ನೆ.ಮುಡ್ನೂರು: ರಸ್ತೆ ಕಾಮಗಾರಿ ಕಳಪೆ ಆರೋಪ- ಕೆಆರ್‌ಡಿಎಲ್ ವಿರುದ್ಧ ಗ್ರಾ.ಪಂ ಸದಸ್ಯರ ಆಕ್ರೋಶ

0

ಪುತ್ತೂರು: ಗ್ರಾ.ಪಂ ವ್ಯಾಪ್ತಿಯಲ್ಲಿ ಕೆಆರ್‌ಡಿಎಲ್‌ನವರು ನಡೆಸುತ್ತಿರುವ ರಸ್ತೆ ಕಾಮಗಾರಿಗಳು ಕಳಪೆಯಾಗಿದ್ದು ಕೆಆರ್‌ಡಿಎಲ್‌ನವರಿಗೆ ಯಾವುದೇ ಗುತ್ತಿಗೆ ನೀಡಬಾರದು ಮತ್ತು ಕಳಪೆ ಕಾಮಗಾರಿ ನಡೆಸುತ್ತಿರುವುದಕ್ಕೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸದಸ್ಯರು ಆಕ್ರೊಶ ವ್ಯಕ್ತಪಡಿಸಿದ ವಿದ್ಯಾಮಾನ ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಚಂದ್ರಹಾಸ ಮಾತನಾಡಿ ಕೆಆರ್‌ಡಿಎಲ್‌ನವರ ಕಾಮಗಾರಿ ಕಳಪೆಯಾಗಿ ಮಾಡುತ್ತಿದ್ದಾರೆ ಮತ್ತು ಕೇರಳದವರಿಗೆ ಗುತ್ತಿಗೆಗೆ ಅವಕಾಶ ನೀಡಬಾರದು. ಈ ಬಗ್ಗೆ ಶಾಸಕರಿಗೆ ಬರೆದುಕೊಳ್ಳಬೇಕೆಂದು ಹೇಳಿದರು. ಸದಸ್ಯ ಪ್ರದೀಪ್ ಧ್ವನಿಗೂಡಿಸಿದರು. ಸದಸ್ಯ ಇಬ್ರಾಹಿಂ ಕೆ ಮಾತನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ರಸ್ತೆಗಳ ಕ್ವಾಲಿಟಿ ಚೆಕ್ ಮಾಡಬೇಕು. ರಸ್ತೆ ಕಾಮಗಾರಿ ಯಾರು ಮಾಡಿದರೂ ಗುಣಮಟ್ಟದಿಂದ ಕೂಡಿರಬೇಕು. ಕಳಪೆ ಕಾಮಗಾರಿ ನಡೆಸುವ ಕೆಆರ್‌ಡಿಎಲ್‌ನವರಿಗೆ ಅವಕಾಶ ನೀಡಬಾರದು ಎಂದು ಹೇಳಿದರು. ಸದಸ್ಯ ಶ್ರೀರಾಮ್ ಪಕ್ಕಳ ಮಾತನಾಡಿ ಈ ವಿಚಾರಗಳನ್ನು ನಾನು ಈ ಹಿಂದೆಯೇ ಹೇಳಿದ್ದೆ ಅವರು ರಸ್ತೆಯ ಕೆಲಸ ಆಗುವ ಮೊದಲೇ ಬೋರ್ಡ್ ಕೂಡಾ ಅಳವಡಿಸುತ್ತಾರೆ. ಇದೆಲ್ಲಾ ಎಷ್ಟು ಸರಿ ಎಂದು ಪ್ರಶ್ನಿಸಿದರು. ಗಾಳಿಮುಖದಲ್ಲಿ ಅಲ್ಪ ಜಾಗ ಡಾಮರು ಹಾಕದೇ ಬಿಟ್ಟದ್ದನ್ನು ಕೇಳಿದರೆ ಲಾರಿ ಬಂದು ಹಾಳಾಗುತ್ತದೆ ಎನ್ನುವ ಉತ್ತರ ಕೆಆರ್‌ಡಿಎಲ್‌ನಿಂದ ಸಿಗುತ್ತದೆ. ಲಾರಿ ರಸ್ತೆಯಲ್ಲಿ ಬರದೆ ಇನ್ನೆಲ್ಲಿಂದ ಬರಬೇಕು ಎಂದು ಶ್ರೀರಾಮ್ ಪಕ್ಕಳ ಆಕ್ರೋಶ ವ್ಯಕ್ತಪಡಿಸಿದರು. ಕೆಆರ್‌ಡಿಎಲ್ ಇಂಜಿನಿಯರ್ ದೀಕ್ಷಿತ್ ವಿರುದ್ಧ ಸದಸ್ಯರು ತೀವ್ರ ಅಸಾಮಾಧಾನ ವ್ಯಕ್ತಪಡಿಸಿದರು.

ಲಾರಿಗಳಿಂದ ಸಮಸ್ಯೆ:

ಕರ್ನೂರು ಶಾಲಾ ಬಳಿಯಿಂದ ಜಲ್ಲಿ, ಕಲ್ಲು ತುಂಬಿದ ಲಾರಿಗಳು ವೇಗವಾಗಿ ಹೋಗುತ್ತಿದ್ದು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅದಕ್ಕೊಂದು ಪರಿಹಾರ ಆಗಬೇಕು ಎನ್ನುವ ವಿಚಾರ ಚರ್ಚೆಗೀಡಾಯಿತು. ಕಲ್ಲಿನ ಲಾರಿಯವರು ಹಿಂಬದಿಗೆ ಟರ್ಪಾಲು ಹಾಕದೇ ಹೋಗುವ ಕಾರಣ ಹಿಂಬದಿಯಿಂದ ಹೋಗುವ ದ್ವಿಚಕ್ರ ಸವಾರರಿಗೆ ತೊಂದರೆಯಾಗುತ್ತಿರುವ ಬಗ್ಗೆಯೂ ಚರ್ಚೆಯಾಯಿತು. ಈ ಬಗ್ಗೆ ಪೊಲೀಸ್ ಇಲಾಖೆಗೆ, ಆರ್‌ಟಿಓ ಹಾಗೂ ಗಣಿ ಇಲಾಖೆಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು.

ಪಳ್ಳತ್ತಾರು-ಆಲಂತಡ್ಕ-ಸುರುಳಿಮೂಲೆಗೆ ಕಾಂಕ್ರೀಟ್ ರಸ್ತೆ ಆಗಬೇಕು:

ಪಳ್ಳತ್ತಾರು-ಆಲಂತಡ್ಕ-ಸುರುಳಿಮೂಲೆಗೆ ಕಾಂಕ್ರೀಟ್ ರಸ್ತೆ ಆಗಬೇಕು. ಶಾಸಕರಲ್ಲಿ ಅನುದಾನಕ್ಕೆ ಕೇಳಿಕೊಳ್ಳಬೇಕು ಎಂದು ಶ್ರೀರಾಮ್ ಪಕ್ಕಳ ಹೇಳಿದರು. ಚಂದ್ರಹಾಸ ಮಾತನಾಡಿ ಮೊನ್ನೆ ಶಾಸಕರು ಇಲ್ಲಿಗೆ ಬಂದಾಗ ಸದಸ್ಯ ಪ್ರದೀಪ್ ಅವರು ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು. ನಂತರ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಗ್ರಾ.ಪಂ ವ್ಯಾಪ್ತಿಯಲ್ಲಿ ಬಸ್ ಸ್ಟ್ಯಾಂಡ್ ಕಟ್ಟಡಕ್ಕೆ ಬಣ್ಣ ಹಚ್ಚುವ ವಿಚಾರದಲ್ಲಿ ಈ ಹಿಂದೆ ಗ್ರಾ.ಪಂ ನಿಯಮ ರೂಪಿಸಿ ನಿರ್ಣಯ ಕೈಗೊಂಡಿದ್ದು ಅದೇ ರೀತಿಯಲ್ಲಿ ಮುಂದಕ್ಕೂ ಆಗಬೇಕು ಎಂದು ಇಬ್ರಾಹಿಂ ಕೆ ಹೇಳಿದರು. ಸದಸ್ಯ ಸಂಶುದ್ದೀನ್ ಪಿ.ಕೆ ಮಾತನಾಡಿ ಬಸ್‌ಸ್ಟ್ಯಾಂಡ್ ಕಟ್ಟಡದ ಬಣ್ಣ, ಹೆಸರು ಗ್ರಾ.ಪಂ ನಿಯಮದ ಪ್ರಕಾರ ಆಗಬೇಕು, ಎಲ್ಲರಿಗೂ ಒಂದೇ ನಿಯಮ ಆಗಬೇಕು ಎಂದು ಹೇಳಿದರು. ಸದಸ್ಯ ರಾಮ ಮೇನಾಲ ಧ್ವನಿಗೂಡಿಸಿದರು. ಚಂದ್ರಹಾಸ ಅಭಿಪ್ರಾಯ ವ್ಯಕ್ತಪಡಿಸಿದರು. ಪಿಡಿಓ ಸಂದೇಶ್ ಉತ್ತರಿಸಿ ಗ್ರಾ.ಪಂ ನಿಯಮದ ಪ್ರಕಾರವೇ ಅವಕಾಶ ನೀಡಲಾಗುವುದು ಎಂದರು. ಅಧ್ಯಕ್ಷ ರಮೇಶ್ ರೈ ಸಾಂತ್ಯ ಉತ್ತರಿಸಿ ಯಾರದ್ದಾದರೂ ಸ್ಮರಣಾರ್ಥ ಬಸ್‌ಸ್ಟ್ಯಾಂಡ್ ನಿರ್ಮಾಣ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ, ಆದರೆ ಅದಕ್ಕೆ ಕೊಡುವ ಬಣ್ಣ, ಹೆಸರು ಗ್ರಾ.ಪಂ ನಿಯಮದ ಪ್ರಕಾರ ಆಗಬೇಕು. ಇದರಲ್ಲಿ ಗೊಂದಲ ಬೇಡ ಎಂದು ಹೇಳಿದರು.

ಕಾರ್ಯದರ್ಶಿ ಶಾರದಾ, ಗ್ರಾ.ಪಂ ಉಪಾಧ್ಯಕ್ಷೆ ಫೌಝಿಯಾ, ಸದಸ್ಯರಾದ ಕುಮಾರನಾಥ್, ಮಹಮ್ಮದ್ ರಿಯಾಝ್, ವೆಂಕಪ್ಪ ನಾಯ್ಕ, ಪ್ರಫುಲ್ಲ ರೈ, ಕುಸುಮ, ವತ್ಸಲ, ಲಲಿತಾ ಸುಧಾಕರ, ಲಲಿತಾ ಶೆಟ್ಟಿ, ಇಂದಿರಾ, ಶಶಿಕಲಾ ರೈ, ಪೂರ್ಣೇಶ್ವರಿ ಆರ್.ಎಸ್, ಸವಿತಾ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಶೀನಪ್ಪ ನಾಯ್ಕ, ಮಲ್ಲೇಶ, ಅಬ್ದುಲ್ ರಹಿಮಾನ್ ಹಾಗೂ ಚಂದ್ರಶೇಖರ ಸಹಕರಿಸಿದರು.

LEAVE A REPLY

Please enter your comment!
Please enter your name here