ಭಾರತ್ ಸೇವಾದಳದ ಜಿಲ್ಲಾ ಅಧ್ಯಕ್ಷರಾಗಿ ಸಹಕಾರಿ ಧುರೀಣ ಎಸ್.ಬಿ.ಜಯರಾಮ ರೈ ಆಯ್ಕೆ

0

ಪುತ್ತೂರು: ಭಾರತ್ ಸೇವಾದಳ ದ.ಕ ಶೈಕ್ಷಣಿಕ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಮಂಗಳೂರು ಕೆ.ಎಂ.ಎಫ್ ಉಪಾಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರೂ ಆಗಿರುವ ಎಸ್.ಬಿ.ಜಯರಾಮ ರೈ ಆಯ್ಕೆಯಾಗಿದ್ದಾರೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಭಾರತ್ ಸೇವಾದಳದ ಜಿಲ್ಲಾ ಕಛೇರಿಯಲ್ಲಿ ಜು.2ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್.ಬಿ.ಜಯರಾಮ ರೈಯವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಭಾರತ್ ಸೇವಾ ದಳದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜೇಗೌಡರವರು ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟಿದ್ದರು.

ತಾಲೂಕು ಅಧ್ಯಕ್ಷರಾಗಿ 13 ವರ್ಷಗಳ ಸೇವೆ
ಎಸ್.ಬಿ.ಜಯರಾಮ ರೈಯವರು ಭಾರತ್ ಸೇವಾ ದಳದ ಪುತ್ತೂರು ತಾಲೂಕು ಅಧ್ಯಕ್ಷರಾಗಿ 13ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಸೇವಾ ಅವಧಿಯಲ್ಲಿ ಬಡಗನ್ನೂರು, ತಿಂಗಳಾಡಿ, ಕುಂಬ್ರ, ನೆಲ್ಯಾಡಿ, ಕಡಬದ ಓಂತ್ರಡ್ಕ, ಕೊಳ್ತಿಗೆ, ಕಾವು, ಪಟ್ಟೆ ಸೇರಿದಂತೆ ಒಟ್ಟು 11ಶಾಲೆಗಳಲ್ಲಿ ಭಾರತ್ ಸೇವಾ ದಳದ ಚಟುವಟಿಕೆಗಳ ರ್‍ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದಲ್ಲದೆ ಕೆಯ್ಯೂರು ಶಾಲೆಯಲ್ಲಿ ಜಿಲ್ಲಾ ಮಟ್ಟದ ರ್‍ಯಾಲಿಯನ್ನು ನಡೆಸಿದ್ದರು. ಇದಲ್ಲದೆ ಇತರ ಶೈಕ್ಷಣಿಕ ಚಟುವಟಿಕೆಗಳನ್ನು ಕೂಡ ನಡೆಸಿಕೊಂಡು ಬಂದಿದ್ದರು.

ಮುಂದಿನ ಯೋಜನೆ
ಭಾರತ್ ಸೇವಾ ದಳದ ಮೂಲಕ ಶಾಲೆಗಳಲ್ಲಿ ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಮೂಡಿಸುವುದರ ಜೊತೆಯಲ್ಲಿ ಶಾರೀರಿಕ, ಮಾನಸಿಕ ಬೆಳವಣಿಗೆಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡಬೇಕು ಎಂದುಕೊಂಡಿರುವ ಇವರು ಭಾರತ್ ಸೇವಾ ದಳಕ್ಕೆ ಸ್ವಂತ ಕಟ್ಟಡವನ್ನು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಮಂಗಳೂರು ಉರ್ವಸ್ಟೋರ್‌ನಲ್ಲಿ ಈಗಾಗಲೇ ೧೦ ಸೆಂಟ್ಸ್ ಜಾಗ ಇದ್ದು ಸರಕಾರದ ಅನುದಾನ ಹಾಗೂ ಶಾಸಕ, ಸಂಸದರ ಅನುದಾನವನ್ನು ಕೇಳಿಕೊಂಡು, ಅವರ ಸಹಕಾರದೊಂದಿಗೆ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಮುಂದಿನ ಯೋಜನೆ ಹಾಕಿಕೊಂಡಿದ್ದಾರೆ. ಭಾರತ್ ಸೇವಾ ದಳದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಬಿ.ಜಯರಾಮ ರೈಯವರಿಗೆ ದ.ಕ ಹಾಲು ಒಕ್ಕೂಟ ಕುಲಶೇಖರ ಮಂಗಳೂರು ಇದರ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ರವಿರಾಜ್ ಉಡುಪ ಉಪಸ್ಥಿತರಿದ್ದರು.

 

` ನಾನು ತಾಲೂಕು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನನಗೆ ಶಾಲೆಗಳ ಶಿಕ್ಷಕ ವೃಂದವರು, ಎಸ್‌ಡಿಎಂಸಿಯವರು,ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು ಹಾಗೂ ಊರ ಶಿಕ್ಷಣ ಪ್ರೇಮಿಗಳು ಉತ್ತಮ ಸಹಕಾರ ನೀಡಿದ್ದೀರಿ. ಇದರಿಂದ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಿದೆ. ಜಿಲ್ಲಾ ಅಧ್ಯಕ್ಷನಾಗಿ ತಾಲೂಕಿನ ಅಧ್ಯಕ್ಷರ ಸಹಕಾರ ಪಡೆದುಕೊಂಡು ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ಈ ಹಿಂದಿನಂತೆ ನನಗೆ ಸಹಕಾರ,ಪ್ರೋತ್ಸಾಹ ನೀಡಬೇಕಾಗಿ ಕೋರಿಕೆ.‘- ಎಸ್.ಬಿ.ಜಯರಾಮ ರೈ ಬಳಜ್ಜ, ಜಿಲ್ಲಾಧ್ಯಕ್ಷರು ಭಾರತ್ ಸೇವಾ ದಳ

 

ಎಸ್.ಬಿ.ಜಯರಾಮ ರೈಯವರ ಸಾಧನೆಯ ಕಿರು ಪರಿಚಯ
ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಬಳಜ್ಜ ನಿವಾಸಿಯಾಗಿರುವ ಎಸ್.ಬಿ.ಜಯರಾಮ ರೈಯವರು ಪುತ್ತೂರು ಭೂಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿ, ನಿರ್ದೇಶಕರಾಗಿ, ಕುಂಬ್ರ ಮಂಡಲ ಪಂಚಾಯತ್‌ನ ಸದಸ್ಯರಾಗಿ, ೧೫ ವರ್ಷ ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು ೩೬ ವರ್ಷಗಳಿಂದ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ತಿಂಗಳಾಡಿ ಇದರ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಪ್ರಸ್ತುತ ನಿರ್ದೇಶಕರಾಗಿ ಸೇವೆ, ಸುಮಾರು ೨೦ ವರ್ಷಗಳಿಂದ ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನಲ್ಲಿ ನಿರ್ದೇಶಕ, ಅಧ್ಯಕ್ಷರಾಗಿ ಸೇವೆ, ಪುತ್ತೂರು ಎಪಿಎಂಸಿಯಲ್ಲಿ ೧೦ ವರ್ಷಗಳ ನಿರ್ದೇಶಕರಾಗಿ, ಪುತ್ತೂರು ಟಿಎಪಿಸಿಎಂಎಸ್ ಇದರ ನಾಮನಿರ್ದೇಶಕರಾಗಿ ಪ್ರಸ್ತುತ ನಿರ್ದೇಶಕರಾಗಿ ಸೇವೆ, ದಕ್ಷಿಣ ಕನ್ನಡ ಕೃಷಿಅಭಿವೃದ್ಧಿ ಸಹಕಾರಿ ಸಂಘ ಮಂಗಳೂರು ಇದರ ನಿರ್ದೇಶಕರಾಗಿ ೮ ವರ್ಷ ಪ್ರಸ್ತುತ ನಿರ್ದೇಶಕರಾಗಿದ್ದಾರೆ. ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ೮ ವರ್ಷಗಳಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ, ಪ್ರಸ್ತುತ ಉಪಾಧ್ಯಕ್ಷರಾಗಿ ಮತ್ತು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿರುವ ಇವರು ಕೆಯ್ಯೂರು ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಕೆಯ್ಯೂರು ಕೆಪಿಎಸ್ ಕಾಲೇಜು ವಿಭಾಗದ ಉಪಾಧ್ಯಕ್ಷರಾಗಿ, ಹೈಸ್ಕೂಲ್ ವಿಭಾಗದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಒಡಿಯೂರು ಶ್ರೀ ಗುರುದೇವ ಬಳಗ ಅಂಕತ್ತಡ್ಕ ಇದರ ಗೌರವ ಅಧ್ಯಕ್ಷರಾಗಿ, ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ಕಾವು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ, ಅಮ್ಮನವರ ದೇವಸ್ಥಾನ ದೇರ್ಲ ಇದರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾಗಿ, ಕೆಯ್ಯೂರು ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಯ್ಯೂರು ದುರ್ಗಾ ಸ್ಪೋರ್ಟ್ಸ್ ಕ್ಲಬ್ ಇದರ ಗೌರವ ಅಧ್ಯಕ್ಷರಾಗಿಯೂ ಇವರು ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಎಸ್.ಬಿ.ಜಯರಾಮ ರೈಯವರು ಉದ್ಯಮಿಯಾಗಿ ಓರ್ವ ಪ್ರಗತಿಪರ ಕೃಷಿಕರಾಗಿ, ಕೊಡುಗೈ ದಾನಿಯಾಗಿಯೂ ಜನಮಾನಸದಲ್ಲಿ ಹೊಸಛಾಪು ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here