ಪುತ್ತೂರು: ಹಾವೇರಿಯಲ್ಲಿ ಜರಗಿದ 3ನೇ ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್-2022 ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತೃಪ್ತಿ ಎನ್.ರವರು ಚಾಂಪಿಯನ್ ಎನಿಸಿಕೊಂಡಿದ್ದು, ರಾಷ್ಟ್ರಮಟ್ಟದಲ್ಲಿ ಜರಗುವ `ಚಾಂಪಿಯನ್ ಆಫ್ ಚಾಂಪಿಯನ್’ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಈ ಯೋಗಾಸನ ಸ್ಪರ್ಧೆಯು ಆನ್ಲೈನ್ ಮೂಲಕ ಜರಗಿದ್ದು, ಝೂಮ್ ಆಪ್ ಮುಖೇನ ನೇರಪ್ರಸಾರ ಹೊಂದಲಾಗಿತ್ತು. ವಯೋಮಿತಿ 15-20 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿನ ಕೇವಲ ಹತ್ತು ಮಂದಿ ಸ್ಪರ್ಧಿಗಳಲ್ಲಿ ತೃಪ್ತಿ ಎನ್ರವರು ಪ್ರಥಮ ಸ್ಥಾನದೊಂದಿಗೆ ಸಾಧನೆ ಮಾಡಿರುತ್ತಾರೆ. ಎಂಟನೇ ವರ್ಷದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾಡಾವು ನಿವಾಸಿ ಐತ್ತಪ್ಪ ನಾಯ್ಕ್ ಹಾಗೂ ಪದ್ಮಲ ಕುಮಾರಿ ದಂಪತಿ ಪುತ್ರಿಯಾಗಿರುವ ತೃಪ್ತಿ ಎನ್ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಾಂದೀಪನಿ ಶಾಲೆಯಲ್ಲಿ ಪೂರೈಸಿರುತ್ತಾರೆ. ತೃಪ್ತಿ ಎನ್.ರವರು ಬೆಂಗಳೂರು ಕುಂಡಲಿನಿ ಯೋಗ ಶಾಲೆಯವರು ಹಮ್ಮಿಕೊಂಡ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ, ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ರವರು ಆಯೋಜಿಸಿದ ಸ್ಪರ್ಧೆಯಲ್ಲಿ ಪ್ರಥಮ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ತೃಪ್ತಿರವರು ಭಾಗವಹಿಸಿ ಅನೇಕ ಪದಕಗಳನ್ನು ಪಡೆದಿರುತ್ತಾರೆ. ಇವರಿಗೆ ನವೀನ್ ಕುಮಾರ್ರವರು ತರಬೇತುದಾರರಾಗಿ ತರಬೇತಿ ನೀಡಿರುತ್ತಾರೆ.