ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ 2ನೇ ವರ್ಷದ ಭತ್ತ ಬೆಳೆಯೋಣ ಬಾ ಗದ್ದೆಗಿಳಿಯೋಣ – ಮುಳಿಯದ ಫಾರ್ಮ್ಸ್‌ನಲ್ಲಿ ಚಾಲನೆ

0

  • ಭತ್ತ ಬೇಸಾಯದಿಂದ ಸ್ವಾವಲಂಬಿ ಜೀವನ – ಸಂಜೀವ ಮಠಂದೂರು
  • ಕಳೆದ ವರ್ಷದ ಬೇಸಾಯವನ್ನು ಮುಂದುವರಿಸಿದ್ದೇವೆ – ಕೇಶವಪ್ರಸಾದ್ ಮುಳಿಯ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೇತೃತ್ವದಲ್ಲಿ ಕಳೆದ ವರ್ಷ ಆರಂಭಿಸಿದ ಹಡಿಲು ಭೂಮಿಯಲ್ಲಿ ಭತ್ತ ಬೆಳೆಯೋಣ ಬಾ ಗದ್ದೆಗಿಳಿಯೋಣ ಅಭಿಯಾನದ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ದೇವಳದ ನೇತೃತ್ವದಲ್ಲಿ ಶಾಸಕ ಸಂಜೀವ ಮಠಂದೂರು ಅವರ ಮಾರ್ಗದರ್ಶನ ಮತ್ತು ದೇವಳದ ಆಡಳಿತ ಮಂಡಳಿಯ ಮುತುವರ್ಜಿಯಲ್ಲಿ ೨ನೇ ವರ್ಷವೂ ಹಡಿಲು ಭೂಮಿಯಲ್ಲಿ ನೇಜಿ ನಾಟಿ ಆರಂಭಗೊಂಡಿದ್ದು, ಜು. 3ರಂದು ಕುರಿಯ ಮುಳಿಯ ಫಾರ್ಮ್ಸ್‌ನಲ್ಲಿ ಚಾಲನೆ ನೀಡಲಾಯಿತು.


ಭತ್ತ ಬೇಸಾಯದಿಂದ ಸ್ವಾವಲಂಬಿ ಜೀವನ:
ಶಾಸಕ ಸಂಜೀವ ಮಠಂದೂರು ಅವರು ಯಂತ್ರಧಾರೆಯ ಮೂಲಕ ನೇಜಿ ನಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮುಂಗಾರು, ಹಿಂಗಾರಿನಲ್ಲಿ ಸಚಿವರ ಪ್ರೇರಣೆಯಂತೆ ಭತ್ತ ನಾಟಿ ಕಳೆದ ವರ್ಷ ಆರಂಭಿಸಿದ್ದೇವೆ. ಕೃಷಿ ಭಾರತೀಯ ಸಂಸ್ಕೃತಿ, ಅದಕ್ಕೆ ಮತ್ತೆ ಆದ್ಯತೆ ಕೊಡುವ ಕೆಲಸ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಆತ್ಮನಿರ್ಭರ ಭಾರತ ಇವತ್ತು ಕೃಷಿಯಿಂದಲೇ ಆರಂಭ ಎಂಬುದನ್ನು ಕಳೆದ ಸಲ ಕೋವಿಡ್ ಸಾಬೀತು ಪಡಿಸಿದೆ. ವಿಷ ಮುಕ್ತ ಆಹಾರ ಬೆಳೆಸಬೇಕು. ದಕ್ಷಿಣ ಕನ್ನಡ ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಇಲ್ಲಿ ಮತ್ತೊಮೆ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಕೆಲಸ ಆಗಬೇಕು. ಹಾಗಾಗಿ ದೇವಸ್ಥಾನವನ್ನು ಮಂದಿಟ್ಟು ಇವತ್ತು ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ಕಳೆದ ಸಲ ಎರಡು ಬೆಳೆ ಮಾಡಿದ್ದು, ಈ ಭಾರಿ ಮೂರು ಬೆಳೆ ಮಾಡುವ ಪ್ರಯತ್ನ ಮಾಡುವ ಮೂಲಕ ವರ್ಷ 365 ದಿನವೂ ಭತ್ತ ಬೇಸಾಯ ನಡೆಯಬೇಕು. ನಮಗೆ ಬೇಕಾದ ಆಹಾರ ಧಾನ್ಯಗಳನ್ನು ನಾವೆ ಬೆಳೆಯುವ ಮೂಲಕ ನಾವು ಸ್ವಾವಲಂಬಿಗಳಾಗಬೇಕೆಂದರು.


ಕಳೆದ ವರ್ಷದ ಬೇಸಾಯವನ್ನು ಮುಂದುವರಿಸಿದ್ದೇವೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ದೇವಳದ ನೇತೃತ್ವದಲ್ಲಿ ಆರಂಭಗೊಂಡ ಭತ್ತ ಬೆಳೆಯೋಣ ಬಾ ಗದ್ದೆಗಿಳಿಯೋಣ ಕಾರ್ಯಕ್ರಮದಲ್ಲಿ ಕಳೆದ ವರ್ಷ 112 ಎಕ್ರೆ ಹಡಿಲು ಬೇಸಾಯ ಮಾಡಿದ್ದೇವೆ. ಈ ಭಾರಿ ಅದನ್ನು ಮುಂದುವರಿಸಿದ್ದೇವೆ. ನಮ್ಮ ಮುಳಿಯ ಕುಟುಂಬದ ಜಮೀನಲ್ಲೂ ತೋಟಕ್ಕೆಂದು ಮಾಡಿದ ಜಾಗವನ್ನು ಗದ್ದೆಯನ್ನಾಗಿ ಮಾಡಿದ್ದೇವೆ. ಕಳೆದ ವರ್ಷ ಇಲ್ಲಿ ಎನೆಲು ಮತ್ತು ಸುಗ್ಗಿ ಎರಡು ಬೆಳೆಯನ್ನು ತೆಗೆದಿದ್ದೇವೆ. ಸುಮಾರು 20 ಕ್ವಿಂಟಾಲ್ ಭತ್ತದಲ್ಲಿ 11 ಕ್ವಿಂಟಾಲ್ ಅಕ್ಕಿ ಪಡೆದಿದ್ದೇವೆ. ನಮ್ಮ ಮುಳಿಯ ಸಂಸ್ಥೆಯಲ್ಲಿ 6 ಕ್ವಿಂಟಾಲ್ ಅಕ್ಕಿ ಉಪಯೋಗಿಸಿದ್ದೇವೆ. ಅದೇ ರೀತಿ ಬೈಹುಲ್ಲನ್ನು ನಮ್ಮ ಗೋ ಶಾಲೆಗೆ ಉಪಯೋಗಿಸಿದ್ದೇವೆ ಎಂದ ಅವರು ಮುಂದಿನ ಎರಡು ವಾರದೊಳಗೆ ಮಹಾಲಿಂಗೇಶ್ವರ ದೇವಸ್ಥಾನದ ಸುಮಾರು 2 ಎಕ್ರೆ ಜಾಗದಲ್ಲಿ ಪುಂಡಿ ಬಿತ್ತು ಕಾರ್ಯಕ್ರಮ ನಡೆಯಲಿದೆ ಎಂದರು. ದೇವಳದ ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಆಗಿರುವ ವೇ ಮೂ ವಿ.ಎಸ್ ಭಟ್ ಅವರು ಭತ್ತ ನೇಜಿ ನಾಟಿಯ ಯಶಸ್ವಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಕುರಿಯ ಶ್ರೀ ಉಳ್ಳಾಲ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ಭತ್ತ ನೇಜಿ ನಾಟಿಯ ನಿರ್ವಾಹಕ ಉಮೇಶ್ ಕರ್ಕೆರ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಭತ್ತ ಬೇಸಾಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರವಿದೆ. ಕೃಷಿ ಇಲಾಖೆಯಿಂದ ಕೃಷಿ ಯಂತ್ರಧಾರೆ, ಬಿತ್ತನೆ ಬೀಜಕ್ಕೆ ಶೇ.50 ರಿಯಾಯಿತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ನೀರಾವರಿ ವ್ಯವಸ್ಥೆ, ಕೃಷಿಕ ಸಮಾಜದಿಂದ ಪ್ರತಿ ಎಕ್ರೆಗೆ ರೂ. 1ಸಾವಿರ ಸಹಾಯಧನ, ಎ ಗ್ರೇಡ್ ದೇವಸ್ಥಾನಗಳಿಂದ ಭತ್ತ ಬೆಳೆ ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತದೆ.ಸಂಜೀವ ಮಠಂದೂರು ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here