿಸಿದರು. ಒಂದನೇ ವಾರ್ಡ್‌ನ ಇನ್ನೊಂದು ಕಡೆಯಲ್ಲಿ ರಸ್ತೆ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ ಅಲ್ಲಿ ಶಾಲಾ ಬಸ್ ಒಂದಕ್ಕೆ ಅಪಘಾತ ಉಂಟಾಗಿತ್ತು. ಇದರಿಂದಾಗಿ ಗ್ರಾಮಸ್ಥರ ಒತ್ತಡದಂತೆ ತುರ್ತಾಗಿ ಕಾಮಗಾರಿ ನಡೆಸಲಾಗಿದೆ. ಅಲ್ಲದೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ನಿಮಗೆ ಕರೆ ಮಾಡಲಾಗಿದ್ದು ನೀವು ಬೆಳ್ತಂಗಡಿಯಲ್ಲಿರುವುದಾಗಿ ತಿಳಿಸಿದ್ದೀರಿ ಎಂದು ಅಧ್ಯಕ್ಷರು ಹಾಗೂ ಪಿಡಿಓ ಸ್ಪಷ್ಟಪಡಿಸಿದರು. ಇದೇ ವಿಚಾರದಲ್ಲಿ ಅಧ್ಯಕ್ಷರು, ಸದಸ್ಯರೊಳಗೆ ಮಾತಿನ ಚಕಮಕಿ ನಡೆಯಿತು. ರಸ್ತೆಯಲ್ಲಿ ತೀರಾ ತೊಂದರೆಯಿರುವ ಬಗ್ಗೆ ಗ್ರಾಮಸ್ಥರ ಮನವಿಯಂತೆ ಅಧ್ಯಕ್ಷನಾಗಿ ಜವಾಬ್ದಾರಿಯಿಂದ ಅಲ್ಲಿ ತುರ್ತಾಗಿ ಕಾಮಗಾರಿ ನಡೆಸಲಾಗಿದೆ. ಅಲ್ಲದೆ ಅದೇ ವಾರ್ಡ್ ಸದಸ್ಯರ ಬೇಡಿಕೆಯಂತೆ ಕಾಮಗಾರಿ ನಡೆಸಲಾಗಿದೆ ಎಂದು ಅಧ್ಯಕ್ಷ ವಿನಯ ಕುಮಾರ್ ತಿಳಿಸಿದರು. ಸದಸ್ಯ ಶಾಬಾ ಮಾತನಾಡಿ, ಅಲ್ಲಿ ತುರ್ತಾಗಿ ಕಾಮಗಾರಿ ನಡೆಸಲಾಗಿದೆ. ಚರಂಡಿ ಕಾಮಗಾರಿಯನ್ನು ಬೇರೆ ಅನುದಾನದಲ್ಲಿ ನಡೆಸುವುದು ಉತ್ತಮ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ನೀರು ನಿರ್ವಾಹಕರ ವೇತನದಲ್ಲಿ ತಾರತಮ್ಯವೇಕೆ?
ಪಂಚಾಯತ್‌ನಲ್ಲಿ 24 ಸಂಪರ್ಕವಿರುವ ನೀರು ನಿರ್ವಾಹಕರಿಗೆ ರೂ.950 ಹಾಗೂ 150 ಸಂಪರ್ಕವಿರುವ ನೀರು ನಿರ್ವಾಹಕರಿಗೆ ಕೇವಲ ರೂ.150 ಏರಿಕೆ ಮಾಡಲಾಗಿದೆ. ಇದು ಯಾವ ಮಾನದಂಡದಲ್ಲಿ ಮಾಡಲಾಗಿದೆ. ಈ ರೀತಿ ತಾರತಮ್ಯ ಮಾಡುವುದು ಸರಿಯೇ ಎಂದು ಸದಸ್ಯ ಉಮ್ಮರ್ ಫಾರೂಕ್ ಪ್ರಶ್ನಿಸಿದರು. ವೇತನ ನೀಡುವಲ್ಲಿ ನಾವು ತಾರತಮ್ಯ ಮಾಡಿಲ್ಲ. ನೀರಿನ ಸಂಪರ್ಕದ ಆಧಾರದಲ್ಲಿ ಕ್ರಮ ಬದ್ಧವಾಗಿ ಏರಿಕೆ ಮಾಡಲಾಗಿದೆ ಎಂದು ಅಧ್ಯಕ್ಷ ವಿನಯ ಕುಮಾರ್ ತಿಳಿಸಿದರು. ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ವೇತನ ಏರಿಕೆ ಮಾಡಲಾಗಿದೆ ಎಂದು ಪಿಡಿಓ ಆಶಾ ತಿಳಿಸಿದರು. ರೂ.೫೦೦ರಂತೆ ಎಲ್ಲಾ ನಿರ್ವಾಹಕರಿಗೇ ಏರಿಕೆ ಮಾಡುವುದಲ್ಲದೆ ನೀರಿನ ಸಂಪರ್ಕದ ಆಧಾರದಲ್ಲಿ ಏರಿಕೆ ಮಾಡುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸದಸ್ಯ ಉಮ್ಮರ್ ಫಾರೂಕ್ ತಿಳಿಸಿದರು. ಇದೇ ವಿಚಾರದಲ್ಲಿ ಸಭೆಯಲ್ಲಿ ಸದಸ್ಯರು ಹಾಗೂ ಅಧ್ಯಕ್ಷರ ಮಧ್ಯೆ ಚರ್ಚೆ ನಡೆಯಿತು.

ಮೆಸ್ಕಾಂ ಬಿಲ್ ಸರಕಾರ ಮನ್ನಾ ಮಾಡಲಿ:
ಬೀದಿ ದೀಪ ಹಾಗೂ ಕುಡಿಯುವ ನೀರಿನ ಘಟಕಗಳ ವಿದ್ಯುತ್ ಬಿಲ್‌ಗಳಿಗೆ ಸಂಬಂಧಿಸಿ ಕಬಕ ಪಂಚಾಯತ್‌ನಿಂದ ರೂ.೬೭.೬೬ಲಕ್ಷ ಮೊತ್ತ ಮೆಸ್ಕಾಂಗೆ ಪಾವತಿಸಲು ಬಾಕಿಯಿರುವುದಾಗಿ ಪಿಡಿಓ ಆಶಾ ಸಭೆಯ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಸದಸ್ಯ ಶಾಬಾರವರು ಜನರಿಗೆ ಕುಡಿಯುವ ನೀರು ಪೂರೈಸಲು ವಿದ್ಯುತ್ ಖರ್ಚಾಗಿದೆ. ಹೀಗಾಗಿ ಇದುವರೆಗೆ ಮೆಸ್ಕಾಂ ಪಾವತಿಸಲು ಬಾಕಿಯಿರುವ ಮೊತ್ತವನ್ನು ಸರಕಾರ ಮನ್ನಾ ಮಾಡಲಿ. ಮುಂದೆ ಈ ರೀತಿ ಪಾವತಿಸಲು ಬಾಕಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಬಕಕ್ಕೂ ಬರಳಿ ಸಂಚಾರಿ ಪಶು ಘಟಕ:
ಕಬಕ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ರೈತರಿದ್ದಾರೆ. ಹಾಲು ಉತ್ಪಾದಕರ ಸಹಕಾರಿ ಸಂಘವಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶಸಂಗೋಪನಾ ಇಲಾಖೆಯ ಸಂಚಾರಿ ಪಶು ಘಟಕವು ಕಬಕ ಗ್ರಾಮಕ್ಕೂ ಬರಬೇಕು ಎಂದು ಸದಸ್ಯ ಶಾಬಾ ಆಗ್ರಹಿಸಿದರು.

ನರೇಗಾದಲ್ಲಿ ಸಾಮಾಗ್ರಿ ಬಿಲ್ ಬಾಕಿ-ಶಾಸಕರು, ಸಂಸದರಿಗೆ ಮನವಿ:
ನರೇಗಾ ಯೋಜನೆಯಲ್ಲಿ ನಡೆಯುವ ಸಾರ್ವಜನಿಕ ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ ಸಾಮಾಗ್ರಿಗಳ ಬಿಲ್ ಪಾವತಿಯಾಗುತ್ತಿಲ್ಲ. ಇದರಿಂದಾಗಿ ಗುತ್ತಿಗೆದಾರರು ಕಾಮಗಾರಿ ನಡೆಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಬಾಕಿಯಿರುವ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಾಸಕರು ಹಾಗೂ ಸಂಸದರಿಗೆ ಮನವಿ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉಪಾಧ್ಯಕ್ಷ ರುಕ್ಮಯ್ಯ ಗೌಡ, ಸದಸ್ಯರಾದ ನಝೀರ್, ರಾಜೇಶ್, ಶಂಕರಿ ಜಿ.ಭಟ್, ಪ್ರೀತಾ ಬಿ., ಸುಶೀಲ ಹಾಗೂ ಪುಷ್ಪಾ ಉಪಸ್ಥಿತರಿದ್ದರು. ಪಿಡಿಓ ಆಶಾ ಸ್ವಾಗತಿಸಿ, ಕಾರ್ಯದರ್ಶಿ ಸುರೇಶ್ ವಂದಿಸಿದರು.

LEAVE A REPLY

Please enter your comment!
Please enter your name here