ಮೈದುಂಬಿ ಹರಿಯುತ್ತಿರುವ ಜೀವನದಿಗಳು: ಮಳೆ ಮುಂದುವರಿದರೆ ನೆರೆ ಭೀತಿ !

0

ಉಪ್ಪಿನಂಗಡಿ: ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿವೆ. ನದಿಗಳ ಉಗಮ ಪ್ರದೇಶದಲ್ಲಿ ಇದೇ ರೀತಿ ಮಳೆಯಾದರೆ ಇಲ್ಲಿ ನೆರೆ ಭೀತಿ ಆವರಿಸಲಿದೆ.

ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಹಿಂಭಾಗದಲ್ಲಿ ಹರಿಯುತ್ತಿರುವ ನದಿ ನೀರು

ಉಪ್ಪಿನಂಗಡಿಯಲ್ಲಿ ಸೋಮವಾರ ಬೆಳಗ್ಗೆ 37.4 ಮಿ.ಮೀ. ಮಳೆ ದಾಖಲಾಗಿದ್ದು, ಕುಮಾರಧಾರ ನದಿಯ ಉಗಮವಾಗುವ ಪ್ರದೇಶವಾದ ಕುಮಾರಪರ್ವತ, ಸುಬ್ರಹ್ಮಣ್ಯ ಭಾಗಗಗಳಲ್ಲಿ ಹಾಗೂ ನೇತ್ರಾವತಿ ನದಿಯು ಉಗಮವಾಗುವ ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಉಭಯ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ನದಿ ತಟದಲ್ಲಿರುವ ಕೃಷಿ ಪ್ರದೇಶಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಇಲ್ಲಿನ ಎರಡು ನದಿಗಳ ಸಂಗಮ ಸ್ಥಳವಾದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ನೇತ್ರಾವತಿಗೆ ಇಳಿಯಲು ಇರುವ 38 ಮೆಟ್ಟಿಲುಗಳಲ್ಲಿ 25 ಮೆಟ್ಟಿಲುಗಳು ಈಗಾಗಲೇ ಮುಳುಗಿದ್ದು, ಇನ್ನು 13 ಮೆಟ್ಟಿಲುಗಳು ಮುಳುಗಲು ಬಾಕಿ ಇವೆ. ದೇವಾಲಯದ ಬಳಿ ನದಿಯಲ್ಲಿ ಶಂಭೂರು ಅಣೆಕಟ್ಟಿನವರು ಅಳವಡಿಸಿರುವ ಜಲ ಮಾಪಕದಲ್ಲಿ ನೇತ್ರಾವತಿ ನದಿಯಲ್ಲಿ 28 ಮೀ. ನೀರಿದ್ದು, ಇದರಲ್ಲಿ ನೀರಿನ ಅಪಾಯದ ಮಟ್ಟ 30 ಮೀ. ಆಗಿದೆ. ಈಗ ನದಿಗಳು ಅಗಲವಾಗಿರುವುದರಿಂದ ಈ ಎರಡು ಮೀಟರ್ ಬರಲು ನದಿಯಲ್ಲಿ ತುಂಬಾ ನೀರು ಹರಿದು ಬರಬೇಕಾಗುತ್ತದೆ.

ತಹಶೀಲ್ದಾರ್ ಭೇಟಿ:

ಇಲ್ಲಿ ನೆರೆ ಬಂದಾಗ ಶ್ರೀ ದೇವಾಲಯದ ವಠಾರ, ರಥಬೀದಿ, ಪಂಜಳ, ಹಿರ್ತಡ್ಕ- ಮಠ, ಹಳೆಗೇಟು, ಕಡವಿನ ಬಾಗಿಲು, ಸೂರಪ್ಪ ಕಂಪೌಂಡ್, ಕೆಂಪಿಮಜಲು ಹೀಗೆ ನದಿ ಪಾತ್ರದ ಪರಿಸರ, ನದಿಯನ್ನು ಸಂಪರ್ಕಿಸುವ ತೋಡುಗಳುಳ್ಳ ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ಸೋಮವಾರ ಈ ಪ್ರದೇಶಕ್ಕೆಲ್ಲಾ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ನೆರೆ ಬರುವ ಸಾಧ್ಯತೆ ಕಂಡಾಗಲೇ ಇಲ್ಲಿಂದ ಸ್ಥಳಾಂತರಗೊಳ್ಳಬೇಕೆಂದು ಅಲ್ಲಿನ ಮನೆಯವರಿಗೆ ಮನವಿ ಮಾಡಿದರು. ಬಳಿಕ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಬಳಿಕ ಉಪ್ಪಿನಂಗಡಿ ನಾಡ ಕಚೇರಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ ದೇವಾಲಯದ ಬಳಿ ಬಂದು ಪರಿಸ್ಥಿತಿ ಅವಲೋಕಿಸಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ರಂಜನ್, ಗ್ರಾಮಕರಣಿಕ ಜಿತೇಶ್ ವಿ., ಗ್ರಾಮ ಸಹಾಯಕ ಯತೀಶ್ ಉಪಸ್ಥಿತರಿದ್ದರು.

ತಹಶೀಲ್ದಾರ್ ನಿಸರ್ಗ ಪ್ರಿಯ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿರುವುದು

ಸನ್ನದ್ಧಗೊಂಡ ಪ್ರಕೃತಿ ವಿಕೋಪ ತಂಡ:

ಗೃಹ ರಕ್ಷದ ದಳದ ಪ್ರಕೃತಿ ವಿಕೋಪ ತಂಡ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ಬೀಡು ಬಿಟ್ಟಿದ್ದು, ನೆರೆ ಬಂದ ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿದೆ. ದಿನೇಶ್, ಜನಾರ್ದನ ಆಚಾರ್ಯ, ಅಣ್ಣು ಬಿ., ಸೋಮನಾಥ, ಸಮಾದ್ ಹಾಗೂ ಪ್ರಶಾಂತ್ ತಂಡದಲ್ಲಿದ್ದು, ಇವರಲ್ಲಿ ಓರ್ವ ಎಲೆಕ್ಟ್ರಿಷಿಯನ್, ಓರ್ವ ಪ್ಲಂಬರ್, ಇಬ್ಬರು ಸ್ವಿಮ್ಮರ್‌ಗಳಿದ್ದಾರೆ. ಅಲ್ಲದೇ, ಈಜುಗಾರರಾದ ವಿಶ್ವನಾಥ ಶೆಟ್ಟಿಗಾರ್, ಸುದರ್ಶನ್ ನೆಕ್ಕಿಲಾಡಿ ಹಾಗೂ ಮುಹಮ್ಮದ್ ಬಂದಾರು ಅವರನ್ನು ಇಲ್ಲಿ ನಿಯೋಜಿಸಿದೆ.

ನೆರೆ ಸಂದರ್ಭ ರಕ್ಷಣಾ ಕಾರ್ಯಾಚರಣೆಗೆ ಗೃಹ ರಕ್ಷಕದಳದ ಪ್ರಾಕೃತಿಕ ವಿಕೋಪ ತಂಡದಲ್ಲಿ ಒಂದು ರಬ್ಬರ್ ಬೋಟ್ ಇದ್ದು, ದ.ಕ. ಜಿಲ್ಲಾಡಳಿತವು ಉಪ್ಪಿನಂಗಡಿಗೆಂದೇ ನೀಡಿದ ಫೈಬರ್ ಬೋಟ್ ತೀರಾ ನಾದುರಸ್ತಿಯಲ್ಲಿದ್ದು, ಬಳಸಲಾಗದ ಸ್ಥಿತಿಯಲ್ಲಿದೆ. ಕಳೆದ ವರ್ಷವೇ ಬೋಟ್ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದರೂ, ಇಲ್ಲಿಗೆ ಇನ್ನೊಂದು ಬೋಟನ್ನು ನೀಡುವಲ್ಲಿ ಜಿಲ್ಲಾಡಳಿತ ಮುಂದಾಗಿಲ್ಲ. ಆದ್ದರಿಂದ ಈ ಬಾರಿ ನೆರೆ ಬಂದರೆ ಒಂದೇ ಬೋಟ್‌ನಲ್ಲಿ ಪರಿಹಾರ ಕಾರ್ಯಾಚರಣೆಗೆ ಮುಂದಾಗಬೇಕಾದ ಸ್ಥಿತಿ ಇದೆ.

ನೇತ್ರಾವತಿ ಸಂಗಮಗೊಂಡು ಮುಂದಕ್ಕೆ ಹರಿಯುತ್ತಿರುವುದು.

LEAVE A REPLY

Please enter your comment!
Please enter your name here