ಫಿಲೋಮಿನಾ ಪಿಯು ಕಾಲೇಜಿನಲ್ಲಿ ಸಿ.ಎ ಕೋರ್ಸ್ ಬಗ್ಗೆ ಕಾರ್ಯಾಗಾರ

0

  • ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸಿ.ಎ ಉತ್ತಮ ಆಯ್ಕೆ-ಸ್ವಸ್ತಿಕ್ ಪಿ

ಪುತ್ತೂರು: ಬ್ಯಾಕಿಂಗ್, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ದೇಶದ ಪ್ರಮುಖ ಹುದ್ದೆಗಳಲ್ಲಿ ಚಾರ್ಟರ್ಡ್ ಎಕೌಂಟೆಂಟ್(ಸಿ.ಎ) ಕೋರ್ಸ್ ಸಹ ಒಂದು. ಸಿ.ಎ ಎಂಬುದು ಗೌರವಾನ್ವಿತ ಹಾಗೂ ಸವಾಲಿನ ಕ್ಷೇತ್ರಗಳಲ್ಲಿ ಒಂದಾಗಿದೆ. ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸಿ.ಎ ಉತ್ತಮ ಆಯ್ಕೆಯಾಗಿದೆ ಎಂದು ಬೆಂಗಳೂರಿನ ಮಲ್ಲೇಶ್ವರಂ ಇಲ್ಲಿನ ವಿಷ್ಣುದಯ ಕೊ.ಎಲ್‌ಎಲ್‌ಪಿಯಲ್ಲಿ ಆರ್ಟಿಕಲ್‌ಶಪ್ ಮಾಡುತ್ತಿರುವ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸ್ವಸ್ತಿಕ್ ಪಿ.ರವರು ಹೇಳಿದರು.

 


ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವೃತ್ತಿ ಮಾರ್ಗದರ್ಶನ ಕೋಶದ ವತಿಯಿಂದ ಜು.೨ ರಂದು ಕಾಲೇಜಿನ ಸ್ಪಂದನಾ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಚಾರ್ಟರ್ಡ್ ಎಕೌಂಟೆಂಟ್ ಕೋರ್ಸ್ ಬಗ್ಗೆ ನಡೆದ ಕಾರ್ಯಾಗಾದಲ್ಲಿ ಅವರು ಮಾತನಾಡಿದರು. ಸಿಎ ಕೋರ್ಸ್ ಎಂಬುದು ವೃತ್ತಿಪರ ಪ್ರಮಾಣೀಕರಣ ಕೋರ್ಸ್ ಆಗಿದ್ದು ಇದು ಒಬ್ಬ ವ್ಯಕ್ತಿಯನ್ನು ಚಾರ್ಟರ್ಡ್ ಎಕೌಂಟೆಂಟ್ ಆಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಸಿಎ ಎನ್ನುವುದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋನೆ, ತೆರಿಗೆ ಮತ್ತು ಹಣಕಾಸಿನ ಮೌಲ್ಯಮಾಪನದ ವೃತ್ತಿಪರ ಅಭ್ಯಾಸವಾಗಿದೆ. ಸಿಎ ಲೆಕ್ಕಪರಿಶೋಧಕ ವೃತ್ತಿಪರರಿಗೆ ನೀಡುವ ಪದನಾಮವಾಗಿದೆ ಮಾತ್ರವಲ್ಲದೆ ಶಾಸನಬದ್ಧ ಸಂಸ್ಥೆಯಿಂದ ಪ್ರಮಾಣೀಕರಣವನ್ನು ಪಡೆದಿರುತ್ತಾರೆ ಎಂದು ಅವರು ಸಿಎ ಹೊಂದಿದವರು ತೆರಿಗೆ ರಿಟರ್ನ್ಸ್‌ಗಳನ್ನು ಸಲ್ಲಿಸುವುದು, ಹಣಕಾಸು ಹೇಳಿಕೆಗಳು, ವ್ಯವಹಾರ ಅಭ್ಯಾಸಗಳನ್ನು ಪರಿಶೋಧಿಸುವುದು, ಹೂಡಿಕೆಗಳ ದಾಖಲೆಗಳನ್ನು ನಿರ್ವಹಿಸುವುದು, ಹಣಕಾಸು ವರದಿಗಳು ಮತ್ತು ದಾಖಲೆಗಳನ್ನು ಸಿದ್ಧಪಡಿಸುವುದು, ಪರಿಶೀಲಿಸುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

ಮತ್ತೋರ್ವೆ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಂತಿಮ ಎಂಕಾಂ ವಿದ್ಯಾಭ್ಯಾಸವನ್ನು ಮಾಡುತ್ತಿರುವ ವಿದ್ಯಾರ್ಥಿನಿ ದೀಪಾ ಸಿ.ಭಟ್‌ರವರು ಮಾತನಾಡಿ, ಸಿಎ ಪ್ರಮಾಣಪತ್ರವನ್ನು ಹೊಂದಿದವರು ತಮ್ಮದೇ ಆದ ಆಡಿಟಿಂಗ್ ಸಂಸ್ಥೆಯನ್ನು ಪ್ರಾರಂಭಿಸಬಹುದು ಮತ್ತು ತಮ್ಮ ಗ್ರಾಹಕರಿಗೆ ಆಡಿಟಿಂಗ್ ಸೇವೆಗಳನ್ನು ನೀಡಲು ಪ್ರಾರಂಭಿಸಬಹುದು ಎಂದು ಹೇಳಿ ಚಾರ್ಟರ್ಡ್ ಎಕೌಂಟೆನ್ಸಿಯನ್ನು ಏಕೆ ಅಧ್ಯಯನ ಮಾಡಬೇಕು, ಅದರ ಅರ್ಹತೆ ಮತ್ತು ಪ್ರವೇಶ, ಸಿಎ ಕೋರ್ಸ್ ಅನ್ನು ಯಾರು ಓದಬೇಕು, ಚಾರ್ಟರ್ಡ್ ಎಕೌಂಟೆಂಟ್‌ನ ಜವಾಬ್ದಾರಿಗಳು, ಸಿಎ ಮುಗಿದ ಬಳಿಕದ ಉದ್ಯೋಗಾವಕಾಶಗಳು ಮುಂತಾದ ಸಿಎ ಕೋರ್ಸ್ ಬಗೆಗಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಕಾಲೇಜಿನ ವೃತ್ತಿ ಮಾರ್ಗದರ್ಶನ ಕೋಶದ ನಿರ್ದೇಶಕರಾದ ಭರತ್ ಜಿ.ಪೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮತ್ತೋರ್ವ ನಿರ್ದೇಶಕ ಸುಪ್ರೀತ್ ಕೆ.ಸಿ ಉಪಸ್ಥಿತರಿದ್ದರು.

ಸ್ವಸ್ತಿಕ್, ದೀಪಾ ಭಟ್ ಪರಿಚಯ…
ಮಾಡಾವು ನಿವಾಸಿಯಾಗಿರುವ ಸ್ವಸ್ತಿಕ್ ಪಿ.ರವರು ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ 2018-19ರ ಹಿರಿಯ ವಿದ್ಯಾರ್ಥಿಯಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 594 ಅಂಕ ಪಡೆದು ರಾಜ್ಯದಲ್ಲಿ ಮೂರನೇ ರ‍್ಯಾಂಕ್ ಅನ್ನು ಗಳಿಸಿದ್ದರು. ಸಿಎ ಸಿಪಿಟಿ ಪರೀಕ್ಷೆಯಲ್ಲೂ ಸ್ವಸ್ತಿಕ್‌ರವರು ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿದ್ದರು. ಮೃದಂಗದಲ್ಲಿನ ಜ್ಯೂನಿಯರ್ ಪರೀಕ್ಷೆಯಲ್ಲೂ ಸ್ವಸ್ತಿಕ್‌ರವರು ಪಾಸಾಗಿರುತ್ತಾರೆ. ಮೊಟ್ಟೆತ್ತಡ್ಕ ನಿವಾಸಿ ದೀಪಾ ಸಿ.ಭಟ್‌ರವರು ಪಿಯು ಕಾಲೇಜಿನಲ್ಲಿ 2018-19ರ ಹಿರಿಯ ವಿದ್ಯಾರ್ಥಿಯಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 575 ಅಂಕಗಳನ್ನು ಗಳಿಸಿದ್ದರು. ಸಿಪಿಟಿ ಪರೀಕ್ಷೆಯಲ್ಲಿ 122 ಅಂಕಗಳನ್ನು ಪಡೆದು ತೇರ್ಗಡೆ, 2020, 2021ರಲ್ಲಿ ಅನುಕ್ರಮವಾಗಿ ನೆಟ್ ಜೊತೆಗೆ ಜೆಆರ್‌ಎಫ್ ಕೂಡ ಪಾಸಾಗಿರುತ್ತಾರೆ. 2019-20ರಲ್ಲಿ ಫಿಲೋಮಿನಾ ಕಾಲೇಜಿನಲ್ಲಿ ಬಿಕಾಂ ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್‌ನ್ನು ದೀಪಾ ಭಟ್‌ರವರು ಗಳಿಸಿರುತ್ತಾರೆ.

ಸಿಇಟಿ/ಜೆಇಇ/ನೀಟ್/ಸಿಎ ಫೌಂಡೇಶನ್ ಕೋರ್ಸ್..
ವಿಜ್ಞಾನ ವಿಭಾಗದಲ್ಲಿ ಸಿಇಟಿ, ಜೆಇಇ, ನೀಟ್, ವಾಣಿಜ್ಯ ವಿಭಾಗದಲ್ಲಿ ಸಿಎ ಫೌಂಡೇಶನ್ ಕೋರ್ಸ್ ಇವುಗಳ ತರಬೇತಿ ಕಾಲೇಜಿನಲ್ಲಿ ಲಭ್ಯವಿದೆ. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here