ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ಪುತ್ತೂರು ಬಿಇಒ ಸಿ.ಲೋಕೇಶ್ ವರ್ಗಾವಣೆ-ಪುತ್ತೂರಿಗೆ ಬೇಲೂರಿನ ಲೋಕೇಶ್ ಎಸ್.ಆರ್

0

ಪುತ್ತೂರು: ಕಳೆದ ಎರಡೂವರೆ ವರ್ಷಗಳಿಂದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಿ.ಲೋಕೇಶ್ ಅವರು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಆದೇಶ ಬಂದಿದ್ದು, ಪುತ್ತೂರಿಗೆ ಹಾಸನ ಜಿಲ್ಲೆಯ ಬೇಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ವರ್ಗಾವಣೆಯಾಗಿದ್ದಾರೆ.

 


ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಿ.ಲೋಕೇಶ್ ಅವರು 2019ರ ಡಿ.23ಕ್ಕೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಅದಕ್ಕೂ ಮುಂದೆ ಅವರು   ಬೆಳ್ತಂಗಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಕ್ಷಯ ಪಾತ್ರೆ ಎಂಬ ವಿಶೇಷ ಯೋಜನೆ ಮೂಲಕ ಪ್ರಸಿದ್ಧಿ ಪಡೆದ ಅವರು ಪುತ್ತೂರಿನಲ್ಲೂ ಶಿಕ್ಷಣ ಕ್ಷೇತ್ರದ ಏರಿಳಿತಗಳಿಗಂಜದೆ ನಿರಂತರ ಕರ್ತವ್ಯ, ನಿಷ್ಟ ಸಾಧನೆಯ ಛಲದಿಂದ ಶಿಕ್ಷಣ ಇಲಾಖೆಯನ್ನು ನಲವತ್ತು ಸರಕಾರಿ ಇಲಾಖೆಗಳಲ್ಲೇ ಪ್ರಥಮ ಸ್ಥಾನಿಯಾಗಿಸಿ ತಾನೂ ಅತ್ಯುತ್ತಮ ಅಧಿಕಾರಿಯಾಗಿ ‘ಪ್ರಜಾಮತ’ ಗಳ ಮೂಲಕ ಹೊರಹೊಮ್ಮಿದ್ದರು. ಪುತ್ತೂರಿನ ಶಿಕ್ಷಕರೆಲ್ಲರು ಬಿಇಒ ಅವರ ಜೀವನ, ವೃತ್ತಿ ಪಯಣವನ್ನಾಧರಿಸಿದ ಹೊಸ ಪರಿಕಲ್ಪನೆಯ ‘ಯಶೋಗಾಥಾ’ ಎಂಬ ಹೊತ್ತಗೆಯನ್ನು ಹೊರ ತಂದಿದ್ದರು. ಎಡೆಬಿಡದೆ ಕಾಡಿದ ಕೊರೊನಾ ಲಾಕ್ಡೌನ್ ಸಮಸ್ಯೆಗಳನ್ನು ಕಡೆಗಣಿಸಿ ಎಸ್. ಎಸ್. ಎಲ್. ಸಿ ಪರೀಕ್ಷೆಯ ಜತೆ ಎಲ್ಲಾ ವಿದ್ಯಾರ್ಥಿಗಳ ಸುಗಮ ಕಲಿಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಹೆಣೆದ ಕಾರ್ಯತಂತ್ರ ರಾಜ್ಯವ್ಯಾಪಿ ಪ್ರಶಂಸೆಗೊಳಗಾಗಿತ್ತು. ಇದೀಗ ಅವರಿಗೆ ಜಿ.ಪಂನ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಆದೇಶ ಬಂದಿದೆ.

ಹಾಸನದ ಬೇಲೂರಿನ ಶಿಕ್ಷಣಾಧಿಕಾರಿ ಪುತ್ತೂರಿಗೆ:
ಹಾಸನ ಜಿಲ್ಲೆಯ ಬೇಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್ ಅವರು ಮಂಗಳೂರು ದಕ್ಷಿಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಅಲ್ಲಿಂದ ಬೇಲೂರಿಗೆ ವರ್ಗಾವಣೆಗೊಂಡಿದ್ದರು. ಇದೀಗ ಅವರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here