ನಮ್ಮ ಸ್ವಾತಂತ್ರ್ಯ ನಮ್ಮ ಹಕ್ಕು, ಅದನ್ನು ಉಳಿಸುವುದು, ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಘೋಷಣೆ ಮಾಡೋಣವೇ?

0

  • ಈ ಸಲ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಅಂದಿನಂತೆ ಎಲ್ಲರೂ ಸೇರಿ ಸಂಭ್ರಮಿಸೋಣವೇ?
  • 1947ರಲ್ಲಿ ಸ್ವಾತಂತ್ರ್ಯ ದೊರಕಿದಾಗ ಎಲ್ಲರೂ ರಸ್ತೆಗಿಳಿದು ನಾವು ಸ್ವತಂತ್ರರು ಎಂದು ಕುಣಿದು ಸಿಹಿ ಹಂಚಿ ಸಂಭ್ರಮಿಸಿದ್ದಾರೆ

 

ಕಳೆದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಾರಂಭ ದಿನ ಅಗಸ್ಟ್ 15-2021ರಂದು ಸ್ವಾತಂತ್ರ್ಯೋತ್ಸವದ ದಿನಾಚರಣೆಯನ್ನು ಜನರ ಸ್ವಾತಂತ್ರ್ಯೋತ್ಸವ ಆಚರಣೆಯಾಗಿ ಅರ್ಥಪೂರ್ಣವಾಗಿ ಆಚರಿಸುವಂತೆ ಮಾಡಲು ಜೂ.12.2021ರಂದು ಬರೆದ ಲೇಖನದ ಸಂಕ್ಷಿಪ್ತ ವರದಿಯನ್ನು, ಕೆಲವು ಲೇಖನಗಳ ಶಿರೋನಾಮೆಯನ್ನು ಈ ಕೆಳಗೆ ನೀಡಿದ್ದೇವೆ.

sampadakiya1

1947 ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿದಾಗ ದೇಶದ ಎಲ್ಲರೂ ಅಲ್ಲಲ್ಲಿ ರಸ್ತೆಗಿಳಿದು ಅಭಿನಂದನೆ ಸಲ್ಲಿಸಿಕೊಂಡಿದ್ದಾರೆ. ಜಾತಿ, ಧರ್ಮ, ಭಾಷೆಯ ಭೇದ-ಭಾವ ನೋಡದೆ ಎಲ್ಲರೂ ಒಂದಾಗಿ ಮೆರವಣಿಗೆಯಲ್ಲಿ ಸಾಗಿ ಸಿಹಿ ಹಂಚಿಕೊಂಡಿದ್ದಾರೆ, ಕುಣಿದು ಕುಪ್ಪಳಿಸಿದ್ದಾರೆ, ಸ್ವಾತಂತ್ರ್ಯದ ಘೋಷಣೆ ಕೂಗಿದ್ದಾರೆ, ಸಂಭ್ರಮಿಸಿದ್ದಾರೆ. ಪರಕೀಯರಾದ ಬ್ರಿಟಿಷರ ಆಡಳಿತದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ. ಊರಿನ, ದೇಶದ ಎಲ್ಲಾ ಸಂಪತ್ತು ನಮ್ಮದೆ, ಇನ್ನು ಮುಂದೆ ನಮ್ಮವರಿಂದಲೇ ನಮ್ಮದೇ ಆಡಳಿತ ಎಂದು ಸಂತೋಷ ಪಟ್ಟಿದ್ದಾರೆ. ಅಂದು ಸ್ವಾತಂತ್ರ್ಯದ ಹೋರಾಟದಲ್ಲಿ ಮಡಿದವರ ಮನೆಯವರು ಇದ್ದರು, ಜೈಲಿಗೆ ಹೋಗಿ ಸರ್ವಸ್ವವನ್ನೂ ಕಳೆದುಕೊಂಡವರೂ ಇದ್ದರು. ದೇಶ ಸ್ವತಂತ್ರವಾಗುವುದೇ ಅವರ ಜೀವನದ ಗುರಿಯಾಗಿತ್ತು.

ಅದಾದ ನಂತರ ಸ್ವಾತಂತ್ರ್ಯ ದಿನದ ಸಂಭ್ರಮ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಇಲಾಖೆಗಳಲ್ಲಿ ಅಧಿಕಾರಿಗಳಿಗೆ, ಅತಿಥಿಗಳಿಗೆ, ಆಮಂತ್ರಿತರಿಗೆ ಧ್ವಜಾರೋಹಣದ ಭಾಷಣದ ಕಾರ್ಯಕ್ರಮವಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಕೆಲವು ಪ್ರಮುಖರಿಗೆ ಅದು ಧ್ವಜಾರೋಹಣದ ಕಾರ್ಯಕ್ರಮ. ಭಾಷಣ, ಮಕ್ಕಳಿಗೆ, ಸಾರ್ವಜನಿಕರಿಗೆ ಹಿತವಚನ, ಸಿಹಿತಿಂಡಿ ಹಂಚಲಿಕ್ಕೆ ಇರುವ ಕಾರ್ಯಾಚರಣೆಯಾಗಿ ಉಳಿದಿದೆ. ಅಂದು ಮಕ್ಕಳಾಗಿದ್ದವರು ಇಂದು ಹಿರಿಯರಾಗಿದ್ದಾರೆ. ಅವರ್‍ಯಾರೂ ಈ ಸ್ವಾತಂತ್ರ್ಯದ ಆಚರಣೆಯ ದಿನಗಳಲ್ಲಿ ಭಾಗಿಗಳಾಗುವುದಿಲ್ಲ ಯಾಕೆಂದರೆ ಅದು ಅವರ ಸಂಭ್ರಮವಾಗಿ ಉಳಿದಿಲ್ಲ. ಸರಕಾರಿ ಆಚರಣೆಯಾಗಿ ನಡೆಯುತ್ತಿದೆ. ಅದು ಬದಲಾಗಬೇಕು.

ನಮ್ಮ ಊರಿನಲ್ಲಿರುವ ಎಲ್ಲಾ ಸಂಪತ್ತು ಜಲ, ನೆಲ, ಸಂಸ್ಕೃತಿ ನಮ್ಮದು : 75ನೇ ವರ್ಷದ ಸ್ವಾತಂತ್ರ್ಯ ಅಂದರೆ ಅದು ಸಣ್ಣ ವಿಷಯವಲ್ಲ. ಅಮೃತ ಮಹೋತ್ಸವ ನಮ್ಮ ಜೀವನದ ದೊಡ್ಡ ಮೈಲುಗಲ್ಲು. ಸ್ವಾತಂತ್ರ್ಯ ದೊರಕಿದಂದು ಅದನ್ನು ಅನುಭವಿಸಿದವರು ಕೆಲವೇ ಕೆಲವು ಜನರು ಇದ್ದಾರೆ. ಅವರು ಇಂದಿಗೂ ಅಂದಿನ ಸ್ವಾತಂತ್ರ್ಯ ಉತ್ಸವವನ್ನು ನೆನಪಿಸಿಕೊಳ್ಳುತ್ತಾರೆ, ಇತ್ತೀಚೆಗಿನ ಸ್ವಾತಂತ್ರ್ಯ ದಿನಗಳು ಅವರಿಗೆ ಆ ಆನಂದ ತಂದುಕೊಡುತ್ತಿಲ್ಲ. ಯಾಕೆಂದರೆ ಅಂದು ಜನರು ದೇಶಕ್ಕಾಗಿ ಕೊಡುಗೆ ಕೊಡುತ್ತಿದ್ದರು. ಇಂದು ದೇಶದಿಂದ ಊರಿನಿಂದ ತನಗೇನು ಲಾಭ. ಊರು ಹಾಳಾದರೆ ಹಾಳಾಗಲಿ ಎಂದು ಅಧಿಕಾರದಲ್ಲಿರುವವರು ಚಿಂತಿಸುತ್ತಿದ್ದಾರೆ. ಉದಾ: ಕೆ.ಆರ್.ಎಸ್. ಡ್ಯಾಮ್‌ನ ವಿಷಯದಲ್ಲಿ ಮಂಡ್ಯದ ಅಕ್ರಮ ಗಣಿಗಾರಿಕೆಯ ವಿರುದ್ಧ ಸಂಸದೆ ಸುಮಲತಾ ಹೇಳಿದ ಮಾತಿನ ವಿರುದ್ಧ ಪಕ್ಷ ಭೇದವಿಲ್ಲದೆ ಎಲ್ಲಾ ಪಕ್ಷದವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ಸಂಸದ ಪ್ರತಾಪ್‌ಸಿಂಹ, ಮಂತ್ರಿ ಅಶೋಕ್, ಜನತಾದಳದ ಶಾಸಕರಾದ ಸಾ.ರಾ. ಮಹೇಶ್, ಶ್ರೀಕಂಠಯ್ಯ, ಕಾಂಗ್ರೆಸ್ ಪಕ್ಷದವರೂ ಸಹಿತ ಅಕ್ರಮ ಗಣಿಗಾರಿಕೆಯ ರಕ್ಷಣೆಗೆ ನಿಂತಿದ್ದಾರೆ. ರೋಹಿಣಿ ಸಿಂಧೂರಿ ಪ್ರಕರಣದಲ್ಲಿಯೂ ಕೂಡ ಭ್ರಷ್ಟಾಚಾರಿಗಳು ಅವರ ವಿರುದ್ಧ ನಿಂತಿದ್ದಾರೆ.ಅಂತಹವುದಕ್ಕೆ ಜನತೆ ಬೆಂಬಲ ನೀಡಲೇ ಬಾರದೆಂದು ಹೇಳಲು ಇಚ್ಛಿಸುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಸ್ವತಂತ್ರ ಭಾರತದಲ್ಲಿ ಹುಟ್ಟಿದ ಪುಣ್ಯವಂತರು. ನಾವು ನಮ್ಮ ಸ್ವಾತಂತ್ರ್ಯವನ್ನು ಸಂಭ್ರಮಿಸುವ ಮೂಲಕ ನಮ್ಮ ಪೂರ್ವಜರಿಗೆ ಅಭಿನಂದನೆ ಸಲ್ಲಿಸಬೇಕು. ಅವರ ಹೋರಾಟವನ್ನು ನೆನಪಿಸುವಂತಾಗಬೇಕು. ಮಾತ್ರವಲ್ಲ ನಮಗೆ ದೊರಕಿದ ಸ್ವಾತಂತ್ರ್ಯವನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಅದಕ್ಕಾಗಿ ನಮ್ಮ ಊರು, ಜಲ, ನೆಲ, ಸಂಸ್ಕೃತಿ ಅದರಲ್ಲಿರುವ ಎಲ್ಲಾ ಸಂಪತ್ತು ನಮ್ಮದು. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಮತ್ತು ಹಕ್ಕು, ನಾವೆಲ್ಲಾ ಒಂದು ಎಂದು ಘೋಷಣೆ ಮೊಳಗಬೇಕು. ಭಾಷೆ, ಧರ್ಮ, ಜಾತಿ, ಪಕ್ಷ, ಮೇಲು ಕೀಳು ಎಂಬ ಭೇದ-ಭಾವ ಇಲ್ಲದೆ ಹಂಚಿಕೊಳ್ಳುವಂತಾಗಬೇಕು ಎಂಬುದೇ ಸ್ವಾತಂತ್ರ್ಯದ ಆಶಯ.

ಸ್ವಾತಂತ್ರ್ಯವೆಂದರೆ ಅಧಿಕಾರಿಗಳದ್ದು, ಜನಪ್ರತಿನಿಧಿಗಳದ್ದು, ಪಕ್ಷದ್ದೂ ಅಲ್ಲ : ಇಂದು ಸ್ವಾತಂತ್ರ್ಯವೆಂದರೆ ಅದು ಅಧಿಕಾರಿಗಳದ್ದು, ಜನಪ್ರತಿನಿಧಿಗಳದ್ದು, ರಸ್ತೆ, ಕಟ್ಟಡ, ಅಭಿವೃದ್ಧಿ, ನೀರು, ನೆಲ, ವಾಯು, ಸಂಪತ್ತು, ಆಡಳಿತ ಎಲ್ಲವೂ ಅವರ ಜವಾಬ್ದಾರಿ. ಕೇಂದ್ರದ್ದು ಅಥವಾ ರಾಜ್ಯದ್ದು, ಬಿಜೆಪಿಯದ್ದು, ಕಾಂಗ್ರೆಸಿನದ್ದು ಅಥವಾ ದಳದ್ದು ಎಂಬ ಭಾವನೆ ನಮ್ಮಲ್ಲಿ ಮೂಡಿದೆ. ಹಾಗಾಗಿ ನಮ್ಮ ಎಲ್ಲಾ ಸಮಸ್ಯೆಗಳಿಗೆ ಕಷ್ಟಗಳಿಗೆ, ಅಭಿವೃದ್ಧಿಗೆ ಅವರನ್ನು ದೂರುತ್ತಾ ಅವರ ಪರವಾಗಿ ಪಕ್ಷ, ಜಾತಿ, ಧರ್ಮಗಳ ಆಧಾರದಲ್ಲಿ ಜಗಳವಾಡುತ್ತಾ ನಮ್ಮ ಸ್ವತಂತ್ರ ದೇಶದಲ್ಲಿ ಯಾರದ್ದೋ ಗುಲಾಮರಂತೆ ವರ್ತಿಸುತ್ತಾ ಜೀವನ ಸಾಗಿಸುತ್ತಿದ್ದೇವೆ. ನಾವು ಸ್ವತಂತ್ರ ದೇಶದಲ್ಲಿದ್ದೇವೆ. ಇಲ್ಲಿ ನಾವು ಪ್ರಜೆಗಳೇ ಪ್ರಭುಗಳು, ನಮಗಾಗಿ ಆಡಳಿತಕ್ಕಾಗಿ ಜನಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಅಧಿಕಾರಿಗಳು ಜನಸೇವೆಗಾಗಿ ನೇಮಿಸಲ್ಪಟ್ಟಿದ್ದಾರೆ. ಅವರು ನಮ್ಮ ಸೇವೆಗಾಗಿ ಇರುವವರು. ಈ ಕಟ್ಟಡ, ಶಾಲೆ, ಪಂಚಾಯತ್, ರಸ್ತೆ, ಆಸ್ಪತ್ರೆ, ವಿದ್ಯುತ್, ಶಿಕ್ಷಣ ವ್ಯವಸ್ಥೆ, ಆಡಳಿತ ಎಲ್ಲಾ ನಮಗಾಗಿ ಇರುವಂತದ್ದು. ಹೀಗೆಂದು ಪ್ರತೀ ಗ್ರಾಮ ಪಂಚಾಯತ್‌ನವರು, ಪ್ರತಿಯೊಬ್ಬರು ಚಿಂತಿಸಿದರೆ ಅದಕ್ಕೆ ಕಾರಣ ನಮಗೆ ದೊರಕಿರುವ ಸ್ವಾತಂತ್ರ್ಯ ಎಂದು ಯೋಚಿಸಿದರೆ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂತೋಷದಿಂದ ನಾವು ಸಂಭ್ರಮಿಸಬೇಕಲ್ಲವೇ?

 

LEAVE A REPLY

Please enter your comment!
Please enter your name here