ತಾ| ಆರೋಗ್ಯಾಧಿಕಾರಿಯಾಗಿ ಮತ್ತೆ ಡಾ.ದೀಪಕ್ ರೈ ನೇಮಕ-ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ

0

  • ಡಾ.ಅಶೋಕ್ ರೈ ವರ್ಗಾವಣೆ ಆದೇಶ ರದ್ದು

ಪುತ್ತೂರು: ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ. ಅಶೋಕ್ ರೈಯವರನ್ನು ನೇಮಕಗೊಳಿಸಿ ಜೂ.22ರಂದು ಹೊರಡಿಸಿದ್ದ ಆದೇಶ ರದ್ದುಗೊಳಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಯವರು ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ದೀಪಕ್ ರೈಯವರನ್ನೇ ಮರು ನೇಮಕಗೊಳಿಸಿ ಜೂ.30ರಂದು ಆದೇಶ ಹೊರಡಿಸಿದ್ದಾರೆ. 11 ದಿನಗಳ ಹಿಂದೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ಅಶೋಕ್ ರೈಯವರನ್ನು ನೇಮಕಗೊಳಿಸಿ ಡಾ.ದೀಪಕ್ ರೈಯವರನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಮಂಜೂರ್‌ರವರು ಆದೇಶ ಹೊರಡಿಸಿದ್ದರು.


ಕೋವಿಡ್ ಸಂದರ್ಭದಲ್ಲಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾ.ಅಶೋಕ್ ರೈಯವರ ಕಾರ್ಯನಿರ್ವಹಣೆ ಕುರಿತು ಕೆಲವೊಂದು ದೂರುಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಅವರನ್ನು ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಯಾಗಿ ನಿಯುಕ್ತಿಗೊಳಿಸಿ ಮಂಜುನಾಥನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದ ಡಾ.ದೀಪಕ್ ರೈಯವರನ್ನು ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ನಿಯುಕ್ತಿಗೊಳಿಸಿ ಆದೇಶಿಸಿದ್ದರು. ಅದರಂತೆ 2021ರ ಜೂ.10ರಂದು ಡಾ.ದೀಪಕ್ ರೈಯವರು ತಾಲೂಕು ಆರೋಗ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು ಹಾಗೂ ಉತ್ತಮವಾಗಿ ಕೆಲಸ ನಿರ್ವಹಿಸಿದ್ದರು. ಈ ಮಧ್ಯೆ ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಡಾ.ಅಶೋಕ್ ರೈಯವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ(ಕೆಎಟಿ)ದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಡಾ.ಅಶೋಕ್ ರೈಯವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಮಂಜೂರ್‌ರವರು ಜೂ.22ರಂದು ಆದೇಶ ಹೊರಡಿಸಿದ್ದರು. ಇದೀಗ 11 ದಿನಗಳ ಬಳಿಕ ಅಶೋಕ್ ರೈಯವರ ಮರು ನೇಮಕದ ಆದೇಶ ರದ್ದುಗೊಳಿಸಿ ಮತ್ತೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ದೀಪಕ್ ರೈಯವರನ್ನೇ ನೇಮಕಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಸಿ.ಮಂಜೂರ್‌ರವರು ಜೂ. 30ರಂದು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here