ನೆಲ್ಯಾಡಿ ಪ್ರಾ.ಕೃ.ಪ.ಸಹಕಾರ ಸಂಘದ ಸಿಬ್ಬಂದಿ ಪದ್ಮನಾಭ ಶೆಟ್ಟಿಯವರಿಗೆ ಬೀಳ್ಕೊಡುಗೆ

0

ನೆಲ್ಯಾಡಿ: ಕಳೆದ 40ವರ್ಷಗಳಿಂದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕರ್ತವ್ಯ ನಿರ್ವಹಿಸಿ ಜೂ.೩೦ರಂದು ನಿವೃತ್ತಿಯಾದ ಪದ್ಮನಾಭ ಶೆಟ್ಟಿಯವರಿಗೆ ಬೀಳ್ಕೊಡುಗೆ ಜೂ.30ರಂದು ಸಂಜೆ ಸಂಘದ ಸಭಾಂಗಣದಲ್ಲಿ ನಡೆಯಿತು.

ಪದ್ಮನಾಭ ಶೆಟ್ಟಿ ಹಾಗೂ ಹೇಮ ಪಿ.ಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಮಾತನಾಡಿದ ಸಂಘದ ಅಧ್ಯಕ್ಷ ಯಸ್.ಉಮೇಶ್ ಶೆಟ್ಟಿಯವರು, 40 ವರ್ಷದ ಹಿಂದೆ ಪದ್ಮನಾಭ ಶೆಟ್ಟಿಯವರು ಕೆಲಸಕ್ಕೆ ಸೇರಿ ಸಂಘ ನಷ್ಟದಲ್ಲಿದ್ದ ಸಂದರ್ಭದಲ್ಲಿ ನೀಡುತ್ತಿದ್ದ ಸಣ್ಣ ಸಂಬಳದಲ್ಲೂ ಸೇವೆ ಸಲ್ಲಿಸಿದ್ದಾರೆ. ಸಂಘಕ್ಕಾಗಿ ರಾತ್ರಿ ವೇಳೆಯೂ ಕೆಲಸ ಮಾಡಿದ್ದಾರೆ. ಎಲ್ಲಾ ಶಾಖೆಗಳಲ್ಲೂ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿಬ್ಬಂದಿಗಳು ಆಡಳಿತ ಮಂಡಳಿಯೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡು ಕೆಲಸ ಮಾಡಿದಲ್ಲಿ ಸಂಘದ ಅಭಿವೃದ್ಧಿಯಾಗಲಿದೆ. ನಿವೃತ್ತಿಗೊಳ್ಳುತ್ತಿರುವ ಪದ್ಮನಾಭ ಶೆಟ್ಟಿಯವರ ಮುಂದಿನ ಜೀವನವು ಸುಖಕರವಾಗಿರಲಿ ಎಂದು ಹೇಳಿ ಶುಭಹಾರೈಸಿದರು.

ನಿರ್ದೇಶಕ ಸರ್ವೋತ್ತಮ ಗೌಡರವರು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿದ್ದರೂ ರೈತರು ಸಹಕಾರಿ ಸಂಘಗಳನ್ನೇ ಅವಲಂಭಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸಂಘದ ಗ್ರಾಹಕರಿಗೆ ಸರಿಯಾದ ಮಾಹಿತಿ, ಸಲಹೆಯ ಅಗತ್ಯವಿದೆ. ಈ ಕೆಲಸವನ್ನು ಪದ್ಮನಾಭ ಶೆಟ್ಟಿಯವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ನಿವೃತ್ತಿಯಾದರೂ ಅವರ ಸಹಕಾರ ಸಂಘಕ್ಕೆ ಸದಾ ಇರಲಿ ಎಂದರು. ಇನ್ನೋರ್ವ ನಿರ್ದೇಶಕ ಬಾಲಕೃಷ್ಣ ಬಾಣಜಾಲು ಮಾತನಾಡಿ, 40 ವರ್ಷಗಳ ಸುದೀರ್ಘ ಸೇವೆಯ ಅವಧಿಯಲ್ಲಿ ಪದ್ಮನಾಭ ಶೆಟ್ಟಿಯವರು ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸೇವೆಗೈದು ನಿವೃತ್ತಿಯಾಗುತ್ತಿದ್ದಾರೆ. ಸಂಘ ನಷ್ಟದಲ್ಲಿ ಇದ್ದ ಸಂದರ್ಭದಲ್ಲಿ ಅಲ್ಪ ವೇತನದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಘದ ಅಭಿವೃದ್ಧಿಯಲ್ಲಿಯೂ ಅವರ ಅನನ್ಯ ಸೇವೆ ಇದೆ ಎಂದರು. ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಮಾತನಾಡಿ, ಸಂಘದ ಕೇಂದ್ರ ಕಚೇರಿ, ಗೋಳಿತ್ತೊಟ್ಟು, ಶಿರಾಡಿ ಶಾಖೆಗಳಲ್ಲೂ ಸೇವೆ ಸಲ್ಲಿಸಿರುವ ಪದ್ಮನಾಭ ಶೆಟ್ಟಿಯವರು ಪ್ರಾಮಾಣಿಕ ಸೇವೆಯ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಅವರು ಸೇವೆಯಿಂದ ನಿವೃತ್ತರಾದರೂ ಸಂಘಕ್ಕೆ ಸಹಕಾರ, ಮಾರ್ಗದರ್ಶನ ಸಿಗಬೇಕೆಂದು ಹೇಳಿದರು. ನಿರ್ದೇಶಕಿ ಉಷಾ ಅಂಚನ್ ಮಾತನಾಡಿ, ’ಸೊಸೈಟಿಯ ಪದ್ಮಣ್ಣ’ ಎಂದೇ ಚಿರಪರಿಚಿತರಾಗಿರುವ ಪದ್ಮನಾಭ ಶೆಟ್ಟಿಯವರು ಗ್ರಾಹಕರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರು ಇತರೇ ಸಿಬ್ಬಂದಿಗಳಿಗೆ ದಾರಿದೀಪವಾಗಿದ್ದಾರೆ ಎಂದರು. ಗೋಳಿತ್ತೊಟ್ಟು ಶಾಖಾ ವ್ಯವಸ್ಥಾಪಕ ರತ್ನಾಕರ ಬಂಟ್ರಿಯಾಲ್, ಶಿರಾಡಿ ಶಾಖಾ ವ್ಯವಸ್ಥಾಪಕ ಪಿ.ಜೆ. ಸೆಬಾಸ್ಟಿನ್‌ರವರು ಪದ್ಮನಾಭ ಶೆಟ್ಟಿಯವರ ಸೇವೆಯ ಗುಣಗಾನ ಮಾಡಿದರು. ನೆಲ್ಯಾಡಿ ಸೀನಿಯರ್ ಛೇಂಬರ್ ಅಧ್ಯಕ್ಷ ಆರ್.ವೆಂಕಟ್ರಮಣರವರು ಶುಭಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮನಾಭ ಶೆಟ್ಟಿಯವರು, ಸೇವೆಯ ಅವಧಿಯಲ್ಲಿ ನನ್ನಿಂದ ಯಾವುದೇ ಲೋಪ, ದೋಷಗಳಾಗಿದ್ದಲ್ಲಿ ಕ್ಷಮೆ ನೀಡಬೇಕು.ಸಂಘದ ಆಡಳಿತ ಮಂಡಳಿ, ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಯಂ. ದಯಾಕರ ರೈಯವರು, ಸಂಘದಲ್ಲಿ 40 ವರ್ಷ ಸೇವೆ ಸಲ್ಲಿಸಿದ ಪದ್ಮನಾಭ ಶೆಟ್ಟಿಯವರು ತನ್ನ ಪ್ರಾಮಾಣಿಕ, ನಗುಮುಖದ ಸೇವೆಯಿಂದ ರೈತರ, ಗ್ರಾಹಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಂಘ ನಷ್ಟದಲ್ಲಿದ್ದ ಸಂದರ್ಭದಲ್ಲೂ ದೂರ ಸರಿಯದೇ ಸೇವೆ ಸಲ್ಲಿಸುವ ಮೂಲಕ ಸಹಕಾರ ಎಂಬ ಪದಕ್ಕೆ ನಿಜವಾದ ಅರ್ಥ ತಂದುಕೊಟ್ಟಿದ್ದಾರೆ. ಅವರ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದು ಹೇಳಿ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಪ್ರಶಾಂತ ರೈ ಅರಂತಬೈಲು, ಸುಲೋಚನಾ ಡಿ., ಅಣ್ಣು ಬಿ., ಸುಮಿತ್ರಾ, ಗುರುರಾಜ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ರಮೇಶ ನಾಯ್ಕ, ಯಂ.ಟಿ.ರಮೇಶ, ಅನಿಶ್ ಕೆ.ಜೆ., ಸಂದೀಪ್ ಕುಮಾರ್, ಅಶೋಕ ಎಸ್., ಮುಕುಂದ ಪ್ರಸಾದ್ ಎಸ್., ರೋಶನ್‌ಕುಮಾರ್ ಬಿ.ಜೆ., ಪಿ.ನಾಗೇಶ, ತಾರನಾಥ, ಪ್ರಮೋದ್, ಪಿಗ್ಮಿ ಸಂಗ್ರಾಹಕ ಕೆ.ರಘುನಾಥ, ಕ್ಯಾಂಪ್ಕೋ ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ದಿನೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಿ.ಜೆ.ಸೆಬಾಸ್ಟಿನ್ ವಂದಿಸಿದರು. ರತ್ನಾಕರ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಡಿ.,ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here