ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ದಲಿತ ದೌರ್ಜನ್ಯ ತಡೆ ಕಾಯ್ದೆ ಅನ್ವಯ-ಕರ್ನಾಟಕ ಹೈಕೋರ್ಟ್ ಆದೇಶ

0

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ಎಸ್.ಸಿ, ಎಸ್.ಟಿ.ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ.ಕಟ್ಟಡದ ನೆಲಮಹಡಿಯಲ್ಲಿ ಬೈಯ್ದರೆ ಅಥವಾ ನಿಂದನೆ ಮಾಡಿದರೆ ಅದು ಸಾರ್ವಜನಿಕ ವೀಕ್ಷಣೆಯ ಸ್ಥಳವಲ್ಲವಾದ್ದರಿಂದ ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.ಪುತ್ತೂರಿನ ರಿತೇಶ್ ಪಾಸ್‌ರವರು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ರಿತೇಶ್ ಪಾಸ್ ಮತ್ತು ಜಯಕುಮಾರ್ ನಾಯರ್ ಎಂಬವರ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿ ಸಿವಿಲ್ ವ್ಯಾಜ್ಯವಿದ್ದು ಜಯಕುಮಾರ್ ನಾಯರ್ ವಿರುದ್ಧ ಪಾಸ್‌ರವರು ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ಪಡೆದುಕೊಂಡಿದ್ದರು.ಈ ನಡುವೆ, ರಿತೇಶ್ ಪಾಸ್‌ರವರು ಕಟ್ಟಡದ ತಳಮಹಡಿಯಲ್ಲಿ ತನಗೆ ಬೈದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ, ಜಯಕುಮಾರ್ ನಾಯರ್ ಅವರ ಕಟ್ಟಡದ ಕೆಲಸಗಾರ ಮೋಹನ್ ಎಂಬವರು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ್ದರು.ಅದರಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ರಿತೇಶ್ ಪಾಸ್ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.೨೦೨೦ರಲ್ಲಿ ಈ ಪ್ರಕರಣ ನಡೆದಿತ್ತು.

ತನ್ನ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿರುವುದರ ವಿರುದ್ಧ ರಿತೇಶ್ ಪಾಸ್‌ರವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.ದುರುದ್ದೇಶದಿಂದ ತನ್ನ ವಿರುದ್ಧ ದೂರು ಕೊಡಿಸಲಾಗಿದೆ.ಸಿವಿಲ್ ವ್ಯಾಜ್ಯಕ್ಕೆ ಪ್ರತಿಯಾಗಿ ಜಾತಿನಿಂದನೆ ಕೇಸ್ ಹಾಕಿಸಲಾಗಿರುವುದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕೆಂದು ರಿತೇಶ್ ಪಾಸ್‌ರವರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ನೆಲಮಹಡಿ ಸಾರ್ವಜನಿಕ ವೀಕ್ಷಣೆಯ ಸ್ಥಳವಲ್ಲ.ಹೀಗಾಗಿ ಎಸ್.ಸಿ., ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ 3(1)(ಆರ್)(ಎಸ್)(ವಿಎ)ಅನ್ವಯವಾಗುವುದಿಲ್ಲ ಎಂದು ಆದೇಶ ನೀಡಿ, ಕಟ್ಟಡದ ತಳಮಹಡಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ರಿತೇಶ್ ಪಾಸ್ ವಿರುದ್ದ ಹೂಡಿದ್ದ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕೇಸ್ ಅನ್ನು ರದ್ದುಪಡಿಸಿದೆ.ಈ ಪ್ರಕರಣದಲ್ಲಿ ಕಟ್ಟಡದ ತಳಮಹಡಿಯಲ್ಲಿ ಆರೋಪಿಯು ಜಾತಿ ನಿಂದನೆ ಮಾಡಿರುವುದಾಗಿ ದೂರುದಾರರು ಆರೋಪಿಸಿದ್ದಾರೆ.ಆದರೆ, ತಳಮಹಡಿ ಸಾರ್ವಜನಿಕ ವೀಕ್ಷಣೆಯ ಸ್ಥಳ ಅಥವಾ ಸಾರ್ವಜನಿಕ ಸ್ಥಳವಲ್ಲ.ಜತೆಗೆ, ಘಟನೆ ವೇಳೆ ಸ್ಥಳದಲ್ಲಿದ್ದ ಇತರ ಸಾಕ್ಷಿಗಳು ದೂರುದಾರರ ಸ್ನೇಹಿತರೇ ಆಗಿದ್ದು, ಬೇರೆ ಯಾರೂ ನೋಡಿಲ್ಲ.ಆದ್ದರಿಂದ, ಪ್ರಕರಣದಲ್ಲಿ ಅಟ್ರಾಸಿಟಿ ಕಾಯ್ದೆಯ ಸೆಕ್ಷನ್‌ಗಳು ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ದೂರು, ದಾಖಲೆಗಳನ್ನು ಪರಿಶೀಲಿಸಿದಾಗ, ಕಟ್ಟಡದ ತಳಮಹಡಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆಂಬುದನ್ನು ಒಪ್ಪಲಾಗದು.ಹಾಗಾಗಿ ಆ ಕುರಿತಂತೆ ಸಲ್ಲಿಸಿರುವ ದೂರಿನಲ್ಲಿ ಹುರುಳಿಲ್ಲ, ಆರೋಪವೂ ಸರಿಯಲ್ಲ.ಘಟನೆ ನಡೆದಿದೆ ಎಂದು ದೂರಿನಲ್ಲಿ ಹೇಳಿರುವುದಕ್ಕೂ ಪ್ರಕರಣದ ವಿವರಗಳಿಗೂ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲವೆಂದು ಕಂಡುಬರುತ್ತಿದೆ. ಹಾಗಾಗಿ ಪ್ರಕರಣ ಮಾನ್ಯ ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.

 

ಪುತ್ತೂರಿನ ರಿತೇಶ್ ಪಾಸ್ ಎಂಬವರ ವಿರುದ್ಧ ಜಾತಿ ನಿಂದನೆ ಆರೋಪದಡಿ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿರುದ್ಧದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ|ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ.

LEAVE A REPLY

Please enter your comment!
Please enter your name here