ಮಾನಹಾನಿ ಪ್ರಕರಣಕ್ಕೆ ತಡೆ: ಡಾ.ಕಕ್ಕಿಲ್ಲಾಯಗೆ ನೋಟಿಸ್

0

ಮಂಗಳೂರು: ಐಎಂಎ ಮಂಗಳೂರು ಘಟಕದ ಪದಾಧಿಕಾರಿಗಳ ವಿರುದ್ಧ ಡಾ.ಬಿ.ಎಸ್.ಕಕ್ಕಿಲ್ಲಾಯರವರು ಹೂಡಿರುವ ಮಾನಹಾನಿ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಡಾ.ಕಕ್ಕಿಲ್ಲಾಯ ಹೂಡಿರುವ ಮಾನಹಾನಿ ದಾವೆಯ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಐಎಂಎ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಪ್ರತಿವಾದಿ ಡಾ.ಕಕ್ಕಿಲ್ಲಾಯ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆ.26ಕ್ಕೆ ಮುಂದೂಡಿದ್ದಾರೆ. ಕೋವಿಡ್ ನಿರ್ಬಂಧ ಜಾರಿಯಲ್ಲಿದ್ದ ಅವಧಿಯಲ್ಲಿ ಮಾಸ್ಕ್ ಇಲ್ಲದೇ ಸೂಪರ್ ಮಾರ್ಕೆಟ್‌ನಲ್ಲಿ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಪ್ರವೇಶಿಸಿದ ಸಂದರ್ಭ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮೂಲತಃ ವೈದ್ಯರಾಗಿರುವ ಕಕ್ಕಿಲ್ಲಾಯ ಅವರ ವರ್ತನೆ ಬಗ್ಗೆ ಮಾಧ್ಯಮದವರು ಐಎಂಎ ಪದಾಧಿಕಾರಿಗಳನ್ನು ಪ್ರಶ್ನಿಸಿದಾಗ, ಮಾಸ್ಕ್ ಇಲ್ಲದೇ ಸೂಪರ್ ಮಾರ್ಕೆಟ್‌ಗೆ ತೆರಳಿದ್ದು ತಪ್ಪು ಎಂದು ಉತ್ತರಿಸಿದ್ದರು. ಇದರ ವಿರುದ್ಧ ಡಾ.ಕಕ್ಕಿಲ್ಲಾಯ, ಮಂಗಳೂರು ಐಎಂಎ ಪದಾಧಿಕಾರಿಗಳು, ರಾಜ್ಯ ಐಎಂಎ ವೈದ್ಯರ ಕಿರುಕುಳ ತಡೆ ಸಮಿತಿಯ ಅಧ್ಯಕ್ಷ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಮತ್ತಿತರರ ವಿರುದ್ಧ ಮಾನನಷ್ಟ ಮೊಕದ್ದಮೆ (ಸಿಸಿ ನಂ. 462/2022) ಸಲ್ಲಿಸಿದ್ದರು. ಈ ದಾವೆಯ ವಿಚಾರಣೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಡಾ.ಮುದ್ರಜೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಕೆದಂಬಾಡಿ ಡಿ.ಕೃಷ್ಣಮೂರ್ತಿ ವಾದಿಸಿದ್ದರು.

LEAVE A REPLY

Please enter your comment!
Please enter your name here