ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆಯವರಿಗೆ ಅಭಿವಂದನಾ ಕಾರ್‍ಯಕ್ರಮ, ದತ್ತಿನಿಧಿ ಪ್ರದಾನ

0

 

  • ಶಿಕ್ಷಕ ವೃತ್ತಿ ಸ್ವಾರ್ಥ ರಹಿತವಾದ ಸೇವೆ-ಸಿ.ಎ. ಸೈಮನ್
  • ದಿವಾಕರ ಆಚಾರ್ಯರು ಶಿಕ್ಷಣ, ಯಕ್ಷಗಾನ, ಸಾಮಾಜಿಕ ಕ್ಷೇತ್ರದ ಸ್ನೇಹಿತ-ಗಣರಾಜ ಕುಂಬ್ಳೆ
  • ಶಿಕ್ಷಕ ಮತ್ತು ಕೃಷಿ ಕ್ಷೇತ್ರ ಒಂದೇ ಸಮಾನವಾದದ್ದು-ಲೋಕೇಶ್

 

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ವಿಜ್ಞಾನ-ಗಣಿತ ಶಿಕ್ಷಕರಾಗಿ ಸುಮಾರು18 ವರ್ಷಗಳ ಕಾಲ ಉಪ
ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಒಟ್ಟು 30 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಇವರಿಗೆ ಶಾಲಾ ಎಸ್.ಡಿ.ಎಂ.ಸಿ. ಮತ್ತು ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳಿಂದ ಅಭಿವಂದನಾ ಕಾರ್‍ಯಕ್ರಮ ಮತ್ತು ದತ್ತಿನಿಧಿ ಪ್ರದಾನ ಕಾರ್‍ಯಕ್ರಮ ಜುಲೈ 2ರಂದು ಶಾಲಾ ಸಭಾಂಗಣದಲ್ಲಿ ಜರಗಿತು.


ಸಮಾರಂಭದ ಮುಖ್ಯ ಅತಿಥಿ, ಶಾಲೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ ಭ್ರಷ್ಠಾಚಾರ ನಿಗ್ರಹ ದಳದ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ತಾನು ಈ ಶಾಲೆಯಲ್ಲಿ ಕಲಿತ ದಿನಗಳ ಅನುಭವವನ್ನು ಹಂಚಿಕೊಂಡು ಮಾತನಾಡಿ ಶಿಕ್ಷಕ ವೃತ್ತಿ ಸ್ವಾರ್ಥ ರಹಿತವಾದ ಸೇವೆಯಾಗಿದ್ದು, ಒಬ್ಬಾತ ವ್ಯಕ್ತಿಯ ತಪ್ಪುಗಳನ್ನು ಹೇಳುವ ಅಧಿಕಾರ ಇರುವುದು ಶಿಕ್ಷಕನಿಗೆ ಮಾತ್ರ ಎಂದ ಅವರು ಶಿಕ್ಷಕರು ವೃತ್ತಿಯಿಂದ ನಿವೃತ್ತಿ ಹೊಂದಬಹುದು, ಆದರೆ ಪ್ರವೃತ್ತಿಯಿಂದ ಅವರು ನಿವೃತ್ತಿ ಹೊಂದಲಾರರು, ಅದರಲ್ಲೂ ದಿವಾಕರ ಆಚಾರ್ಯರವರು ಕಲೆ, ಸಾಹಿತ್ಯ, ಯಕ್ಷಗಾನ ಮೊದಲಾದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಇವರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿ ದೇವರು ಕರುಣಿಸಲಿ ಎಂದು ಶುಭ ಹಾರೈಸಿದರು.

ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅಭಿವಂದನಾ ಭಾಷಣ ಮಾಡಿ ಮಾತನಾಡಿ ಎಲ್ಲಾ ವ್ಯಕ್ತಿಗಳು ಎಲ್ಲರಿಗೂ ಮಿತ್ರರಾಗುವುದಿಲ್ಲ ಆದರೆ ದಿವಾಕರ ಆಚಾರ್ಯರವರು ಮೈತ್ರಿ ಬೆಳೆಸುವ ಗುಣವುಳ್ಳವರಾಗಿದ್ದು, ಶಿಕ್ಷಣ, ಯಕ್ಷಗಾನ, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳ ಮೂಲಕ ಜನ ಸಾಮಾನ್ಯರಿಂದ ಹಿಡಿದು, ವಿದ್ಯಾರ್ಥಿ ಸಮೂಹಕ್ಕೂ ಸ್ನೇಹಿತರಾಗಿಯೇ ಇದ್ದಾರೆ, ಹೀಗಾಗಿ ಅವರ ಅಭಿಮಾನಿ ಬಳಗ ವಿಸ್ತಾರವಾಗಿ ಬೆಳೆದಿದೆ, ಅವರ ಸೇವೆ ಸಮಾಜಕ್ಕೆ ಇನ್ನಷ್ಟು ದೊರಕುವಂತಾಗಲಿ ಎಂದರು.


ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ ಶಿಕ್ಷಕ ಮತ್ತು ಕೃಷಿ ಕ್ಷೇತ್ರ ಒಂದೇ ಸಮಾನವಾದದ್ದು ಹೀಗಾಗಿ ಈ ಇಬ್ಬರಿಗೂ ಸಮಾಜದಲ್ಲಿ ಗೌರವದ ಸ್ಥಾನ ಇರುತ್ತದೆ. ಶಿಕ್ಷಕನಾದವನು ತನ್ನನ್ನು ಸರಿಯಾಗಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಮಾಜ ಅವರನ್ನು ಪ್ರೀತಿಸುತ್ತದೆ, ಅಂತಹ ಪ್ರೀತಿಯನ್ನು ದಿವಾಕರ ಆಚಾರ್ಯರವರು ಪಡೆದುಕೊಂಡಿದ್ದಾರೆ ಎಂದು ಈ ಕಾರ್‍ಯಕ್ರಮದ ಮೂಲಕ ಗೊತ್ತಾಗುತ್ತಿದೆ, ಇವರು ಈ ಶಾಲೆಯಲ್ಲಿ ಹಾಕಿಕೊಟ್ಟ ಮಾರ್ಗವನ್ನು ಅನುಸರಿಸುವ ಮೂಲಕ ಇಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಈ ಸಂಸ್ಥೆ ಇನ್ನಷ್ಟು ಹೆಸರು ಪಡೆಯಲು ಸಹಕಾರಿಗಳಗಬೇಕು ಎಂದು ಹೇಳಿದರು.

ಸುಳ್ಯದ ನಿವೃತ್ತ ಪ್ರಾಂಶುಪಾಲ ಡಿ.ಎಸ್. ಕುಶಾಲಪ್ಪ ಗೌಡ ಮಾತನಾಡಿ ದಿವಾಕರ ಆಚಾರ್ಯರಲ್ಲಿ ನಿಜವಾದ ತಪಸ್ವಿಯನ್ನು ಕಾಣಬಹುದು, ಅವರಂತಹ ವ್ಯಕ್ತಿತ್ವ ಎಲ್ಲಾ ಶಿಕ್ಷಕರಲ್ಲಿ ಇರಬೇಕು ಎಂದರು.

ಶಾಲಾಭಿವೃದ್ಧಿ ಸಮಿತಿ ಕಾರ್‍ಯಾಧ್ಯಕ್ಷ ಎನ್. ಉಮೇಶ್ ಶೆಣೈ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಶಾಲೆಯ ಶಿಕ್ಷಕರಾಗಿದ್ದುಕೊಂಡು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವುದು ನಮಗೆ ಹೆಮ್ಮೆ ಅನಿಸುತ್ತದೆ. ದಿವಾಕರ ಆಚಾರ್ಯರವರು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಳ್ಳದೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲೂ ಗುರುತಿಸಿಕೊಂಡು ಎಲ್ಲರ ಪ್ರೀತಿ ಗಳಿಸಿದವರು ಎಂದರು.

ಶಾಸಕ ಸಂಜೀವ ಮಠಂದೂರು ದಿವಾಕರ ಆಚಾರ್ಯ ಅವರನ್ನು ಸನ್ಮಾನಿಸಿ ಅಭಿವಂದಿಸಿದರು. ಅಭಿವಂದನೆ ಸ್ವೀಕರಿಸಿದ ದಿವಾಕರ ಆಚಾರ್ಯ ಮಾತನಾಡಿ ವಿದ್ಯಾರ್ಥಿಗಳು, ಪೋಷಕರು, ಶಾಲಾಭಿವೃದ್ಧಿ ಸಮಿತಿ, ಜನಪ್ರತಿನಿಧಿಗಳು, ಅಧಿಕಾರಿ ಬಳಗ, ಶಿಕ್ಷಕ ವೃಂದ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಅಭಾರಿ ಆಗಿರುವುದಾಗಿ ತಿಳಿಸಿದರು.

ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧೀರ್ ಕುಮಾರ್, ಬೆಳ್ತಂಗಡಿ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ಶಿಕ್ಷಕ ಗುಡ್ಡಪ್ಪ ಬಲ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ನಿವೃತ್ತ ಶಿಕ್ಷಕಿ ದೇವಕಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಾಮಚಂದ್ರ ಮಣಿಯಾಣಿ, ಹಿರಿಯ ವಿದ್ಯಾರ್ಥಿ ಚಂದ್ರಶೇಖರ ಮಡಿವಾಳ, ಶಾಲಾ ಶಿಕ್ಷಕಿಯರ ಪರವಾಗಿ ಶೋಭಾ ಮಾತನಾಡಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಕೆ., ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಸೀಫ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಆದಂ ಕೊಪ್ಪಳ, ಪರಮೇಶ್ವರಿ, ಸವಿತಾ, ಶಶಿಕಿರಣ್, ಜಯ ಪೂಜಾರಿ, ದಿವಾಕರ ಆಚಾರ್ಯರವರ ಪತ್ನಿ ಶ್ರೀಮತಿ ಭಾರತಿ, ಪುತ್ರಿ ಸ್ವಾತಿ, ಪುತ್ರ ಸನತ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ನೀರಜ್ ಕುಮಾರ್, ಯಕ್ಷಗಾನ ಕಲಾವಿದ ಪಾತಾಳ ಅಂಬಾ ಪ್ರಸಾದ್, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹರಿರಾಮಚಂದ್ರ, ಶಿಕ್ಷಣ ಇಲಾಖೆಯ ವಿಷ್ಣು ಪ್ರಸಾದ್, ನಿವೃತ್ತ ಶಿಕ್ಷಕರಾದ ಮಹಾಬಲೇಶ್ವರ ಭಟ್, ಸುಬ್ರಹ್ಮಣ್ಯ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜಿನ ಉಪ ಪ್ರಾಂಶುಪಾಲ ಶ್ರೀಧರ ಭಟ್ ಸ್ವಾಗತಿಸಿ, ಶೋಭಾ ವಂದಿಸಿದರು. ಶಿಕ್ಷಕರಾದ ಪ್ರೀತಂ ಟಿ.ಎಂ., ಸುಮಾ, ಸುಬ್ರಹ್ಮಣ್ಯ ಭಟ್, ವನಲಕ್ಷ್ಮಿ, ಅಮರ ವಾತ್ಸಲ್ಯ, ಸುಚಿತ್ರಾ ಹೊಳ್ಳ, ಎಲಿಜಬೆತ್ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಲಕ್ಷ್ಮೀಶ ನಾಯ್ಕ್ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here