ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ದಿ ಸಂಘ ಕೊಕ್ಕಡ ವಲಯ ಸಮಿತಿ ರಚನೆ ; ಅಧ್ಯಕ್ಷ: ಶಿವಣ್ಣ, ಕಾರ್ಯದರ್ಶಿ: ಸಮೀರ್

0

ನೆಲ್ಯಾಡಿ: ನೆಲ್ಯಾಡಿ, ಕೌಕ್ರಾಡಿ, ಗೋಳಿತ್ತೊಟ್ಟು, ಕೊಕ್ಕಡ, ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟು ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘ(ಸಿಐಟಿಯು) ಕೊಕ್ಕಡ ವಲಯ ಸಮಿತಿ ರಚನೆಯಾಗಿದ್ದು ಇದರ ಅಧ್ಯಕ್ಷರಾಗಿ ಶಿವಣ್ಣ ಕೋಳ್ಪೆ ಹಾಗೂ ಕಾರ್ಯದರ್ಶಿಯಾಗಿ ಸಮೀರ್ ಕೋಲ್ಪೆ ಆಯ್ಕೆಯಾಗಿದ್ದಾರೆ.


ಕೊಕ್ಕಡದಲ್ಲಿ ನಡೆದ ಬೀದಿ ಬದಿ ವ್ಯಾಪಾರಿಗಳ ಸಭೆಯಲ್ಲಿ ನೂತನ ಸಮಿತಿ ರಚನೆ ಮಾಡಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ನ್ಯಾಯವಾದಿ ಬಿ.ಎಂ.ಭಟ್, ಉಪಾಧ್ಯಕ್ಷರಾಗಿ ಉಮರಬ್ಬ ಕೊಕ್ಕಡ, ಸಹ ಕಾರ್ಯದರ್ಶಿಯಾಗಿ ಸಿನಾನ್, ಖಜಾಂಜಿಯಾಗಿ ನವಾಜ್, ಸಮಿತಿ ಸದಸ್ಯರಾಗಿ ಸಫಾನ್, ನೌಶಾದ್, ರಿಯಾಜ್, ಅಜೀಜ್, ತೌಸಿಫ್, ಇರ್ಷಾದ್, ಬಾಲಣ್ಣ ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಶ್ಯಾಮರಾಜ್, ಎಲ್.ಮಂಜುನಾಥ್, ಫಾರೂಕ್, ಧನಂಜಯ ಗೌಡರವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಶ್ರೇಯಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಂತಿಯಾಸ್‌ರವರು, ಯಾರು ಕೂಡಾ ಬೀದಿ ಬದಿ ವ್ಯಾಪಾರಿ ಆಗುವ ಆಸೆ ಹೊತ್ತು ಹುಟ್ಟಿ ಬೆಳೆದವರಲ್ಲ, ಸ್ವಾಭಿಮಾನದಿಂದ ಬದುಕಲಿಕ್ಕಾಗಿ ದೊಡ್ಡ ಬಂಡವಾಳ ಇಲ್ಲದವರು ನಡೆಸುವ ವ್ಯಾಪಾರವೇ ಬೀದಿ ಬದಿ ವ್ಯಾಪಾರವಾಗಿದೆ. ಇವರ ರಕ್ಷಣೆಗಾಗಿ 2011 ರಿಂದ ಸಿಐಟಿಯು ನಿರಂತರ ನಡೆಸಿದ ಹೋರಾಟದ ಪರಿಣಾಮ 2014ರಲ್ಲಿ ಲೋಕಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಹಿತ ರಕ್ಷಣಾ ಕಾಯ್ದೆ ಜಾರಿಗೆ ಬಂತು. ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ಎತ್ತಂಗಡಿ ಮಾಡುವುದನ್ನು ಅದು ನಿಷೇಧಿಸುತ್ತದೆ. ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಕೊಟ್ಟ ಮೇಲೆಷ್ಟೆ ಅದು ಸಾಧ್ಯ ಎಂದರು. ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಹಳ್ಳಿಯ ರೈತರ ಮಿತ್ರರಾಗಿದ್ದಾರೆ. ರೈತರು ಬೆಳೆದ ಫಲವನ್ನು ಮನೆ ಮನೆಗೆ ಬಂದು ಖರೀದಿಸಿ ಬೀದಿ ಬದಿಯಲ್ಲಿ ಮಾರುವುದರಿಂದ ರೈತರಿಗೂ ಬದುಕುವ ದಾರಿ ಸಿಕ್ಕಂತಾಗಿದೆ ಎಂದರು. ಬೀದಿಬದಿ ವ್ಯಾಪಾರಿ ಸಂಘದ ಜಿಲ್ಲಾ ಖಜಾಂಜಿ ಆಸಿಫ್ ಮಾತಾಡಿದರು. ಎಲ್.ಮಂಜುನಾಥ್, ಲಾರೆನ್ಸ್, ಧನಂಜಯ ಗೌಡ, ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು. ಸಮೀರ್ ಸ್ವಾಗತಿಸಿ, ಶಿವಣ್ಣ ವಂದಿಸಿದರು.

LEAVE A REPLY

Please enter your comment!
Please enter your name here