ಹೈಕೋರ್ಟ್‌ನಲ್ಲಿ ಗ್ರಾ.ಪಂ.ಪರ ವಕೀಲರ ಬದಲಾವಣೆಗೆ ಪಿಡಿಒ ಪತ್ರ ಬರೆದ ವಿಚಾರ

0

  • ವಕೀಲರನ್ನು ಬದಲಾಯಿಸದಂತೆ 9 ಸದಸ್ಯರಿಂದ ಆಗ್ರಹ-ಇ.ಒ.ರವರಿಗೆ ಬರೆದುಕೊಳ್ಳಲು ನಿರ್ಣಯ
  • ಐತ್ತೂರು ಗ್ರಾ.ಪಂ. ಸಾಮಾನ್ಯ ಸಭೆ

ಕಡಬ: ಐತ್ತೂರು ಗ್ರಾ.ಪಂ. ಹೈಕೋರ್ಟ್‌ನಲ್ಲಿ ಹೂಡಿದ ದಾವೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪಂಚಾಯತ್ ಪರ ವಕೀಲರನ್ನು ಬದಲಾಯಿಸುವ ಬಗ್ಗೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರು ಪತ್ರ ಬರೆದಿದ್ದಾರೆ ಎನ್ನುವ ವಿಚಾರ ಅರಿತ ಉಪಾಧ್ಯಕ್ಷರು ಸೇರಿದಂತೆ 9 ಮಂದಿ ಗ್ರಾ.ಪಂ. ಸದಸ್ಯರು ವಕೀಲರನ್ನು ಬದಲಾಯಿಸದಂತೆ ಪಂಚಾಯತ್‌ಗೆ ಪತ್ರ ನೀಡಿದ್ದು, ಈ ಬಗ್ಗೆ ಚರ್ಚೆ ನಡೆದು ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಯವರಿಗೆ ಬರೆದುಕೊಳ್ಳುವ ಬಗ್ಗೆ ತೀರ್ಮಾನಿಸಿರುವುದು ಐತ್ತೂರು ಗ್ರಾ,ಪಂ, ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಸಭೆಯು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಅವರ ಅಧ್ಯಕ್ಷತೆಯಲ್ಲಿ ಜೂ.30ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆದು ಬಳಿಕ ಪಂಚಾಯತ್‌ಗೆ ಬಂದ ಅರ್ಜಿಗಳನ್ನು ಓದಲಾಯಿತು. ಈ ಸಂದರ್ಭದಲ್ಲಿ ಜೂ.27ರಂದು ಗ್ರಾ.ಪಂ. ಉಪಾಧ್ಯಕ್ಷ ರೋಹಿತ್, ಸದಸ್ಯರಾದ ವತ್ಸಲ, ಉಷಾ, ಕೆ.ನಾಗೇಶ್ ಗೌಡ, ಮನಮೋಹನ ಗೋಳ್ಯಾಡಿ, ಈರೇಶ ಗೌಡ, ಜಯಲಕ್ಷ್ಮೀ, ಧನಲಕ್ಷ್ಮೀ, ಪ್ರೇಮ ಅವರುಗಳು ಸಲ್ಲಿಸಿದ ಅರ್ಜಿಯನ್ನು ಓದಲಾಯಿತು. ಹೈಕೋರ್ಟ್‌ನಲ್ಲಿ ಇತ್ಯರ್ಥದಲ್ಲಿರುವ ದಾವೆಗೆ ನೇಮಿಸಲಾದ ವಕೀಲರಾದ ಎಸ್. ರಾಜಶೇಖರ ಅವರ ಬದಲಿಗೆ ಇನ್ನೊಬ್ಬರು ವಕೀಲರನ್ನು ನೇಮಕ ಮಾಡಲು ಪ್ರಯತ್ನಿಸಿರುವುದು ನಮ್ಮ ಗಮನಕ್ಕೆ ಬಂದಿದೆ, ಇದಕ್ಕೆ ನಮ್ಮ ಸಂಪೂರ್ಣ ವಿರೋಧ ಇದ್ದು ಯಾವುದೇ ಕಾರಣಕ್ಕೂ ಹಾಲಿ ಇರುವ ವಕೀಲರನ್ನು ಬದಲಾವಣೆ ಮಾಡಬಾರದು, ಬದಲಾವಣೆ ಮಾಡಿದಲ್ಲಿ ಇನ್ನೊಂದು ವಕೀಲರಿಗೆ ಹಣ ಕೊಡುವುದು ಎಲ್ಲವೂ ಪಂಚಾಯತ್‌ಗೆ ಹೊರೆಯಾಗುತ್ತದೆ. ಒಂದು ವೇಳೆ ನಮ್ಮ ಮನವಿಯನ್ನು ತಿರಸ್ಕರಿಸಿ ಬೇರೆ ವಕೀಲರನ್ನು ನೇಮಕ ಮಾಡಿದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಅಭಿವೃದ್ದಿ ಅಧಿಕಾರಿಯವರೇ ಹೊಣೆಯಾಗುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಪತ್ರವನ್ನು ಸಭೆಯಲ್ಲಿ ಪಿಡಿಒ ಅವರು ಓದಿದರು. ಇದಕ್ಕೆ ಏನು ಮಾಡುತ್ತೀರಿ ಎಂದು ಸದಸ್ಯರು ಪ್ರಶ್ನಿಸಿದಾಗ ಅದಕ್ಕೆ ಕಾರ್ಯದರ್ಶಿ ರಮೇಶ್ ಅವರು ಉತ್ತರ ನೀಡಿ, ಈ ಹಿಂದೆ ವಕೀಲರನ್ನು ಬದಲಾಯಿಸುವ ಬಗ್ಗೆ ನಿರ್ಣಯ ಮಾಡಲಾಗಿತ್ತು, ಇನ್ನೂ ನಿರ್ಣಯ ಬದಲಾವಣೆ ಮಾಡಬೇಕಾದರೆ ಕೆಲವೊಂದು ನಿಯಮಗಳಿವೆ ಎಂದರು. ಈ ಬಗ್ಗೆ ಚರ್ಚೆ ನಡೆದು ಈ ವಿಚಾರದ ಬಗ್ಗೆ ಇ.ಒ.ರವರಿಗೆ ಬರೆದುಕೊಳ್ಳುವ ಎಂದು ತೀರ್ಮಾನಿಸಲಾಯಿತು.

ಐತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮೀನು ಮಾರಾಟದ ಹಕ್ಕನ್ನು ಏಲಂ ಮಾಡುವ ಬಗ್ಗೆ ನಿರ್ಣಯ ಮಾಡಲಾಯಿತು, ಈ ವಿಚಾರಕ್ಕೆ ಸಂಬಂಧಿಸಿ ಸದಸ್ಯರು, ಸಾರ್ವಜನಿಕ ಪ್ರಕಟಣೆಯನ್ನು ಪತ್ರಿಕೆಯಲ್ಲಿ ನೀಡಬೇಕು ಆಗ ಹೆಚ್ಚಿನ ಜನ ಏಲಂಗೆ ಬರುತ್ತಾರೆ ಎಂದು ಹೇಳಿದರು. ಇದಕ್ಕೆ ಪಿಡಿಒ ನೋಟಿಸು ಬೋರ್ಡ್‌ನಲ್ಲಿ ಹಾಕುವ ಎಂದರು. ಇದಕ್ಕೆ ಸದಸ್ಯರು ನೀವು ಪ್ರಕಟಣೆ ನೀಡಲೇಬೇಕು ಎಂದು ಆಗ್ರಹಿಸಿದರು, ಕೊನೆಗೆ ಪತ್ರಿಕೆ ಪ್ರಕಟಣೆ ನೀಡುವ ಎಂದು ಒಪ್ಪಿಕೊಂಡರು. ಸಭೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. 15ನೇ ಹಣಕಾಸು ಬಗ್ಗೆ ಕ್ರಿಯಾ ಯೋಜನೆ ತಯಾರಿಸಲಾಯಿತು. ಸದಸ್ಯರಾದ ಉಪಾಧ್ಯಕ್ಷ ರೋಹಿತ್, ಸದಸ್ಯರಾದ ವಿ.ಯಂ. ಕುರಿಯನ್, ವತ್ಸಲ, ಉಷಾ, ಕೆ.ನಾಗೇಶ್ ಗೌಡ, ಮನಮೋಹನ ಗೋಳ್ಯಾಡಿ, ಈರೇಶ ಗೌಡ, ಜಯಲಕ್ಷ್ಮೀ,ಧನಲಕ್ಷ್ಮೀ, ಪ್ರೇಮ, ಪಿಡಿಒ ಸುಜಾತ, ಕಾರ್ಯದರ್ಶಿ ರಮೇಶ್, ಸಿಬ್ಬಂದಿಗಳಾದ ದೇವಿಕಾ, ಶಿಬು ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here