ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆ

0

  • ಕಟ್ಟಡ ಸಂಖ್ಯೆ ಹೊಂದಿರುವ ಫಲಾನುಭವಿಗಳಿಗೆ ಮಾತ್ರ 94ಸಿ ದೃಢೀಕರಣಕ್ಕೆ ನಿರ್ಣಯ

ಪೆರಾಬೆ: 94ಸಿಗೆ ಸಂಬಂಧಿಸಿ ಕಟ್ಟಡ ಸಂಖ್ಯೆ ಹೊಂದಿರುವ ಫಲಾನುಭವಿಗಳಿಗೆ ಮಾತ್ರ ಗ್ರಾ.ಪಂ.ನಿಂದ ದೃಢೀಕರಣ ಪತ್ರ ನೀಡಲು ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.


ಸಭೆ ಗ್ರಾ.ಪಂ.ಅಧ್ಯಕ್ಷ ಮೋಹನದಾಸ್ ರೈಯವರ ಅಧ್ಯಕ್ಷತೆಯಲ್ಲಿ ಜೂ.30ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. 94೪ಸಿ ಅಡಿಯಲ್ಲಿ ಹಕ್ಕು ಪತ್ರ ಪಡೆಯಲು ಗ್ರಾ.ಪಂ.ವ್ಯಾಪ್ತಿಯಲ್ಲಿ ಮನೆ ಕಟ್ಟಡ ಹೊಂದಿ ಕಟ್ಟಡ ಸಂಖ್ಯೆ ಹೊಂದಿರುವ ಫಲಾನುಭವಿಗಳಿಗೆ ಮಾತ್ರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕಟ್ಟಡದ ದೃಢೀಕರಣ ನೀಡಬೇಕು ಹಾಗೂ ಇತ್ತೀಚೆಗೆ ಕಟ್ಟಡ ರಚಿಸಿದವರಿಗೆ ಯಾವುದೇ ದೃಢಪತ್ರ ನೀಡಬಾರದೆಂದು ಮಾಜಿ ಅಧ್ಯಕ್ಷರೂ ಆದ ಸದಸ್ಯ ಚಂದ್ರಶೇಖರ ರೈಯವರು ಹೇಳಿದರು. ಇದಕ್ಕೆ ಇತರೇ ಸದಸ್ಯರೂ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಮಾದರಿ ಶಾಲೆಗೆ ನಿರ್ಣಯ:
ಕುಂತೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವಂತೆ ಸದಸ್ಯ ಚಂದ್ರಶೇಖರ ರೈಯವರು ಪ್ರಸ್ತಾಪಿಸಿದರು. ಇದಕ್ಕೆ ಇತರೇ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಗ್ರಾ.ಪಂ.ಗಮನಕ್ಕೆ ತರಬೇಕು:
ಗ್ರಾ.ಪಂ.ವ್ಯಾಪ್ತಿಯಲ್ಲಿ ಯಾವುದೇ ಇಲಾಖೆಯ ಅನುದಾನದಲ್ಲಿ ಕಾಮಗಾರಿಗಳು ಅನುಷ್ಠಾನಗೊಳಿಸುವ ಮೊದಲು ಗ್ರಾ.ಪಂ.ಗಮನಕ್ಕೆ ತರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಎಲ್ಲಾ ರಸ್ತೆಗಳನ್ನು ಗ್ರಾ.ಪಂ.ರಸ್ತೆಗಳೆಂದು ಪರಿಗಣಿಸಲು ನಿರ್ಣಯ ಕೈಗೊಳ್ಳಲಾಯಿತು. ಬೇಳ್ಪಾಡಿ ಮಸೀದಿಯ ಆವರಣದ ಪ್ರವೇಶ ದ್ವಾರಕ್ಕೆ ಗೇಟು ಅಳವಡಿಸುವಂತೆ ಮಸೀದಿ ಅಧ್ಯಕ್ಷರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಪರವಾನಿಗೆ ಪಡೆದೇ ಕಟ್ಟಡ ನಿರ್ಮಾಣ:
ಕಟ್ಟಡ ನಿರ್ಮಾಣಕ್ಕೆ ಮೊದಲು ಗ್ರಾ.ಪಂ.ನಿಂದ ಪರವಾನಿಗೆ ಪಡೆದುಕೊಳ್ಳಬೇಕು. ಕಟ್ಟಡ ನಿರ್ಮಾಣ ಮಾಡಿದ ಬಳಿಕ ಕಟ್ಟಡ ಪರವಾನಿಗೆಗೆ ಅರ್ಜಿ ನೀಡಿದಲ್ಲಿ ದಂಡ ವಿಧಿಸಿ ಕಟ್ಟಡ ಪರವಾನಿಗೆ ನೀಡಲು ನಿರ್ಣಯ ಕೈಗೊಳ್ಳಲಾಯಿತು. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ರಸ್ತೆಗಳ ಬದಿ ಸರಕಾರದ ಆದೇಶದಂತೆ ರಸ್ತೆಯಿಂದ ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡು ಕಟ್ಟಡ ರಚನೆ ಮಾಡಬೇಕು. ಸರಕಾರದ ಆದೇಶ ಪಾಲಿಸದೇ ನಿರ್ಮಾಣಗೊಳ್ಳುವ ಕಟ್ಟಡಗಳಿಗೆ ಪರವಾನಿಗೆ ನೀಡದಿರಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಉಪಾಧ್ಯಕ್ಷೆ ಸಂಧ್ಯಾ ಕೆ., ಸದಸ್ಯರಾದ ಚಂದ್ರಶೇಖರ ರೈ, ಬಿ.ಕೆ.ಕುಮಾರ, ಕೃಷ್ಣ ವೈ, ಪಿ.ಟಿ.ರಾಜು, ಸದಾನಂದ ಕೆ., ಮಮತಾ, ಮೋಹಿನಿ, ಮೇನ್ಸಿಸಾಜನ್, ಲೀಲಾವತಿ, ಕಾವೇರಿ, ಸುಶೀಲ, ವೇದಾವತಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಲಿನಿ ಕೆ.ಬಿ.,ಅವರು ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಬಿಲ್ ಕಲೆಕ್ಟರ್ ಪದ್ಮಾವತಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here