ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಅಧ್ಯಾಪಕರಿಗೆ ಪುನಶ್ಚೇತನ ಕಾರ್ಯಾಗಾರ

0

ಪುತ್ತೂರು: ನಗರದ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ `ಕಾನೂನು ಶಿಕ್ಷಣದಲ್ಲಿ ಪರಿಣಾಮಕಾರಿ ಶಿಕ್ಷಣಶಾಸ್ತ್ರದ ಉಪಕರಣ'(ಎಫೆಕ್ಟಿವ್ ಪೆಡಗೋಜಿಕಲ್ ಟೂಲ್ಸ್ ಇನ್ ಲೀಗಲ್ ಎಜುಕೇಶನ್) ಎಂಬ ವಿಷಯದ ಕುರಿತು ಏರ್ಪಡಿಸಲಾಗಿರುವ ಮೂರು ದಿನಗಳ ‘ಕಾನೂನು ಅಧ್ಯಾಪಕರ ಪುನಶ್ಚೇತನ ಕಾರ್ಯಕ್ರಮ’ಕ್ಕೆ ಜೂ.23ರಂದು ಚಾಲನೆ ನೀಡಲಾಯಿತು.

ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರೂಪಿಸಿರುವ ವಿವಿಧ ಅನುಭವಗಳ ಆಗರವೇ `ಅಧ್ಯಾಪಕರ ಪುನಶ್ಚೇತನ’ ಕಾರ್ಯಾಗಾರ. ಇದು ಅಧ್ಯಾಪಕರಿಗೆ ಅಗತ್ಯವೆನಿಸುವ ವೃತ್ತಿ ಸಿದ್ಧತೆಯನ್ನು ದೊರಕಿಸಿಕೊಡುತ್ತದೆ. ಜೊತೆಗೆ ಅಧ್ಯಾಪಕ ವೃತ್ತಿಯಲ್ಲಿ ಇರುವವರು ಸದಾ ಪ್ರಶ್ನಿಸುವ ಮತ್ತು ಅದಕ್ಕೆ ಉತ್ತರ ಕಂಡುಕೊಳ್ಳುವ ಮನೋಭಾವನೆ ಬೆಳಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯ ನಾರಾಯಣ ಕೆ.ಎಂ. ಮಾತನಾಡಿ, ಭೋಧಕರಾಗಿರುವವರು ಸದಾ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಬೋಧಿಸುವ ವಿಷಯದಲ್ಲಿ ತಕ್ಕ ಪಾಂಡಿತ್ಯವನ್ನು, ಅದಕ್ಕೆ ಪೂರಕವಾದ ಆಧುನಿಕ ತಂತ್ರಜ್ಞಾನದ ಅರಿವು ಮತ್ತು ಕೌಶಲ್ಯವನ್ನು ಅಧ್ಯಾಪಕರು ಮೈಗೂಡಿಸಿಕೊಂಡರೆ ಪರಿಣಾಮಕಾರಿ ಬೋಧನೆ ಸಾಧ್ಯ ಎಂದರು.

ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ.ಬಿ.ಕೆ. ರವೀಂದ್ರ, ಅಧ್ಯಾಪಕ ವೃತ್ತಿ ಶಿಕ್ಷಣದ ಉದ್ದೇಶ ಪರಿಣಾಮಕಾರಿಯಾಗಿ ಬೋಧಿಸುವುದೇ ಆಗಿದೆ. ವೃತ್ತಿಗೆ ಸಂಬಂಧಿಸಿದ ಉಪಕರಣಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳುವುದರ ಜತೆಗೆ ವೃತ್ತಿ ಕೌಶಲ್ಯವನ್ನು ಮತ್ತು ವೃತ್ತಿ ಭಾವನೆಯನ್ನು ಮೈಗೂಡಿಸಿಕೊಂಡಾಗ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ನೀಡಲು ಸಹಕಾರಿಯಾಗುತ್ತದೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಅಕ್ಷತಾ ಎ.ಪಿ. ಉಪಸ್ಥಿತರಿದ್ದರು. ನ್ಯಾಯವಾದಿ ಸುಧೀರ್ ಕುಮಾರ್ ತೋಳ್ಪಾಡಿ ಸ್ವಾಗತಿಸಿ, ಕಾನೂನು ಸಹಾಯಕ ಪ್ರಾಧ್ಯಾಪಕಿ ಡಾ.ಕೆ. ರೇಖಾ ವಂದಿಸಿದರು. ಸಂಧ್ಯಾ ಎ.ಪಿ. ಕಾರ್ಯಕ್ರಮ ನಿರ್ವಹಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ವಿಷಯಗಳ ಕುರಿತು ವಿಶೇಷ ಕಾರ್ಯಗಾರಗಳು ನಡೆಸಲಾಯಿತು.

LEAVE A REPLY

Please enter your comment!
Please enter your name here