ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣವಾಗಿವೆ ಬೃಹತ್ ಖೆಡ್ಡಾಗಳು!  ಸಂಚಾರಕ್ಕೆ ಸಂಚಕಾರ: ನಾಗರಿಕರಿಂದ ರಸ್ತೆ ತಡೆಯ ಎಚ್ಚರಿಕೆ

0

ಉಪ್ಪಿನಂಗಡಿ: ಪ್ರಮುಖ ತೀರ್ಥ ಕ್ಷೇತ್ರವಾಗಿರುವ ಸುಬ್ರಹ್ಮಣ್ಯಕ್ಕೆ ಉಪ್ಪಿನಂಗಡಿಯಿಂದ ಸಂಪರ್ಕ ಕಲ್ಪಿಸುವ ಹಳೆಗೇಟು- ಮರ್ದಾಳ ರಾಜ್ಯ ಹೆದ್ದಾರಿಯ ಪೆರಿಯಡ್ಕ ಎಂಬಲ್ಲಿ ಹೆದ್ದಾರಿಯಲ್ಲೇ ಬೃಹತ್ ಖೆಡ್ಡಾಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಸಂಚಕಾರ ತಂದೊಡ್ಡಿದೆ. ಇಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಮಾಮೂಲಿಯಾಗಿದೆ. ವಾರದೊಳಗೆ ಇದನ್ನು ಮುಚ್ಚಲು ಕ್ರಮ ಕೈಗೊಳ್ಳದಿದ್ದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ನಾಗರಿಕರು ಎಚ್ಚರಿಸಿದ್ದಾರೆ.

ಈ ರಾಜ್ಯ ಹೆದ್ದಾರಿಯಲ್ಲಿ ಹಳೆಗೇಟುವಿನಿಂದ ಕೊಯಿಲ ತನಕದ ಆರು ಕಿ.ಮೀ. ರಸ್ತೆ ವಿಸ್ತರಣಾ ಕಾಮಗಾರಿಗೆ ನಾಲ್ಕು ವರ್ಷದ ಹಿಂದೆ 7.25 ಕೋಟಿ ರೂಪಾಯಿ ಮಂಜೂರಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಡಿ ಟೆಂಡರು ನಡೆದು ಇದರ ಗುತ್ತಿಗೆಯನ್ನು ಮಂಗಳೂರಿನ ಖಾಸಗಿ ಕಂಪೆನಿಯೊಂದು ಪಡೆದಿದ್ದು, ತೀರಾ ಕಳಪೆ ಹಾಗೂ ಅಪೂರ್ಣ ಕಾಮಗಾರಿ ನಡೆಸಿದ್ದರಿಂದ ಆ ಕಂಪೆನಿಯನ್ನು ಕಪ್ಪು ಪಟ್ಟಿ (ಬ್ಲ್ಯಾಕ್ ಲಿಸ್ಟ್)ಗೆ ಸಂಬಂಧಪಟ್ಟ ಇಲಾಖೆ ಸೇರಿಸಿತ್ತು ಆ ಬಳಿಕ ಇದರ ಕಾಮಗಾರಿ ಪೂರ್ಣಗೊಳಿಸುವುದಾಗಲಿ, ಕಳಪೆ ಕಾಮಗಾರಿಯನ್ನು ಸರಿಪಡಿಸುವ ಕೆಲಸವನ್ನಾಗಲಿ ಸಂಬಂಧಪಟ್ಟ ಇಲಾಖೆಗಳು ಮಾಡಲಿಲ್ಲ.

ಇಲ್ಲಿ ಆರು ಕಿ.ಮೀ. ರಸ್ತೆಗೆ 7.25 ಕೋಟಿ ರೂ. ಅನುದಾನ ಸಿಕ್ಕಿದರೂ ಉತ್ತಮ ರಸ್ತೆಯ ಭಾಗ್ಯ ಮಾತ್ರ ಸಾರ್ವಜನಿಕರಿಗೆ ಲಭಿಸಿಲ್ಲ. ನಡೆದ ಕಾಮಗಾರಿಯೂ ತೀರಾ ಕಳಪೆಯಾಗಿ ನಡೆದಿದ್ದು, ಅಲ್ಲಲ್ಲಿ ಎದ್ದು ಹೋಗಿದೆ. ಪೆರಿಯಡ್ಕ ಎಂಬಲ್ಲಿ ರಸ್ತೆಯ ಒಂದು ಭಾಗದಲ್ಲಿ ಬೃಹತ್ ಖೆಡ್ಡಾಗಳು ನಿರ್ಮಾಣವಾಗಿ ಅಪಾಯವನ್ನು ಆಹ್ವಾನಿಸುತ್ತಿವೆ.

ದ್ವಿಚಕ್ರ ಸವಾರರಿಗೆ ಸಂಚಕಾರ!: ಮಳೆಗಾಲದಲ್ಲಿ ರಸ್ತೆಯಲ್ಲಿರುವ ಈ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಇದರ ಆಳ, ಅಗಲ ಗೊತ್ತಾಗುತ್ತಿಲ್ಲ. ರಸ್ತೆಯಲ್ಲಿ ತನ್ನ ಪಥದಲ್ಲಿ ಬರುವ ದ್ವಿಚಕ್ರ ಸವಾರರು ಈ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳುವ ಸ್ಥಿತಿ ಬಂದಿದೆ. ದಿನಕ್ಕೆ ನಾಲ್ಕೈದು ದ್ವಿಚಕ್ರ ವಾಹನಗಳಾದರೂ ಇಲ್ಲಿ ಸ್ಕಿಡ್ ಆಗಿ ಅಪಘಾತಗಳಾಗುತ್ತಿವೆ. ಇನ್ನು ಕೆಲವು ವಾಹನ ಸವಾರರು ರಸ್ತೆಯಲ್ಲಿರುವ ಈ ಗುಂಡಿಗಳನ್ನು ನೋಡಿ ತಮ್ಮ ಪಥವನ್ನು ತಕ್ಷಣ ಬದಲಾಯಿಸಿ ರಸ್ತೆಯ ಇನ್ನೊಂದು ಪಥದತ್ತ ತಮ್ಮ ವಾಹನವನ್ನು ತೆಗೆದುಕೊಳ್ಳಲು ಮುಂದಾಗುತ್ತಿದ್ದು, ಆಗ ಎದುರಿನಿಂದ ಬರುತ್ತಿರುವ ವಾಹನಗಳಿಗೆ ಢಿಕ್ಕಿಯಾಗುವ ಅಪಾಯವು ಎದುರಾಗಿದೆ.

ಪ್ರಮುಖ ರಾಜ್ಯ ಹೆದ್ದಾರಿ: ಹಳೆಗೇಟು – ಮರ್ದಾಳ ಹೆದ್ದಾರಿಯು ಶ್ರೀ ಕ್ಷೇತ್ರ ಸುಬ್ರಹ್ಮಣ್ಯವನ್ನು ಉಪ್ಪಿನಂಗಡಿಯಿಂದ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಯಾಗಿದೆ. ನೂರಾರು ಪ್ರವಾಸಿಗರ ವಾಹನಗಳು ಈ ರಸ್ತೆಯಲ್ಲಿ ದಿನ ನಿತ್ಯ ಓಡಾಡುತ್ತಿವೆ. ಹೊಸಬರಿಗೆ ಈ ರಸ್ತೆಯ ಪರಿಚಯ ಇಲ್ಲದಿರುವ ಕಾರಣ ಈ ಗುಂಡಿಗೆ ವಾಹನಗಳು ಬಿದ್ದು ಅನಾಹುತಗಳಿಗೆ ಕಾರಣವಾಗುತ್ತಿವೆ. ಈ ಮೊದಲು ಒಂದು ಬಾರಿ ಜಲ್ಲಿ ಹಾಕಿ ಈ ಗುಂಡಿಗಳನ್ನು ಮುಚ್ಚಲಾಗಿತ್ತಾದರೂ, ವಾರದೊಳಗೆ ಅದು ಎದ್ದು ಹೋಗಿದೆ. ಈಗ ಇದು ದೊಡ್ಡ ಖೆಡ್ಡಾಗಳಾಗಿ ನಿರ್ಮಾಣವಾಗಿದ್ದು, ಮಳೆ ನೀರು ನಿಂತು ಹಳ್ಳದಂತೆ ಗೋಚರಿಸುತ್ತಿವೆ.

ಸಾರ್ವಜನಿಕರ ಉಪಯೋಗಕ್ಕೆ ಬಾರದ ಅನುದಾನ!: ರಸ್ತೆ ವಿಸ್ತರಣಾ ಕಾಮಗಾರಿಯ ನೆಪದಲ್ಲಿ ಆರು ಕಿ.ಮೀ. ಉದ್ದದ ರಸ್ತೆಗಾಗಿ 7.25 ಕೋಟಿ ರೂಪಾಯಿ ಅನುದಾನ ಮಂಜೂರಾದರೂ ಅದು ರಸ್ತೆಗೆ ಸಮರ್ಪಕ ಬಳಕೆಯಾಗದೇ ಯಾರ‍್ಯಾರದ್ದೋ ಪಾಲಾಗುವಂತಾಗಿದೆ. ಐದು ವರ್ಷದವರೆಗೆ ಈ ರಸ್ತೆಯ ನಿರ್ವಹಣೆಯನ್ನೂ ಗುತ್ತಿಗೆದಾರ  ಮಾಡಬೇಕು ಎಂದಿದ್ದರೂ, ಈ ರಸ್ತೆ ಪೂರ್ಣವಾಗಿ ಆಗಲೇ ಇಲ್ಲ. ಈ ರಸ್ತೆಯಲ್ಲಿ ಮಾಡಲ್ಪಟ್ಟ ಅರೆಬರೆ ಕಾಮಗಾರಿಯೂ ತೀರಾ ಕಳಪೆಯಾಗಿದೆ. ಇಂತಹ ಕಾಮಗಾರಿ ನಡೆಸಿದ ಕಂಪೆನಿಯನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿದ್ದರೂ, ಆ ಕಂಪೆನಿಯವರು ಮಾತ್ರ ಬೇರೊಂದು ಹೆಸರಲ್ಲಿ ಬೇರೆ ಸರಕಾರಿ ಗುತ್ತಿಗೆಗಳನ್ನು ಪಡೆದುಕೊಂಡು ಪಿಡಬ್ಲ್ಯೂಡಿಯ ರಸ್ತೆ ಕಾಮಗಾರಿಗಳನ್ನು ನಿರಾತಂಕವಾಗಿ ನಡೆಸುತ್ತಿದ್ದಾರೆ. ಪೆರಿಯಡ್ಕದ ಬಳಿ ಈಗ ಹೆದ್ದಾರಿಯಲ್ಲಿ ಉಂಟಾಗಿರುವ ಈ ಗುಂಡಿಗಳು ವಾಹನಗಳ ಮುಖ್ಯವಾಗಿ ದ್ವಿಚಕ್ರ ವಾಹನಗಳವರ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸುವ ನಾಗರಿಕರು, ವಾರದೊಳಗೆ ಇದನ್ನು ಮುಚ್ಚಲು ಮುಂದಾಗದಿದ್ದಲ್ಲಿ ಉಗ್ರ ಪತ್ರಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಗೆ ಸಿದ್ಧತೆ

ಈ ರಸ್ತೆಯಲ್ಲಿ ನಿರ್ಮಾಣವಾಗಿರುವ ಬೃಹತ್ ಹೊಂಡಗಳಿಂದಾಗಿ ವಾಹನ ಸವಾರರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇಲ್ಲಿದೆ. ಮಳೆ ನೀರು ತುಂಬಿ ಇಲ್ಲಿರುವ ಹೊಂಡಗಳ ಆಳದ ಅರಿವಿಲ್ಲದೆ ಹಲವು ದ್ವಿಚಕ್ರ ವಾಹನಗಳು ಇಲ್ಲಿ ಈಗಾಗಲೇ ಮಗುಚಿ ಬಿದ್ದಿವೆ. ಇದಲ್ಲದೆ, ಹೊಂಡಗಳನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಗುದ್ದಿ ಅಪಘಾತಗಳಾಗುತ್ತಿವೆ. ಈ ಹೊಂಡಗಳನ್ನು ಶಾಶ್ವತವಾಗಿ ಮುಚ್ಚುವ ಕೆಲಸ ಪಿಡಬ್ಲ್ಯೂಡಿಯಿಂದಾಗಬೇಕು. ಒಂದು ವಾರದೊಳಗೆ ಇದನ್ನು ಮುಚ್ಚುವ ಕೆಲಸವಾಗದಿದ್ದಲ್ಲಿ ಸ್ಥಳೀಯರನ್ನು ಸೇರಿಸಿಕೊಂಡು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸುವುದಾಗಿ ನಾವೆಲ್ಲಾ ತೀರ್ಮಾನಿಸಿದ್ದೇವೆ.

-ರಾಜೇಶ್ ಕೊಡಂಗೆ, ಸ್ಥಳೀಯರು

 

ಈ ರಸ್ತೆ ಕಾಮಗಾರಿಯನ್ನು ಟೆಂಡರು ಪಡೆದುಕೊಂಡ ಗುತ್ತಿಗೆದಾರರು ಪೂರ್ಣಗೊಳಿಸದೇ ಅರ್ಧದಲ್ಲಿ ಬಿಟ್ಟು ಹೋಗಿದ್ದರಿಂದ ಈ ಸಮಸ್ಯೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಡಿ ಟೆಂಡರು ನಡೆದು ಆಗಿರುವ ಕಾಮಗಾರಿ ಇದು. ಇದರ ಕಚೇರಿ ಇರುವುದು ಬೆಂಗಳೂರಿನಲ್ಲಿ. ಈ ಕಾಮಗಾರಿಗಳನ್ನು ನೋಡಿಕೊಳ್ಳುವುದು ಮಾತ್ರ ಪಿಡಬ್ಲ್ಯೂಡಿ ಇಲಾಖೆ. ೭.೨೫ ಕೋಟಿ ರೂಪಾಯಿಯ ಕಾಮಗಾರಿ ಇದಾಗಿದ್ದರೂ, ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಎಲ್ಲಾ ಹಣ ಮಂಜೂರಾಗಿಲ್ಲ. ಈಗ ಈ ರಸ್ತೆಯು ಗುತ್ತಿಗೆದಾರರಿಂದ ನಿರ್ವಹಣೆಗೆ ಒಳಪಡುವ ಅವಽ. ಆದರೆ ಅವರು ಸಿಗುತ್ತಿಲ್ಲ. ಈ ಅವಧಿಯಲ್ಲಿ ಪಿಡಬ್ಯೂಡಿಯಲ್ಲಿ ಇದರ ನಿರ್ವಹಣೆಗೆ ಬೇರೆ ಹಣವನ್ನು ಇಡಲು ಬರುವುದಿಲ್ಲ. ಇನ್ನು ಗುತ್ತಿಗೆದಾರರನ್ನು ರಿಜೆಕ್ಟ್ ಮಾಡಿ ಅವರ ಟೆಂಡರನ್ನು ಕ್ಯಾನ್ಸಲ್ ಮಾಡಿ ರೀ ಟೆಂಡರ್ ಕರೆದಾಗ ಮಾತ್ರ ಇದರಲ್ಲಿ ಉಳಿದ ಮೊತ್ತವನ್ನು ಬಳಸಿ ಕಾಮಗಾರಿ ನಡೆಸಲು ಆಗುತ್ತದೆ. ಟೆಂಡರ್ ಕ್ಯಾನ್ಸಲ್ ಮಾಡುವುದು ಸರಕಾರದ ಮಟ್ಟದಲ್ಲಾದರೆ, ಇದಕ್ಕೆ ಶಿ-ರಸ್ಸು ಸಲ್ಲಿಸುವುದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದವರು ಮಾಡಬೇಕು. ಅವರಿಗೆ ನಾವು ಇಲ್ಲಿನ ವಸ್ತು ಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಈಗ ಆಗಿರುವ ಹೊಂಡವನ್ನು ಸಿಮೆಂಟ್ ಮತ್ತು ಜಲ್ಲಿ ಮಿಶ್ರಣದ ಮೂಲಕ ಎರಡು ದಿನಗಳೊಳಗೆ ಮುಚ್ಚುವಲ್ಲಿ ಕ್ರಮ ಕೈಗೊಳ್ಳಲಾಗುವುದು.

-ಕಾನಿಷ್ಕ, ಸಹಾಯಕ ಎಂಜಿನಿಯರ್, ಪಿಡಿಡಬ್ಲ್ಯೂಡಿ ಪುತ್ತೂರು

LEAVE A REPLY

Please enter your comment!
Please enter your name here