- ಸ್ವ-ಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ-ಶಕುಂತಳಾ ಟಿ ಶೆಟ್ಟಿ
ಪುತ್ತೂರು: ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಸಾಧ್ಯವಾಗಿದೆ ಹಾಗೂ ಇದರಿಂದ ಮಹಿಳಾ ಸಬಲೀಕರಣವಾಗಲು ಕಾರಣವಾಗಿದೆ ಎಂದು ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರು ಹೇಳಿದರು.
ಅವರು ಅರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಮವಸ್ತ್ರ(ಸೀರೆ)ವಿತರಿಸಿ ಮಾತನಾಡುತ್ತಿದ್ದರು. ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಮಹಿಳಾ ಸಬಲೀಕರಣಕ್ಕಾಗಿ ಶ್ರೀ ಶಕ್ತಿ ಎಂಬ ಹೆಸರಲ್ಲಿ ಗುಂಪುಗಳನ್ನು ರಚಿಸಿ ಆ ಗುಂಪುಗಳ ಮಹಿಳೆಯರಿಗೆ ಸರಕಾರದ ಮೂಲಕ ಕಡಿಮೆ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು ಹಾಗೂ ಮಹಿಳೆಯರಿಗಾಗಿ ಬೇರೆ ಬೇರೆ ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಬಾಗವಹಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ನವೋದಯ ಸ್ವ-ಸಹಾಯ ಸಂಘ ಸ್ಥಾಪನೆಯಾಗಿ ೨೩ ವರ್ಷ ಕಳೆಯಿತು, ಇದರಿಂದ ಸಾವಿರಾರು ಮಹಿಳೆಯರಿಗೆ ಸಹಾಯವಾಗಿರುತ್ತದೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಸಹಕಾರದಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ನವೋದಯ ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಸಮವಸ್ತ್ರ ನೀಡುವ ಕೆಲಸ ಆಗುತ್ತಿದೆ, ಮಹಿಳೆಯರ ಕಷ್ಟ ಕಾರ್ಪಣ್ಯಗಳಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ|ರಾಜೇಂದ್ರ ಕುಮಾರ್ರವರು ಸದಾ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರ್ಯಾಪು ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಮಾತನಾಡಿ, ಸಮವಸ್ತ್ರ ಸಮಾನತೆಯ ಸಂಕೇತ, ೧೯೮೨ರಲ್ಲಿ ನೆರೆಯ ಬಾಂಗ್ಲಾ ದೇಶದ ಬಡ ಮಹಿಳೆಯರಿಂದ ಹುಟ್ಟಿದ ಸ್ವ-ಸಹಾಯ ಸಂಘದ ಈ ಕಲ್ಪನೆಯು ಬೆಳೆದು ಇವತ್ತು ಇಡೀ ಜಗತ್ತಿಗೆ ಸ್ವ-ಸಹಾಯ ಸಂಘದ ಪರಿಕಲ್ಪನೆ ಪಸರಿಸಲು ಕಾರಣವಾಗಿರುತ್ತದೆ. ನಮ್ಮ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಸ್ವ-ಸಹಾಯ ಸಂಘದ ಚಟುವಟಿಕೆಗಳು ನಡೆಯುತ್ತಿದೆ. ಇದರಿಂದಾಗಿ ಎಷ್ಟೋ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಅದರಲ್ಲೂ ನವೋದಯ ಸ್ವ-ಸಹಾಯ ಸಂಘಗಳು ಮುಂಚೂಣಿಯಲ್ಲಿದ್ದು, ಇದಕ್ಕಾಗಿ ಡಾ|ರಾಜೇಂದ್ರ ಕುಮಾರ್ರವರಿಗೆ ನಾವು ಕೃತಜ್ನತೆ ಸಲ್ಲಿಸಬೇಕಾಗಿದೆ ಎಂದು ಹೇಳಿದ ಅಲಿಯವರು ಸ್ವ-ಸಹಾಯ ಸಂಘದ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಡಿಸಿಸಿ ಬ್ಯಾಂಕ್ನ ಮೂಲಕ ಕೊಡುವ ಬದಲು ಸ್ಥಳೀಯ ಸಹಕಾರಿ ಸಂಘಗಳ ಮೂಲಕ ಕೊಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನವೋದಯ ಟ್ರಸ್ಟ್ ವತಿಯಿಂದ ಅರೋಗ್ಯ ವಿಮೆಯ ಚೆಕ್ನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್, ನಿರ್ದೇಶಕರುಗಳಾದ ಗಣೇಶ್ ರೈ ಮೂಲೆ ಅರ್ಯಾಪು, ಇಸ್ಮಾಯಿಲ್ ಮಲಾರ್, ಗಣೇಶ್ ರೈ ಬಳ್ಳಮಜಲು, ಸಂಶುದ್ದೀನ್ ನೀರ್ಕಜೆ, ಶೀನಪ್ಪ ಮರಿಕೆ, ಚಂದ್ರಕಲಾ ಓಟೆತ್ತಿಮಾರ್, ಮೀನಾಕ್ಷಿ ನೀರ್ಕಜೆ, ಹಾರಿಸ್ ಸಂಟ್ಯಾರ್, ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕಿನ ಸೂಪರ್ವ್ಯೆಸರ್ ಶರತ್ ಕುಮಾರ್ ಉಪಸ್ಥಿತರಿದ್ದರು.
ನವೋದಯದ ತಾಲೂಕು ಮೇಲ್ವಿಚಾರಕ ಚಂದ್ರಶೇಖರ ಆಚಾರ್ಯ ಸ್ವಾಗತಿಸಿ, ಉಮಾ ಕಾರ್ಪಾಡಿ ವಂದಿಸಿದರು. ವನಿತಾ ಮರಿಕೆ ಪ್ರಾರ್ಥಿಸಿದರು. ಸಹಕಾರಿ ಸಂಘದ ಸಿಬ್ಬಂದಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ನವೋದಯದ ಅರ್ಯಾಪು ವಲಯದ ಪ್ರೇರಕಿ ಮೋಹಿನಿ ಕಾರ್ಯಕ್ರಮಕ್ಕೆ ಸಹಕರಿಸಿದರು.