ಕುಂಬ್ರ: ಒಳನಾಡು ಮೀನುಗಾರಿಕೆಗೆ ಅವಕಾಶಗಳು, ಇಲಾಖಾ ಸವಲತ್ತುಗಳ ಮಾಹಿತಿ ಕಾರ್ಯಗಾರ

0

  • ಮೀನುಗಾರಿಕಾ ಕೃಷಿಗೆ ಮಾರುಕಟ್ಟೆ ದೊರಕಿಸುವಲ್ಲಿ ಪ್ರಯತ್ನಗಳು ನಡೆಯುತ್ತಿದೆ: ಎಸ್.ಅಂಗಾರ

ಪುತ್ತೂರು: ಕಡಿಮೆ ಜನ, ಕಡಿಮೆ ಖರ್ಚು ಮತ್ತು ಹೆಚ್ಚು ಆದಾಯ ತರುವ ಕೃಷಿ ಇದ್ದರೆ ಅದು ಮೀನುಗಾರಿಕಾ ಕೃಷಿ ಆಗಿದೆ. ಆದರೆ ಮೀನುಗಾರಿಕಾ ಕೃಷಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ ಎಂಬ ಆರೋಪ ಇದೆ. ಆದ್ದರಿಂದ ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. ರೈತರ ಬೆಳೆದ ಮೀನುಗಳಿಗೆ ಸರಿಯಾದ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಇಲಾಖೆ ಮತ್ತು ಸರಕಾರದಿಂದ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜನಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದರು.


ಅವರು ಜು.2 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಪುತ್ತೂರ ಮುತ್ತು ರೈತ ಉತ್ಪಾದಕ ಸಂಸ್ಥೆ ಪುತ್ತೂರು ಮತ್ತು ಮೀನುಗಾರಿಕಾ ಇಲಾಖೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಒಳನಾಡು ಮೀನುಗಾರಿಕೆಗೆ ಅವಕಾಶಗಳು ಹಾಗೂ ಇಲಾಖಾ ಸವಲತ್ತುಗಳ ಮಾಹಿತಿ ಕಾರ್ಯಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಒಳನಾಡು ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯಾ ಸಹಕಾರಿ ಸಂಘಗಳ ಮೂಲಕ ಮೀನುಗಾರಿಕೆ ಮಾಡುವವರಿಗೆ ಸಾಲ ಸೌಲಭ್ಯಗಳನ್ನು ನೀಡುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದ ಸಚಿವರು, ಮೀನುಗಾರಿಕೆ ಬಗ್ಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ಕಾರ್ಯಗಾರಗಳನ್ನು ಇಟ್ಟುಕೊಂಡು ರೈತರಿಗೆ ಮೀನುಗಾರಿಕಾ ಕೃಷಿ ಮಾಡುವಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ ಎಂದರು. ಪಂಚಾಯತ್‌ನ ನರೇಗಾ ಯೋಜನೆಯಡಿ ಕೆರೆಗಳನ್ನು ನಿರ್ಮಿಸಿ ಅದರಲ್ಲೂ ಮೀನು ಕೃಷಿ ಮಾಡುವ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಲ್ಲಿ ಮಾತುಕತೆ ನಡೆಸಲಾಗುವುದು ಎಂದರು.


ಪ್ರವಾಸೋದ್ಯಮ ಕ್ಷೇತ್ರದಲ್ಲೂ ಮೀನುಗಾರಿಕೆಯನ್ನು ಬಳಸಿಕೊಳ್ಳಲಾಗುತ್ತಿದ್ದು ಈಗಾಗಲೇ ಬೆಂಗಳೂರಿನಲ್ಲಿ ಅಕ್ವೇರಿಯಂ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದ ಅಂಗಾರರವರು, ಮಂಗಳೂರಿನ ತಣ್ಣೀರುಪಂಥ ಎಂಬಲ್ಲಿ ಬೃಹತ್ ಅಕ್ವೇರಿಯಂ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು ಆ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಮೀನುಗಾರಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.


ಮೀನುಗಾರಿಕೆಯಿಂದ ಉತ್ತಮ ಲಾಭ ಪಡೆಯಬಹುದಾಗಿದೆ : ಸಂಜೀವ ಮಠಂದೂರು
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ಮೀನು ಒಂದು ಪೌಷ್ಠಿಕ ಆಹಾರವಾಗಿದೆ. ಆಹಾರ ಅಲ್ಲದೆ ಔಷಧಿ ಸೇರಿದಂತೆ ಇತರ ಉತ್ಪನ್ನಗಳಿಗೂ ಮೀನು ಸರಬರಾಜು ಆಗುತ್ತಿದೆ. ಸರಿಯಾದ ಮಾಹಿತಿ ಮತ್ತು ವಿಧಾನದಲ್ಲಿ ಒಳನಾಡು ಮೀನುಗಾರಿಕೆ ಮಾಡಿದರೆ ಅದರಿಂದ ಉತ್ತಮ ಲಾಭವನ್ನು ಪಡೆಯಬಹುದು, ಮೀನುಗಾರಿಕೆ ಜನರ ಆದಾಯವನ್ನು ಹೆಚ್ಚಿಸುವುದು ಅಲ್ಲದೆ ಆರ್ಥಿಕವಾಗಿಯೂ ಸದೃಢ ಮಾಡುತ್ತದೆ ಎಂದ ಶಾಸಕರು ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಸರಕಾರ ಕೂಡ ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.ಪ್ರಧಾನಿಯವರ ಆತ್ಮನಿರ್ಭರ ಭಾರತದ ಕನಸಿನ ಹೆಜ್ಜೆಯಾಗಿ ರೈತ ಉತ್ಪಾದಕ ಸಂಸ್ಥೆ ಆರಂಭವಾಗಿದ್ದು ಆ ಮೂಲಕ ರೈತರು ಬೆಳೆದ ಉತ್ಪನ್ನಗಳಿಗೆ ಯಾವುದೇ ದಲ್ಲಾಳಿಗಳ ಹಾವಳಿ ಇಲ್ಲದೆ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆಯನ್ನು ಈ ಸಂಸ್ಥೆ ಮಾಡಿಕೊಡಲಿದೆ ಎಂದರು.

ಅತಿಥಿಗಳಾಗಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಒಳನಾಡು ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆಯು ಮೀನುಗಾರಿಕಾ ಇಲಾಖೆಯ ಜೊತೆ ಸೇರಿಕೊಂಡು ಈ ಮಾಹಿತಿ ಕಾರ್ಯಗಾರವನ್ನು ಮಾಡಿದೆ. ರೈತರು ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಮೀನುಗಾರಿಕಾ ಕೃಷಿ ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆದುಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು.

ಮೀನುಗಾರಿಕಾ ಇಲಾಖೆ ಮಂಗಳೂರು ಇದರ ಜಂಟಿ ನಿರ್ದೇಶಕ ಹರೀಶ್ ಕುಮಾರ್‌ರವರು ಮಾತನಾಡಿ, ಮೀನುಗಾರಿಕೆ ಒಂದು ಉತ್ತಮ ಕೃಷಿ ಆಗಿದೆ. ಕಡಿಮೆ ಖರ್ಚು ಮತ್ತು ಕಡಿಮೆ ಜನರ ಶ್ರಮದೊಂದಿಗೆ ಈ ಕೃಷಿಯನ್ನು ಮಾಡಬಹುದಾಗಿದೆ. ಆಹಾರದೊಂದಿಗೆ ಉದ್ಯೋಗ ಅವಕಾಶ ಮತ್ತು ಆರ್ಥಿಕ ವ್ಯವಸ್ಥೆಯನ್ನು ತರುವ ಕೃಷಿ ಇದಾಗಿದೆ ಎಂದರು. ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಸರಿಯಾದ ಮಾಹಿತಿ ಮತ್ತು ವಿಧಾನವನ್ನು ಅನುಸರಿಸಿ ಮೀನುಗಾರಿಕೆ ಮಾಡಿದರೆ ಖಂಡಿತವಾಗಿಯೂ ಇದರಿಂದ ಲಾಭ ಪಡೆಯಬಹುದು, ಮುಖ್ಯವಾಗಿ ಮಾರುಕಟ್ಟೆ ಸಮಸ್ಯೆ ಇದೆ, ಸರಿಯಾದ ಮಾರುಕಟ್ಟೆ ದೊರೆತರೆ ಮೀನುಗಾರಿಕೆಯನ್ನು ಉತ್ತಮ ಲಾಭ ಪಡೆಯಬಹುದು, ಈ ಬಗ್ಗೆ ಸರಕಾರ ಕೂಡ ಪ್ರಯತ್ನ ಪಡುತ್ತಿದೆ ಮುಂದಿನ ದಿನಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಆಗಬಹುದು ಎಂದರು. ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಡಾ| ಸುಶ್ಮಿತಾ ರಾವ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಈಗಾಗಲೇ ಮೀನುಗಾರಿಕಾ ಕೃಷಿ ಆರಂಭಿಸಿರುವ ಗ್ರಾಮದ ಕೆಲವು ಮಂದಿಗೆ ಈ ಸಂದರ್ಭದಲ್ಲಿ ಮೀನಿನ ಮರಿಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ರೈತ ಉತ್ಪಾದಕ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಉಪಸ್ಥಿತರಿದ್ದರು. ಶುತಿ ಪಲ್ಲತ್ತಾರು ಪ್ರಾರ್ಥಿಸಿದರು. ಪುತ್ತೂರು ಮುತ್ತು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಹರೀಶ್ ಬಿಜತ್ರೆ ವಂದಿಸಿದರು. ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.

ಮಾಹಿತಿ ಕಾರ್ಯಗಾರ
ಒಳನಾಡು ಮೀನುಗಾರಿಕೆಗೆ ಅವಕಾಶಗಳು ಹಾಗೂ ಇಲಾಖಾ ಸವಲತ್ತುಗಳು ಎಂಬ ವಿಷಯದಲ್ಲಿ ಸುಮಾರು ೨.೩೦ ಗಂಟೆಗಳ ಕಾಲ ಮಾಹಿತಿ ಕಾರ್ಯಗಾರ ನಡೆಯಿತು.ಇದರಲ್ಲಿ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ| ಶಿವಕುಮಾರ್ ಮಗದರವರು ಮೀನುಗಾರಿಕೆಯ ಬಗ್ಗೆ ಸವಿವರ ಮಾಹಿತಿ ನೀಡಿದರು. ಮೀನಿನ ಆಹಾರದ ಬಗ್ಗೆ ಛತ್ತಿಸ್‌ಗಢದ ಅಬಿಸ್ ಸಂಸ್ಥೆಯ ಮೊದೀನ್‌ರವರು ಮಾಹಿತಿ ನೀಡಿದರು. ಇದಲ್ಲದೆ ಕೃಷಿ ವಿಜ್ಞಾನ ದ.ಕ ಜಿಲ್ಲೆ ಇದರ ಮುಖ್ಯಸ್ಥ ಡಾ| ಟಿ.ಜೆ ರಮೇಶ್, ಮೀನುಗಾರಿಕಾ ಇಲಾಖೆಯ ಸವಲತ್ತುಗಳ ಬಗ್ಗೆ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್ ಮಾಹಿತಿ ನೀಡಿದರು. ಕೆಯ್ಯೂರು, ಕೆದಂಬಾಡಿ, ಒಳಮೊಗ್ರು, ಮುಂಡೂರು, ಆರ್ಯಾಪು ಗ್ರಾಮ ಸೇರಿದಂತೆ ತಾಲೂಕಿನ ಹಲವು ಮಂದಿ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಉಜ್ವಲ ಉಚಿತ ಗ್ಯಾಸ್ ವಿತರಣೆ
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗ್ಯಾಸ್ ಸಂಪರ್ಕ ಕಾರ್ಯಕ್ರಮದಡಿ ಕುಂಬ್ರ ಬೂಡಿಯಾರ್ ಇಂಡೇನ್ ಗ್ಯಾಸ್ ಸರ್ವೀಸ್ ಸಂಸ್ಥೆಯ ವತಿಯಿಂದ ಸುಮಾರು ೫೦ ಕ್ಕೂ ಅಧಿಕ ಮಂದಿಗೆ ಗ್ಯಾಸ್ ವಿತರಿಸಲಾಯಿತು. ಸಚಿವ ಎಸ್.ಅಂಗಾರ ಹಾಗೂ ಶಾಸಕ ಸಂಜೀವ ಮಠಂದೂರುರವರು ಗ್ಯಾಸ್ ವಿತರಿಸಿ ಶುಭ ಹಾರೈಸಿದರು.

ಪುತ್ತೂರಲ್ಲಿ ಉಪನಿರ್ದೇಶಕರ ಕಛೇರಿ ಆರಂಭ
ಮೀನುಗಾರಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾದರೆ ಅಥವಾ ಇತರ ಯಾವುದೇ ಕೆಲಸ ಆಗಬೇಕಿದ್ದರೂ ಮಂಗಳೂರಿಗೆ ಹೋಗಬೇಕಾದ ಪ್ರಸಂಗ ಇತ್ತು. ಆದರೆ ಇದೀಗ ಪುತ್ತೂರಲ್ಲೇ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಛೇರಿ ಆರಂಭವಾಗಿದ್ದು ಸದ್ಯದಲ್ಲೆ ಅಧಿಕಾರಿಯವರು ಸಾರ್ವಜನಿಕರ ಭೇಟಿಗೆ ಲಭ್ಯವಾಗಲಿದ್ದಾರೆ. ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿನಲ್ಲಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಛೇರಿ ಆರಂಭವಾಗಿದ್ದು ಆ ಮೂಲಕ ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಭಾಗದ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

ಮಡೆಂಜಿ ಮೀನು
ತುಳುನಾಡಿನಲ್ಲಿ ಬಹುಬೇಡಿಕೆಯ ಮೀನು ಆಗಿರುವ ಮಡೆಂಜಿ ಮೀನಿನ ಬಗ್ಗೆ ಮಾತನಾಡಿದ ಸಚಿವ ಎಸ್.ಅಂಗಾರರವರು ಇದೊಂದು ಔಷಧಿಯ ಗುಣವುಳ್ಳ ಮೀನು ಆಗಿದೆ. ಈ ಮೀನಿನ ಸಂತತಿ ಅಳಿವಿನಂಚಿನಲ್ಲಿದ್ದು ಇದನ್ನು ಉಳಿಸುವ ನಿಟ್ಟಿನಲ್ಲಿ ಮಡೆಂಜಿ ಮೀನನ್ನು ಕೂಡ ಮೀನುಗಾರಿಕೆಯಲ್ಲಿ ಬಳಸಿಕೊಳ್ಳಲಾಗಿದೆ, ಮಡೆಂಜಿ ಮೀನನ್ನು ಕೂಡ ಸಾಕಿ ಹೆಚ್ಚು ಲಾಭ ಪಡೆದುಕೊಳ್ಳಬಹುದು ಎಂದರು.

ಕೊಳವೆ ಬಾವಿ ಮತ್ತು ಭೂಕಂಪನ
ಸುಳ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಬರೋಬ್ಬರಿ 5 ಬಾರಿ ಭೂಕಂಪನ ಉಂಟಾಗಿರುವ ಬಗ್ಗೆಯೂ ಸಚಿವರು ಸಭೆಯಲ್ಲಿ ಪ್ರಸ್ತಾಪ ಮಾಡಿ ಎಲ್ಲವೂ ಮನುಷ್ಯನ ಸ್ವಾರ್ಥದಿಂದ ಆಗುತ್ತಿದೆ. ಮನುಷ್ಯನ ಆಸೆಗಳಿಗೆ ಕೊನೆ ಇಲ್ಲ ಆದ್ದರಿಂದಲೇ ಇದೆಲ್ಲಾ ಆಗುತ್ತಿದೆ ಎಂದರು. ನಾವು ನೀರು ಇದ್ದರೂ ಕೊಳವೆ ಬಾವಿಗಳನ್ನು ಕೊರೆಯುತ್ತೇವೆ. ಕೆರೆಯ ಪಕ್ಕದಲ್ಲಿ ಹೋಗಿ ಹೋಗಿ ನದಿಯ ಪಕ್ಕದಲ್ಲೂ ಕೊಳವೆ ಬಾವಿ ಕೊರೆಯುತ್ತೇವೆ. ಒಂದು ಗ್ರಾಪಂ ವ್ಯಾಪ್ತಿಗೆ 50 ಕ್ಕಿಂತಲೂ ಹೆಚ್ಚು ಕೊಳವೆ ಬಾವಿಗಳಿಗೆ ಇದರಿಂದಾಗಿಯೇ ಭೂಕಂಪನಗಳು ಆಗುತ್ತಿವೆ ಎಂದು ವಿಜ್ಞಾನಿಗಳು ಕೂಡ ಹೇಳುತ್ತಿದ್ದಾರೆ ಎಂದ ಸಚಿವರು ನಾವು ಕೆರೆ ಬಾವಿಗಳನ್ನು ಉಳಿಸಬೇಕಾದ ಅಗತ್ಯತೆ ಇದೆ ಎಂದರು.

ರೈತರು ಬೆಳೆದ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆ ಆರಂಭವಾಗಿದ್ದು ದಲ್ಲಾಳಿಗಳಿಲ್ಲದೆ ರೈತರೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಲಿದೆ. ಪ್ರಧಾನಿಯವರ ಆತ್ಮ ನಿರ್ಭರ ಭಾರತದ ಹೆಜ್ಜೆಯಾಗಿ ಸಂಸ್ಥೆ ಕೆಲಸ ಮಾಡಲಿದೆ. ಈಗಾಗಲೇ ಸಂಸ್ಥೆಯಲ್ಲಿ 300 ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ರೈತರಿಗಾಗಿ ಇರುವ ಸಂಸ್ಥೆ ಇದಾಗಿದೆ. ಇದರ ಮೊದಲ ಹೆಜ್ಜೆಯಾಗಿ ಮೀನುಗಾರಿಕಾ ಕೃಷಿ ಮಾಹಿತಿ ಕಾರ್ಯಗಾರ ಆಗಿದೆ.’- ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷರು ರೈತ ಉತ್ಪಾದಕ ಸಂಸ್ಥೆ

LEAVE A REPLY

Please enter your comment!
Please enter your name here