ದರ್ಬೆ ಬ್ಯಾಂಕ್ ಆಫ್ ಬರೋಡದ ಪ್ರಬಂಧಕ ನಿಖಿಲ್ ಕುಮಾರ್ ಬೀಳ್ಕೊಡುಗೆ, ಕರೆನ್ಸಿ ಟೆಸ್ಟ್‌ನ ರಮಾನಾಥ್ ನಿವೃತ್ತಿ ಸನ್ಮಾನ

0

ಪುತ್ತೂರು: ದರ್ಬೆ ಬ್ಯಾಂಕ್ ಆಫ್ ಬರೋಡ(ವಿಜಯಾ ಬ್ಯಾಂಕ್)ದಲ್ಲಿ ಪ್ರಬಂಧಕರಾಗಿರುವ ನಿಖಿಲ್ ಕುಮಾರ್‌ರವರು ಮಂಗಳೂರಿನ ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ಕಛೇರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸನ್ಮಾನ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ದರ್ಬೆ ಕರೆನ್ಸಿ ಟೆಸ್ಟ್‌ನಲ್ಲಿ ಕ್ಲರ್ಕ್ ಆಗಿರುವ ಬಿ.ರಮಾನಾಥ್‌ರವರಿಗೆ ನಿವೃತ್ತಿ ಸನ್ಮಾನ ಕಾರ್ಯಕ್ರಮವು ಜೂ.30 ರಂದು ದರ್ಬೆ ಬ್ಯಾಂಕ್ ಆಫ್ ಬರೋಡದ ಕಛೇರಿಯಲ್ಲಿ ಜರಗಿತು.


ಬ್ಯಾಂಕ್ ಆಫ್ ಬರೋಡದ ನಿವೃತ್ತ ಉದ್ಯೋಗಿ, ಕೋಟಿ-ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರು ಮಾತನಾಡಿ, ಗ್ರಾಹಕರು ಬ್ಯಾಂಕಿಗೆ ಏನಾದರೂ ಸಮಸ್ಯೆಯೊಂದಿಗೆ ಆಗಮಿಸಿ ಪ್ರಬಂಧಕ ನಿಖಿಲ್ ಕುಮಾರ್ ರವರ ಛೇಂಬರಿಗೆ ಹೋಗಿ ಹೊರಗೆ ಬರುವಾಗ ಬಹಳ ನಿರಾಳತೆಯಿಂದ ಇರುತ್ತಿದ್ದರು. ಎಲ್ಲರೊಂದಿಗೆ ಬಹಳ ಆತ್ಮೀಯತೆಯನ್ನು ಮೈಗೂಡಿಸಿಕೊಂಡಿರುವ ನಿಖಿಲ್ ಕುಮಾರ್ ರವರು ಮುಂದೊಂದು ದಿನ ಪ್ರಾದೇಶಿಕ ಕಛೇರಿಯಾದಾಗ ಮತ್ತೊಮ್ಮೆ ಬರಲಿ ಎಂದು ಹಾರೈಸಿದರು.

ದರ್ಬೆ ಕರೆನ್ಸಿ ಟೆಸ್ಟ್‌ನ ಪ್ರಬಂಧಕ ಪ್ರವೀಣ್ ಕುಮಾರ್ ರೈ ಸ್ವಾಗತಿಸಿ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ರಮಾನಾಥ್‌ರವರು ದರ್ಬೆ ಕರೆನ್ಸಿ ಟೆಸ್ಟ್ ಬ್ರಾಂಚ್‌ನಲ್ಲಿ ಸೇವೆಯನ್ನು ಆರಂಭಿಸಿ ಇದೀಗ ಅಲ್ಲಿಯೇ ನಿವೃತ್ತಿ ಹೊಂದುತ್ತಿದ್ದು ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಕೆಗಳು. ಅದರಂತೆ ವರ್ಗಾವಣೆಗೊಳ್ಳುತ್ತಿರುವ ಶಾಂತ ಸ್ವಭಾವದ ವ್ಯಕ್ತಿಯಾಗಿರುವ ದರ್ಬೆ ಬ್ರಾಂಚ್‌ನ ಪ್ರಬಂಧಕ ನಿಖಿಲ್ ಕುಮಾರ್‌ರವರು ಇಲ್ಲಿ ಸುಮಾರು ರೂ.೪೦ ಕೋಟಿ ಅಧಿಕ ವ್ಯವಹಾರವನ್ನು ಮಾಡುತ್ತಾ ಬಹಳಷ್ಟು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ ಎಂದು ಹೇಳಿ ಅವರ ಮುಂದಿನ ಸೇವೆಗೆ ಶುಭ ಹಾರೈಸಿದರು.

ಕರೆನ್ಸಿ ಟೆಸ್ಟ್‌ನ ಉದ್ಯೋಗಿ ರಾಮಣ್ಣ ಪೂಜಾರಿ ಮಾತನಾಡಿ, ನಿವೃತ್ತಿಗೊಂಡ ರಮಾನಾಥ್‌ರವರ ಜಾಗಕ್ಕೆ ಇದೀಗ ನಾನು ಬಂದಿದ್ದೇನೆ. ರಮಾನಾಥ್‌ರವರ ನಡೆ-ನುಡಿ, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತುಕೊಳ್ಳುವ ಗುಣ ಮೆಚ್ಚತಕ್ಕದ್ದು ಮಾತ್ರವಲ್ಲ ಅವರದ್ದು ಸಂತೋಷದ ವ್ಯಕ್ತಿತ್ವ. ಭಗವಂತನು ಅವರಿಗೆ ಪರಿಪೂರ್ಣ ಜೀವನ, ಆರೋಗ್ಯಪೂರ್ಣ ಆಯುಷ್ಯ ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.

ದರ್ಬೆ ಬ್ಯಾಂಕ್ ಆಫ್ ಬರೋಡದ ಆಫೀಸರ್ ಗಾಯತ್ರಿ ಮಾತನಾಡಿ, ತಾನು ಧರ್ಮಸ್ಥಳ ಬ್ರಾಂಚಿನಲ್ಲಿ ಸೇವೆಗೈಯುತ್ತಿದ್ದ ಸಂದರ್ಭದಲ್ಲಿ ರಮಾನಾಥ್‌ರವರನ್ನು ಬಲ್ಲೆ. ಅವರದ್ದು ಬಹಳ ಸ್ನೇಹಪರ ವ್ಯಕ್ತಿತ್ವ. ವರ್ಗಾವಣೆಗೊಳ್ಳುತ್ತಿರುವ ಪ್ರಬಂಧಕ ನಿಖಿಲ್ ಕುಮಾರ್‌ರವರು ಗ್ರಾಹಕರಲ್ಲಿ ಅವರು ನಡೆದುಕೊಳ್ಳುವ ರೀತಿ ಪ್ರಶಂಸನೀಯ. ಅವರು ಇಲ್ಲಿಗೆ ಬಂದ್ಮೇಲೆ ನಮ್ಮಲ್ಲಿ ವ್ಯವಹಾರ ದ್ವಿಗುಣಗೊಂಡಿದೆ. ಸಿಬ್ಬಂದಿಗಳಿಗೆ ಯಾವುದೇ ಒತ್ತಡವಿಲ್ಲದೆ ಕಾರ್ಯ ನಿರ್ವಹಿಸಲು ಅವರ ಸಹಕಾರ ಬಹಳಷ್ಟಿದೆ ಎಂದು ಹೇಳಿದರು.

ವಿಜಯಾ ಬ್ಯಾಂಕಿನ ನಿವೃತ್ತ ಉದ್ಯೋಗಿಗಳಾದ ಜೈರಾಜ್ ಭಂಡಾರಿ, ಬಾಲಕೃಷ್ಣ ರೈ, ವಾಸು ಪೂಜಾರಿ, ಹೇಮಾವತಿ, ಕುಂಬ್ರ ಬ್ರಾಂಚಿನ ಆಫೀಸರ್ ಧನಂಜಯ್ ರೈ, ದರ್ಬೆ ಕರೆನ್ಸಿ ಟೆಸ್ಟ್‌ನ ಸಹಾಯಕ ಪ್ರಬಂಧಕ ವಿಜಯ ಕುಮಾರ್, ನ್ಯಾಯವಾದಿ ಸುರೇಶ್ ರೈ, ಪಿಡಬ್ಲ್ಯೂ ಕಾಂಟ್ರಾಕ್ಟರ್ ಮಹಮದ್ ರಫೀಕ್, ಪದ್ಮಶ್ರೀ ಸೋಲಾರ್‌ನ ಸೀತಾರಾಮ್ ರೈ, ದರ್ಬೆ ಬ್ಯಾಂಕ್ ಆಫ್ ಬರೋಡ ಹಾಗೂ ದರ್ಬೆ ಕರೆನ್ಸಿ ಟೆಸ್ಟ್‌ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬಿ.ರಮಾನಾಥ್..
1991, ಜನವರಿ 14 ರಂದು ದರ್ಬೆ ವಿಜಯಾ ಬ್ಯಾಂಕಿನ ಕರೆನ್ಸಿ ಟೆಸ್ಟ್‌ನಲ್ಲಿ ಉದ್ಯೋಗಕ್ಕೆ ಸೇರಿದ ಬಿ.ರಮಾನಾಥ್ ರವರು ಬಳಿಕ ಮಾಣಿ, ಧರ್ಮಸ್ಥಳ, ಕಾಣಿಯೂರು ಇಲ್ಲಿ ಸೇವೆ ಸಲ್ಲಿಸಿ ಪುನಹ ದರ್ಬೆ ಕರೆನ್ಸಿ ಟೆಸ್ಟ್ ಬ್ರಾಂಚಿಗೆ ವರ್ಗಾವಣೆಗೊಂಡು ಸೇವೆಯನ್ನು ಮುಂದುವರೆಸಿ ನಿವೃತ್ತಿಗೊಂಡಿರುವರು. ಪ್ರಸ್ತುತ ರಮಾನಾಥ್ ರವರು ಪತ್ನಿ ಪರ್ಪುಂಜ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಚಂದ್ರಾವತಿ, ಪುತ್ರಿಯರಾದ ವೈದ್ಯೆಯಾಗಿರುವ ದೀಕ್ಷಾ ಬಿ.ಆರ್, ಸವಣೂರು ಎಸ್.ಡಿ.ಸಿ.ಸಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿರುವ ಪ್ರತೀಕ್ಷಾ ಬಿ.ಆರ್‌ರವರೊಂದಿಗೆ ಸಂಪ್ಯ ಬೈಲಾಡಿಯಲ್ಲಿ ವಾಸವಾಗಿದ್ದಾರೆ.

ನಿಖಿಲ್ ಕುಮಾರ್..
ಸುರತ್ಕಲ್ ನಿವಾಸಿ ಭರತ್ ಕುಮಾರ್ ಹಾಗೂ ಮೋಹಿನಿ ದಂಪತಿ ಪುತ್ರರಾಗಿರುವ ಬಿ.ಇ ಇಂಜಿನಿಯರಿಂಗ್ ಪದವೀಧರರಾಗಿರುವ ನಿಖಿಲ್ ಕುಮಾರ್‌ರವರು ಬಳ್ಳಾರಿ ತೋರಣಗಲ್ಲು ವಿಜಯಾ ಬ್ಯಾಂಕಿನಲ್ಲಿ 2008 ರಲ್ಲಿ ಕರ್ತವ್ಯಕ್ಕೆ ಸೇರಿದ್ದರು. ಬಳಿಕ 2010 ರಿಂದ 2019ರ ವರೆಗೆ ಬೆಂಗಳೂರಿನ ವಿಜಯಾ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿ, 2019ರಲ್ಲಿ ಪುತ್ತೂರಿನ ದರ್ಬೆ ವಿಜಯಾ ಬ್ಯಾಂಕಿಗೆ ವರ್ಗಾವಣೆಗೊಂಡಿದ್ದರು. ಇದೀಗ ಮಂಗಳೂರಿನ ಬ್ಯಾಂಕ್ ಆಫ್ ಬರೋಡದ ವಲಯ ಕಛೇರಿಗೆ ನಿಖಿಲ್ ಕುಮಾರ್‌ರವರು ವರ್ಗಾವಣೆಗೊಂಡಿರುವರು.

LEAVE A REPLY

Please enter your comment!
Please enter your name here