ಬೆಟ್ಟಂಪಾಡಿ- ಪಾರ ಸಂಪರ್ಕ ಕಾಲು ದಾರಿಯಲ್ಲಿ ತಡೆಗೋಡೆ ಕುಸಿತ: ನಿತ್ಯ ಸಂಚಾರಕ್ಕೆ ಅಡಚಣೆ

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮೂರ್ಕಾಜೆ – ಪಾರ ವನ್ನು ಸಂಪರ್ಕಿಸುವ ಪಂಚಾಯತ್ ಕಾಲು ದಾರಿಯಲ್ಲಿ ಹೊಳೆಯೊಂದರ ಬದಿಯ ತಡೆಗೋಡೆ ಕುಸಿದ ಪರಿಣಾಮ ದಾರಿ ಬಂದ್ ಆಗಿ ಶಾಲಾ ಮಕ್ಕಳು ಸೇರಿದಂತೆ ನಿತ್ಯ ಸಂಚಾರ ಮಾಡುವವರಿಗೆ ಭಾರೀ ಅಡಚಣೆ ಉಂಟಾಗಿದೆ.


ಹೊಳೆಯೊಂದಕ್ಕೆ ಕಾಲು ಸಂಕ ನಿರ್ಮಿಸಲಾಗಿದ್ದು ಅದರ ತಳಭಾಗದಲ್ಲಿ ತಡೆಗೋಡೆ ಕುಸಿದು ಕಾಲು ದಾರಿ ಇಲ್ಲದಂತಾಗಿದೆ. ದೂರದ ಪಾರ ಮೂರ್ಕಾಜೆ ಪರಿಸರದ ಶಾಲಾ ಮಕ್ಕಳು, ಉದ್ಯೋಗಿಗಳು, ಕಾರ್ಮಿಕರು ಸೇರಿದಂತೆ ನೂರಾರು ಮಂದಿ ನಡೆದುಕೊಂಡು ಹೋಗಲು ನೂರಾರು ವರ್ಷಗಳಿಂದ ಈ ಏಕೈಕ ಕಾಲು ದಾರಿಯನ್ನೇ ಅವಲಂಬಿಸಿದ್ದಾರೆ. ಆದರೆ ಕಾಲು ದಾರಿಯಲ್ಲಿ ಉಂಟಾದ ಈ ಸಮಸ್ಯೆಯಿಂದಾಗಿ ಇದೀಗ ನಿತ್ಯ ಸಂಚಾರಕ್ಕೆ ತೊಡಕಾಗಿದೆ.

ಆಗಿರುವ ತೊಂದರೆ ಬಗ್ಗೆ ಈಗಾಗಲೇ ಪಂಚಾಯತ್ ಸದಸ್ಯರಿಗೆ, ಜನಪ್ರತಿನಿಧಿಗಳಿಗೆ ತಿಳಿಸಲಾಗಿದೆ. ಆದಷ್ಟು ಶೀಘ್ರವಾಗಿ ದಾರಿ ಸಮಸ್ಯೆ ಸರಿಪಡಿಸಿ ನಾಗರಿಕರಿಗೆ ನಡೆದುಹೋಗಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಅಲ್ಲದೇ ಇದೇ ದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ದಟ್ಟವಾದ ಪೊದರು ಬಂದಿದ್ದು, ನಡೆದು ಹೋಗುವಾಗ ವಿಷಜಂತುಗಳ ಕಡಿತದ ಭಯವೂ ಎದುರಾಗಿದೆ. ಇದನ್ನು ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಇದೇ ದಾರಿಯ ನಿತ್ಯ ಸಂಚಾರಿಗರು ಓರ್ವರು ತಿಳಿಸಿದ್ದಾರೆ.

ಸದ್ಯಕ್ಕೆ ತಾತ್ಕಾಲಿಕ ದಾರಿ
ಕಾಲು ದಾರಿ ಕುಸಿತಗೊಂಡಿರುವುದು ಗಮನಕ್ಕೆ ಬಂದಿದೆ. ನಾಳೆ ಸ್ಥಳ ಪರಿಶೀಲನೆ ಮಾಡಿ ಸದ್ಯಕ್ಕೆ ಮಳೆಯ ಕಾರಣ ತಾತ್ಕಾಲಿಕ ದಾರಿ ಮಾಡಿಕೊಡಲು ಪ್ರಯತ್ನಿಸುತ್ತೇವೆ. ಕುಸಿತಗೊಂಡಿರುವಲ್ಲಿ ಶಾಶ್ವತವಾಗಿ ತಡೆಗೋಡೆ ನಿರ್ಮಿಸಲು ಶಾಸಕರಿಗೆ ಮನವಿ ಸಲ್ಲಿಸುತ್ತೇವೆ. ಇಲ್ಲದಿದ್ದರೆ ಪಂಚಾಯತ್ ಕ್ರಿಯಾಯೋಜನೆಯಲ್ಲಿಟ್ಟು ಮುಂದಕ್ಕೆ ಶಾಶ್ವತವಾದ ತಡೆಗೋಡೆ ಮಾಡಿ ದಾರಿ ಮಾಡಿಕೊಡಲಾಗುತ್ತದೆ.ವಿನೋದ್ ಕುಮಾರ್ ರೈ ಉಪಾಧ್ಯಕ್ಷರು, ಬೆಟ್ಟಂಪಾಡಿ ಗ್ರಾ.ಪಂ.

LEAVE A REPLY

Please enter your comment!
Please enter your name here