- ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬರಲು ಗುರಿ ಇಟ್ಟುಕೊಳ್ಳಿ- ಸಂಜೀವ ಮಠಂದೂರು
ನಿಡ್ಪಳ್ಳಿ; ಮುಂಬರುವ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶಾಲೆ ಶೇ.100 ಫಲಿತಾಂಶ ದಾಖಲಿಸಿದರೆ ಈ ಶಾಲೆಯ ಅಸ್ತಿತ್ವ ಉಳಿಯ ಬಹುದು. ಆ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಒಂದು ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಜೂ.25 ರಂದು ನಡೆದ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಪೋಷಕರ ಸಭೆಯ ಅಧ್ಯಕ್ಷತ ವಹಿಸಿ ಮಾತನಾಡಿದರು.ಕಳೆದ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪರಿಶೀಲಿಸಿ ಮಾತನಾಡಿದ ಅವರು ಕಲಿಕೆಯಲ್ಲಿ ಹಿಂದೆ ಇದ್ದ ಮಕ್ಕಳಿಗೆ ವಿಶೇಷವಾಗಿ ತರಬೇತಿ ನೀಡಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಶೇ.100 ಫಲಿತಾಂಶ ಬರಬಹುದು. ಹಾಗಾದರೆ ಮುಂದೆ ಇಲ್ಲಿ ಮಕ್ಕಳ ದಾಖಲಾತಿಯು ಹೆಚ್ಚಾಗ ಬಹುದು.ಬಡ ಮಕ್ಕಳಿಗೆ ಪುಸ್ತಕ ಮತ್ತು ಇನ್ನೀತರ ಮೂಲಭೂತ ಸೌಕರ್ಯ ಬೇಕಾದರೆ ಸಂಘ ಸಂಸ್ಥೆಗಳ, ದಾನಿಗಳ ಸಹಕಾರ ತೆಗೆದುಕೊಂಡು ಪೂರೈಸಲು ಪ್ರಯತ್ನಿಸಿ ಎಂದು ಹೇಳಿದರು.ಆ ನಿಟ್ಟಿನಲ್ಲಿ ಎಲ್ಲರೂ ಈ ಶಾಲೆಯ ಬೆಳವಣಿಗೆಗೆ ಸಹಕರಿಸಿ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುವಂತೆ ಪ್ರಯತ್ನಿಸ ಬೇಕಾಗಿದೆ ಎಂದರು.ಶಾಲೆಯ ಅಭಿವೃದ್ಧಿ ಬಗ್ಗೆ ಶಾಸಕರು ಹಲವು ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಮನವಿ ಸಲ್ಲಿಕೆ; ಶಾಲೆಗೆ ಬರುವ ರಸ್ತೆಗೆ ಕಾಂಕ್ರೀಟ್ ಹಾಕಿಸಲು ಮತ್ತು ಈಗಿರುವ ಕೊಳವೆ ಬಾವಿ ನೀರು ಪರೀಕ್ಷೆಯಲ್ಲಿ ಕುಡಿಯಲು ಯೋಗ್ಯವಾಗಿಲ್ಲ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಹೊಸ ಕೊಳವೆ ಬಾವಿಗೆ ಅನುದಾನ ಒದಗಿಸಲು ನೀಡಿದ ಮನವಿ ಸ್ವೀಕರಿಸಿದ ಶಾಸಕರು ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಿ ಒದಗಿಸಲು ಪ್ರಯತ್ನಿಸುತ್ತೇನೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ಶಾಲೆಯ ಪಕ್ಕ ಟ್ಯಾಂಕ್ ರಚಿಸಿ ಅದರಿಂದ ನೀರಿನ ವ್ಯವಸ್ಥೆ ಮಾಡಿ ಕೊಳ್ಳಬಹುದು ಎಂದು ಹೇಳಿದರು.
ಮುಖ್ಯ ಗುರು ವಿಜಯಕುಮಾರ್ ಶಾಲಾ ಸ್ಥಿತಿ ಗತಿಗಳ ಮತ್ತು ಕೈಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಖಾಲಿಯಾದ ಎಸ್.ಡಿ.ಎಂ.ಸಿ ಸಮಿತಿಗೆ ಹೊಸ ಸದಸ್ಯರನ್ನು ನೇಮಿಸಲಾಯಿತು.
ಗೌರವಾರ್ಪಣೆ; ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ನಿತೀನ್ ಕುಮಾರ್ ಮತ್ತು ಸಫ್ವಾನ ಇವರನ್ನು ಶಾಸಕರು ಗೌರವಿಸಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ,ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ. ಡಿ ಶಾಲಾಭಿವೃದ್ದಿ ಸಮಿತಿಯ ದಾನಿ ರಾಧಾಕೃಷ್ಣ ರೈ ಪಟ್ಟೆ, ಶಿಕ್ಷಣ ತಜ್ಞ ಸತ್ಯನಾರಾಯಣ ರೈ ನುಳಿಯಾಲು, ಬೆಟ್ಟಂಪಾಡಿ ಗ್ರಾ.ಪಂ.ಮಾಜಿ ಸದಸ್ಯ ಜಗನ್ನಾಥ ರೈ ಕೊಮ್ಮಂಡ, ಎಸ್.ಡಿ.ಎಂ.ಸಿ ಸದಸ್ಯ ಗಂಗಾಧರ ಸಿ.ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ವಂದಿಸಿದರು. ಸಹಶಿಕ್ಷಕಿ ಉಮಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಭಾರತಿ, ಮರೀನಾ ಶಾಂತಿ ವೇಗಸ್, ಸೌಮ್ಯ ಲಕ್ಷ್ಮೀ, ಸಂಗೀತ ಶಿಕ್ಷಕಿ ಶುಭ ರಾವ್, ಅತಿಥಿ ಶಿಕ್ಷಕಿ ವಿನುತಾ ಬಳ್ಳಾಲ್ ಹಾಗೂ ಪೋಷಕರು ಉಪಸ್ಥಿತರಿದ್ದರು.