ತಿಂಗಳಾಡಿ ಸರಕಾರಿ ಆಸ್ಪತ್ರೆಯಲ್ಲಿ ಬಿಪಿ ಮಾತ್ರೆಯೂ ಸಿಗುತ್ತಿಲ್ಲ! ನಾಯಿ ಕಚ್ಚಿದೆ ಎಂದು ಇಂಜೆಕ್ಷನ್‌ಗೆ ಹೋದರೆ ನಾಳೆ ಬನ್ನಿ ಎನ್ನುತ್ತಾರೆ?!

0

  • ಜಿಲ್ಲಾ ವೈದ್ಯಾಧಿಕಾರಿಗೆ ಬರೆಯಲು ನಿರ್ಣಯ
  • ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆ

ಪುತ್ತೂರು: ತಿಂಗಳಾಡಿಯಲ್ಲಿರುವ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಪಿ ಮಾತ್ರೆಯೂ ಸಿಗುತ್ತಿಲ್ಲ, ಸಾರ್ವಜನಿಕರನ್ನು ಪರೀಕ್ಷೆ ಮಾಡದೇ ಮಾತ್ರೆ ಬರೆದು ಕೊಡುತ್ತಿದ್ದಾರೆ ಎಂದು ಸದಸ್ಯೆಯೋರ್ವರು ಗಂಭೀರ ಆರೋಪ ಮಾಡಿದ್ದು ಅಲ್ಲದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸದಸ್ಯೆಯ ಆರೋಪದ ಮೇರೆಗೆ ಸರಕಾರಿ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮತ್ತು ಆರೋಗ್ಯ ಇಲಾಖೆಗೆ ಬರೆದುಕೊಳ್ಳುವುದು ಎಂದು ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ಜೂ.29ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಸದಸ್ಯೆ ಸುಜಾತ ಮುಳಿಗದ್ದೆಯವರು ವಿಷಯ ಪ್ರಸ್ತಾಪಿಸಿ, ತಿಂಗಳಾಡಿ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಔಷಧಿಗಳೇ ಸಿಗುತ್ತಿಲ್ಲ, ಬಿಪಿ ಮಾತ್ರೆ ಕೇಳಿದರೂ ಕೊಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇದಲ್ಲದೆ ಇತ್ತೀಚೆಗೆ ನಾಯಿ ಕಚ್ಚಿದೆ ಎಂದು ವ್ಯಕ್ತಿಯೋರ್ವರು ಆಸ್ಪತ್ರೆಗೆ ಇಂಜೆಕ್ಷನ್‌ಗೆ ಹೋದರೆ ನಾವು ಹೊರಡುತ್ತಿದ್ದೇವೆ ನಮಗೆ ಲೇಟಾಯಿತು ನೀವು ನಾಳೆ ಬನ್ನಿ ಎಂದು ನಾಯಿ ಕಚ್ಚಿದ ವ್ಯಕ್ತಿಯನ್ನು ಹಿಂದಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು. ಇದಲ್ಲದೆ ಆಸ್ಪತ್ರೆಯ ವೈದ್ಯರು ರೋಗಿಗಳನ್ನು ಪರೀಕ್ಷೆ ಮಾಡದೇ ಮಾತ್ರೆ ಬರೆದುಕೊಡುತ್ತಿದ್ದಾರಂತೆ ಎಂದು ಆರೋಪಿಸಿದ ಅವರು ಈ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರತನ್ ರೈಯವರು ಆಸ್ಪತ್ರೆಯಲ್ಲಿ ಈ ರೀತಿಯ ಅವ್ಯವಸ್ಥೆ ಇದೆ ಎಂದು ಗೊತ್ತಿರಲಿಲ್ಲ ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಯವರಿಗೆ ಮತ್ತು ಆರೋಗ್ಯ ಇಲಾಖೆಗೆ ಬರೆದುಕೊಳ್ಳುವ ಎಂದು ಹೇಳಿದರು. ಅದರಂತೆ ನಿರ್ಣಯಿಸಲಾಯಿತು.

ಪರವಾನಗೆ ಪಡೆದುಕೊಂಡು ಸಹಕರಿಸಿ
ವಾಣಿಜ್ಯ ಉದ್ದೇಶಕ್ಕೆ ಕನ್ವರ್ಷನ್ ಆಗದೇ ಇದ್ದರೂ ವರ್ಗ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೆ ಆ ಕಟ್ಟಡಕ್ಕೆ ಪರವಾನಗೆ ನೀಡಬಹುದು ಎಂದು ಸರಕಾರದ ಆದೇಶ ಬಂದಿದ್ದು ಆದ್ದರಿಂದ ಗ್ರಾಮದಲ್ಲಿ ಈಗಾಗಲೇ ಪರವಾನಗೆ ಪಡೆದುಕೊಳ್ಳದೇ ಇರುವವರು ಕೂಡಲೇ ಪರವಾನೆಗೆ ಪಡೆದುಕೊಳ್ಳಬೇಕು, ಈ ಬಗ್ಗೆ ಕಟ್ಟಡ ಮಾಲಕರಿಗೆ ತಿಳಿಸುವುದು ಎಂದು ಸಭೆಯಲ್ಲಿ ತಿಳಿಸಲಾಯಿತು. ಪರವಾನಗೆ ಪಡೆದುಕೊಳ್ಳದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ನಿರ್ಣಯಿಸಲಾಯಿತು.

ಫಾಗಿಂಗ್ ಮಾಡಿ
ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಜಾಸ್ತಿಯಾಗುತ್ತಿದೆ. ಆದ್ದರಿಂದ ಗ್ರಾಮದ ಪ್ರಮುಖ ಕಡೆಗಳಲ್ಲಿ ಫಾಗಿಂಗ್ ಮಾಡಬೇಕು ಎಂದು ಪ್ರವೀಣ್ ಶೆಟ್ಟಿಯವರು ತಿಳಿಸಿದರು. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು ಈ ಬಗ್ಗೆ ತಕ್ಷಣವೇ ಪಂಚಾಯತ್ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದರು.

ರಸ್ತೆಗೆ ಮುಂಡಾಳಗುತ್ತು ಮಾಲ ರೈ ಹೆಸರಿಡಿ
ಸಾರೆಪುಣಿಯಿಂದ ಬೋಳೋಡಿಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆ ನಿರ್ಮಾಣಕ್ಕೆ ಈಗಾಗಗಲೇ ಮುಂಡಾಳಗುತ್ತು ಕುಟುಂಬದವರು ತಮ್ಮ ವರ್ಗ ಜಾಗವನ್ನು ಬಿಟ್ಟು ಕೊಟ್ಟಿರುತ್ತಾರೆ. ಆದ್ದರಿಂದ ಈ ರಸ್ತೆಗೆ ಕುಟುಂಬದ ಹಿರಿಯರಾದ ಮುಂಡಾಳಗುತ್ತು ಮಾಲ ರೈಯವರ ಹೆಸರನ್ನು ಇಡಬೇಕು ಎಂದು ಮುಂಡಾಳಗುತ್ತು ಕುಟುಂಬದ ಪರವಾಗಿ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿತ್ತು ಈ ಬಗ್ಗೆ ಚರ್ಚೆ ನಡೆದು ಪರಿಶೀಲನೆ ಮಾಡಿ ಮುಂದಿನ ಕ್ರಮವಹಿಸುವುದು ಎಂದು ನಿರ್ಣಯಿಸಲಾಯಿತು.

ಗ್ರಾಮ ವನ್ ಕೇಂದ್ರ ಕೇಂದ್ರ ಭಾಗದಲ್ಲಿರಲಿ
ಸರಕಾರದ ಗ್ರಾಮ ವನ್ ಕೇಂದ್ರವನ್ನು ಗ್ರಾಮದ ಯಾವುದೇ ಪ್ರದೇಶದಲ್ಲಿ ಮಾಡಬಹುದು ಎಂದು ಆದೇಶವಿದೆ. ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಿರುವ ಈ ಕೇಂದ್ರವನ್ನು ಗ್ರಾಮದ ಎಲ್ಲೋ ಒಂದು ಕಡೆ ಮಾಡುವ ಬದಲು ಗ್ರಾಮದ ಕೇಂದ್ರ ಸ್ಥಾನದಲ್ಲಿ ಮಾಡಿದರೆ ಉತ್ತಮ. ಪಂಚಾಯತ್‌ನ ಪಕ್ಕದಲ್ಲೋ ಅಥವಾ ಜನನಿಬಿಡ ಪ್ರದೇಶದಲ್ಲಿ ಮಾಡಬೇಕು ಈ ಬಗ್ಗೆ ತಹಶೀಲ್ದಾರ್‌ಗೆ ಬರೆದುಕೊಳ್ಳುವ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ, ಜಯಲಕ್ಷ್ಮೀ ಬಲ್ಲಾಳ್, ಸುಜಾತ ಮುಳಿಗದ್ದೆ, ರೇವತಿ, ವಿಠಲ ರೈ ಮಿತ್ತೋಡಿ, ಅಸ್ಮಾ, ಸುಜಾತ ಚರ್ಚೆಯಲ್ಲಿ ಪಾಲ್ಗೊಂಡರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸರಕಾರದ ಸುತ್ತೋಲೆಗಳನ್ನು ಓದಿದರು. ಕಾರ್ಯದರ್ಶಿ ಸುನಂದ ರೈ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿ ಜಯಂತ ಮೇರ್ಲ ಸಾರ್ವಜನಿಕ ಅರ್ಜಿಗಳನ್ನು ಓದಿದರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್, ಮೃದುಳ, ಶಶಿಪ್ರಭಾ ರೈ ಸಹಕರಿಸಿದ್ದರು.

` ಕೆದಂಬಾಡಿ ಗ್ರಾಮದ ಅಭಿವೃದ್ದಿಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗ್ರಾಮದಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣವಾಗಲಿದ್ದು ಗ್ರಾಮದ ಒಂದಷ್ಟು ಮಂದಿಗೆ ಕೆಲಸ ದೊರೆಯಲಿದೆ. ಇದಲ್ಲದೆ ಉದ್ಯಾನವನ, ಅಮೃತ ಸರೋವರ ನಿರ್ಮಾಣವಾಗಲಿದೆ. ಒಟ್ಟನಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಂಚಾಯತ್ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದ್ದು ಗ್ರಾಮಸ್ಥರ ಸಹಕಾರ ಅಗತ್ಯ.’ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ

LEAVE A REPLY

Please enter your comment!
Please enter your name here