ಮುಖ್ಯರಸ್ತೆ ಬಿಟ್ಟು ಒಳರಸ್ತೆ ಬದಿಗೆ ಕಸ,ತ್ಯಾಜ್ಯ ಹಾಕುತ್ತಿರುವ ಕಿಡಿಗೇಡಿಗಳು-ಕಸ ಹಾಕುವವರು ಪತ್ತೆಗೆ ಕಣ್ಗಾವಲು-ಸಿಕ್ಕಿಬಿದ್ದರೆ ರೂ.5ಸಾವಿರ ದಂಡ

0

  • ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆ

ಪುತ್ತೂರು: ಮುಖ್ಯರಸ್ತೆಗಳ ಬದಿಯಲ್ಲಿ ಕಸ, ತ್ಯಾಜ್ಯ ಹಾಕುವುದನ್ನು ನಿಲ್ಲಿಸಿದ ಕಿಡಿಗೇಡಿಗಳು ಇದೀಗ ಗ್ರಾಮದ ಒಳರಸ್ತೆಗಳ ಬದಿಯಲ್ಲಿ ಹಾಕುತ್ತಿದ್ದಾರೆ. ಕಸ ಹಾಕುವವರನ್ನು ಪತ್ತೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿದೆ. ಕಸ,ತ್ಯಾಜ್ಯ ಹಾಕುವವರು ಕಂಡು ಬಂದರೆ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ರೂ.5 ಸಾವಿರದವರೇಗೆ ದಂಡ ವಿಧಿಸುವುದು ಎಂದು ಕೆಯ್ಯೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.


ಸಭೆಯು ಗ್ರಾಪಂ ಅಧ್ಯಕ್ಷ ಜಯಂತಿ ಎಸ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಜೂ.21 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಜಯಂತ ಪೂಜಾರಿ ಕೆಂಗುಡೇಲುರವರು ವಿಷಯ ಪ್ರಸ್ತಾಪಿಸಿ, ರಾಜ್ಯ ರಸ್ತೆಗಳ ಬದಿಯಲ್ಲಿ ಕಸ, ತ್ಯಾಜ್ಯ ಹಾಕುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು ಇದೀಗ ಗ್ರಾಮದ ಒಳ ರಸ್ತೆಗಳ ಬದಿಯಲ್ಲಿ ಕಸ,ತ್ಯಾಜ್ಯ ಹಾಕುತ್ತಿದ್ದಾರೆ. ಇದಕ್ಕೆ ಏನು ಕ್ರಮ ಕೈಗೊಳ್ಳುವುದು ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಟ್ಯಪ್ಪ ರೈಯವರು, ಗ್ರಾಮದ ನಿರ್ಜನ ಪ್ರದೇಶಗಳಲ್ಲಿ ಕಸ ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕುತ್ತಿದ್ದಾರೆ ಎಂದರು. ಕೆಯ್ಯೂರು ಜನತಾ ಕಾಲನಿಯ ರಸ್ತೆ ಬದಿಯಲ್ಲಿ ಹಾಸಿಗೆಯನ್ನು ತಂದು ಹಾಕಲಾಗಿದೆ. ಇದು ನೀರು ತುಂಬಿಕೊಂಡು ಊದಿದೆ ಇದನ್ನು ತೆಗೆಯಬೇಕಾದರೆ ಜೆಸಿಬಿಯೇ ಬರಬೇಕಾಗಿದೆ ಎಂದು ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಂದ್ರ ರೈ ಇಳಂತಾಜೆ ತಿಳಿಸಿದರು. ಗ್ರಾಮದ ಒಳ ರಸ್ತೆಗಳ ಬದಿಯಲ್ಲಿ ಕಸ,ತ್ಯಾಜ್ಯ ಹಾಕುವವರನ್ನು ಯಾವ ರೀತಿಯಲ್ಲಿ ಪತ್ತೆ ಮಾಡುವುದು ಎಂಬ ಬಗ್ಗೆ ಚರ್ಚೆ ನಡೆಯಿತು.

ಗ್ರಾಮಸ್ಥರ ಸಹಕಾರ ಅಗತ್ಯ
ಗ್ರಾಮಾಂತರ ಪ್ರದೇಶಗಳಲ್ಲಿ ಕಸ,ತ್ಯಾಜ್ಯ ಹಾಕುವವರು ಕಂಡುಬಂದರೆ ಗ್ರಾಮಸ್ಥರು ಕೂಡಲೇ ಪಂಚಾಯತ್‌ಗೆ ತಿಳಿಸುವ ಕೆಲಸವನ್ನು ಮಾಡಬೇಕು, ಕಸ,ತ್ಯಾಜ್ಯ ಹಾಕುವವರ ಬಗ್ಗೆ ಸುಳಿವು ನೀಡಿದವರ ಹೆಸರನ್ನು ಗೌಪ್ತವಾಗಿಡಲಾಗುವುದು ಎಂದು ಪಿಡಿಓ ತಿಳಿಸಿದರು. ಕಸ,ತ್ಯಾಜ್ಯ ಹಾಕುವವರು ಕಂಡು ಬಂದರೆ ಅಂಥವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಹಾಗೂ ರೂ.೫ ಸಾವಿರದವರೇಗೆ ದಂಡ ವಿಧಿಸಬೇಕು ಎಂದು ಎಲ್ಲಾ ಸದಸ್ಯರುಗಳು ಒತ್ತಾಯಿಸಿದರು ಅದರಂತೆ ನಿರ್ಣಯಿಸಲಾಯಿತು.

ಅಂಬೇಡ್ಕರ್ ಭವನದ ಸಮಿತಿ ಬದಲಾಯಿಸಿ
ಕೆಯ್ಯೂರು ಅಂಬೇಡ್ಕರ್ ಭವನವನ್ನು ಪಂಚಾಯತ್ ವತಿಯಿಂದ ದುರಸ್ತಿ ಕೆಲಸ ಮಾಡಿಸಬೇಕು ಆದರೆ ಇದು ಇನ್ನೂ ಕೂಡ ಪಂಚಾಯತ್‌ಗೆ ಹಸ್ತಾಂತರ ಆಗಿಲ್ಲ, ಹೀಗಿದ್ದ ಮೇಲೆ ಪಂಚಾಯತ್ ವತಿಯಿಂದ ದುರಸ್ತಿ ಯಾಕೆ ಮಾಡಿಸಬೇಕು ಮತ್ತು ದುರಸ್ತಿಗೆ ಅನುದಾನ ಯಾಕೆ ಇಡಬೇಕು, ಸಮಾಜ ಕಲ್ಯಾಣ ಇಲಾಖೆಯವರೇ ನೋಡಿಕೊಳ್ಳಲಿ ಎಂದು ಅಬ್ದುಲ್ ಖಾದರ್ ಮೇರ್ಲ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಜಯಂತ ಪೂಜಾರಿ ಕೆಂಗುಡೇಲುರವರು ಅಂಬೇಡ್ಕರ್ ಭವನದ ಸಮಿತಿಯನ್ನು ಬದಲಾಯಿಸಬೇಕು, ಪ್ರಸ್ತುತ ಪಂಚಾಯತ್ ಸದಸ್ಯರಾಗಿರುವವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕು ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ಕೊಟ್ಟು ಮಾತುಕತೆ ನಡೆಸುವ ಎಂದು ತಿಳಿಸಿದರು. ಇದಕ್ಕೆ ಬಟ್ಯಪ್ಪ ರೈ ಧ್ವನಿಗೂಡಿಸಿದರು. ಅಂಬೇಡ್ಕರ್ ಭವನ ಸಮಿತಿಯ ಪ್ರಸ್ತುತ ಅಧ್ಯಕ್ಷರಾಗಿರುವ ಗ್ರಾಪಂ ಮಾಜಿ ಸದಸ್ಯ ಕಿಟ್ಟ ಅಜಿಲ ಕಣಿಯಾರುರವರನ್ನು ಕರೆದು ಸಭೆ ಮಾಡಿ ಪ್ರಸ್ತುತ ಸದಸ್ಯರಾಗಿರುವವರನ್ನು ಸೇರಿಸಿ ನೂತನ ಸಮಿತಿ ರಚಿಸುವ ಎಂದು ಶರತ್ ಕುಮಾರ್ ಮಾಡಾವು, ತಾರಾನಾಥ ಕಂಪ, ವಿಜಯ ಕುಮಾರ್ ತಿಳಿಸಿದರು. ಸಮಿತಿ ರಚನೆಯ ಬಗ್ಗೆ ಮಾತುಕತೆ ನಡೆಸಲು ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡುವುದು ಎಂದು ನಿರ್ಣಯಿಸಲಾಯಿತು.

9/11 ಪಂಚಾಯತ್‌ನಲ್ಲೇ ಸಿಗಲಿ
ಈ ಹಿಂದೆ ಪಂಚಾಯತ್‌ನಲ್ಲಿ ಆಗುತ್ತಿದ್ದ 9/11 ದಾಖಲೆಯನ್ನು ಪಂಚಾಯತ್‌ನಿಂದ ರದ್ದು ಮಾಡಿ ನಗರ ಪ್ರಾಧಿಕಾರಕ್ಕೆ ನೀಡಿದ್ದು ಇದರಿಂದ ಬಡ ಜನರಿಗೆ ಬಹಳ ಕಷ್ಟವಾಗುತ್ತಿದೆ. ಮಂಗಳೂರಿಗೆ ಅಲೆಯಬೇಕಾಗುತ್ತದೆ ಮತ್ತು ದುಂದುವೆಚ್ಚ ಆಗುತ್ತಿದೆ ಆದ್ದರಿಂದ ಈ ಹಿಂದಿನಂತೆ ಪಂಚಾಯತ್‌ನಲ್ಲೇ ೯/೧೧ ದಾಖಲೆ ಸಿಗುವಂತೆ ಮಾಡಬೇಕು ಎಂದು ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ಎಲ್‌ಇಡಿ ಬಲ್ಬ್‌ಗೆ ಗ್ಯಾರಂಟಿ ಇಲ್ಲವೇ?
ಬೀದಿ ದೀಪಗಳಿಗೆ ಅಳವಡಿಸುವ ಎಲ್‌ಇಡಿ ಬಲ್ಬ್‌ಗೆ ಗ್ಯಾರಂಟಿ ಇಲ್ಲವೇ? ಎಂದು ಪ್ರಶ್ನಿಸಿದ ಜಯಂತ ಪೂಜಾರಿ ಕೆಂಗುಡೇಲುರವರು, ಸಾಮಾನ್ಯವಾಗಿ ಬಲ್ಬ್‌ಗೆ ಒಂದು ವರ್ಷದ ಗ್ಯಾರಂಟಿ ಇರುತ್ತದೆ ಈ ನಡುವೆ ಬಲ್ಬ್ ಹಾಳಾದರೆ ಹೊಸ ಬಲ್ಬ್ ತಂದು ಹಾಕುವುದು ಕಂಟ್ರಾಕ್ಟ್‌ದಾರರ ಕರ್ತವ್ಯವಾಗಿದೆ ಮತ್ತು ಹೀಗೆ ಬದಲಾಯಿಸಿದ ಬಲ್ಬ್‌ಗೆ ದರ ನಿಗದಿ ಪಡಿಸುವುದು ಸರಿಯಲ್ಲ ಈ ಬಗ್ಗೆ ಕಂಟ್ರಾಕ್ಟ್‌ದಾರರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ನೀರಿನ ಬಿಲ್ ಪಾವತಿಸದವರ ನೀರಿನ ಸಂಪರ್ಕವನ್ನು ಕೂಡಲೇ ಕಡಿತಗೊಳಿಸುವುದು ಎಂದು ನಿರ್ಣಯಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜ ಕಣಿಯಾರು, ಸದಸ್ಯರುಗಳಾದ ತಾರಾನಾಥ ಕಂಪ, ವಿಜಯ ಕುಮಾರ್, ಶರತ್ ಕುಮಾರ್ ಮಾಡಾವು, ಅಬ್ದುಲ್ ಖಾದರ್ ಮೇರ್ಲ, ಬಟ್ಯಪ್ಪ ರೈ, ಜಯಂತ ಪೂಜಾರಿ ಕೆಂಗುಡೇಲು, ಶೇಷಪ್ಪ ಡಿ, ಸುಭಾಷಿಣಿ, ಮೀನಾಕ್ಷಿ ವಿ.ರೈ, ಅಮಿತಾ ಎಚ್.ರೈ, ನೆಬಿಸ, ಮಮತಾ ರೈ, ಸುಮಿತ್ರ ಪಲ್ಲತ್ತಡ್ಕ ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಭಾರ ಅಭಿವೃದ್ಧಿ ಅಧಿಕಾರಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ ಸರಕಾರದ ಸುತ್ತೋಲೆ ಮತ್ತು ಸಾರ್ವಜನಿಕ ಅರ್ಜಿಗಳನ್ನು ಓದಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಮಾಲತಿ, ಜ್ಯೋತಿ, ಧರ್ಮಣ್ಣ, ರಫೀಕ್ ತಿಂಗಳಾಡಿ ಸಹಕರಿಸಿದ್ದರು.

` ಗ್ರಾಮದ ಒಳಭಾಗದ ರಸ್ತೆ ಬದಿಯಲ್ಲಿ ಕಸ,ತ್ಯಾಜ್ಯ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಯಾರೂ ಕೂಡ ಇಂತಹ ಕೆಲಸವನ್ನು ಮಾಡಬಾರದು. ಕಸ,ತ್ಯಾಜ್ಯ ಹಾಕುವುದು ಕಂಡುಬಂದರೆ ರೂ.5 ಸಾವಿರದ ತನಕ ದಂಡ ವಿಧಿಸಲಾಗುವುದು. ಗ್ರಾಮಸ್ಥರು ಪಂಚಾಯತ್‌ನೊಂದಿಗೆ ಸಹಕರಿಸಬೇಕಾಗಿ ವಿನಂತಿ.ಜಯಂತಿ ಎಸ್.ಭಂಡಾರಿ, ಅಧ್ಯಕ್ಷರು ಗ್ರಾಪಂ

ಪ್ರತಿ ಸಾಮಾನ್ಯ ಸಭೆಯಲ್ಲೂ ಸದಸ್ಯರ ವತಿಯಿಂದ ಭೋಜನ ವ್ಯವಸ್ಥೆ

ರಾಜಕೀಯ ರಹಿತ ಆಡಳಿತದಿಂದಾಗಿ ಕೆಯ್ಯೂರು ಗ್ರಾಪಂ ಈ ಹಿಂದೆಯೂ ತಾಲೂಕಿನಲ್ಲೇ ಸುದ್ದಿ ಮಾಡಿತ್ತು. ಪಕ್ಷಬೇಧ ಬಿಟ್ಟು ಎಲ್ಲಾ ಸದಸ್ಯರುಗಳು ಗ್ರಾಮದ ಅಭಿವೃದ್ಧಿ ಬಗ್ಗೆಯ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರಸ್ತುತ ಆಡಳಿತ ವ್ಯವಸ್ಥೆಯಲ್ಲೂ ಇದೇ ರೀತಿಯ ಹೊಂದಾಣಿಕೆಯ ಆಡಳಿತ ಮುಂದುವರಿಯುತ್ತಿದ್ದು ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಗ್ರಾಪಂನ ಪ್ರತಿ ಸಾಮಾನ್ಯ ಸಭೆಯಲ್ಲೂ ಭೋಜನದ ವ್ಯವಸ್ಥೆ ಇರುತ್ತದೆ. ಪ್ರತಿ ತಿಂಗಳು ಓರ್ವ ಸದಸ್ಯ ಈ ಭೋಜನದ ವ್ಯವಸ್ಥೆಯನ್ನು ಮಾಡುತ್ತಾರೆ. ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ಜೊತೆಗೆ ಪಾಯಸ, ಸಿಹಿತಿಂಡಿಯ ವ್ಯವಸ್ಥೆ ಇರುತ್ತದೆ. ಜೂನ್ ತಿಂಗಳ ವಿಶೇಷ ಭೋಜನದ ವ್ಯವಸ್ಥೆಯನ್ನು ಸದಸ್ಯೆ ಸುಭಾಷಿಣಿಯವರು ತಮ್ಮ ಮದುವೆಯ ೧೨ ನೇ ವಾರ್ಷಿಕೋತ್ಸವದ ಅಂಗವಾಗಿ ನೀಡಿದ್ದರು. ರಾಜಕೀಯ ರಹಿತ ಆಡಳಿತ, ನಾವೆಲ್ಲರೂ ಒಂದೇ ಎನ್ನುವ ರೀತಿಯ ಸಿಹಿಯಾದ ಭೋಜನ ಜೊತೆಗೆ ಗ್ರಾಮದ ಅಭಿವೃದ್ಧಿಯ ಚಿಂತನೆ ಇದು ಕೆಯ್ಯೂರು ಗ್ರಾಪಂನ ಒಂದು ವಿಶೇಷತೆಯಾಗಿದೆ.

LEAVE A REPLY

Please enter your comment!
Please enter your name here