ಖಾಸಗಿಕರಣದ ವಿರುದ್ಧ, ಹಳೆ ಪಿಂಚಣಿ ಪುನರ್ ಜಾರಿಗೊಳಿಸುವಂತೆ ಆಗ್ರಹಿಸಿ ಅಂಚೆ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

0

ಪುತ್ತೂರು: ಅಂಚೆ ಇಲಾಖೆ ಖಾಸಗೀಕರಣದ ಧೋರಣೆ ಕೈಬಿಡಬೇಕು. ಇಲಾಖೆಯಲ್ಲಿ ಖಾಲಿ ಹುದ್ದೆ ಕೂಡಲೇ ಭರ್ತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರಕಾರ ಅಂಚೆ ವ್ಯವಸ್ಥೆಯಲ್ಲಿ ಅನುಸರಿಸುತ್ತಿರುವ ನೀತಿ ಖಂಡಿಸಿ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಪುತ್ತೂರು ವಿಭಾಗ, ಅಖಿಲ ಭಾರತ ಅಂಚೆ ಸಂಘಟನಾ ಸಮಿತಿ, ರಾಷ್ಟ್ರೀಯ ಅಂಚೆ ನೌಕರರ ಸಂಘದಿಂದ ಜೂ. 22ರಂದು ಪುತ್ತೂರು ಪ್ರಧಾನ ಅಂಚೆ ಕಚೇರಿಯ ಮುಂದೆ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಮದ್ಯಾಹ್ನದ ಊಟದ ಸಮಯದಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.


ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಪುತ್ತೂರು ವಿಭಾಗದ ಅಧ್ಯಕ್ಷ ತೀರ್ಥಪ್ರಸಾದ್ ಅವರು ಮಾತನಾಡಿ ಖಾಸಗಿಕರಣದಿಂದ ನೌಕರರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ತೊಂದರೆ ಆಗಲಿದೆ. ಸಾರ್ವಜನಿಕರಿಗೆ ಈಗ ಸಿಗುವ ಸೇವೆ ಸೌಲಭ್ಯ ಮುಂದಿನ ದಿನ ನಿರೀಕ್ಷಿಸುವುದು ಅಸಾಧ್ಯವಾಗಲಿದೆ. ಆದ್ದರಿಂದ ಈ ಸಂದರ್ಭದಲ್ಲಿ ನೌಕರರ ಮುಷ್ಕರ ಅದಲ್ಲಿ ಸಾರ್ವಜನಿಕರ ಬೆಂಬಲವೂ ಬೇಕಾಗಿದೆ. ಸರಕಾರದ ಒಟ್ಟು ಖಾಸಗಿಕರಣದ ಚಿಂತನೆಯನ್ನು ಕೈ ಬಿಡಬೇಕು ಮತ್ತು ಈಗಿರುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಆಡಳಿತ ವರ್ಗಕ್ಕೆ ಇರುವ ಹಾಗೆ ವಾರದಲ್ಲಿ 5 ದಿನ ಕೆಲಸವನ್ನು ನೌಕರರ ವರ್ಗಕ್ಕೂ ವಿಸ್ತರಿಸಿ, ಆಡಳಿತ ವರ್ಗ ಮತ್ತು ನೌಕರರ ವರ್ಗಕ್ಕೆ ಇರುವ ತಾರತಮ್ಯ ನಿವಾರಿಸಬೇಕು. ಹಳೆ ಪಿಂಚಣಿ ಯೋಜನೆಯೇ ಪುನರ್ ಜಾರಿಗೊಳಿಸಬೇಕು ಎಂದು ಹೇಳಿದರು. ಅಖಿಲ ಭಾರತ ಅಂಚೆ ಸಂಘಟನಾ ಸಮಿತಿ ಕಾರ್ಯದರ್ಶಿ ಸುದೀಪ್ ಮಾತನಾಡಿದರು. ರಾಷ್ಟ್ರೀಯ ಅಂಚೆ ನೌಕರರ ಸಂಘದ ಚಿದಾನಂದ ಪೂಜಾರಿ ಸೇರಿದಂತೆ ಅಂಚೆ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here